ಆಠ್ ಸೇ ಕಮ್ ನಹೀ ಲೇನಾ...

ಮುಂಬೈ: 'ಆಠ್ ಸೇ ಕಮ್ ನಹೀ ಲೇನಾ... (ಎಂಟಕ್ಕಿಂತ ಕಡಿಮೆಗೆ ಒಪ್ಪಲೇಬೇಡ...)' ಜೋ ಭೀ ಕಾಮ್ ಕರ್ನಾ, ಇಮಾನ್ದಾರೀ ಸೇ ಕರ್ನಾ...(ಯಾವುದೇ ಕೆಲ್ಸ ಮಾಡಿದರೂ, ನಿಯತ್ತಿನಿಂದ ಮಾಡು...)
-ಇದು ಭೂಗತ ದೊರೆ ದಾವೂದ್ ಕ್ರಿಕೆಟ್ ಬುಕಿಗಳಿಗೆ ನೀಡುತ್ತಿದ್ದ ಸೂಚನೆ... ಅಥವಾ ಹೇಳುತ್ತಿದ್ದ ಕಿವಿಮಾತು.
ಐಪಿಎಲ್ ಫಿಕ್ಸಿಂಗ್ ಬಗ್ಗೆ ತನಿಖೆ ನಡೆಸುತ್ತಿದ್ದ ದೆಹಲಿ ಪೊಲೀಸ್ ಇಲಾಖೆ ವಿಶೇಷ ಕಾರ್ಯಪಡೆ ಕಲೆಹಾಕಿದ್ದ ಒಂದು ಮೊಬೈಲ್ ಕರೆ, ಪ್ರಕರಣದಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹೀಂನ ಕೈವಾಡ ಇರುವುದನ್ನು ಸ್ಪಷ್ಟಪಡಿಸಿತ್ತು.
ಫಿಕ್ಸಿಂಗ್ ಪ್ರಕರಣದಲ್ಲಿ, ದಾವೂದ್ ಇಬ್ರಾಹೀಂ ಹಾಗೂ ಆತನ ಬಲಗೈ ಬಂಟ ಚೋಟಾ ಶಕೀಲ್ - ಇಬ್ಬರ ಕೈವಾಡ ಇರಬಹುದೆಂಬ ಶಂಕೆಯನ್ನು ದೆಹಲಿ ಪೊಲೀಸ್ ವ್ಯಕ್ತಪಡಿಸಿತ್ತಾದರೂ, ನಿಖರವಾಗಿ ಏನನ್ನೂ ಹೇಳಿರಲಿಲ್ಲ. ಅಷ್ಟಕ್ಕೂ, ಈ ಮೊಬೈಲ್ ಸಂಭಾಷಣೆಯಲ್ಲಿರುವುದು ದಾವೂದ್ನ ಕರೆಯೆಂಬುದು ಮೊದಲು ಸ್ಪಷ್ಟವಾಗಬೇಕಿತ್ತು.
ಆದರೀಗ, ಸತ್ಯ ಬಯಲಾಗಿದೆ. ಪೊಲೀಸ್ ಊಹೆ ನಿಜವಾಗಿದೆ. ಮೊಬೈಲ್ ಕರೆಯಲ್ಲಿನ ಧ್ವನಿಯನ್ನು ಪರೀಕ್ಷೆ ಮಾಡಿರುವ ಗುಪ್ತಚರ ಇಲಾಖೆ (ಐಬಿ) ಹಾಗೂ ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್ (ರಾ) ಸಂಸ್ಥೆಗಳು, ಇದು ದಾವೂದ್ ಇಬ್ರಾಹಿಂನದ್ದೇ ಧ್ವನಿ ಎಂದು ದೃಢಪಡಿಸಿವೆ. ಇದನ್ನು, ದೆಹಲಿ ಪೊಲೀಸರ ಗಮನಕ್ಕೂ ತಂದಿವೆ. ಹೀಗಾಗಿ, ಇಡೀ ಫಿಕ್ಸಿಂಗ್ ಪ್ರಕರಣ ಇದೀಗ ಹೊಸ ತಿರುವನ್ನು ಪಡೆದುಕೊಂಡಿದೆ.
ಪೊಲೀಸರ ಗಮನಕ್ಕೆ: ಮೊಬೈಲ್ ಕರೆಯಲ್ಲಿರುವ ಧ್ವನಿ ದಾವೂದ್ ಇಬ್ರಾಹಿಂನದ್ದೇ ಎಂದು ಗೊತ್ತಾದ ಕೂಡಲೇ ದೆಹಲಿ ಪೊಲೀಸರಿಗೆ ಜೂ. 2ರಂದೇ ಐಬಿ ಹಾಗೂ ರಾ ಸಂಸ್ಥೆಗಳು ಪತ್ರದ ಮುಖೇನ ಮಾಹಿತಿ ನೀಡಿವೆ. ಫಿಕ್ಸಿಂಗ್ಗಾಗಿ ದಾವೂದ್ ಹಾಗೂ ಛೋಟಾ ಶಕೀಲ್ ಅವರು ಬಳಸುತ್ತಿದ್ದ ಮೊಬೈಲ್ ಸಂಖ್ಯೆ 9233332064್ಢ್ಢ್ಢ ಪಾಕಿಸ್ತಾನ ಮೂಲದ್ದೆಂದೂ ಹೇಳಲಾಗಿದೆ.
ಕರೆ ಟ್ರೇಸ್ ಆಗಿದ್ದು ಹೇಗೆ?: ಕೆಲವು ವಿಶೇಷ ಕರೆಗಳ (ಪಾಕಿಸ್ತಾನ ಹಾಗೂ ಭಾರತ ನಡುವೆ ಹರಿದಾಡುತ್ತಿದ್ದ ಕರೆಗಳು, ಇತರೆ ಅನುಮಾನಾಸ್ಪದ ಸಂಖ್ಯೆಗಳ ಕರೆಗಳು) ಬಗ್ಗೆ ಗಮನವಿರಿಸಿರುವ ದೆಹಲಿ ಪೊಲೀಸ್ ಇಲಾಖೆ ಕೆಲವು ಮೊಬೈಲ್ ಅಥವಾ ಟೆಲಿಫೋನ್ ಸಂಖ್ಯೆಗಳ ನಡುವಿನ ಸಂಭಾಷಣೆಗಳನ್ನು ಗಮನಿಸುತ್ತಿರುತ್ತದೆ. ಹೀಗೆ, ಕರೆಗಳನ್ನು ಆಲಿಸುವುದಕ್ಕಾಗಿಯೇ ತಂತ್ರಜ್ಞರ ಒಂದು ವಿಶೇಷ ಘಟಕದ ವ್ಯವಸ್ಥೆಯನ್ನೇ ಅದು ಹೊಂದಿದೆ.
ಈ ಘಟಕವು, ದಿನನಿತ್ಯವೂ ಕರೆಗಳನ್ನು ಟ್ರೇಸ್ ಮಾಡುತ್ತಲೇ ಇರುತ್ತದೆ. ಅಂಥದ್ದೇ ಕೆಲಸದಲ್ಲಿ ನಿರತರಾಗಿದ್ದಾಗ, ಇದೇ ವರ್ಷ ಮಾರ್ಚ್ 26ರಂದು, ಅದೊಂದು ಕರೆಯನ್ನು ಆಲಿಸುತ್ತಿದ್ದ ಸಿಬ್ಬಂದಿಯ ಗಮನವನ್ನು ಈ ಸಂಭಾಷಣೆ ಸೂಕ್ಷ್ಮವಾಗಿ ಸೆಳೆದುಬಿಟ್ಟಿತು.
ಅದು ಪಾಕಿಸ್ತಾನ ಹಾಗೂ ಭಾರತದ ನಡುವೆ ಇಬ್ಬರು ವ್ಯಕ್ತಿಗಳ ನಡುವಿನ ಸಂಭಾಷಣೆ. ಪಾಕಿಸ್ತಾನ ಕಡೆಯಿಂದ ಮಾತಾಡುತ್ತಿದ್ದ ವ್ಯಕ್ತಿ 'ಹಾತ್ ಸೇ ಕಾಮ್ನಹೀ ಲೇನಾ...' ಎಂದ. ಭಾರತದಲ್ಲಿನ ವ್ಯಕ್ತಿ 'ಹುಂ' ಎಂದ. ಕೆಲವು ನಿಮಿಷಗಳ ಸಂಭಾಷಣೆಯ ನಂತರ ಮತ್ತೆ ಪಾಕಿಸ್ತಾನದ ಕಡೆಯ ವ್ಯಕ್ತಿಯಿಂದ ಮತ್ತೊಂದು ಸೂಚನೆ ಬಂತು. 'ಯಾವುದೇ ಕೆಲಸವನ್ನು ಮಾಡಿದರೂ ನಿಯತ್ತಾಗಿ ಮಾಡು' ಅಂತ ಪಾಕಿಸ್ತಾನದ ಧ್ವನಿ 'ಹುಕುಂ' ನೀಡಿತು. ಅಂದು ಸುಮಾರು 30 ಅನುಮಾನಾಸ್ಪದ ಫೋನ್ ಕರೆಗಳನ್ನು ಆಲಿಸುತ್ತಿದ್ದ ಸಿಬ್ಬಂದಿಗೆ ಈ ಕರೆಯಲ್ಲಿನ ಸಂಭಾಷಣೆ ಅದೇನೋ ಒಂದು ಸುಳಿವನ್ನು ನೀಡಿತು. ನಿಜ ಹೇಳಬೇಕೆಂದರೆ, ಐಪಿಎಲ್ ಫಿಕ್ಸಿಂಗ್ ಅನ್ನು ಮೊದಲು ಪತ್ತೆ ಹಚ್ಚಿದ್ದೇ ಇದೇ ಫೋನ್ ಕಾಲ್.
ಪಾಕಿಸ್ತಾನದಿಂದ ಬಂದಿರುವ ಧ್ವನಿ ದಾವೂದ್ದೇ ಇರಬಹುದು ಎಂಬ ಗುಮಾನಿ ಅದ್ಯಾಕೋ ದೆಹಲಿ ಪೊಲೀಸ್ ವಿಶೇಷ ಘಟಕದ ಸಿಬ್ಬಂದಿಗೆ ಬಹುವಾಗಿ ಕಾಡಿತ್ತು. ಸರಿ.. ಅದನ್ನು ದೃಢಪಡಿಸಿಕೊಳ್ಳಲು ದೆಹಲಿ ಪೊಲೀಸರು ವಿಶೇಷ ಘಟಕವೊಂದನ್ನು ರಚಿಸಿ, ತನಿಖೆ ಆರಂಭಿಸಿಯೇ ಬಿಟ್ಟರು.
ಸಚಿವರ ಪಾಲು?: ಚೌಹಾನ್ ಹೆಸರಿನ ಸಚಿವರೊಂದಿಗೆ ದಾವೂದ್ ಮಾತಾಡಿರುವುದೂ ಬೆಳಕಿಗೆ ಬಂದಿದೆ.
ಆದರೆ, ಅದರ ಬಗ್ಗೆ ಇನ್ನೂ ಸ್ಪಷ್ಟವಾದ ಮಾಹಿತಿ ಸಿಕ್ಕಿಲ್ಲ ಎಂದು ದೆಹಲಿ ಪೊಲೀಸ್ ಹೇಳಿದೆ.
ಧ್ವನಿ ಪಕ್ಕಾ ಆಗಿದ್ದು
ದಾವೂದ್ನ ಧ್ವನಿಯನ್ನು ದೃಢಪಡಿಸಿಕೊಳ್ಳಲು ದೆಹಲಿ ಪೊಲೀಸ್ ಇಲಾಖೆ ದಾವೂದ್ನ ಕರಾಚಿ ಸಂಖ್ಯೆಗೆ ಬರುತ್ತಿದ್ದ ಅನೇಕ ಕರೆಗಳನ್ನು ಟ್ರೇಸ್ ಮಾಡಲಾಯಿತು. ಆನಂತರವೇ ಮಾ. 26ರ ಕರೆಯಲ್ಲಿ, ದಾವೂದ್ನ ಧ್ವನಿಯನ್ನು ನಿಖರವಾಗಿ ಗುರುತಿಸಲು ಸಾಧ್ಯವಾಯಿತು. ಹಾಗೆ, ಧ್ವನಿ ಗುರುತು ಪತ್ತೆಯಾದ ಕೂಡಲೇ ತನಿಖೆಯನ್ನು ಶುರು ಮಾಡಿಕೊಂಡಿತು ಪೊಲೀಸ್ ಇಲಾಖೆ. ತಕ್ಷಣ ಹಾಗೆ ತನಿಖೆ ಆರಂಭಿಸಿದ್ದರ ಹಿಂದಿದ್ದ ಏಕೈಕ ಕಾರಣ -ದಾವೂದ್ ಹೇಳಿದ ಸಂಭಾಷಣೆ ಭಾರತದಲ್ಲಿ ಯಾವುದೋ ಒಂದು ವಿಧ್ವಂಸಕ ಕೃತ್ಯಕ್ಕೆ ನಾಂದಿಯಾಗಿರಬಹುದೆಂಬ ಆತಂಕ. ಈ ಕಾರಣದಿಂದಲೇ ಚಕಾಚಕ್ ತನಿಖೆ ಆರಂಭಿಸಿ, ಕರೆಯ ಜಾಡು ಹಿಡಿದು ಸಾಗಿದ ಪೊಲೀಸರಿಗೆ ಸಿಕ್ಕಿದ್ದು - 'ಐಪಿಎಲ್ ಫಿಕ್ಸಿಂಗ್ನ ವಿಶ್ವರೂಪ'.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


