ಕಸ ಹಾಕಿದ್ರೆ ಜೈಲಿಗೆ

ವಿಧಾನಸಭೆ: ಎಲ್ಲೆಂದರಲ್ಲಿ ಕಸ ಸುರಿಯುವಂತಿಲ್ಲ, ಉಗುಳುವಂತಿಲ್ಲ, ಮೂತ್ರ ವಿಸರ್ಜಿಸುವಂತಿಲ್ಲ. ಹಾಗೇನಾದರೂ ಮಾಡಿದರೆ ದಂಡ ಕಟ್ಟಬೇಕು. ಜೊತೆಗೆ ಜೈಲು ಶಿಕ್ಷೆಯನ್ನೂ ಅನುಭವಿಸಬೇಕು. ಇಂಥದೊಂದು ಕಾನೂನು ರಾಜ್ಯದಲ್ಲಿ ಜಾರಿಗೆ ಬರಲಿದೆ.
ಹೌದು. ಇಂಥದೊಂದು ಮಹತ್ವದ ವಿಧೇಯಕವನ್ನು ವಿಧಾನಸಭೆಯಲ್ಲಿ ಗುರುವಾರ ಮಂಡಿಸಲಾಗಿದೆ. ಕರ್ನಾಟಕ ಪೌರ ನಿಗಮಗಳ ತಿದ್ದುಪಡಿ ವಿಧೇಯಕ 2013ನ್ನು ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಅವರ ಅನುಪಸ್ಥಿತಿಯಲ್ಲಿ ಸಹಕಾರ ಸಚಿವ ಎಚ್.ಎಸ್.ಮಹಾದೇವಪ್ರಸಾದ್ ಮಂಡಿಸಿದ್ದಾರೆ. ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಕಸ ಸಮಸ್ಯೆ ಹಿನ್ನೆಲೆಯಲ್ಲಿ ಈ ತಿದ್ದುಪಡಿ ವಿಧೇಯಕವನ್ನು ರೂಪಿಸಲಾಗಿದೆ.
ಇದರನ್ವಯ ಕಸ ಸಂಗ್ರಹಣೆ, ಮಲ, ಮೂತ್ರ ವಿಸರ್ಜನೆ, ಉಗುಳುವಿಕೆಯಂಥ ಪ್ರಕ್ರಿಯೆ ಮೂಲಕ ಸಾರ್ವಜನಿಕ ಸ್ಥಳ ವಿರೂಪಗೊಳಿಸುವವರು, ನೈರ್ಮಲ್ಯಕ್ಕೆ ಧಕ್ಕೆ ತರುವವರನ್ನು ದಂಡ, ಜೈಲು ಶಿಕ್ಷೆಯ ದಂಡನೆಗೆ ಒಳಪಡಿಸಲು ಸರ್ಕಾರ ನಿರ್ಧರಿಸಿದೆ.
ಎಷ್ಟು ದಂಡ, ಎಷ್ಟು ಶಿಕ್ಷೆ?: ತಿದ್ದುಪಡಿ ಪ್ರಕಾರ, ಸಂಬಂಧಪಟ್ಟ ನಗರಸಭೆ ಹಾಗೂ ಬಿಬಿಎಂಪಿ ಆಯುಕ್ತರು ಸಾರ್ವಜನಿಕ ನೋಟಿಸ್ ಮೂಲಕ ನಿಗದಿಪಡಿಸಿದ ನಗರದ ಯಾವುದೇ ಬೀದಿ ಅಥವಾ ವಿಭಾಗದ ಆವರಣದಲ್ಲಿ ರಾಶಿಗೂಡುವ ಎಲ್ಲ ಕಸ ಮತ್ತು ಹೊಲಸನ್ನು ಅಂಥ ಆವರಣದ ಒಡೆಯ ಅಥವಾ ಅದಿ ಭೋಗದಾರ ಸಂಗ್ರಹಿಸಿ, ಪ್ರತ್ಯೇಕಿಸಿ ವಿಲೇವಾರಿ ಮಾಡಬೇಕು. ಮಾತ್ರವಲ್ಲ ಸಂಗ್ರಹಿತ ಕಸ ಹಾಗೂ ಘನತ್ಯಾಜ್ಯವನ್ನು ನಿಗದಿಪಡಿಸಿದ ಡಿಪೋಕ್ಕೆ ಕಾಲಕಾಲಕ್ಕೆ ರವಾನೆ ಮಾಡಬೇಕು.
ಇದನ್ನು ಉಲ್ಲಂಘಿಸಿದ ಯಾವುದೇ ವ್ಯಕ್ತಿ ಐದು ನೂರು ರುಪಾಯಿವರೆಗೆ ವಿಸ್ತರಿಸಬಹುದಾದ ದಂಡ, ಮೊದಲ ಅಪರಾಧ ನಿರ್ಣಯ ದಿನಾಂಕದ ನಂತರವೂ ತಪ್ಪು ಮುಂದುವರಿಸಿದರೆ ಪ್ರತಿ ದಿನಕ್ಕೆ ರು. 50 ದಂಡ ವಿಧಿಸಬಹುದು. ಮಾತ್ರವಲ್ಲ 5 ಬಾರಿ ಇಂಥ ತಪ್ಪು ಮಾಡಿ ಅಪರಾಧಿ ಎಂದು ಸಾಬೀತಾದರೆ ರು. 1000 ದಂಡ ಹಾಗೂ ಮೂರು ತಿಂಗಳು ಕಾರಾಗೃಹ ಶಿಕ್ಷೆಗೆ ಗುರಿಯಾಗುತ್ತಾನೆ.
ಇದರ ಜತೆಗೆ ಕಸ ಹಾಕುವುದು, ಉಗಿಯುವುದು, ಮೂತ್ರ ವಿಸರ್ಜನೆ ಮಾಡುವುದು, ಬಯಲು ಪ್ರದೇಶದಲ್ಲಿ ಮಲ,ಮೂತ್ರ ವಿಸರ್ಜನೆ ಮಾಡುವುದು, ರಸ್ತೆ, ಬಸ್, ರೈಲ್ವೆ ನಿಲ್ದಾಣ, ಆಟದ ಮೈದಾನ, ಉದ್ಯಾನವನ ಹಾಗೂ ಇತರೆ ಸಾರ್ವಜನಿಕ ಉಪಯುಕ್ತ ಆವರಣದಲ್ಲಿ ಉಪದ್ರವ ಕೃತ್ಯ ಎಸಗಿದರೆ ಮೊದಲ ಅಪರಾಧಕ್ಕೆ ರು. 100 ಹಾಗೂ ಎರಡನೇ ಬಾರಿ ಮುಂದುವರಿಸಿದರೆ ರು. 200 ದಂಡ ವಿಧಿಸಬಹುದು.
ಸಕ್ಷಮ ಪ್ರಾಧಿಕಾರ ಕಾಲಕಾಲಕ್ಕೆ ಹೊರಡಿಸುವ ನಿಯಮ ಉಲ್ಲಂಘಿಸಿ ಹಸಿ-ಒಣ ತ್ಯಾಜ್ಯ ಪ್ರತ್ಯೇಕಿಸಿ ಸಂಗ್ರಹಕಾರರಿಗೆ ನೀಡದ ಮೊದಲ ತಪ್ಪಿಗೆ ರು. 100 ಹಾಗೂ ಎರಡನೇ ತಪ್ಪಿಗೆ ರು. 500, ಗೃಹ ಬಳಕೆ ಪ್ರದೇಶದಲ್ಲಿ ಕಸ ರಾಶಿ ಹಾಕುವುದಕ್ಕೆ ಮೊದಲ ಅಪರಾಧಕ್ಕೆ 500 ಹಾಗೂ ಪುನರಾವರ್ತಿತ ತಪ್ಪಿಗೆ 1000, ವಾಣಿಜ್ಯ ಸಂಕೀರ್ಣಗಳಲ್ಲಿ ಕಸ ಉತ್ಪಾದನೆಗೆ 500ರಿಂದ ರು. 1000 ದಂಡ ವಿಧಿಸಬಹುದು.
ಅದೇ ರೀತಿ ಉದ್ಯಾನವನ ತ್ಯಾಜ್ಯ, ಜಡತ್ಯಾಜ್ಯ, ಜೈವಿಕ, ವೈದ್ಯ ತ್ಯಾಜ್ಯ ಪ್ರತ್ಯೇಕಕ್ಕೆ ವಿಧಿಸಿದ ನಿಯಮ ಪಾಲನೆಯಲ್ಲಿ ವಿಫಲವಾದರೂ 500ರಿಂದ ರು. 1000 ದಂಡ ವಿಧಿಸಬಹುದಾಗಿರುತ್ತದೆ.
ಕಸ ಹಾಗೂ ಹೊಲಸನ್ನು ಅನಿಯಮಿತವಾಗಿ ರಾಶಿ ಗೂಡಿಸುವುದಕ್ಕೆ, ಬೀದಿಗಳಲ್ಲಿ ಹೊಲಸು ಸುರಿಯುವುದಕ್ಕೆ, ಯುಕ್ತವಲ್ಲದ ಸ್ಥಳದಲ್ಲಿ ಸತ್ತ ಪ್ರಾಣಿಗಳನ್ನು ಹಾಕುವುದಕ್ಕೆ, ಕಟ್ಟಡ ತ್ಯಾಜ್ಯ ಗುಡ್ಡೆ ಹಾಕುವುದಕ್ಕೆ ಮೊದಲ ಬಾರಿಗೆ ರು. 100 ಹಾಗೂ ಎರಡನೇ ಬಾರಿಗೆ 200 ದಂಡ ವಿಧಿಸಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


