ಪ್ರಧಾನ ಸುದ್ದಿ

ಚಾರ್ಜ್‌ಶೀಟ್ ಫಿಕ್ಸ್

ಚಾರ್ಜ್‌ಶೀಟ್ ಫಿಕ್ಸ್
Published On :

ನವದೆಹಲಿ: ಸ್ಪಾಟ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮಂಗಳವಾರ ಆರೋಪಪಟ್ಟಿ ಸಲ್ಲಿಸಿದ್ದಾರೆ. ಆರು ಸಾವಿರ ಪುಟಗಳ ಈ ಆರೋಪಪಟ್ಟಿಯಲ್ಲಿ ಭೂಗತದೊರೆ ದಾವೂದ್ ಇಬ್ರಾಹಿಂ ಹಾಗೂ ಆತನ ಬಂಟ ಛೋಟಾ ಶಕೀಲ್ ಪ್ರಕರಣದ ರೂವಾರಿಗಳೆಂದು ಹೆಸರಿಸಲಾಗಿದೆ.
ರಾಜಸ್ಥಾನ ರಾಯಲ್ಸ್ ತಂಡದಲ್ಲಿದ್ದ ಶ್ರೀಶಾಂತ್, ಅಜಿತ್ ಚಾಂಡೀಲಾ ಹಾಗೂ ಅಂಕಿತ್ ಚವ್ಹಾಣ್ ಅವರ ಹೆಸರುಗಳೂ ಪಟ್ಟಿಯಲ್ಲಿವೆ. ಪ್ರಸ್ತುತ, ಶ್ರೀಶಾಂತ್, ಚವ್ಹಾಣ್ ಇಬ್ಬರೂ ಜಾಮೀನಿನ ಮೇಲೆ ಹೊರಬಂದಿದ್ದು, ಮತ್ತೊಬ್ಬ ಆರೋಪಿ ಅಜಿತ್ ಚಾಂಡೀಲಾ ಇನ್ನೂ ಬಂಧನದಲ್ಲಿದ್ದಾರೆ.
ಸುಮಾರು ಒಂದು ದಶಕದ ನಂತರ, ಭಾರತದಲ್ಲಿ ದಾವೂದ್ ಇಬ್ರಾಹಿಂ ವಿರುದ್ಧ ಆರೋಪಪಟ್ಟಿಯೊಂದು ಹೊಸ ಪ್ರಕರಣವೊಂದರಲ್ಲಿ ದಾಖಲಾಗಿದೆ. ಕ್ರಿಕೆಟ್ ಆಟಗಾರರು, ಬುಕಿಗಳು ಸೇರಿದಂತೆ, ಸುಮಾರು 39 ಜನರ ಹೆಸರಿದ್ದು, ಭಾರತೀಯ ದಂಡ ಸಂಹಿತೆ ಹಾಗೂ ಮೋಕಾ ಕಾಯ್ದೆಯಡಿಯಲ್ಲಿ ಮೋಸ ಹಾಗೂ ಷಡ್ಯಂತ್ರದ ಆರೋಪ ಹೊರಿಸಲಾಗಿದೆ. 10 ಜನ ತಲೆಮರೆಸಿಕೊಂಡಿದ್ದಾರೆಂದು ಆರೋಪಪಟ್ಟಿಯಲ್ಲಿ ಹೇಳಿದ್ದಾರೆ.
ಐಪಿಎಲ್‌ನಲ್ಲಿ ಬುಕಿಗಳೊಂದಿಗೆ ಕೈಜೋಡಿಸಿದ್ದ ಶ್ರೀಶಾಂತ್, ಅಜಿತ್ ಹಾಗೂ ಅಂಕಿತ್ ಅವರು ಬುಕಿಗಳ ಆಣತಿಯಂತೆ ಪಂದ್ಯದಲ್ಲಿ ನಡೆದುಕೊಳ್ಳುತ್ತಿದ್ದರು ಎಂಬುದನ್ನು ಪಂದ್ಯಗಳ ತುಣುಕುಗಳ ಆಧಾರದ ಮೇಲೆ ಪೊಲೀಸರು ಸಾಕ್ಷ್ಯ ಸಂಗ್ರಹಿಸಿದ್ದರು.

ಸಾಕ್ಷ್ಯಾಧಾರ: ಆರೋಪಪಟ್ಟಿಯಲ್ಲಿ, ಬುಕಿಗಳ ಹಾಗೂ ಆಟಗಾರರ ನಡುವೆ ನಡೆದಿರುವ ದೂರವಾಣಿ ಮಾತುಕತೆ, ಧ್ವನಿ ನಮೂನೆ ಪರೀಕ್ಷಾ ವರದಿ, ವಿಧಿವಿಜ್ಞಾನ ನೀಡಿರುವ ಪರೀಕ್ಷಾ ವರದಿ ಹಾಗೂ ಆರೋಪಿಗಳು ನೀಡಿರುವ ತಪ್ಪೊಪ್ಪಿಗೆ ಪ್ರಮಾಣಪತ್ರಗಳನ್ನೂ ಸೇರಿಸಲಾಗಿದೆ.

ಸಮಿತಿಯೇ ಅಕ್ರಮ
ಸ್ಪಾಟ್ ಫಿಕ್ಸಿಂಗ್‌ಗೆ ಸಂಬಂಧಿಸಿದಂತೆ ಬಿಸಿಸಿಐ ರಚಿಸಿದ್ದ ತನಿಖಾ ಸಮಿತಿಯೇ ಅಕ್ರಮ ಮತ್ತು ಅಸಂವಿಧಾನಿಕ ಎಂದು ಬಾಂಬೆ ಹೈಕೋರ್ಟ್ ಆದೇಶ ನೀಡಿದೆ. ಬಿಹಾರ ಕ್ರಿಕೆಟ್ ಬೋರ್ಡ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್, ಈ ಆದೇಶ ನೀಡಿದೆ. ಸಮಿತಿಯೇ ರದ್ದಾಗಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ಅಳಿಯ ಮತ್ತು ರಾಜಸ್ಥಾನ ರಾಯಲ್ಸ್ ಮಾಲೀಕ ರಾಜ್‌ಕುಂದ್ರಾಗೆ ಈ ಸಮಿತಿ ನೀಡಿದ್ದ ಕ್ಲೀನ್‌ಚಿಟ್ ಕೂಡ ಅನೂರ್ಜಿತವಾದಂತಾಗಿದೆ. ಆದರೂ ಆ.2 ರಂದು ನಡೆಯಲಿರುವ ಕಾರ್ಯಕಾರಿ ಸಭೆಗೆ ಹಾಜರಾಗುವುದಾಗಿ ಶ್ರೀನಿವಾಸನ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.