ವಿಮ್ಸ್ ವೈದ್ಯ ಸೀಟು ಈಗ 150
ಬಳ್ಳಾರಿ: 'ಸುವರ್ಣ ಮಹೋತ್ಸವ'ದ ಸಂಭ್ರಮದಲ್ಲಿರುವ ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ(ವಿಮ್ಸ್)ಯ ಎಂಬಿಬಿಎಸ್ ಸೀಟುಗಳ ಸಂಖ್ಯೆ 100ರಿಂದ 150ಕ್ಕೆ ಹೆಚ್ಚಳವಾಗಿದೆ.
ಜು.30ರಂದು ನವದೆಹಲಿಯಲ್ಲಿ ನಡೆದ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ(ಎಂಸಿಐ)ದ ಬೋರ್ಡ್ ಆಫ್ ಗೌರ್ವನರ್ಸ್ ಸಭೆಯಲ್ಲಿ ಸೀಟು ಹೆಚ್ಚಳ ಬಗ್ಗೆ ಒಪ್ಪಿಗೆ ನೀಡಲಾಗಿದೆ.
ಬಳ್ಳಾರಿಯ ವಿಮ್ಸ್ ಸೀಟುಗಳ ಸಂಖ್ಯೆ ಹೆಚ್ಚಳವಾದರೆ ವಿಮ್ಸ್ಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡಲಾಗುತ್ತದೆ ಎಂದು ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಮುಚ್ಚಳಿಕೆ ಪತ್ರವನ್ನು ಜು.23ರಂದು ಎಂಸಿಐಗೆ ಬರೆದಿದ್ದರು. ಇನ್ನು ಎಂಸಿಐನವರು ಕೂಡ ಕಾಲೇಜಿನ ಸ್ಥಿತಿಗತಿ ಕುರಿತು 2011ರಲ್ಲೇ ಆಗಮಿಸಿ ಪರಿಶೀಲಿಸಿದ್ದರು.
ದೇಶದ 45 ಮೆಡಿಕಲ್ ಕಾಲೇಜುಗಳು ತಮ್ಮ ಕಾಲೇಜುಗಳ ವೈದ್ಯಕೀಯ ಸೀಟುಗಳನ್ನು ಏರಿಕೆ ಮಾಡಬೇಕೆಂದು ಎಂಸಿಐಗೆ ಅರ್ಜಿ ಸಲ್ಲಿಸಿದ್ದವು. ಆದರೆ, ಕೇವಲ 32 ಕಾಲೇಜುಗಳ ಸೀಟ್ ಹೆಚ್ಚಳಕ್ಕೆ ಅನುಮತಿ ದೊರೆತಿದೆ. ಅದರಲ್ಲಿ ವಿಮ್ಸ್ ಕೂಡಾ ಸೇರಿದೆ.
ಪ್ರವೇಶಾತಿ ದಿನಾಂಕ ವಿಸ್ತರಣೆ: ರಾಜ್ಯದಲ್ಲಿ ಬೆಂಗಳೂರಿನ ಬಿಎಂಸಿಆರ್ಐಗೆ 250 ಸೀಟುಗಳಿದ್ದರೆ, ಹುಬ್ಬಳ್ಳಿ, ಮೈಸೂರು ಜತೆಗೆ ಇದೀಗ ಬಳ್ಳಾರಿ ವಿಮ್ಸ್ನ ಎಂಬಿಬಿಎಸ್ ಸೀಟುಗಳ ಸಂಖ್ಯೆ 150ಕ್ಕೆ ಏರಿಕೆಯಾಗಿದೆ. 1963ರಿಂದ ಇಲ್ಲಿಯವರೆಗೆ ಕೇವಲ 100 ಸೀಟುಗಳನ್ನು ಹೊಂದಿತ್ತು. ಕಳೆದ 18 ವರ್ಷದಿಂದ ಸೀಟುಗಳು ಹೆಚ್ಚಳಿಕೆ ಮಾಡಬೇಕೆಂಬ ಪ್ರಯತ್ನ ಕೊನೆಗೂ ಫಲ ನೀಡಿದೆ ಎಂಬುದು ವಿಮ್ಸ್ ಅಧಿಕಾರಿಗಳ ಸಂತಸ. 50ರ ಸಂಭ್ರಮದಲ್ಲಿರುವ ವಿಮ್ಸ್ಗೆ ಇದು ಹೆಗ್ಗಳಿಕೆಯ ಗರಿಯಾಗಿದೆ. ಎಂಬಿಬಿಎಸ್ ಪ್ರವೇಶಾತಿಗೆ ಜು.31 ಕೊನೆಯ ದಿನಾಂಕವಾಗಿತ್ತಾದರೂ ಇದೀಗ ದಿನಾಂಕ ವಿಸ್ತರಣೆಯಾಗಲಿದೆ.
ಬಡ ವಿದ್ಯಾರ್ಥಿಗಳಿಗೆ ವರದಾನವಾದ ಎಂಸಿಐ ಆದೇಶ: ಎಂಸಿಐ ನಿರ್ಧಾರದಿಂದ 50 ಹೆಚ್ಚಿನ ಸೀಟುಗಳು ಬಡ, ಪ್ರತಿಭಾವಂತ ವೈದ್ಯಕೀಯ ವಿದ್ಯಾರ್ಥಿಗಳಿಗೆ ಇದೀಗ ನೆರವಾಗಿವೆ. ರಾಜ್ಯದ 43 ಹಾಗೂ ಇತರೆ ರಾಜ್ಯದ 7 ಬಡ ವಿದ್ಯಾರ್ಥಿಗಳಿಗೆ ಇದು ನೆರವಾಗಲಿದೆ. ಲಕ್ಷಾಂತರ ರುಪಾಯಿ ಕೊಟ್ಟು ಖಾಸಗಿ ಕಾಲೇಜಿನಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡದ ವಿದ್ಯಾರ್ಥಿಗಳಿಗೆ ಎಂಸಿಐ ತೆಗೆದುಕೊಂಡ ಈ ನಿರ್ಧಾರ ಉಪಯೋಗವಾಗಲಿದೆ. ವಿಮ್ಸ್ನಲ್ಲಿದ್ದ 100 ಸೀಟುಗಳು ಭರ್ತಿಯಾಗಿವೆ, ಇನ್ನೇನು ನಮಗೆ ಎಂಬಿಬಿಎಸ್ ಸೀಟು ಮರೀಚಿಕೆ ಎಂದುಕೊಳ್ಳುತ್ತಿದ್ದ ಬಡ ವಿದ್ಯಾರ್ಥಿಗಳ ಆಸೆಯನ್ನು ಎಂಸಿಎ ನಿರ್ಧಾರ ಜೀವಂತವಾಗಿರಿಸಿದೆ.
ವಿಮ್ಸ್ ನಿರ್ದೇಶಕ ಲಕ್ಷ್ಮಿನಾರಾಯಣ ರೆಡ್ಡಿ, ಪ್ರಾಚಾರ್ಯ ವಿದ್ಯಾಧರ ಕಿನ್ನಾಳ್ ಅವರನ್ನು ಕನ್ನಡಪ್ರಭ ಸಂಪರ್ಕಿಸಿದಾಗ, 'ಎಂಸಿಐಯು ವಿಮ್ಸ್ನ ಎಂಬಿಬಿಎಸ್ ಸೀಟುಗಳನ್ನು 100ರಿಂದ 150ಕ್ಕೆ ಏರಿಕೆ ಮಾಡಿರುವುದು ಬಡ ವಿದ್ಯಾರ್ಥಿಗಳಿಗೆ ವರದಾನವಾಗಿದೆ. ಸೀಟುಗಳ ಏರಿಕೆಗೆ ಕಾರಣವಾಗಿರುವ ಜನಪ್ರತಿನಿಧಿಗಳಿಗೆ, ವೈದ್ಯಕೀಯ ಶಿಕ್ಷಣ ಸಚಿವರಿಗೆ, ಸರ್ಕಾರದ ಪ್ರಧಾನ ಕಾರ್ಯದರ್ಶಿ, ವೈದ್ಯಕೀಯ ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳಿಗೆ ಅಭಿನಂದನೆ ತಿಳಿಸುತ್ತೇವೆ' ಎಂದರು.
- ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

