ಪಠ್ಯ ಮುಗಿಸೋದು ಕಷ್ಟ
- ರಾಜೀವ ಹೆಗಡೆ
ಕನ್ನಡಪ್ರಭ ವಾರ್ತೆ ಬೆಂಗಳೂರು ಜೂ.2
ಪಿಯು ತರಗತಿಗಳ ಪಠ್ಯಕ್ರಮ ಬದಲಾಯಿತು, ಸೇವಾವಧಿ ಬದಲಾಗಲಿಲ್ಲ. ಹೀಗಾಗಿ ನಿಗದಿತ ಪಠ್ಯವನ್ನು ಮುಗಿಸುವುದೇ ಉಪನ್ಯಾಸಕರಿಗೆ ದೊಡ್ಡ ತಲೆನೋವಾಗಿದೆ. ನಿರ್ಧರಿತ ಸಮಯದೊಳಗೆ ಪಠ್ಯಕ್ರಮ ಮುಗಿಯುತ್ತದೆಯೇ ಎಂದು ವಿದ್ಯಾರ್ಥಿಗಳು ತಲೆ ಚಚ್ಚಿಕೊಳ್ಳುವಂತಾಗಿದೆ.
ಪ್ರಥಮ ಪಿಯು ವಿಜ್ಞಾನ ವಿಭಾಗದ ಭೌತಶಾಸ್ತ್ರ, ರಾಸಾಯನಶಾಸ್ತ್ರ, ಗಣಿತ ಹಾಗೂ ಜೀವಶಾಸ್ತ್ರ ಬಿಟ್ಟು ಉಳಿದ 30 ವಿಷಯಗಳ ಪಠ್ಯ ಸಂಪೂರ್ಣ ಬದಲಾಗಿದೆ. ಹೆಚ್ಚುವರಿ ಪಠ್ಯದ ಕಾರಣ ಪ್ರತಿ ವಿಷಯಕ್ಕೂ 30-40 ಅಧಿಕ ತರಗತಿ ತೆಗೆದುಕೊಳ್ಳಬೇಕಾದ ಅನಿವಾರ್ಯತೆಯಿದೆ.
ಕಾಲೇಜುಗಳ ಸಮಯ ಅಥವಾ ರಜೆಯಲ್ಲಿ ಯಾವುದೇ ಬದಲಾವಣೆಯಿಲ್ಲ. ಕಳೆದ ವರ್ಷ ಉಪನ್ಯಾಸಕರು ಸರ್ಕಸ್ ಮಾಡಿ ವಿಜ್ಞಾನ ವಿಭಾಗದ 4 ವಿಷಯಗಳನ್ನು ಸಂಬಾಳಿಸಿದ್ದರು. ಆದರೆ ಈಗ ಹೇಗೆ ನಿಭಾಯಿಸುವುದು ಎಂದು ತಿಳಿಯದೆ ಕಂಗೆಟ್ಟಿದ್ದಾರೆ.
ಅದರಲ್ಲೂ ಪ್ರೌಢಶಾಲೆ - ಪದವಿಪೂರ್ವ ಕಾಲೇಜುಗಳು ಸೇರಿರುವ ಸಂಯುಕ್ತ ಪದವಿಪೂರ್ವ ಕಾಲೇಜುಗಳ ಪರಿಸ್ಥಿತಿ ಮತ್ತಷ್ಟು ಕಷ್ಟಕರ. ಅಂತಹ ಕಾಲೇಜುಗಳಲ್ಲಿ ಹೆಚ್ಚುವರಿ ಕೊಠಡಿಗಳೂ ಇರುವುದಿಲ್ಲ, ಕಾಲಾವಕಾಶವೂ ಇರದು. ಈ ಸಮಸ್ಯೆಗಳ ಕುರಿತಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಮೌನ ತಾಳಿದೆ.
ಕಾಲೇಜುಗಳ ಅವಧಿ ಹೆಚ್ಚಿಸಿದರೆ ಉಪನ್ಯಾಸಕರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಇಲ್ಲವಾದಲ್ಲಿ ವೇತನ ಹೆಚ್ಚಳಕ್ಕೆ ನೆಪವಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾಲೇಜುಗಳು ತಮಗೆ ಬೇಕಾದ ಹಾಗೆ ನಿಭಾಯಿಸಿಕೊಂಡು ಹೋಗಲಿ. ವಿದ್ಯಾರ್ಥಿಗಳ ಹಣೆಬರಹ ಏನಾದರೂ ಸಂಬಂಧವಿಲ್ಲ, ಏಕರೂಪ ಪಠ್ಯಕ್ರಮ ಬದಲಾವಣೆ ತಂದು ಕೈತೊಳೆದುಕೊಂಡಂತಾಗಿದೆ ಎಂಬ ನಿಲುವಿಗೆ ಇಲಾಖೆ ಬಂದಿದೆ.
120 ಗಂಟೆ ಬೇಕು, ಸಿಗುವುದು 92 ಗಂಟೆ!: ಹೊಸ ಪಠ್ಯಕ್ರಮ ಪ್ರಕಾರ ಪ್ರಾಯೋಗಿಕ ವಿಷಯಗಳನ್ನು ಹೊರತುಪಡಿಸಿ ಕೇವಲ ಪಠ್ಯಕ್ಕೆ ಪ್ರತಿ ವಿಷಯಕ್ಕೂ 120 ಗಂಟೆ ಅಗತ್ಯವಿದೆ. ಪ್ರಸಕ್ತ ಶೈಕ್ಷಣಿಕ ವರ್ಷ 33 ವಾರ ಲಭ್ಯವಿರುತ್ತವೆ. ಅದರಲ್ಲಿ 4 ವಾರ ಪರೀಕ್ಷೆಗೆ, 3 ವಾರ ರಜೆ, 2 ವಾರ ಸರ್ಕಾರಿ ರಜೆ ಹಾಗೂ 1 ವಾರ ಪಠ್ಯೇತರ ಚಟುವಿಟಕೆಗೆ ಖಾಲಿಯಾಗುತ್ತದೆ. ಇದಾದ ಬಳಿಕ ಉಪನ್ಯಾಸಕರಿಗೆ ದೊರಕು 23 ವಾರಗಳಲ್ಲಿ ಪ್ರತಿ ವಿಷಯದ ಮೇಲೂ 4 ತರಗತಿ ಆಯಾ ವಾರ ತೆಗೆದುಕೊಂಡರೆ ಒಟ್ಟು 92 ತರಗತಿಗಳಾಗುತ್ತವೆ. ಅಂದರೆ ಇಲಾಖೆ ನಿರ್ಧರಿಸಿದ 120 ಗಂಟೆ ಮಿತಿ ದಾಟಲು 28 ಗಂಟೆ ಬೇಕಾಗುತ್ತದೆ.
ಮತ್ತೊಂದು ವಿಚಾರ ತಿಳಿದಿರಲಿ, ಪ್ರತಿ ಉಪನ್ಯಾಸಕರೂ ವರ್ಷಕ್ಕೆ 15 ದಿನಗಳ ಬಿಡುವು ಹೊಂದಿರುತ್ತಾರೆ. ಅದನ್ನು ಸಂಪೂರ್ಣವಾಗಿ ಉಪಯೋಗಿಸಿಕೊಂಡರೆ ಮತ್ತೆ 15 ಗಂಟೆ ಕಡಿಮೆಯಾಗುತ್ತದೆ. ರಜೆಯನ್ನೇ ತೆಗೆದುಕೊಳ್ಳದೇ ವಿದ್ಯಾರ್ಥಿಗಳ ಸೇವೆ ಮಾಡಿ ಎಂದು ಯಾವ ಸರ್ಕಾರವೂ ಹೇಳಲಾಗದು, ಅದು ಔಚಿತ್ಯವೂ ಅಲ್ಲ.
ಪ್ರಾಯೋಗಿಕ ವಿಷಯಗಳ ಕತೆಯೇನು?: ಪ್ರಾಯೋಗಿಕ ವಿಷಯಗಳಿಗೂ 120 ಪಠ್ಯ ತರಗತಿ ನಡೆಸಲೇಬೇಕು. ಇದರ ಹೊರತಾಗಿ 45 ರಿಂದ 60 ಗಂಟೆ ಪ್ರಾಯೋಗಿಕ ತರಗತಿ ನಡೆಸಬೇಕಾಗುತ್ತದೆ. ವಿಜ್ಞಾನ ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿ ವಾರದ 4 ದಿನ ಮಧ್ಯಾಹ್ನದ ನಂತರ ಪ್ರಾಯೋಗಿಕ ತರಗತಿ ನಡೆಯುತ್ತವೆ. ಇದರರ್ಥ ಯಾವುದೇ ಕಾರಣಕ್ಕೂ ಹೆಚ್ಚುವರಿ ಅವಧಿ ಪೂರೈಸಲು ಮಧ್ಯಾಹ್ನದ ನಂತರ ಸಮಯವೇ ದೊರಕುವುದಿಲ್ಲ. ಬೆಳಗಿನ 4 ಗಂಟೆಗಳ ಸಮಯದಲ್ಲಿಯೇ ಎಲ್ಲ ತರಗತಿಗಳನ್ನು ನಡೆಸಬೇಕು. ಆದರೆ ಈಗಾಗಲೇ ಬೆಳಗಿನ ಎಲ್ಲ ವೇಳಾಪಟ್ಟಿ ಭರ್ತಿಯಾಗುರತ್ತದೆ.
ಇದಲ್ಲದೇ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದಲ್ಲಿ ಎಲ್ಲರನ್ನೂ ಒಟ್ಟುಗೂಡಿಸಿ ಪಾಠ ಮಾಡುವುದು ಕೂಡ ಕಷ್ಟವಾಗುತ್ತದೆ. ಏಕೆಂದರೆ ಪ್ರಯೋಗಾಲಯಗಳ ಕೊರತೆ ಕಾರಣ ಗುಂಪುಗಳನ್ನಾಗಿ ಮಾಡಿ ಪ್ರಾಯೋಗಿಕ ತರಗತಿ ನಡೆಸಲಾಗುತ್ತದೆ. ಇದನ್ನು ಸಂಬಾಳಿಸುವುದು ಉಪನ್ಯಾಸಕರಿಗೆ ದೊಡ್ಡ ಸವಾಲು. ಸರ್ಕಾರ ಈ ಬಗ್ಗೆ ಕೂಡಲೇ ಗಮನವಹಿಸಿ ಕ್ರಮ ತೆಗೆದುಕೊಳ್ಳದಿದ್ದರೇ ರಾಜ್ಯದಲ್ಲಿ ಟ್ಯೂಶನ್ ಪ್ರಭಾವ ಮತ್ತಷ್ಟು ಹೆಚ್ಚಾಗಲಿದೆ. ಮತ್ತೊಂದೆಡೆ ಗ್ರಾಮೀಣ ವಿದ್ಯಾರ್ಥಿಗಳು ಪಾಠಗಳನ್ನು ಅರಗಿಸಿಕೊಳ್ಳಲಾಗದೇ ಪರಿತಪಿಸಬೇಕಾಗುತ್ತದೆ.
ಸಂಯುಕ್ತ ಪಪೂ ಕಾಲೇಜುಗಳ ಸ್ಥಿತಿ ಅಧೋಗತಿ
ಗ್ರಾಮೀಣ ಪ್ರದೇಶಗಳಲ್ಲಿ ರಾಜ್ಯ ಸರ್ಕಾರ ಪ್ರೌಢಶಾಲೆ ಒಳಗೊಂಡ ಸಂಯುಕ್ತ ಪದವಿಪೂರ್ವ ಕಾಲೇಜು ಹೊಂದಿದೆ. ಇಲ್ಲಿ ಸಾಮಾನ್ಯವಾಗಿ ಕಲೆ ಹಾಗೂ ವಾಣಿಜ್ಯ ಕೋರ್ಸ್ಗಳು ನಡೆಯುತ್ತಿವೆ. ಬೆಳಗ್ಗೆ 7.30ಯಿಂದ 11.30 ರವರೆಗೆ ಕಾಲೇಜು ನಡೆಯುತ್ತದೆ. ಆ ಬಳಿಕ ಅದೇ ಕೊಠಡಿಗಳಲ್ಲಿ ಪ್ರೌಢಶಾಲೆ ತರಗತಿ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಸಂಯುಕ್ತ ಪಪೂ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಹೆಚ್ಚುವರಿ ತರಗತಿ ನಡೆಸುವುದು ಸಾಧ್ಯವೇ ಇಲ್ಲ. ಇಲ್ಲವಾದಲ್ಲಿ ಸಂಜೆ 4 ಗಂಟೆ ನಂತರ ವಿಶೇಷ ತರಗತಿ ನಡೆಸಬೇಕಾಗುತ್ತದೆ. ಇಂತಹ ಕ್ರಮಕ್ಕೆ ಮುಂದಾದರೆ ಒಂದು ತರಗತಿಗಾಗಿ ಐದೂವರೆ ಗಂಟೆಗಳ ಕಾಲ ಕಾಯಬೇಕಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

