ಹಳ್ಳಿಗಳಿಗೂ ಬಂದ ಬಾಜಿಭೂತ
ಮಲ್ಲಿಕಾರ್ಜುನ ಸಿದ್ದಣ್ಣವರ
ಕನ್ನಡಪ್ರಭ ವಾರ್ತೆ ಬಾಗಲಕೋಟೆ ಜೂ.2
ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಭೂತ ಮಹಾನಗರಗಳಿಗೆ ಮಾತ್ರ ಸೀಮಿತವಾಗಿಲ್ಲ. ಎರಡು ಮತ್ತು ಮೂರನೇ ಹಂತದ ನಗರ, ಪಟ್ಟಣಗಳು ಸೇರಿದಂತೆ ಹಳ್ಳಿಗಳಿಗೂ ಕಾಲಿಟ್ಟಿದ್ದು, ಉತ್ತರ ಕರ್ನಾಟಕದ ಭಾಗದಲ್ಲಿ ಕೇವಲ ಒಂದೇ ತಿಂಗಳಲ್ಲಿ 11 ಯುವಕರು ಬಲಿಯಾಗಿದ್ದಾರೆ.
ಎ.ವಿ.ದೀಕ್ಷಿತ ನೇತೃತ್ವದ ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರ ತಂಡ ಶನಿವಾರ ಬಾಗಲಕೋಟೆ, ಬೆಳಗಾವಿ, ಕೊಪ್ಪಳ ಜಿಲ್ಲೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಇಂಥ ಆಘಾತಕಾರಿ ಅಂಶ ಹೊರ ಬಿದ್ದಿದೆ. ಮುಂಬೈ, ಕೋಲ್ಕತಾ, ಚೆನ್ನೈ, ಬೆಂಗಳೂರಿಗೆ ಏನೂ ಕಮ್ಮಿ ಇಲ್ಲ ಎಂಬಂತೆ ಉತ್ತರ ಕರ್ನಾಟಕದ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳನ್ನೂ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ವ್ಯಾಪಿಸಿದೆ. ಅಷ್ಟೇ ಏಕೆ ಹೋಬಳಿ, ಹಳ್ಳಿಗಳಲ್ಲೂ ಈ ಹಾವಳಿ ಹೆಚ್ಚಿದೆ ಎಂಬ ಸುಳಿವು ಅರಿತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬೀಳಗಿ, ಮುಧೋಳ, ಅಮೀನಗಡ, ಕೆರೂರು, ಗುಳೇದಗುಡ್ಡ, ಬೆಳಗಾವಿಯ ಗೋಕಾಕ, ಬೈಲಹೊಂಗಲ, ಚಿಕ್ಕೋಡಿ, ಸಂಕೇಶ್ವರ, ಕೊಪ್ಪಳದ ಕುಷ್ಟಗಿ, ಯಲಬುರ್ಗಾ, ಹೊಸಪೇಟೆ ಮಾರ್ಗದ ಹೆದ್ದಾರಿಗಳಲ್ಲಿ ಮಟಕಾ ಚೀಟಿ ವ್ಯವಹಾರದಂತೆ ಅತ್ಯಂತ ಸಲೀಸಾಗಿ ಈ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಭಾರೀ ಪ್ರಮಾಣದಲ್ಲಿ ನಡೆಯುತ್ತಿರುವ ಬಗ್ಗೆ ಮುಂಬೈ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.
ಅಲ್ಲದೇ ದೊಡ್ಡ ಬುಕ್ಕಿಗಳ ಜತೆ ಸ್ಥಳೀಯ ಬುಕ್ಕಿಗಳ ಸಂಪರ್ಕದ ಬಗೆಗೂ ವಿವರ ಸಂಗ್ರಹಿಸಿದ್ದಾರೆ. ಈ ಬೆಟ್ಟಿಂಗ್ನಲ್ಲಿ ಅಪಾರ ಪ್ರಮಾಣದ ಹಣ ಕಳೆದುಕೊಂಡು ಹೆಣವಾದವರ ವಿವರವೂ ಈ ತಂಡಕ್ಕೆ ಲಭಿಸಿದೆ. ಅಚ್ಚರಿಯೆಂದರೆ ಈ 11 ಯುವಕರ ಭಯಾನಕ ಸಾವುಗಳು ಆಕಸ್ಮಿಕ ಮತ್ತು ಮನನೊಂದು ಆತ್ಮಹತ್ಯೆ ಎಂದು ಆಯಾ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ.
ಈ ಸಂಗತಿಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಮುಂಬೈ ಪೊಲೀಸ್ ತಂಡ ಕರ್ನಾಟಕ ಪೊಲೀಸರ ಜತೆ ಮಾಹಿತಿ ವಿನಿಮಯ ಮಾಡಿಕೊಳ್ಳುವ ಸಾಧ್ಯತೆ ಇದೆ. ಬೆಟ್ಟಿಂಗ್ ಮಾಫಿಯಾವನ್ನು ಬೇರು ಸಹಿತ ಕಿತ್ತು ಹಾಕಲು ಉಭಯ ರಾಜ್ಯಗಳ ಪೊಲೀಸರ ಜಂಟಿ ಕಾರ್ಯಾಚರಣೆ ಅಗತ್ಯವಿದೆ ಎನ್ನುವ ಅಭಿಪ್ರಾಯವನ್ನು ತಂಡದ ಸದಸ್ಯರೊಬ್ಬರು 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಹೀಗೆ ನಡೆಯುತ್ತೆ ಬೆಟ್ಟಿಂಗ್: ಐಪಿಎಲ್ ಪಂದ್ಯ ನಡೆಯುವಾಗ ಮಹಾನಗರ ಹಾಗೂ ಮೊದಲ ಹಂತದ ನಗರಗಳ ಮೇಲೆ ಮಾತ್ರ ಪೊಲೀಸರು ಕಣ್ಣಿಟ್ಟಿರುತ್ತಾರೆ. ಹೀಗಾಗಿ ಬುಕ್ಕಿಗಳು ಎರಡನೇ ಹಂತದ ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳತ್ತ ತಮ್ಮ ಜಾಲ ಬೀಸುತ್ತಾರೆ. ಚಾಲಾಕಿ ಯುವಕರನ್ನು ಗುರುತಿಸಿ ಆತನ ಮೂಲಕ ಬೆಟ್ಟಿಂಗ್ ಕಟ್ಟಿಸುತ್ತಾರೆ. ಆರಂಭದಲ್ಲಿ 10, 50, 100 ರಿಂದ ಆರಂಭವಾಗುವ ಬೆಟ್ಟಿಂಗ್ ಅಲ್ಪ ಅವಧಿಯಲ್ಲಿ 50 ಸಾವಿರದಿಂದ 1 ಲಕ್ಷಕ್ಕೆ ಏರುತ್ತದೆ. ಪೊಲೀಸರಿಗೆ ಹೆದರಿ ನಗರದವರೂ ಹೋಬಳಿ, ಹಳ್ಳಿಗಳಿಗೆ ಬಂದು ಬೆಟ್ಟಿಂಗ್ ಕಟ್ಟುತ್ತಾರೆ. ಬುಕ್ಕಿಗಳ ವ್ಯಕ್ತಿಯೊಬ್ಬ ಜಿಲ್ಲಾ ಕೇಂದ್ರದಲ್ಲೇ ಕುಳಿತು ಇದನ್ನೆಲ್ಲ ಇಂಟರ್ನೆಟ್, ಮೊಬೈಲ್ ಮೂಲಕ ನಿಯಂತ್ರಿಸುತ್ತಾನೆ.
ಪ್ರಕರಣ 1
ಸಂಪ್ರದಾಯಸ್ಥ ಮನೆತನದ ಶಾಸ್ತ್ರಿಗಳ ಮಗ ಜಗದೀಶ ಕತ್ತಿ (26) ಓದಿದ್ದು ಎಸ್ಸೆಸ್ಸೆಲ್ಸಿ. ಬದುಕಿನ ಆಸರೆಗಾಗಿ ಆರಂಭಿಸಿದ್ದ ಕಂಪ್ಯೂಟರ್ ಸೆಂಟರ್ನಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಶುರುವಿಟ್ಟುಕೊಂಡ. ಆರಂಭದಲ್ಲಿ ಕೈ ತುಂಬ ಹಣ. ಅದನ್ನೇ ಮುಂದುವರಿಸಿದಾಗ ಆ ಕಂತೆಗಳೆಲ್ಲ ಕರಗಿ ಮೈ ತುಂಬ ಸಾಲ ಬಂತು. ಬರೋಬ್ಬರಿ 25 ಲಕ್ಷ ಬೆಟ್ಟಿಂಗ್ ಹಣ ಕೊಡಲಾಗದೇ ರಾತ್ರೋರಾತ್ರಿ ಬಾಗಲಕೋಟೆಗೆ ಬಂದು ರೈಲು ಹಳಿಯ ಮೇಲೆ ತಲೆ ಇಟ್ಟು ಮಲಗಿ ಕ್ರಿಕೆಟ್ ಬೆಟ್ಟಿಂಗ್ಗೆ ಬಲಿಯಾದ.
ಪ್ರಕರಣ-2
ಹುನಗುಂದ ತಾಲೂಕು ಅಮೀನಗಡ ಹೋಬಳಿಯ ಅಶೋಕ ಚೆನ್ನಿ (27) ಕಿರಿಯ ಆರೋಗ್ಯ ಸಹಾಯಕನ ಮಗ. ಓದಿದ್ದು ಡಿಪ್ಲೊಮಾ. ಆರಂಭದಲ್ಲಿ ಕ್ರಿಕೆಟ್ ಬೆಟ್ಟಿಂಗ್ನಲ್ಲಿ ಗೆದ್ದದ್ದೇ ಹೆಚ್ಚು. ಬೊಗಸೆ ತುಂಬ ಬಳಿದುಕೊಂಡ. ಕೆಡುಗಾಲ ಶುರುವಾಯಿತು ನೋಡಿ, ಬಳಿದುಕೊಂಡದ್ದೆಲ್ಲ ಬಂದ ಹಾಗೆಯೇ ವಾಪಸ್ ಹೋಯಿತು. ಮತ್ತಷ್ಟು ಸಾಲವನ್ನೂ ತಲೆಯ ಮೇಲೆ ತಂದಿತು. ಒಂದು ದಿನ ಬೆಳಗಿನ ಜಾವ ತನ್ನ ಕೋಣೆಯಲ್ಲಿ ಕೊರಳಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ.
ಪ್ರಕರಣ-3
ಅತ್ಯಂತ ಕಿರಿಯ ವಯಸ್ಸಿನಲ್ಲೇ ಭುವನೇಶ್ವರಿ ಸಹಕಾರಿ ಬ್ಯಾಂಕಿನ ಮ್ಯಾನೇಜರ್ ಹುದ್ದೆಗೆ ಏರಿದ ಪ್ರತಿಭಾವಂತನೀತ. ಅದೇನು ಕೆಡುಗಾಲವೋ ಬ್ಯಾಂಕ್ನ ಹಣವನ್ನು ಬೆಟ್ಟಿಂಗ್ ಕುಳಗಳ ಉಡಿಗೆ ಸುರುವಿದ. ಕಳೆದುಕೊಳ್ಳುತ್ತ ಹೋದಂತೆ ಯಾರ್ಯಾರದೋ ಹೆಸರಿನಲ್ಲಿ ಸಾಲ ಸೃಷ್ಟಿಸಿದ. ನೇಕಾರರ ಸಾಲ ಮನ್ನಾದ ಹಣವನ್ನೂ ಬೆಟ್ಟಿಂಗ್ಗೆ ಕಟ್ಟಿದ. ಆಡಳಿತ ಮಂಡಳಿಗೆ ಈ ಸಂಗತಿ ಗೊತ್ತಾಗಿದ್ದೇ ತಡ ಹೊರಗೆ ಹಾಕುವ ಜತೆಗೆ 15 ಲಕ್ಷ ಭರಿಸುವವರೆಗೆ ಆತನ ಆಸ್ತಿಯನ್ನೆಲ್ಲ ಬ್ಯಾಂಕ್ನ ಕಬ್ಜಾಕ್ಕೆ ಪಡೆದಿದ್ದಾರೆ. ಇದಲ್ಲದೆ ಚಿಕ್ಕೋಡಿಯ ರಾಮೋಜಿ ಸಂತಾನವರ (23), ಬೆಳಗಾವಿಯ ಅರವಿಂದ ಸಾಠೆ (20) ಐಪಿಎಲ್ ಬೆಟ್ಟಿಂಗ್ನಲ್ಲಿ ಜೀವ ಕಳೆದುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

