ಪ್ರಧಾನ ಸುದ್ದಿ

ಅಭಿವೃದ್ಧಿ ಕಣ್ಣೋಟ

ಅಭಿವೃದ್ಧಿ ಕಣ್ಣೋಟ
Published On :

ಕನ್ನಡಪ್ರಭ ವಾರ್ತೆ ,  ಬೆಂಗಳೂರು ,  ಜೂ.3
ಕೇವಲ ಬದಲಾವಣೆಯಲ್ಲ, ಎಲ್ಲರ ಕಣ್ಣಿಗೆ ಕಾಣುವ ಬದಲಾವಣೆ. ಈ ಮೂಲಕ ಸಮಗ್ರ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದ ಭರವಸೆಯ ಮುನ್ನೋಟವನ್ನು ಹೊಸ ಸರ್ಕಾರ ನೀಡಿದೆ.
ವಿಧಾನ ಮಂಡಲದ ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ ಭಾಷಣ ಮಾಡಿದ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು, ಹೊಸ ಸರ್ಕಾರ ಮುಂದಿನ ದಿನಗಳಲ್ಲಿ ಇಡಲಿರುವ ಹೆಜ್ಜೆಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಹೊಸ ಸರ್ಕಾರವನ್ನು ಆಯ್ಕೆ ಮಾಡಿದ ಮತದಾರರು ಕಟ್ಟಿಕೊಂಡ ಕನಸು ಮತ್ತು ಇಟ್ಟುಕೊಂಡಿರುವ ನಿರೀಕ್ಷೆ ಹುಸಿಯಾಗಲು ಬಿಡದೆ ಅದನ್ನು ಸಾಕಾರಗೊಳಿಸಲು ಆದ್ಯತೆ ನೀಡುವುದಾಗಿ ಹೇಳಿದ್ದಾರೆ.
ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಓದಿದ ರಾಜ್ಯಪಾಲರು, ಬಹುಭಾಷೆ, ಬಹು ಸಂಸ್ಕೃತಿ, ಸೌಹಾರ್ದಯುತ ಬಾಳುವೆ ಎಂಬ ಅನನ್ಯತೆಯನ್ನು ರಾಜ್ಯ ಕಳೆದುಕೊಳ್ಳುತ್ತಾ ಬಂದಿದೆ. ಇದಕ್ಕೆ ಕಾರಣಗಳನ್ನು ಹುಡುಕಿ, ಹೊಣೆಗಾರರನ್ನು ಗುರುತಿಸಿ ದೋಷಾರೋಪ ಮಾಡುವ ಬದಲು ಆಗಿರುವ ಹಾನಿಯನ್ನು ಸರಪಡಿಸುವತ್ತ ಹೆಜ್ಜೆ ಇಡುವುದಾಗಿ ತಿಳಿಸಿದ್ದಾರೆ.
ಕಳೆದ ಕೆಲ ವರ್ಷಗಳಲ್ಲಿ ಬಯಲಿಗೆ ಬಂದ ಭ್ರಷ್ಟಾಚಾರ, ಹಗರಣಗಳನ್ನು ಪ್ರಸ್ತಾಪಿಸಿದ ರಾಜ್ಯಪಾಲರು, ಇದರಿಂದಾಗಿ ದೇಶದ ಎದುರು ರಾಜ್ಯ ತಲೆತಗ್ಗಿಸುವಂತಾಗಿದೆ. ಸಾರ್ವಜನಿಕರ ಹಣ ಪೋಲಾಗಿ ಅಭಿವೃದ್ಧಿ ಚಟುವಟಿಕೆಗಳು ಸ್ಥಗಿತಗೊಂಡಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮುಂದಿನ ದಿನಗಳಲ್ಲಿ ಸ್ವಚ್ಛ ಮತ್ತು ಜನರಿಗೆ ಉತ್ತರದಾಯಿಯಾದ ಆಡಳಿತ ಒದಗಿಸುವ ಭರವಸೆ ನೀಡಿದ್ದಾರೆ.
ಕೃಷಿ, ಕೈಗಾರಿಕೆ, ಗ್ರಾಮೀಣಾಭಿವೃದ್ಧಿ, ಮಹಿಳೆಯರ ರಕ್ಷಣೆ, ಸರ್ಕಾರಿ ಭೂಮಿ ಒತ್ತುವರಿ ತೆರವಿಗಾಗಿ ವಿಶೇಷ ಯೋಜನೆಗಳು. ಕೃಷಿ ಬೆಲೆ ಆಯೋಗ, ಗ್ರಾಮೀಣ ಜೀವನೋಪಾಯ ಮಿಷನ್ ಸ್ಥಾಪನೆ, 2014ರಲ್ಲಿ 3ನೇ ಜಾಗತಿಕ ಬಂಡವಾಳ ಹೂಡಿಕೆದಾರರ ಸಮ್ಮೇಳನ, ಸರ್ಕಾರಿ ಭೂಮಿ ಒತ್ತುವರಿ ತಡೆಗೆ ಭೂನೀತಿಗಳನ್ನು ಜಾರಿಗೆ ತರುವುದಾಗಿ ಪ್ರಕಟಿಸಿರುವ ರಾಜ್ಯಪಾಲರು, ಅಲ್ಪಸಂಖ್ಯಾತರ ಅಭಿವೃದ್ದಿಗೆ ನ್ಯಾ. ರಂಗನಾಥ್ ಮಿಶ್ರಾ ಮತ್ತು ನ್ಯಾ. ಸಾಚಾರ್ ಸಮಿತಿ ಶಿಫಾರಸುಗಳ ಜಾರಿ ಭರವಸೆ ನೀಡುವ ಮೂಲಕ ವಿವಾದ ಮೈಮೇಲೆ ಎಳೆದುಕೊಳ್ಳುವ ಮುನ್ಸೂಚನೆಯನ್ನೂ ನೀಡಿದ್ದಾರೆ.   

ಮಹಿಳೆಯರಿಗಾಗಿ ಯೋಜನೆಗಳು
ವಿಧವೆಯರು, ಒಂಟಿ ಮಹಿಳೆಯರು ಸೇರಿದಂತೆ ಅಸಹಾಯಕ ಮಹಿಳೆಯರು ಸುರಕ್ಷಿತ ಮತ್ತು ಸುಭದ್ರ ಪರಿಸರದಲ್ಲಿ ಗೌರವದ ಜೀವನ ನಡೆಸಲು ಮತ್ತು ಕೆಲಸ ಮಾಡಲು ಸಾಧ್ಯವಾಗುವ ವಾತಾವರಣ ಕಲ್ಪಿಸುವುದು. ಈ ನಿಟ್ಟಿನಲ್ಲಿ ಈಗಾಗಲೇ ಜಾರಿಯಲ್ಲಿರುವ ಕಾಯ್ದೆಗಳ ಕಟ್ಟುನಿಟ್ಟಿನ ಜಾರಿ. ಮಹಿಳಾ ಸ್ವಸಹಾಯ ಗುಂಪುಗಳ ಆವರ್ತನಿಧಿ ಹೆಚ್ಚಳ. ಅವುಗಳಿಗೆ ಪ್ರತ್ಯೇಕ ಬ್ಯಾಂಕಿಂಗ್ ಮತ್ತು ಮಾರುಕಟ್ಟೆ ಸೌಲಭ್ಯ.
ಕೃಷಿ ಬೆಲೆ ಆಯೋಗ ಸ್ಥಾಪನೆ
ಕೃಷಿ ಪ್ರಕ್ರಿಯೆಯನ್ನು ಹೆಚ್ಚು ವೈಜ್ಞಾನಿಕಗೊಳಿಸಿ, ಅದರಿಂದ ಹೆಚ್ಚು ಪ್ರತಿಫಲ ದೊರೆಯುವಂತೆ ಮಾಡುವ ಮೂಲಕ ಕೃಷಿಕರು ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸುವ ಪ್ರಯತ್ನ. ಈ ನಿಟ್ಟಿನಲ್ಲಿ ಕೃಷಿ ಬೆಲೆ ಆಯೋಗ ಸ್ಥಾಪನೆ. ಭೂಚೇತನ ಯೋಜನೆ ವಿಸ್ತರಣೆ. ಜಲಾನಯನ ಯೋಜನೆಗಳನ್ನು ಕಾಲಬದ್ಧ ಅವಧಿಯಲ್ಲಿ ಬರಪೀಡಿತ ಎಲ್ಲಾ ಖುಷ್ಕಿ ಭೂಮಿಗಳಿಗೂ ವಿಸ್ತರಣೆ.
ಜೀವನೋಪಾಯ ಮಿಷನ್
ಆಯವ್ಯಯದಲ್ಲಿ ಜಿಲ್ಲಾ ಯೋಜನೆಗಳ ಪಾಲು ಹೆಚ್ಚಳ. ಕರ್ತವ್ಯ ಲೋಪ ಎಸಗಿ ಪಂಚಾಯತ್‌ರಾಜ್ ಸಂಸ್ಥೆಯ ನಿರ್ವಹಣೆಗೆ ಅಡ್ಡಿಯಾಗುವ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸದಸ್ಯರನ್ನು ಅನರ್ಹಗೊಳಿಸಲು ಕಾನೂನಿಗೆ ತಿದ್ದುಪಡಿ. ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಮರ್ಪಕ ಅನುಷ್ಠಾನ. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಸ್ಥಾಪನೆ.
ನೀರಾವರಿಗೆ ವಿಶೇಷ ಆದ್ಯತೆ
ಚಿತ್ರದುರ್ಗ, ತುಮಕೂರು, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ನೀರು ಒದಗಿಸಲು ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯೆಂದು ಸೇರ್ಪಡೆ ಮಾಡಲು ಕ್ರಮ. ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತವನ್ನು ಆದ್ಯತೆ ಮೇಲೆ ಆರಂಭಿಸುವುದು. ಕಾವೇರಿ ಜಲಾನಯನದ ಬಾಕಿ ಇರುವ ಯೋಜನೆಗಳಿಗೆ ಕೇಂದ್ರದ ಅನುಮೋದನೆ ಪಡೆಯುವುದು.
ಶುದ್ಧ ಮತ್ತು ಹಸಿರು ಇಂಧನಕ್ಕೆ ಉತ್ತೇಜನ
ವಿದ್ಯುತ್ ವಲಯದಲ್ಲಿ ನೆನೆಗುದಿಗೆ ಬಿದ್ದಿರುವ ಯೋಜನೆಗಳು ಪೂರ್ಣ. ಕಲ್ಲಿದ್ದಲು ಪೂರೈಕೆ ಮತ್ತು ಪರಿಸರ ಕಾರಣಗಳಿಂದ ತಡೆಹಿಡಿಯಲಾಗಿರುವ ವಿದ್ಯುತ್ ಯೋಜನೆಗಳಿಗೆ ಅನುಮೋದನೆ ಪಡೆಯಲು ಗಂಭೀರ ಪ್ರಯತ್ನ. ಸೋಲಾರ್ ಪಂಪ್‌ಗಳು ಮತ್ತು ಉಪಕರಣಗಳಿಂದಾಗಿ ನವೀಕರಿಸಬಹುದಾದ ಇಂಧನ ನೀತಿಯ ಮೂಲಕ ಶುದ್ಧ ಮತ್ತು ಹಸಿರು ಇಂಧನಕ್ಕೆ ಉತ್ತೇಜನ.
ಲೋಕೋಪಯೋಗಿ ಇಲಾಖೆಗೆ ಹೊಸ ರೂಪ
ಕಾಮಗಾರಿಗಳ ನಿರ್ವಹಣೆಯಲ್ಲಿ ಅತ್ಯಂತ ಹೆಚ್ಚಿನ ಪಾರದರ್ಶಕತೆ ಮತ್ತು ದಕ್ಷತೆ ಖಾತ್ರಿಪಡಿಸಲು ಲೋಕೋಪಯೋಗಿ ಇಲಾಖೆಗೆ ಹೊಸ ರೂಪ. ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಜಿಲ್ಲಾ ಮುಖ್ಯ ರಸ್ತೆಗಳನ್ನು ಮೇಲ್ದರ್ಜೆಗೇರಿಸುವುದು. ಸಮಗ್ರ ಮರಳು ಗಣಿಗಾರಿಕೆ ನೀತಿ ಜಾರಿ.
ನಗರ ಮೂಲ ಸೌಕರ್ಯಕ್ಕೆ ಮಾಸ್ಟರ್‌ಪ್ಲಾನ್
ನಗರ ಪ್ರದೇಶಗಳಲ್ಲಿ ಒಳಚರಂಡಿ, ಘನತ್ಯಾಜ್ಯ ನಿರ್ವಹಣೆ, ವಸತಿ ಮತ್ತು ಕುಡಿಯುವ ನೀರು ಪೂರೈಕೆಗೆ ಮಾಸ್ಟರ್ ಪ್ಲಾನ್. ಬೆಂಗಳೂರು ಅಭಿವೃದ್ಧಿಗೆ ಬಿಬಿಎಂಪಿ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಸಾರಿಗೆ, ವಸತಿ ಮತ್ತು ವಿದ್ಯುತ್ ಇಲಾಖೆ ನಡುವೆ ಸಮನ್ವಯಕ್ಕೆ ಪ್ರಯತ್ನ. ಬೆಂಗಳೂರು ಮೆಟ್ರೋ 2ನೇ ಹಂತ ತ್ವರಿತ ಕಾಮಗಾರಿಗೆ ಕ್ರಮ.
ಹೈ-ಕಗೆ ಪ್ರತ್ಯೇಕ ಅಭಿವೃದ್ಧಿ ಮಂಡಳಿ
ಹೈದರಾಬಾದ್ ಕರ್ನಾಟಕದ ಆರು ಹಿಂದುಳಿದ ಜಿಲ್ಲೆಗಳಿಗೆ ಕೇಂದ್ರ ಸರ್ಕಾರ ವಿಶೇಷ ಸ್ಥಾನಮಾನ ನೀಡಿದೆ.
ಅದರಂತೆ ಅಂತರ್-ಪ್ರಾದೇಶಿಕ, ಅಂತರ್-ಜಿಲ್ಲಾ ಅಸಮಾನತೆ ತಗ್ಗಿಸಲು ಸರ್ಕಾರವು ನಿಧಿಗಳ ಸಮಾನ ಹಂಚಿಕೆ ದೃಢಪಡಿಸಲಿದೆ. ಆ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿ ಮತ್ತು ಉದ್ಯೋಗ, ಶಿಕ್ಷಣದಲ್ಲಿ ಮೀಸಲು
ಒದಗಿಸಲು ಮೂರು ತಿಂಗಳಲ್ಲಿ ಪ್ರತ್ಯೇಕ ಅಭಿವೃದ್ಧಿ ಮಂಡಳಿ ಸ್ಥಾಪನೆ.
ಸರ್ಕಾರಿ ಭೂಮಿ ರಕ್ಷಣೆಗೆ ವಿಶೇಷ ಭೂನೀತಿ
ಸರ್ಕಾರಿ ಭೂಮಿ ಒತ್ತುವರಿ ತಡೆಗಟ್ಟಲು ಭೂ ನೀತಿ. ಅನುದಾನ ಮತ್ತು ಗುತ್ತಿಗೆ ನೀಡಿರುವ ಸರ್ಕಾರಿ ಜಮೀನುಗಳಿಗಾಗಿ ಭೂ ಲೆಕ್ಕಪರಿಶೋಧನಾ ವ್ಯವಸ್ಥೆ ಜಾರಿ. ಸರ್ಕಾರಿ ಭೂ ಒತ್ತುವರಿ ಕುರಿತಂತೆ ಎ.ಟಿ. ರಾಮಸ್ವಾಮಿ ಮತ್ತು ಬಾಲಸುಬ್ರಮಣ್ಯಂ ಸಮಿತಿಗಳ ಶಿಫಾರಸು ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲು ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಉನ್ನತಾಧಿಕಾರ ಸಮಿತಿ ರಚನೆ.
ಆಡಳಿತ ಮತ್ತು ಕೌಶಲ್ಯ ಸುಧಾರಣಾ ಕೇಂದ್ರ ಸ್ಥಾಪನೆ
ಆಡಳಿತಾತ್ಮಕ ಸುಧಾರಣೆಗಳನ್ನು ಮೊನಚುಗೊಳಿಸಲು ಆಡಳಿತ ಮತ್ತು ಕೌಶಲ್ಯ ಸುಧಾರಣಾ ಕೇಂದ್ರ ಸ್ಥಾಪನೆ. ನೌಕರರ ವರ್ಗಾವಣೆಯಲ್ಲಿ ನಿಸ್ಪಕ್ಷಪಾತ ಮತ್ತು ಪಾರದರ್ಶಕ ವ್ಯವಸ್ಥೆ. ಇ- ಆಡಳಿತಕ್ಕೆ ಪ್ರೋತ್ಸಾಹ. ಸಕಾಲ ಸೇವಾ ಅಧಿನಿಯಮಕ್ಕೆ ಸುಧಾರಣೆ ತಂದು ಸರ್ಕಾರಿ ಸೇವೆಗಳನ್ನು ಇನ್ನಷ್ಟು ತಡೆರಹಿತ ಮತ್ತು ಕಾಲಬದ್ಧವಾಗಿ ನೀಡಲು ಕ್ರಮ.
ವೆಚ್ಚ ಸುಧಾರಣಾ ಆಯೋಗದ ಶಿಫಾರಸು ಜಾರಿ
ಅನಗತ್ಯ ಖರ್ಚುಗಳಿಗೆ ಕಡಿವಾಣ. ಸಹಾಯಧನ ಸಂಬಂಧದಲ್ಲಿ ಪರಿಣಾಮಕಾರಿ ಗುರಿ ಇಟ್ಟುಕೊಂಡು ಹಾಗೂ ಬಂಡವಾಳ ಹೂಡಿಕೆಗೆ ಪ್ರೇರೇಪಿಸಿ ಬೆಳವಣಿಗೆ ಕಡೆ ಗಮನ. ಆಡಳಿತ ವೆಚ್ಚ ಸುಧಾರಣಾ ಆಯೋಗದ ಶಿಫಾರಸುಗಳ ಜಾರಿ. ತೆರಿಗೆ ಸಂಗ್ರಹಕ್ಕೆ ಸುಧಾರಣಾ ಕ್ರಮಗಳ ಜಾರಿ.

ಭ್ರಷ್ಟಾಚಾರ ಮಾತಿಗೆ ಕಟುಟೀಕೆ
ವಿಧಾನಸಭೆ: ರಾಜ್ಯದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಬಯಲಿಗೆ ಬಂದ ಭ್ರಷ್ಟಾಚಾರದ ಹಗರಣಗಳಿಂದ ದೇಶದ ಎದುರು ಕರ್ನಾಟಕ ತಲೆ ತಗ್ಗಿಸುವಂತಾಗಿದೆ... ರಾಜ್ಯಪಾಲರ ಭಾಷಣದಲ್ಲಿನ ಈ ಹೇಳಿಕೆಗೆ ರಾಜಕೀಯ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ರಾಜ್ಯಕ್ಕೆ ಅಪಮಾನ ಮಾಡುವ ಹೇಳಿಕೆ ಇದು. ರಾಜ್ಯಪಾಲರಿಂದ ಇಂತಹ ಭಾಷಣ ಮಾಡಿಸಿರುವುದು ನಾಚಿಕೆಗೇಡು ಎಂದೂ ದೂರಿದ್ದಾರೆ. ಸಾರ್ವಜನಿಕರ ಹಣ ಪೋಲಾಗಿ ಅಭಿವೃದ್ಧಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ರಾಜಕೀಯ ಪಕ್ಷಗಳ ಮೇಲೆ ಜನರು ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ ಎಂಬ ರಾಜ್ಯಪಾಲರ ಭಾಷಣದಲ್ಲಿನ ಹೇಳಿಕೆ ಪ್ರತಿಪಕ್ಷಗಳು ತೀವ್ರ ಕೆರಳುವಂತೆ ಮಾಡಿದೆ. ಕೇಂದ್ರದಲ್ಲಿನ ಭ್ರಷ್ಟಾಚಾರ ಪ್ರಕರಣಗಳು ರಾಷ್ಟ್ರವನ್ನು ವಿಶ್ವಮಟ್ಟದಲ್ಲಿ ತಲೆತಗ್ಗಿಸುವಂತೆ ಮಾಡಿದೆ. ಇದನ್ನು ಅವರು ಮೊದಲು ಅರಿಯಬೇಕು ಎಂದು ಸಿದ್ದರಾಮಯ್ಯ ಅವರಿಗೆ ಪ್ರತಿಪಕ್ಷಗಳು ತಿರುಗೇಟು ನೀಡಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.