ಇಂದು ರಕ್ಷಣೆಗೆ ತೆರೆ

ಡೆಹ್ರಾಡೂನ್: ಪ್ರವಾಹಪೀಡಿತ ಉತ್ತರಾಖಂಡದಲ್ಲಿ ಕಳೆದ ಹದಿನೈದು ದಿನಗಳಿಂದ ನಡೆಯುತ್ತಿರುವ ರಕ್ಷಣಾ ಕಾರ್ಯಕ್ಕೆ ಸೋಮವಾರ ತೆರೆ ಬೀಳಲಿದೆ. ಇದರ ಬೆನ್ನಲ್ಲೇ ಮಹಾಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ ಕುರಿತ ಗೊಂದಲಕ್ಕೂ ತೆರೆ ಬಿದ್ದಿದೆ.
ಜೂ.16ರಂದು ಸಂಭವಿಸಿದ ಮಹಾಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 10 ಸಾವಿರಕ್ಕೂ ಹೆಚ್ಚು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವೇ ಅಧಿಕೃತಪಡಿಸಿದೆ. 'ಮಹಾಪ್ರವಾಹದಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 1500 ಮಂದಿ ಇನ್ನೂ ಬೆಟ್ಟಗುಡ್ಡಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ' ಎಂದು ಪ್ರಾಧಿಕಾರದ ಉಪಾಧ್ಯಕ್ಷ ಶಶಿಧರ್ ರೆಡ್ಡಿ ಮಾಹಿತಿ ನೀಡಿದ್ದಾರೆ. ಆದರೆ, ಪ್ರತ್ಯಕ್ಷದರ್ಶಿಗಳ ಪ್ರಕಾರ, 1500ಕ್ಕೂ ಹೆಚ್ಚು ಸಂಖ್ಯೆಯ ಯಾತ್ರಾರ್ಥಿಗಳ ರಕ್ಷಣಾ ಕಾರ್ಯ ಇನ್ನೂ ಆಗಿಲ್ಲ. ಅವರಿನ್ನೂ ಗುಡ್ಡಕಾಡುಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.
ಮೊದಲೇ ಮಾಹಿತಿ ನೀಡಿದ್ದೆವು:: ಹವಾಮಾನ ಇಲಾಖೆಯ ಎಚ್ಚರಿಕೆಯ ಹೊರತಾಗಿಯೂ ಚಾರ್ಧಾಮ್ ಯಾತ್ರೆಯನ್ನು ಮುಂದುವರಿಸಿದ್ದು ಉತ್ತರಾಖಂಡದಲ್ಲಿ ಸಾವಿರಾರು ಜೀವಗಳ ಬಲಿಗೆ ಕಾರಣವಾಯಿತೇ?
ಉತ್ತರಾಖಂಡ ಸರ್ಕಾರಕ್ಕೆ ಭಾರಿ ಮಳೆ ಹಾಗೂ ಭೂಕುಸಿತ ಕುರಿತು ಮೊದಲೇ ಎಚ್ಚರಿಕೆ ನೀಡಲಾಗಿತ್ತು. ಜತೆಗೆ, ಪ್ರತಿಕೂಲ ಹವಾಮಾನ ಹಿನ್ನೆಲೆಯಲ್ಲಿ ಚಾರ್ಧಾಮ್ ಯಾತ್ರೆಯನ್ನು ನಾಲ್ಕೈದು ದಿನ ಮುಂದೂಡುವ ಸಲಹೆ ನೀಡಲಾಗಿತ್ತೆಂದೂ ಹವಾಮಾನ ಇಲಾಖೆ ನಿರ್ದೇಶಕ ಆನಂದ್ ಶರ್ಮಾ ಮಾಹಿತಿ ನೀಡಿದ್ದಾರೆ.
ಶರ್ಮಾ ಪ್ರಕಾರ, ಹವಾಮಾನ ಇಲಾಖೆ ಜೂ.14ರಂದೇ ಮಳೆ ಕುರಿತು ಮುನ್ಸೂಚನೆ ನೀಡಲು ಆರಂಭಿಸಿತ್ತು. 16ರಂದು ಕೆಲವು ಪ್ರದೇಶಗಳಲ್ಲಿ ದೊಡ್ಡಪ್ರಮಾಣದ ಮಳೆ ಸುರಿಯುವ ಸಾಧ್ಯತೆ ಕುರಿತು ಸ್ಪಷ್ಟ ಎಚ್ಚರಿಕೆ ಕೊಡಲಾಗಿತ್ತು.
ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದನ್ನು ರಾಜ್ಯದ ವಿಪತ್ತು ನಿರ್ವಹಣಾ ಸಚಿವ ಯಶ್ಪಾಲ್ ಆರ್ಯ ಅವರೂ ಒಪ್ಪಿಕೊಂಡಿದ್ದಾರೆ. ಇಷ್ಟು ದೊಡ್ಡಪ್ರಮಾಣದ ದುರಂತದ ಮುನ್ಸೂಚನೆ ಇರಲಿಲ್ಲ. ಬೆಟ್ಟಕ್ಕೆ ಹೋಗದಂತೆ ಹಾಗೂ ಎತ್ತರದ ಪ್ರದೇಶದಲ್ಲಿರುವವರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಹವಾಮಾನ ಇಲಾಖೆ ಎಚ್ಚರಿಸಿದ್ದು ನಿಜ. ಆದರೆ, ಅಷ್ಟರಲ್ಲಾಗಲೇ ಸಾಕಷ್ಟು ಪ್ರಮಾಣದಲ್ಲಿ ಯಾತ್ರಾರ್ಥಿಗಳು ಬೆಟ್ಟ ಏರಿಯಾಗಿತ್ತು. ಅವರನ್ನು ಸಂಪರ್ಕಿಸುವುದೂ ಆ ಸಂದರ್ಭದಲ್ಲಿ ಕಷ್ಟವಾಗಿತ್ತು. ಆದರೂ ಸಾಧ್ಯವಾದಷ್ಟು ಮಂದಿಯನ್ನು ನಾವು ರಕ್ಷಿಸಿದ್ದೇವೆ ಎಂದು ಆರ್ಯ ಮಾಹಿತಿ ನೀಡಿದ್ದಾರೆ.
ಪತ್ತೆಯಾಗದಿದ್ದರೆ ಪರಿಹಾರ
ಪ್ರವಾಹದಿಂದಾಗಿ 3 ಸಾವಿರ ಮಂದಿ ನಾಪತ್ತೆಯಾದ ಬಗ್ಗೆ ವರದಿಯಿದ್ದು, ಅವರ ಪತ್ತೆ ಕಾರ್ಯ ಮುಂದುವರಿದಿದೆ. ಒಂದು ವೇಳೆ 30 ದಿನಗಳೊಳಗೆ ನಾಪತ್ತೆಯಾದವರು ಪತ್ತೆಯಾಗದಿದ್ದರೆ ಅವರ ಕುಟುಂಬಕ್ಕೆ ಸರ್ಕಾರದ ವತಿಯಿಂದ ಪರಿಹಾರ ವಿತರಿಸಲಾಗುವುದು ಎಂದು ಉತ್ತರಾಖಂಡ ಸಿಎಂ ವಿಜಯ್ ಬಹುಗುಣ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


