ಪ್ರಧಾನ ಸುದ್ದಿ

ಅಮ್ಮ, ಸಿಎಂ ಯಾರಮ್ಮಾ?

ಅಮ್ಮ, ಸಿಎಂ ಯಾರಮ್ಮಾ?
Published On :

-ಕಾಂಗ್ರೆಸ್ ಪಾಲಿಗೆ ಇದು ಸುದಿನ. 8 ವರ್ಷಗಳ ನಂತರ ಅಧಿಕಾರದ ಸಂಭ್ರಮ. ಸಿಎಂ ಗಾದಿಗೆ ರೇಸ್ ಶುರು. ಸಿದ್ದು, ಖರ್ಗೆ ಹೆಸರು ಮುಂಚೂಣಿಯಲ್ಲಿ. ಅನ್ಯರ ಹೆಸರುಗಳೂ ಕೇಳಿಬರುತ್ತಿದ್ದು, ಅವರು ಯಾರು ಎಂಬುದು ಯಾರಿಗೂ ತಿಳಿದಿಲ್ಲ. ಅದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗಷ್ಟೇ ಗೊತ್ತು. ಮತದಾರರಲ್ಲಿ ಉಳಿದಿರುವ ಕುತೂಹಲ ಇದೊಂದೇ...

ಕನ್ನಡಪ್ರಭ ವಾರ್ತೆ  ಬೆಂಗಳೂರು  ಮೇ 8
ಸುಮಾರು 8 ವರ್ಷಗಳ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದು, ಮುಖ್ಯಮಂತ್ರಿ ಮತ್ತು ಮಂತ್ರಿ ಸ್ಥಾನಕ್ಕಾಗಿ ಆ ಪಕ್ಷದಲ್ಲಿ ತೀವ್ರ ಪೈಪೋಟಿ ಆರಂಭವಾಗಿದೆ.
ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಒಟ್ಟು 223 ಸ್ಥಾನಗಳ ಪೈಕಿ 121 ಕಡೆ ಜಯಭೇರಿ ಬಾರಿಸುವ ಮೂಲಕ ಕಾಂಗ್ರೆಸ್ ಸರ್ಕಾರ ರಚನೆಗೆ ಸಿದ್ಧತೆ ನಡೆಸಿದೆ.
ಮುಖ್ಯಮಂತ್ರಿ ಹುದ್ದೆಗಾಗಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಎಚ್.ಕೆ. ಪಾಟೀಲ್, ಆರ್.ವಿ. ದೇಶಪಾಂಡೆ, ಡಿ.ಕೆ. ಶಿವಕುಮಾರ್, ಶಾಮನೂರು ಶಿವಶಂಕರಪ್ಪ ಅವರ ಮಧ್ಯೆ ತೀವ್ರ ಪೈಪೋಟಿ ನಡೆದಿದ್ದು, ಆಯ್ಕೆ ಚೆಂಡು ಹೈಕಮಾಂಡ್ ಮುಂದಿದೆ. ಈ ಆರು ಮಂದಿಯೂ ತಮ್ಮದೇ ಮೂಲಗಳಿಂದ ಹೈಕಮಾಂಡ್ ಮೇಲೆ ಒತ್ತಡ ಹೇರಲಾರಂಭಿಸಿದ್ದಾರೆ.
ಜೊತೆಗೆ ಮುಖ್ಯಮಂತ್ರಿ ಹುದ್ದೆಗೆ ತಾವು ಆಕಾಂಕ್ಷಿಗಳು ಎಂದು ಈ ಎಲ್ಲರೂ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಪೈಪೋಟಿಯ ಭರದಲ್ಲಿ ಹೈಕಮಾಂಡ್ ಹೊರಗಿನಿಂದ ನಾಯಕನನ್ನು ಹೇರುವ ಸಾಧ್ಯತೆ ಬಗ್ಗೆಯೂ ಚರ್ಚೆ ನಡೆದಿದೆ.
ಈ ಮಧ್ಯೆ ಸಚಿವ ಸ್ಥಾನಕ್ಕೂ ಆಕಾಂಕ್ಷಿಗಳ ಮಧ್ಯೆ ಸ್ಪರ್ಧೆ ಆರಂಭವಾಗಿದ್ದು, ಈ ಬಾರಿ ಅನುಭವಿಗಳು ಮತ್ತು ಯುವಕರನ್ನೊಳಗೊಂಡ ಸಮರ್ಥ ಮಂತ್ರಿಮಂಡಲ ರಚನೆಗೆ ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಹಿರಿಯರಾದ ಕಾಗೋಡು ತಿಮ್ಮಪ್ಪ, ಆರ್.ವಿ.ದೇಶಪಾಂಡೆ, ರಮೇಶ್‌ಕುಮಾರ್, ಡಿ.ಕೆ. ಶಿವಕುಮಾರ್, ಡಾ.ಎಚ್.ಸಿ. ಮಹಾದೇವಪ್ಪ, ಎಚ್.ಎಸ್. ಮಹಾದೇವಪ್ರಸಾದ್, ಯು.ಟಿ. ಖಾದರ್, ಬಿ. ರಮಾನಾಥ್ ರೈ, ಅಭಯಚಂದ್ರ ಜೈನ್, ವಿನಯ್‌ಕುಮಾರ್ ಸೊರಕೆ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಡಾ.ಎಸ್.ಆರ್. ಪಾಟೀಲ್, ವೀರಣ್ಣ ಮತ್ತಿಕಟ್ಟಿ ಹಾಗೂ ಮೋಟಮ್ಮ, ರಾಮಲಿಂಗಾರೆಡ್ಡಿ, ರೋಷನ್ ಬೇಗ್, ದಿನೇಶ್ ಗುಂಡೂರಾವ್, ಕೃಷ್ಣ ಭೈರೇಗೌಡ, ರೆಬೆಲ್ ಸ್ಟಾರ್ ಅಂಬರೀಷ್, ಪ್ರಕಾಶ್ ಹುಕ್ಕೇರಿ, ಶ್ಯಾಮನೂರು ಶಿವಶಂಕರಪ್ಪ, ಸಿ.ಎಸ್. ನಾಡಗೌಡ, ಖಮರುಲ್ ಇಸ್ಲಾಂ, ತನ್ವೀರ್ ಸೇಠ್ ಮತ್ತು ಅನಿಲ್‌ಲಾಡ್, ಸಂತೋಷ್ ಲಾಡ್... ಹೀಗೆ ಸಚಿವಾಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದೆ.
ಆದರೆ, ಮುಖ್ಯಮಂತ್ರಿ ಸೇರಿದಂತೆ 34 ಮಂದಿಗೆ ಮಾತ್ರ ಸಂಪುಟದಲ್ಲಿ ಅವಕಾಶವಿರುವುದರಿಂದ ಅಳೆದು ತೂಗಿ ಸಚಿವರನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನೂ ಹೈಕಮಾಂಡ್‌ಗೆ ಬಿಡಲಾಗಿದೆ.
ದಯನೀಯ ಸೋಲು: ಆಡಳಿತಾರೂಢ ಬಿಜೆಪಿ ಕೇವಲ 40 ಸ್ಥಾನಗಳನ್ನು ಪಡೆದು ದಯನೀಯವಾಗಿ ಸೋತಿದ್ದು, ಅಷ್ಟೇ ಸ್ಥಾನಗಳನ್ನು ಗಳಿಸಿರುವ ಜೆಡಿಎಸ್ ಜತೆ ಪ್ರತಿಪಕ್ಷ ಸ್ಥಾನವನ್ನು ಹಂಚಿಕೊಂಡಿದೆ. ಇನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷ 6 ಸ್ಥಾನ, ಮಾಜಿ ಸಚಿವ ಬಿ. ಶ್ರೀರಾಮುಲು ನೇತೃತ್ವದ ಬಿಎಸ್‌ಆರ್ ಕಾಂಗ್ರೆಸ್ 4 ಸ್ಥಾನಗಳನ್ನು ಪಡೆದಿದ್ದು, ಸಮಾಜವಾದಿ ಪಾರ್ಟಿ ಮತ್ತು ಸರ್ವೋದಯ ಪಕ್ಷಗಳು ತಲಾ ಒಂದು ಸ್ಥಾನ ಗಳಿಸಿವೆ.       

ಪಕ್ಷೇತರರು 10 ಸ್ಥಾನಗಳಲ್ಲಿ ಗೆದ್ದಿದ್ದಾರೆ. ಇದರೊಂದಿಗೆ ಕಳೆದ 50 ದಿನಗಳ ರಾಜಕೀಯ ಕುತೂಹಲಕ್ಕೆ ಬುಧವಾರ ತೆರೆ ಬಿದ್ದಂತಾಗಿದ್ದು, ರಾಜಕೀಯ ಪಕ್ಷಗಳ ಲೆಕ್ಕಾಚಾರ ತಲೆಕೆಳಗು ಮಾಡಿರುವ ರಾಜ್ಯದ ಮತದಾರರು ಒಂದು ಪಕ್ಷದ ಸರ್ಕಾರಕ್ಕೆ ಅನುಮೋದನೆ ನೀಡಿದ್ದಾರೆ.
ಈ ಬಾರಿ ಆಡಳಿತ ವಿರೋಧಿ ಅಲೆ ಮತ್ತು ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿರುವ ಅವ್ಯವಹಾರ, ಹಗರಣಗಳೇ ಫಲಿತಾಂಶದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಜತೆಗೆ ಯಡಿಯೂರಪ್ಪ ಅವರ ಕೆಜೆಪಿ ಆಡಳಿತಾರೂಢ ಬಿಜೆಪಿಯ ಶಕ್ತಿ ಕುಂದಿಸಿದೆ.
ಇದರಿಂದ 2008ರ ಚುನಾವಣೆಯಲ್ಲಿ 110 ಸ್ಥಾನ ಪಡೆದು, ನಂತರ ಆಪರೇಷನ್ ಕಮಲದ ಮೂಲಕ ಸಂಖ್ಯಾಬಲವನ್ನು 120ಕ್ಕೆ ಹೆಚ್ಚಿಸಿಕೊಂಡಿದ್ದ ಬಿಜೆಪಿ ಈ ಬಾರಿ ಕೇವಲ 40 ಸ್ಥಾನ ಗಳಿಸುವಷ್ಟರಲ್ಲಿ ಸುಸ್ತಾಗಿದೆ. ಬಿಜೆಪಿ ಗೊಂದಲದ ಲಾಭವನ್ನು ಸ್ವಲ್ಪ ಹೆಚ್ಚಾಗಿ ಪಡೆದ ಕಾಂಗ್ರೆಸ್ 121 ಸ್ಥಾನಗಳೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದೆ.
 2008ರಲ್ಲಿ ಕಾಂಗ್ರೆಸ್ 80 ಸ್ಥಾನ ಗಳಿಸಿದ್ದು, ಆಪರೇಷನ್ ಕಮಲಕ್ಕೆ ಬಲಿಯಾಗಿ ಸಂಖ್ಯೆಯನ್ನು 71ಕ್ಕೆ ಇಳಿಸಿಕೊಂಡಿತ್ತು. ಇನ್ನೊಂದೆಡೆ ಜೆಡಿಎಸ್ ಕೂಡ ತನ್ನ ಸಾಧನೆಯನ್ನು ಉತ್ತಮಗೊಳಿಸಿದ್ದು, ಸಂಖ್ಯಾಬಲವನ್ನು 26ರಿಂದ 40ಕ್ಕೆ ಹೆಚ್ಚಿಸಿಕೊಂಡಿದೆ.
ಪ್ರತಿಪಕ್ಷ ಯಾವುದು ? : ಬಿಜೆಪಿ ಮತ್ತು ಜೆಡಿಎಸ್ ಸಮಬಲ ಸಾಧಿಸಿರುವುದರಿಂದ ಪ್ರಮುಖ ಪ್ರತಿಪಕ್ಷ ಸ್ಥಾನ ಯಾರಿಗೆ ಸಿಗಲಿದೆ ಎಂಬುದು ಕುತೂಹಲ ಕೆರಳಿಸಿದೆ. ಇದಕ್ಕಾಗಿ ಪಕ್ಷೇತರರನ್ನು ಅವಲಂಬಿಸಬೇಕಾದ ಪರಿಸ್ಥಿತಿ ಉಭಯ ಪಕ್ಷಗಳಿಗೆ ಉಂಟಾಗಿದೆ.


ಸಿಎಂ ಸ್ಥಾನಕ್ಕೆ ಶೆಟ್ಟರ್ ರಾಜಿನಾಮೆ
ಮುಖ್ಯಮಂತ್ರಿ ಸ್ಥಾನಕ್ಕೆ ಜಗದೀಶ ಶೆಟ್ಟರ್ ಅವರು ಬುಧವಾರ ಸಂಜೆ ರಾಜಿನಾಮೆ ನೀಡಿದ್ದಾರೆ. ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿ ಕಾಂಗ್ರೆಸ್ ಸ್ಪಷ್ಟ ಬಹುಮತ ಗಳಿಸುತ್ತಿದ್ದಂತೆ ಶೆಟ್ಟರ್ ಅವರು ರಾಜಭವನಕ್ಕೆ ತೆರಳಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ತಮ್ಮ ರಾಜಿನಾಮೆ ಪತ್ರ ಸಲ್ಲಿಸಿದರು. ರಾಜ್ಯಪಾಲರು ಶೆಟ್ಟರ್ ಅವರು ಸಲ್ಲಿಸಿದ ರಾಜಿನಾಮೆ ಅಂಗೀಕರಿಸಿದ್ದಾರೆ. ರಾಜ್ಯಪಾಲರ ಸೂಚನೆ ಮೇರೆಗೆ ಶೆಟ್ಟರ್ ಅವರು ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವವರೆಗೆ ಉಸ್ತುವಾರಿ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ.

ಜನಾದೇಶಕ್ಕೆ ತಲೆಬಾಗುತ್ತೇವೆ. ನಮ್ಮ ಆಡಳಿತದ ಅವಧಿಯಲ್ಲಿ ನಡೆದ ಅಭಿವೃದ್ಧಿಗಿಂತ ಆರಂಭಿಕ ದಿನಗಳಲ್ಲಿ ಪಕ್ಷದಲ್ಲುಂಟಾದ ಗೊಂದಲ ಹಾಗೂ ಭ್ರಷ್ಟಾಚಾರವೇ ಹೆಚ್ಚು ಬಿಂಬಿತವಾದದ್ದು ಸೋಲಿಗೆ ಕಾರಣ.
- ಪ್ರಹ್ಲಾದ ಜೋಷಿ, ಬಿಜೆಪಿ ರಾಜ್ಯಾಧ್ಯಕ್ಷ

ಬಿಜೆಪಿಯ ಐದು ವರ್ಷದ ದುರಾಡಳಿತ ಇಲ್ಲಿಗೆ ಕೊನೆಯಾಗಿದೆ. ನಾವು ಮಾಡಿದ ಹೋರಾಟ ಮತ್ತು ಕೆಲಸಕ್ಕೆ ತಕ್ಕ ಪ್ರತಿಫಲ ದೊರೆತಿದೆ. ನಾವು ಸ್ವಚ್ಛ ಆಡಳಿತ ಮತ್ತು ಸ್ಥಿರ ಸರ್ಕಾರವನ್ನು ಜನರಿಗೆ ನೀಡುತ್ತೇವೆ.
- ಡಾ.ಜಿ.ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ

ಕಾಂಗ್ರೆಸ್ ಯಾವುದೇ ಶ್ರಮವಿಲ್ಲದೆ ಜನರ ಬೆಂಬಲ ಗಳಿಸಿದೆ. ವೈಯಕ್ತಿಕವಾಗಿ ನನಗೆ ಈ ಚುನಾವಣೆ ಮೇಲೆ ಭಾರಿ ನಿರೀಕ್ಷೆ ಇತ್ತು. ಆದರೆ ಅದು ಹುಸಿಯಾಗಿದೆ. ಜನರ ಭಾವನೆ ಗೌರವಿಸುತ್ತೇನೆ.
- ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ


ಇಂದು ಸಿದ್ದು ದೆಹಲಿಗೆ
ಸರ್ಕಾರ ರಚನೆ ಕಸರತ್ತು ಕಾಂಗ್ರೆಸ್‌ನಲ್ಲಿ ಆರಂಭವಾಗಿದ್ದು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಗುರುವಾರ ಮಧ್ಯಾಹ್ನ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಜತೆ ಪಕ್ಷದ ಗೆಲುವು ಹಾಗೂ ಸರ್ಕಾರ ರಚನೆ ಬಗ್ಗೆ ಇವರಿಬ್ಬರೂ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಜೊತೆ ಚರ್ಚೆ ನಡೆಸಲಿದ್ದು, ಶುಕ್ರವಾರ ಕೇಂದ್ರದ ವೀಕ್ಷಕರು ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ. ಈ ಮಧ್ಯೆ ಸಿಎಂ ಹುದ್ದೆಯ ಆಕಾಂಕ್ಷಿಗಳ ಪಟ್ಟಿ ಕಾಂಗ್ರೆಸ್‌ನಲ್ಲಿ ಬೆಳೆಯುತ್ತಲೇ ಇದೆ. ಖರ್ಗೆ, ದೇಶಪಾಂಡೆ, ಡಿ.ಕೆ. ಶಿವಕುಮಾರ್, ಶ್ಯಾಮನೂರು ಶಿವಶಂಕರಪ್ಪ, ಎಚ್.ಕೆ. ಪಾಟೀಲ್ ಮೊದಲಾದವರು ಈ ರೇಸ್‌ನಲ್ಲಿ ಕಾಣಿಸಿಕೊಂಡಿದ್ದು, ಲಾಬಿ ಆರಂಭಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.