ಬೆಂಗಳೂರು: ವಿಧಾನಸಭೆಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಎಸ್. ಸುರೇಶ್‌ಕುಮಾರ್ ಅವರನ್ನು ಆಯ್ಕೆ ಮಾಡಲು ಬಿಜೆಪಿ ಚಿಂತನೆ ನಡೆಸುತ್ತಿದೆ. ಜಗದೀಶ್ ಶೆಟ್ಟರ್ ಸಿಎಂ ಆಗಿ ಕೆಲಸ ನಿರ್ವಹಿಸಿದ್ದ ಹಿನ್ನೆಲೆಯಲ್ಲಿ ಅವರಿಗೆ ಈ ಹುದ್ದೆ ಬೇಡ. ಬದಲಾಗಿ ಸುರೇಶ್‌ಕುಮಾರ್ ಅವರಿಗೆ ಈ ಅವಕಾಶ ನೀಡಬೇಕು ಎನ್ನುವುದು ಪಕ್ಷದ ಮುಖಂಡರ ಅಭಿಪ್ರಾಯ. ಮೇ 14ರಂದು ನಡೆಯಲಿರುವ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಸಭೆ ಬಳಿಕ ಸುರೇಶ್ ಕುಮಾರ್ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗುವುದು ಎಂದು ಮೂಲಗಳು ಹೇಳಿವೆ.
ಜಗದೀಶ್ ಶೆಟ್ಟರ್ ಅವರನ್ನೇ ಶಾಸಕಾಂಗ ಪಕ್ಷದ ನಾಯಕನಾಗಿ ಮುಂದುವರಿಸಬೇಕು ಎಂಬ ಅಭಿಪ್ರಾಯ ಇದೆಯಾದರೂ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕನಾದರೆ ಈ ತೀರ್ಮಾನ ಕೈಗೊಳ್ಳಬಹುದು. ಆದರೆ, ಬಿಜೆಪಿಗೆ ಅಧಿಕೃತ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸುವ ಅವಕಾಶ ಇಲ್ಲದ ಕಾರಣ ಜಗದೀಶ್ ಶೆಟ್ಟರ್ ಬದಲು ಸುರೇಶ್‌ಕುಮಾರ್ ಅವರಿಗೆ ಶಾಸಕಾಂಗ ಪಕ್ಷದ ನಾಯಕನ ಸ್ಥಾನ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಇನ್ನೊಂದೆಡೆ ಆರ್. ಅಶೋಕ ಅವರ ಹೆಸರೂ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಕೇಳಿಬರುತ್ತಿದೆ. ಪಕ್ಷದಲ್ಲಿ ತನ್ನದೇ ಆದ ಪ್ರಭಾವ ಹೊಂದಿರುವ ಅವರೂ ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿದ್ದಾರೆ. ಹೀಗಾಗಿ ಮೇ 14ರ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರ ಅಭಿಪ್ರಾಯ ಪಡೆದು ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದೆ.