ನಾಯಕ ಬದ್ಲು ನಿರ್ದೇಶಕ
ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ, ನ.3-
ಖ್ಯಾತ ನಿರ್ದೇಶಕ ಡಿ.ರಾಜೇಂದ್ರ ಬಾಬು ಅವರಿಗೆ ನಾಟಕಗಳೆಂದರೆ ಅಚ್ಚುಮೆಚ್ಚು. ಶಾಲೆಯಲ್ಲಿ ಓದುತ್ತಿರುವಾಗಲೇ ನಾಟಕಗಳಲ್ಲಿ ಅಭಿನಯಿಸಿಕೊಂಡು ಬಂದ ಅವರು, ನಾಯಕ ನಟನಾಗಬೇಕೆಂಬ ಆಸೆ ಹೊಂದಿದ್ದರು. ಆದರೆ, ಅವರು ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಕಾಣಿಕೆಯನ್ನು ನೀಡಿದರು.
ಖ್ಯಾತ ವಕೀಲ ಅನಂತತೀರ್ಥಚಾರ್ ಮಗನಾಗಿ ಚಿಕ್ಕಬಳ್ಳಾಪುರದಲ್ಲಿ ಜನಿಸಿದ ರಾಜೇಂದ್ರ ಬಾಬು, ಇಲ್ಲಿಯೇ ಪ್ರಾಥಮಿಕ ಮತ್ತು ಪದವಿ ಶಿಕ್ಷಣವನ್ನು ಮುಗಿಸಿದರು. ಓದಿನ ಜತೆಗೆ ನಾಟಕದ ಗೀಳನ್ನೂ ಅಂಟಿಸಿಕೊಂಡಿದ್ದರು. ಹಾಗಾಗಿ ನಗರದ ಸರ್ ಎಂ.ವಿ.ಪ್ರೌಢಶಾಲೆ ಮತ್ತು ಮುನ್ಸಿಪಲ್ ಕಾಲೇಜಿನಲ್ಲಿ ಓದುತ್ತಿರುವಾಗ ತಮ್ಮ ಸಹಪಾಠಿಗಳೊಂದಿಗೆ ಸೇರಿ, ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ನಾಟಕರಂಗದಲ್ಲಿ ಆಸಕ್ತಿಯನ್ನು ಹೊಂದಿದ್ದ ಸಾಹಿತಿ ಜಯಚಂದ್ರನಾಯ್ಡು, ಸಂಗೀತ ನಿರ್ದೇಶಕ ಸುಖದೇವ್, ಭಗವಾನ್ ಪ್ರಸಾದ್, ಪಿ.ಶಿವಕುಮಾರ್ ಜತೆ ಸೇರಿ 'ಪಂಚತಾರಾ ಕಲಾನಿಕೇತನ' ತಂಡವನ್ನು ಕಟ್ಟಿಕೊಂಡಿದ್ದರು. ರಾಜ್ಯೋತ್ಸವ, ಗಾಂಧಿ ಜಯಂತಿ ಸೇರಿದಂತೆ ವಿಶೇಷ ಕಾರ್ಯಕ್ರಮಗಳಲ್ಲಿ ಹಲವೆಡೆ ನಾಟಕ ಪ್ರದರ್ಶನ ನೀಡುತ್ತಿದ್ದರು. ವಿಷಜ್ವಾಲೆ, ನಗ್ನಸತ್ಯ, ಮುಕ್ತಿ, ಜೂಲಿಯಸ್ ಸೀಜರ್ ಇವರ ಅಭಿನಯದ ಪ್ರಮುಖ ನಾಟಕಗಳು. ಸೀಜರ್ ಪಾತ್ರ ರಾಜೇಂದ್ರ ಬಾಬು ಅವರಿಗೆ ಸ್ಥಳೀಯವಾಗಿ ಹೆಸರನ್ನು ತಂದು ಕೊಟ್ಟಿತ್ತು.
ಈಗಿನ ಚಿಕ್ಕಬಳ್ಳಾಪುರ ನಗರಸಭಾ ಕಚೇರಿಯ ಸಭಾಂಗಣದಲ್ಲಿ ಹಿಂದೆ ನಾಟಕ ಪ್ರದರ್ಶನ ಹೆಚ್ಚಿಗೆ ನಡೆಯುತ್ತಿದ್ದವು. ಇದು ಅವರ ನಾಟಕದ ಕಲೆಯನ್ನು ಪ್ರದರ್ಶಿಸಲು ಆಗ ಪ್ರಮುಖ ಕೇಂದ್ರ ಸ್ಥಾನವಾಗಿತ್ತು. ಇನ್ನೂ ನಾಟಕದ ಕಲೆಯ ಜತೆಗೆ ಕನ್ನಡ ನಾಡು ನುಡಿಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲೂ ಸಹ ಇವರು ಶ್ರಮಿಸಿದ್ದರು. ಪ್ರತಿ ವರ್ಷ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದ ಶ್ರೀ ಭುವನೇಶ್ವರಿ ಕನ್ನಡ ರಾಜ್ಯೋತ್ಸವ ಕ್ರಿಯಾ ಸಮಿತಿಯಲ್ಲಿ ನಟ ಶ್ರೀನಿವಾಸಮೂರ್ತಿ, ಹರಿಕುಮಾರ್, ವೀರಶೇಖರ್ ಅವರೊಂದಿಗಿದ್ದುಕೊಂಡು ಸಕ್ರಿಯವಾಗಿ ನಾಡಿನ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಈ ನಡುವೆ, ಬಾಬು ಅವರು ತಮ್ಮ ಮುಂದಿನ ವ್ಯಾಸಂಗಕ್ಕಾಗಿ ರಾಜಧಾನಿ ಬೆಂಗಳೂರಿಗೆ ತೆರಳಿದ ನಂತರ ಸಿನಿಮಾ ರಂಗದಲ್ಲಿ ಬ್ಯುಸಿಯಾದರೂ ಸಹ ಚಿಕ್ಕಬಳ್ಳಾಪುರದ ಕಡೆಗೆ ಹೆಚ್ಚು ಒಲವನ್ನು ಹೊಂದಿದ್ದರು. ತಮ್ಮ ಸಿನಿಮಾಗಳ ಚಿತ್ರೀಕರಣಕ್ಕಾಗಿ ಶೂಟಿಂಗ್ ಸ್ಪಾಟ್ ಆಯ್ಕೆಗೆ ಹೆಚ್ಚಿನ ಆದ್ಯತೆಯನ್ನು ಚಿಕ್ಕಬಳ್ಳಾಪುರಕ್ಕೆ ಕೊಡುತ್ತಿದ್ದರು. ಡಿ.ರಾಜೇಂದ್ರ ಬಾಬುರವರ ಒಡನಾಟದ ಬಗ್ಗೆ ಇಂದಿಗೂ ಚಿಕ್ಕಬಳ್ಳಾಪುರದಲ್ಲಿ ಅನೇಕರು ಸ್ಮರಿಸಿಕೊಳ್ಳುತ್ತಾರೆ. ನಾಟಕಗಳಲ್ಲಿ ಅಭಿನಯಿಸುವುದರ ಜತೆಗೆ ಸ್ಥಳೀಯವಾಗಿ ಅನೇಕ ಕಲಾವಿದರನ್ನು ಬೆಳೆಸಿದರು.
'ಕುರುಬರ ಲಕ್ಕ, ಎಲಿಜಬೆತ್ ರಾಣಿ'ಯಲ್ಲಿ ನಾಯಕ
'ಕುರುಬರ ಲಕ್ಕ-ಎಲಿಜಬೆತ್ ರಾಣಿ' ಸಿನಿಮಾದಲ್ಲಿ ಡಿ.ರಾಜೇಂದ್ರ ಬಾಬುರವರೇ ನಾಯಕ. ಈ ಸಿನಿಮಾವನ್ನು ನಂದಿ ಕೃಷ್ಣಮೂರ್ತಿ ನಿರ್ದೇಶಿಸಿ, ಸಂಗೀತವನ್ನು ಸುಖದೇವ್ ನೀಡಿದ್ದರು. ಬಹುತೇಕ ಚಿತ್ರಿಕರಣ ನಂದಿ ಬೆಟ್ಟದ ರಮ್ಯತಾಣದಲ್ಲಿ ನಡೆದಿತ್ತು. ಸಿನಿಮಾದಲ್ಲಿ ನಾಯಕ ಕುರಿಯುವ ಕಾಯುವ ಕಾಯಕವನ್ನು ಮಾಡಿಕೊಂಡಿರುತ್ತಾನೆ. ಈ ನಡುವೆ ನಂದಿ ಬೆಟ್ಟಕ್ಕೆ ಆಗಮಿಸುವ ಎಲಿಜಬೆತ್ ರಾಣಿಗೆ ಕಣ್ಣಿಗೆ ಬಿದ್ದು ಮೆಚ್ಚುಗೆಗೆ ಪಾತ್ರವಾಗುತ್ತಾನೆ. ಆತನ ಸೇವೆಗೆ ಮೆಚ್ಚಿ ಎಲಿಜಬೆತ್ ರಾಣಿ ಕೊನೆಗೆ ಬಹುಮಾನವನ್ನು ನೀಡುತ್ತಾಳೆ. ಹೀಗೆ ಎಲಿಜಬೆತ್‌ರಾಣಿಯ ಗಮನ ಸೆಳೆಯುವ ಚಿತ್ರದಲ್ಲಿ ಡಿ.ರಾಜೇಂದ್ರ ಬಾಬು ಮೊದಲ ಬಾರಿಗೆ ನಾಯಕರಾಗಿ ಅಭಿನಯಿಸಿದ್ದರು.
- ಎನ್.ವೆಂಕಟೇಶ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

