ಪ್ರಧಾನ ಸುದ್ದಿ

ಕಬ್ಬಿಗೆ ದರ ನಿಗದಿ ಮಾಡಿ

ಕಬ್ಬಿಗೆ ದರ ನಿಗದಿ ಮಾಡಿ
Published On :

ಬೆಳಗಾವಿ/ಬಾಗಲಕೋಟೆ/ಬಿಜಾಪುರ: ಕಬ್ಬು ದರ ನಿಗದಿ ಕಾವು ಏರತೊಡಗಿದೆ. ಪ್ರತಿ ಟನ್ ಕಬ್ಬಿಗೆ 3500 ದರ ನಿಗದಿಗೆ ಆಗ್ರಹಿಸಿ ಉತ್ತರ ಕರ್ನಾಟಕದ ಬೆಳಗಾವಿ, ಬಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಮಂಗಳವಾರ ರೈತರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ರೈತರ ಈ ತೀವ್ರ ಪ್ರತಿಭಟನೆಯಿಂದಾಗಿ ಮೂರೂ ಜಿಲ್ಲೆಗಳಲ್ಲಿ ಸಂಚಾರ ಮತ್ತು ಜನಜೀವನ ಅಸ್ತವ್ಯಸ್ತವಾಗಿತ್ತು. ರೈತ ಸಂಘಟನೆಗಳು ಇಡೀ ಉತ್ತರ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದರೂ ಈ ಮೂರು ಜಿಲ್ಲೆಗಳಲ್ಲಿ ಹೋರಾಟದ ತೀವ್ರತೆ ಜಾಸ್ತಿ ಇತ್ತು. ರಾಷ್ಟ್ರೀಯ, ರಾಜ್ಯ ಹೆದ್ದಾರಿ ಸೇರಿ ಗ್ರಾಮಾಂತರ ಪ್ರದೇಶಗಳಲ್ಲೂ ರೈತರು ರಸ್ತೆ ತಡೆ ನಡೆಸಿದ್ದರಿಂದ ಪ್ರಯಾಣಿಕರು ತೀವ್ರ ಪರದಾಡಬೇಕಾಯಿತು. ಹಬ್ಬದ ರಜೆ ಮುಗಿಸಿ ವಾಪಸ್ ಪ್ರಯಾಣಿಕರು ಸಂಜೆಯ ತನಕವೂ ತಮ್ಮ ಸ್ವಸ್ಥಾನ ಸೇರಲಾಗದೇ ಚಡಪಡಿಸಿದರು.
ಬೆಳಗಾವಿ ಜಿಲ್ಲೆಯಲ್ಲಿ ಹಿರೇಬಾಗೇವಾಡಿ ಬಳಿ ರಾಷ್ಟ್ರೀಯ ಹೆದ್ದಾರಿ 4 ಅನ್ನು ಸುಮಾರು 3 ಗಂಟೆಗಳ ಕಾಲ ಬಂದ್ ಮಾಡಿದ ರೈತರು ಸರ್ಕಾರ ತಕ್ಷಣ ರೈತರ ಸಮಸ್ಯೆಯತ್ತ ಗಮನ ಹರಿಸಬೇಕೆಂದು ಆಗ್ರಹಿಸಿದರು.
ಜಿಲ್ಲೆಯ ಕಾಗವಾಡ- ಅಥಣಿ ರಸ್ತೆ, ಯರಗಟ್ಟಿ ಬಳಿ ಬೆಳಗಾವಿ- ಬಾಗಲಕೋಟೆ ರಸ್ತೆ, ಚಿಕ್ಕೋಡಿ- ಮೀರಜ್ ರಸ್ತೆ, ಗೋಕಾಕ, ಘಟಪ್ರಭಾ ಸವದತ್ತಿ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ರಸ್ತೆ ತಡೆ ನಡೆಸಲಾಯಿತು. ಟನ್ ಕಬ್ಬಿಗೆ 3500 ದರ ನಿಗದಿ ಮಾಡಬೇಕೆಂಬ ಕಬ್ಬು ಬೆಳೆಗಾರರ ಬೇಡಿಕೆಗೆ ಸರ್ಕಾರ ಕಿವುಡಾಗಿದೆ ಎಂದು ರೈತ ನಾಯಕರು ಪ್ರತಿಭಟನೆ ವೇಳೆ ದೂರಿದರು.        
ಪ್ರತಿಭಟನಾನಿರತ ಶಾಸಕರಾದ ಸಂಜಯ್ ಪಾಟೀಲ್, ಪಿ. ರಾಜೀವ್, ಮಾಜಿ ಸಚಿವ ಶಶಿಕಾಂತ ಪಾಟೀಲ್ ಮತ್ತಿತರರು ಹೋರಾಟದಲ್ಲಿ ಪಾಲ್ಗೊಂಡಿದ್ದರು. ಶಾಸಕರು, ಮಾಜಿ ಸಚಿವರು ಹಾಗೂ ರೈತ ಮುಖಂಡರನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಯಿತು.
ಬಾಗಲಕೋಟೆಯಲ್ಲೂ ಜೋರು: ಬಾಗಲಕೋಟೆ ಜಿಲ್ಲೆಯಲ್ಲೂ ಪ್ರತಿಭಟನೆಯ ಕಾವು ಜೋರಾಗಿಯೇ ಇತ್ತು. ಜಿಲ್ಲೆಯ ಪ್ರಮುಖ ರಾಷ್ಟ್ರೀಯ, ರಾಜ್ಯ ಹೆದ್ದಾರಿ ಬಂದ್ ಮಾಡಲಾಗಿತ್ತು. ಬಾಗಲಕೋಟೆ ನಗರದಲ್ಲೂ ಬೆಳಗ್ಗೆ 7 ಗಂಟೆಯಿಂದಲೇ ರೈತರು ಪ್ರಮುಖ ರಸ್ತೆಗಳಿಗೆ ಟೈರ್ ಇಟ್ಟು ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಿದರು. ಇದರಿಂದ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಅದೇ ರೀತಿ ಬೆಳಗಾವಿ, ಬಿಜಾಪುರಕ್ಕೆ ಸಂಪರ್ಕ ಕಲ್ಪಿಸುವ ಗದ್ದನಕೇರಿ ಕ್ರಾಸ್‌ನಲ್ಲೂ ರೈತರು ಪ್ರತಿಭಟನೆ ನಡೆಸಿದ್ದರಿಂದ ಈ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿತ್ತು. ಸಂಗಮ ಕ್ರಾಸ್, ಸೀಮಿಕೇರಿ ಕ್ರಾಸ್, ರೈತ ಪ್ರತಿಭಟನೆಯ ಕೇಂದ್ರ ಸ್ಥಾನವಾದ ಮುಧೋಳದಲ್ಲೂ ರಸ್ತೆ ಸಂಚಾರ ಸಂಪೂರ್ಣವಾಗಿ ಸ್ಥಗಿತವಾಗಿತ್ತು. ಮಹಾಲಿಂಗಪುರ, ಜಮಖಂಡಿ, ಕಲಾದಗಿಯಲ್ಲೂ ಪ್ರತಿಭಟನೆಯ ಕಾವು ಜೋರಾಗಿತ್ತು.

ವಿದ್ಯಾರ್ಥಿಗಳ ಪರದಾಟ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಪದವಿ ಪರೀಕ್ಷೆ (ಸೆಮಿಸ್ಟರ್) ನಡೆಯುತ್ತಿದ್ದು, ರೈತರ ರಸ್ತೆ ತಡೆಯಿಂದ ವಿದ್ಯಾರ್ಥಿಗಳು ತೀರಾ ಸಂಕಷ್ಟಕ್ಕೆ ಸಿಲುಕಿದರು. ಪರೀಕ್ಷೆಗೆ ಹಾಜರಾಗಲಾರದೇ ವಿದ್ಯಾರ್ಥಿಗಳು ಗೋಳಾಡಿದರು. ಕೆಲವು ವಿದ್ಯಾರ್ಥಿಗಳು ಖಾಸಗಿ ವಾಹನ, ದ್ವಿಚಕ್ರ ವಾಹನದ ಮೊರೆ ಹೋದರೆ, ಮತ್ತೆ ಕೆಲವರು ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೇವೆ. ಅವಕಾಶ ನೀಡಿ ಎಂದು ಅಂಗಲಾಚಿ ಮುಂದೆ ಸಾಗಿದರು.

ಬಿಜಾಪುರದಲ್ಲೂ ತೀವ್ರ: ಬಿಜಾಪುರ ಜಿಲ್ಲೆಯ ಝಳಕಿ, ನಿಡಗುಂದಿ ಮತ್ತು ಕೊಲ್ಹಾರ ಬಳಿ ರಾಷ್ಟ್ರೀಯ ಹೆದ್ದಾರಿ, ಇಂಡಿ, ಸಿಂದಗಿ, ಬಸವನ ಬಾಗೇವಾಡಿಯಲ್ಲಿಯೂ ಕಬ್ಬು ಬೆಳೆಗಾರರು ರಸ್ತೆ ತಡೆ ನಡೆಸಿದರು. ಇದೇ ಸಂದರ್ಭದಲ್ಲಿ ಸಿಂದಗಿ ಮತ್ತಿತರ ಕಡೆಗಳಿಂದ ಆಗಮಿಸಿದ್ದ ಕಬ್ಬು ಬೆಳೆಗಾರರು ಬಿಜಾಪುರದಲ್ಲಿ ಜಿಲ್ಲಾಧಿಕಾರಿ ರಿತ್ವಿಕ್ ರಂಜನ್ ಪಾಂಡೆ ಅವರಿಗೆ ಮನವಿ ಸಲ್ಲಿಸಿ, ಕಬ್ಬಿಗೆ ಯೋಗ್ಯ ಬೆಲೆ ನಿಗದಿಪಡಿಸಬೇಕು. ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡ ಹಣವನ್ನು ನೀಡಬೇಕೆಂದು ಆಗ್ರಹಿಸಿದರು.

ಇಂದು ದರ ಪ್ರಕಟ
ಬೆಂಗಳೂರು:
ರಾಜ್ಯದ ಕಬ್ಬು ಬೆಳೆಗಾರರ ಬಹುದಿನಗಳ ಬೇಡಿಕೆಗೆ ಮನ್ನಣೆ ಸಿಗುವ ಸಮಯ ಸನ್ನಿಹಿತವಾಗಿದೆ. ಕಬ್ಬಿಗೆ ಬೆಲೆ ನಿಗದಿಪಡಿಸಿ ಬುಧವಾರ ಸರ್ಕಾರ ಆದೇಶ ಹೊರಡಿಸಲಿದೆ. ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ  ನೇತೃತ್ವದಲ್ಲಿ ಸಕ್ಕರೆ ಸಚಿವ ಪ್ರಕಾಶ್ ಹುಕ್ಕೇರಿ  ಸಕ್ಕರೆ ನಿರ್ದೇಶನಾಲಯದ ಅಧಿಕಾರಿಗಳ ಜತೆ ಸುದೀರ್ಘ ಸಮಾಲೋಚನೆ ನಡೆಸಿದ್ದು, ಕಬ್ಬಿಗೆ ಬೆಲೆ ನಿಗದಿಮಾಡಲು ತೀರ್ಮಾನಿಸಲಾಗಿದೆ. ಎಲ್ಲ ವಿಚಾರಗಳನ್ನು ಲೆಕ್ಕ ಹಾಕಿ ದರ ನಿಗದಿ ಮಾಡುವ ಅಧಿಕಾರವನ್ನು ಹುಕ್ಕೇರಿ ಅವರಿಗೆ ವಹಿಸಲಾಗಿದೆ. ಅದರಂತೆ ಸಚಿವ ಹುಕ್ಕೇರಿ ಸಕ್ಕರೆ ನಿರ್ದೇಶನಾಲಯ ಅಧಿಕಾರಿಗಳ ಜತೆ ಸಭೆ ನಡೆಸಿ ಕಬ್ಬಿನ ಬೆಲೆ ನಿಗದಿಪಡಿಸಿ ಬುಧವಾರ ಬೆಳಗ್ಗೆ ಪ್ರಕಟಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.