ಸಿಬಿಐ ಪರ ಬ್ಯಾಟಿಂಗ್
ಪಿಟಿಐ ನವದೆಹಲಿ ನ.8
ಸಿಬಿಐ ಸಾಂವಿಧಾನಿಕ ಸಂಸ್ಥೆಯೇ ಅಲ್ಲ... ಗೌಹಾತಿ ಹೈಕೋರ್ಟ್ನ ಈ ತೀರ್ಪು ಭ್ರಷ್ಟರಿಗೆ ಖುಷಿ ತಂದುಕೊಟ್ಟಿದ್ದರೆ, ಸರ್ಕಾರಕ್ಕೆ ಸಂಕಟ ತಂದೊಡ್ಡಿದೆ. ಹೀಗಾಗಿ ಕೇಂದ್ರ ಸರ್ಕಾರ, ಸಿಬಿಐ ಉಳಿಸುವ ಸಲುವಾಗಿ ಸುಪ್ರೀಂಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದು, ಶನಿವಾರವೇ ಮೇಲ್ಮನವಿ ಸಲ್ಲಿಸಲಿದೆ.
ಹೈಕೋರ್ಟ್ ತೀರ್ಪೇನು?: ಕೇಂದ್ರ ತನಿಖಾ ಸಂಸ್ಥೆ(ಸಿಬಿಐ) ಅನ್ನು 01.04.1963ರ ನಿರ್ಣಯದಂತೆ ರಚಿಸಲಾಗಿದ್ದು, ದೆಹಲಿ ವಿಶೇಷ ಪೊಲೀಸ್ ಸಂಸ್ಥೆ ಕಾಯ್ದೆಯಡಿ ಬರುವುದಿಲ್ಲ. ಹೀಗಾಗಿ ಸಿಬಿಐ ರಚನೆಗಾಗಿ ಅಂಗೀಕರಿಸಿದ್ದ ನಿರ್ಣಯವನ್ನೇ ರದ್ದು ಮಾಡುತ್ತಿದ್ದೇವೆ ಎಂದು ಗೌಹಾತಿ ಹೈಕೋರ್ಟ್ ತೀರ್ಪು ನೀಡಿತ್ತು. ಅಲ್ಲದೆ ಕೇಂದ್ರ ಸಂಪುಟದಲ್ಲಿ ನಿರ್ಣಯವಾಗಿಲ್ಲ ಅಥವಾ ಸುಗ್ರೀವಾಜ್ಞೆ ಹೊರಡಿಸಲಾಗಿಲ್ಲ ಅಥವಾ ರಾಷ್ಟ್ರಪತಿಯವರಿಂದಲೂ ಅನುಮತಿ ಪಡೆಯಲಾಗಿಲ್ಲ ಎಂದಿದೆ. ಸಿಬಿಐ ಕೆಲಸ ಏನಿದ್ದರೂ ತನಿಖೆ ನಡೆಸುವುದಷ್ಟೇ ಎಂದು ಹೇಳಿದೆ.
ಇಂದು ಸುಪ್ರೀಂಗೆ: ಈ ತೀರ್ಪು ನಿರೀಕ್ಷೆ ಮಾಡದೇ ಇದ್ದ ಕೇಂದ್ರ ಸರ್ಕಾರಕ್ಕೆ ಇದು ಬರಸಿಡಿಲಿನಂತೆ ಅಪ್ಪಳಿಸಿದೆ. ಹೀಗಾಗಿ ಶನಿವಾರವೇ ಅದು ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಿದೆ. ಸಿಬಿಐ ಕೂಡ ಈ ಬಗ್ಗೆ ಹೇಳಿಕೆ ನೀಡಿದ್ದು, ತುರ್ತಾಗಿ ಮೇಲ್ಮನವಿ ಸಲ್ಲಿಸಿ, ತೀರ್ಪಿಗೆ ತಡೆಯಾಜ್ಞೆ ತರಬೇಕು ಎಂದಿದೆ. ಏಕೆಂದರೆ ಅದು ಹಲವಾರು ಪ್ರಕರಣಗಳ ವಿಚಾರಣೆ ನಡೆಸುತ್ತಿದೆ.
ಭ್ರಷ್ಟರಿಗೆ ವರ: ಸಿಬಿಐ ಕುರಿತ ಈ ತೀರ್ಪಿನ ಬಗ್ಗೆ ಕೇಂದ್ರ ಸರ್ಕಾರ ಈ ಕೂಡಲೇ ತಡೆಯಾಜ್ಞೆ ತರದಿದ್ದರೆ ಕಾನೂನಿನ ಸಂಘರ್ಷ ತಲೆದೋರುತ್ತದೆ ಎಂದು ಕಾನೂನು ತಜ್ಞರು ಅಭಿಪ್ರಾಯಿಸಿದ್ದಾರೆ. ಎ. ರಾಜಾ ಮತ್ತು ಸಜ್ಜನ್ಕುಮಾರ್ ಅವರ ಹೇಳಿಕೆಯನ್ನು ಗಮನಿಸಿ ಅವರು ಮಾತನಾಡಿದ್ದು, ಸಿಬಿಐ ವಿಚಾರಣೆಗೆ ಒಳಪಟ್ಟಿರುವ ಎಲ್ಲರೂ ಇದೇ ಅಭಿಪ್ರಾಯ ವ್ಯಕ್ತಪಡಿಸಬಹುದಾಗಿದೆ. ಬೇಗನೇ ಇತ್ಯರ್ಥ ಪಡಿಸಿಕೊಳ್ಳಬೇಕು ಎಂದಿದ್ದಾರೆ.
2010ರಲ್ಲೇ ಪ್ರಯತ್ನವಾಗಿತ್ತು!
ಸಿಬಿಐಗೆ ಸಾಂವಿಧಾನಿಕ ಮಾನ್ಯತೆ ನೀಡುವ ಸಂಬಂಧ ಕೇಂದ್ರ ಸಚಿವ ಮನೀಷ್ ತಿವಾರಿ ಅವರು 2010ರಲ್ಲಿ ಸಂಸತ್ನಲ್ಲಿ ಖಾಸಗಿ ಮಸೂದೆ ಮಂಡಿಸಿದ್ದರು. ಸಿಬಿಐ ಕಾನೂನು ಬದ್ಧ ಸಂಸ್ಥೆಯಾಗಿಲ್ಲ. ಹೀಗಾಗಿ ಅದಕ್ಕೆ ಈ ಸ್ಥಾನಮಾನ ನೀಡಬೇಕು ಎಂದು ಅವರು ಈ ಮಸೂದೆಯಲ್ಲಿ ಪ್ರಸ್ತಾಪಿಸಿದ್ದರು. ಆದರೆ ಅದು ಜಾರಿಗೆ ಬರಲಿಲ್ಲ.
ಈ ಕೇಸುಗಳ ಹಣೆಬರಹ ಏನಾಗುತ್ತೆ?
ಕಳೆದ ಮೂರು ವರ್ಷಗಳಲ್ಲಿ 2000 ಪ್ರಕರಣ ದಾಖಲಿಸಿಕೊಂಡಿದ್ದು, ಇನ್ನು 758 ಬಾಕಿ ಉಳಿದಿವೆ.
- 2ಜಿ ಸ್ಪೆಕ್ಟ್ರಂ ಹಗರಣ
- ಕಲ್ಲಿದ್ದಲು ಹಗರಣ
- ಅಕ್ರಮ ಗಣಿಗಾರಿಕೆ
- ಇಶ್ರತ್ ಜಹಾನ್
- ಸೊಹ್ರಾಬುದ್ದೀನ್ ಎನ್ಕೌಂಟರ್
- ಭೋಪಾಲ್ ಗ್ಯಾಸ್ ದುರಂತ
ಸಿಬಿಐ ಅಸಾಂವಿಧಾನಿಕ ಸಂಸ್ಥೆ ಎಂದು ಗೌಹಾತಿ ಹೈಕೋರ್ಟ್ ತೀರ್ಪು ನೀಡಿದೆ. ಹೀಗಾಗಿ ನನ್ನ ವಿರುದ್ಧ ಅದು ವಿಚಾರಣೆ ಮುಂದುವರಿಸುವಂತಿಲ್ಲ. ಇಲ್ಲದಿದ್ದರೆ ಅದು ನ್ಯಾಯಾಂಗ ನಿಂದನೆಯಾಗುತ್ತದೆ.
- ಎ. ರಾಜಾ2ಜಿ ಸ್ಪೆಕ್ಟ್ರಂ ಹಗರಣದ ಆರೋಪಿ
ನನ್ನ ವಿರುದ್ಧ ಸಿಬಿಐ ನಡೆಸುತ್ತಿರುವ ವಿಚಾರಣೆ ಅಕ್ರಮ. ಈ ಕೂಡಲೇ ಅದು ನಿಲ್ಲಿಸಬೇಕು.
- ಸಜ್ಜನ್ ಕುಮಾರ್1984ರ ಸಿಖ್ ಗಲಭೆ ಆರೋಪಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

