ಪ್ರಧಾನ ಸುದ್ದಿ

ಖಾಸಗಿಗೆ ಕತ್ತರಿ

ಖಾಸಗಿಗೆ ಕತ್ತರಿ
Published On :

ಸಚಿವ ದಿನೇಶ್‌ಗುಂಡೂರಾವ್, ಆಯುಕ್ತ ಹರ್ಷಗುಪ್ತ ಮಾಹಿತಿ
ಖಾಸಗಿ ನ್ಯಾಯ ಬೆಲೆ ಅಂಗಡಿಗಳು ಹಂತ ಹಂತವಾಗಿ ರದ್ದು
ಟಿಎಪಿಸಿಎಂಎಸ್, ವಿಎಸ್‌ಎಸ್‌ಎನ್, ಗ್ರಾಪಂಗಳಿಂದ ವಿತರಣೆ
ಛತ್ತೀಸ್‌ಗಡದಲ್ಲಿ ಸರ್ಕಾರದ ಏಜೆನ್ಸಿಗಳಿಂದಲೇ ಅಂಗಡಿ
ಕೆಲ ಅಂಗಡಿಗಳಲ್ಲಿ ಕಡಿಮೆ, ಕೆಲವಲ್ಲಿ ಹೆಚ್ಚು ಪಡಿತರ ಕಾರ್ಡ್
ಮತಗಟ್ಟೆಗಳ ಹೊಂದಾಣಿಕೆಯಿಂದ ಅಂಗಡಿ ವ್ಯಾಪ್ತಿ ನಿರ್ಧಾರ


ಕನ್ನಡಪ್ರಭ ವಾರ್ತೆ ಬೆಂಗಳೂರು  ನ.11
ಇನ್ನು ಮುಂದೆ ಖಾಸಗಿಯವರಿಗೆ ನ್ಯಾಯಬೆಲೆ ಅಂಗಡಿಗಳ ಪರವಾನಗಿ ಇಲ್ಲ. ಈಗಾಗಲೇ ಕೊಟ್ಟಿರುವ ಪರವಾನಗಿಯೂ ಹಂತಹಂತವಾಗಿ ರದ್ದಾಗಲಿದೆ.
ಬದಲಾಗಿ ಆಹಾರ ಇಲಾಖೆ ಅಂಗಡಿಗಳು, ಟಿಎಪಿಸಿಎಂಎಸ್, ವಿಎಸ್‌ಎಸ್‌ಎನ್, ಗ್ರಾಮ ಪಂಚಾಯ್ತಿಗಳ ಮೂಲಕ ಪಡಿತರ ವಿತರಿಸಲು ಸರ್ಕಾರ ತೀರ್ಮಾನಿಸಿದೆ.
ಪಡಿತರ ವ್ಯವಸ್ಥೆಯನ್ನು ಸಮರ್ಪಕವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಈ ರೀತಿಯ ಹಲವು ಕಾರ್ಯಕ್ರಮಗಳನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಮ್ಮಿಕೊಂಡಿದೆ.
ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಮತ್ತು ಆಯುಕ್ತ ಹರ್ಷಗುಪ್ತ ಅವರು ಸೋಮವಾರ ಬೆಂಗಳೂರು ನಗರ ಜಿಲ್ಲೆಯ ಪಡಿತರ ವ್ಯವಸ್ಥೆ ಕುರಿತಂತೆ ಜಿಲ್ಲೆಯ ಸಚಿವರು, ಶಾಸಕರು, ಮೇಯರ್, ಉಪಮೇಯರ್, ಬಿಬಿಎಂಪಿ ಸದಸ್ಯರು ಹಾಗೂ ಇಲಾಖೆ ಅಧಿಕಾರಿಗಳು ನಡೆಸಿದ ಸಮಾಲೋಚನಾ ಸಭೆಯಲ್ಲಿ ಈ ಮಾಹಿತಿ ನೀಡಿದರು.

 ಇದು ಛತ್ತೀಸ್‌ಗಡ ಮಾದರಿ
ಛತ್ತೀಸ್‌ಗಡ ರಾಜ್ಯದಲ್ಲಿ ನ್ಯಾಯಬೆಲೆ ಅಂಗಡಿಗಳನ್ನು ಸರ್ಕಾರದ ಏಜೆನ್ಸಿಗಳೇ ನಡೆಸುತ್ತಿವೆ. ಆ ರಾಜ್ಯದಲ್ಲಿ ಪಡಿತರ ವ್ಯವಸ್ಥೆ ಉತ್ತಮವಾಗಿರಲು ಇದು ಪ್ರಮುಖ ಕಾರಣ. ಈ ಹಿನ್ನೆಲೆಯಲ್ಲಿ ಆ ರಾಜ್ಯದ ಪಡಿತರ ವ್ಯವಸ್ಥೆಯನ್ನು ಪರಾಮರ್ಶಿಸಿದ ಬಳಿಕ ರಾಜ್ಯ ಸರ್ಕಾರ ಈ ತೀರ್ಮಾನಕ್ಕೆ ಬಂದಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಖಾಸಗಿಯವರು ನ್ಯಾಯಬೆಲೆ ಅಂಗಡಿಗಳನ್ನು ನಡೆಸುತ್ತಿದ್ದಾರೆ. ಇದರಿಂದಾಗಿ ಪಡಿತರ ವಿತರಣೆ ವ್ಯವಸ್ಥೆಯಲ್ಲಿ ಸಾಕಷ್ಟು ಲೋಪಗಳು ಕಂಡುಬರುತ್ತಿವೆ. ಇದನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರದ ಅಂಗ ಸಂಸ್ಥೆಗಳು ಮತ್ತು ಸೊಸೈಟಿಗಳ ಮೂಲಕ ಪಡಿತರ ವಿತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು.
ಇದರ ಜತೆಗೆ ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೂ ಪ್ರತಿ ತಿಂಗಳ 1ನೇ ತಾರೀಖಿನೊಳಗೆ ಪಡಿತರ ಆಹಾರಧಾನ್ಯಗಳು ತಲುಪುವ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಇದಕ್ಕಾಗಿ ಇಲಾಖೆಯ ಕೇಂದ್ರ ಕಚೇರಿಯಿಂದಲೇ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಹಂಚಿಕೆ ಮಾಡಲಾಗುತ್ತದೆ. ಜತೆಗೆ ಕನಿಷ್ಠ 10ನೇ ತಾರೀಖಿನವರೆಗೆ ನ್ಯಾಯಬೆಲೆ ಅಂಗಡಿಗಳನ್ನು ತೆರೆದು ಪಡಿತರ ವಿತರಿಸಲು ವ್ಯವಸ್ಥೆ ಮಾಡಲಾಗುವುದು ಎಂದರು.

 ಅಂಗಡಿ ಪುನಾರಚನೆ
ಪ್ರತಿ ನ್ಯಾಯಬೆಲೆ ಅಂಗಡಿಗೆ ಕನಿಷ್ಠ 300 ಪಡಿತರ ಚೀಟಿ ಮತ್ತು ಒಂದು ಸಾವಿರ ಲೀಟರ್ ಸೀಮೆ ಎಣ್ಣೆ ವಿತರಿಸುವ ಅವಕಾಶವಿದ್ದರೆ ಮಾತ್ರ ಅದರ ಮಾಲಿಕರು ಸ್ವಲ್ಪ ಮಟ್ಟಿನ ಲಾಭ ಗಳಿಸಬಹುದು. ಆದರೆ, ರಾಜ್ಯದ ಅನೇಕ ನ್ಯಾಯಬೆಲೆ ಅಂಗಡಿಗಳಿಗೆ ಇಷ್ಟೊಂದು ಪ್ರಮಾಣದ ವ್ಯವಹಾರಕ್ಕೆ ಅವಕಾಶವಿಲ್ಲ. ಇನ್ನು ಕೆಲವು ನ್ಯಾಯಬೆಲೆ ಅಂಗಡಿ ವ್ಯಾಪ್ತಿಗೆ ಸಾವಿರಾರು ಪಡಿತರ ಚೀಟಿಗಳು ಬರುತ್ತವೆ. ಹೀಗಾಗಿ ಕಡಿಮೆ ಕಾರ್ಡ್‌ಗಳಿರುವ ನ್ಯಾಯಬೆಲೆ ಅಂಗಡಿಗಳಲ್ಲಿ ಅವ್ಯವಹಾರ ನಡೆಯುತ್ತವೆ. ಇದನ್ನು ತಪ್ಪಿಸಲು ನ್ಯಾಯಬೆಲೆ ಅಂಗಡಿಗಳ ವ್ಯಾಪ್ತಿ ಪುನಾರಚನೆಗೆ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಸುಮಾರು 20 ಸಾವಿರ ನ್ಯಾಯಬೆಲೆ ಅಂಗಡಿಗಳಿವೆ. ಅದೇ ರೀತಿ ಸುಮಾರು 50 ಸಾವಿರ ಮತಗಟ್ಟೆಗಳಿವೆ. ಹೀಗಾಗಿ ಮತಗಟ್ಟೆಗಳನ್ನು ಹೊಂದಾಣಿಕೆ ಮಾಡಿಕೊಂಡು ನ್ಯಾಯಬೆಲೆ ಅಂಗಡಿಗಳ ವ್ಯಾಪ್ತಿಯನ್ನು ಪುನಾರಚಿಸಲಾಗುವುದು. ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೂ ಸಮಾನಾಂತರವಾಗಿ ಪಡಿತರ ಚೀಟಿಗಳು ಲಭ್ಯವಾಗುವಂತೆ ಮಾಡಲಾಗುವುದು ಎಂದು ಹೇಳಿದರು.

ಸರ್ಕಾರಿ ಅಡುಗೆ ಎಣ್ಣೆ, ಬೇಳೆ
ರಾಜ್ಯದಲ್ಲಿ ಗ್ರಾಹಕರಿಗೆ ಲಭ್ಯವಾಗಲಿವೆ ಸರ್ಕಾರಿ ಬ್ರಾಂಡ್‌ನ ಅಡುಗೆ ಎಣ್ಣೆ, ಬೇಳೆಕಾಳು, ಉಪ್ಪು. ಆದರೆ, ಇವು ನ್ಯಾಯಬೆಲೆ ಅಂಗಡಿಗಳಲ್ಲಿ ಮಾತ್ರ ಲಭ್ಯ. ಗ್ರಾಹಕರಿಗೆ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಈ ಉತ್ಪನ್ನಗಳನ್ನು ಒದಗಿಸಬೇಕು ಎಂಬ ಉದ್ದೇಶದಿಂದ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಅಡುಗೆ ಎಣ್ಣೆ, ಬೇಳೆಕಾಳು, ಉಪ್ಪು ಮುಂತಾದ ಗೃಹೋಪಯೋಗಿ ವಸ್ತುಗಳನ್ನು ಸರ್ಕಾರದಿಂದಲೇ ಪ್ಯಾಕಿಂಗ್ ಮಾಡಿ ನ್ಯಾಯಬೆಲೆ ಅಂಗಡಿಗಳ ಮೂಲಕ ಮಾರಾಟ ಮಾಡಲಾಗುವುದು. ಸರ್ಕಾರವೇ ಇವುಗಳನ್ನು ಒದಗಿಸುವುದರಿಂದ ಲಾಭಾಂಶ ಕಡಿಮೆ ಇರುತ್ತದೆ. ಇದರಿಂದ ಗ್ರಾಹಕರಿಗೆ ಕಡಿಮೆ ಬೆಲೆಗೆ ಈ ವಸ್ತುಗಳು ದೊರೆಯುತ್ತವೆ. ಯಾರು ಬೇಕಾದರೂ ಇದನ್ನು ಖರೀದಿಸಬಹುದು ಎಂದು ಹೇಳಿದರು.

ಸೂಚಕರು ಕಡ್ಡಾಯ ಎಂಬ ನಿಯಮ ವಾಪಸ್ ಪಡೆಯಲಾಗಿದೆ. ಇದರ ಬದಲಾಗಿ ಕುಟುಂಬದ ಮತದಾರರ ಚೀಟಿ ಹಾಜರುಪಡಿಸಬೇಕಾಗುತ್ತದೆ. ಇದಕ್ಕಾಗಿ ಸಾಫ್ಟ್‌ವೇರ್‌ನಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಾಗುತ್ತಿದೆ.
-ಹರ್ಷ ಗುಪ್ತ, ಆಹಾರ, ನಾಗರಿಕ ಸರಬರಾಜು ಇಲಾಖೆ ಆಯುಕ್ತ

ಖಾಸಗಿ ನ್ಯಾಯಬೆಲೆ ಅಂಗಡಿಗಳ
ಪರವಾನಗಿ ರದ್ದುಗೊಳಿಸುವ
ವಿಚಾರ ಇನ್ನೂ ಚಿಂತನೆ ಹಂತದಲ್ಲಿದೆ.
ಪರವಾನಗಿ ರದ್ದಾದ ಬಳಿಕ
ಅಂಗಡಿಗಳನ್ನು ನಡೆಸುತ್ತಿದ್ದವರಿಗೆ ತೊಂದರೆ ಆಗದಂತೆ ಯಾವ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಮುಂದೆ ಚರ್ಚಿಸಲಾಗುವುದು.
-ದಿನೇಶ್ ಗುಂಡೂರಾವ್, ಸಚಿವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.