ಎಲ್ಲರಿಗೂ 'ದರ್ಶನ'
ಕನ್ನಡಪ್ರಭ ವಾರ್ತೆ ರಾಮನಗರ ನ.16
ಸರ್ಕಾರಿ ಪ್ರೌಢಶಾಲೆಯ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗದ ಮಕ್ಕಳಿಗಾಗಿ ಜಾರಿಗೊಳಿಸಿರುವ ಶೈಕ್ಷಣಿಕ ಪ್ರವಾಸ ಕಾರ್ಯಕ್ರಮವನ್ನು ಎಲ್ಲ ವರ್ಗದವರಿಗೂ ವಿಸ್ತರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಈ ನಡುವೆ ಶಿಕ್ಷಣ ಇಲಾಖೆ ಕೂಡ ಸದ್ಯಕ್ಕೆ ಅಹಿಂದ ಪ್ರವಾಸ ನಡೆಸದಂತೆ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಸೂಚನೆ ಕಳುಹಿಸಿದೆ. ಈ ಪ್ರವಾಸಕ್ಕೆ ಆದೇಶ ಹೊರಡಿಸಿದ್ದ ಪ್ರವಾಸೋದ್ಯಮ ಇಲಾಖೆ ಸಚಿವ ಆರ್.ವಿ. ದೇಶಪಾಂಡೆ ಅವರು ಕೂಡ ಯೋಜನೆಯನ್ನು ಎಲ್ಲ ಮಕ್ಕಳಿಗೂ ವಿಸ್ತರಿಸಿ ಹೊಸ ಆದೇಶ ಹೊರಡಿಸಲಾಗಿದೆ ಎಂದು ಹೇಳುವುದರೊಂದಿಗೆ ಅಹಿಂದ ಪ್ರವಾಸ ಯೋಜನೆಯನ್ನು ಸರ್ಕಾರ ಕೈಬಿಟ್ಟಿರುವುದು ಖಚಿತವಾಗಿದೆ.
ಇದರೊಂದಿಗೆ ಜಾತಿ ಆಧರಿಸಿ ಜಾರಿಗೆ ತರಲಾದ ಎರಡನೇ ಕಾರ್ಯಕ್ರಮ ಎಲ್ಲ ವರ್ಗದವರಿಗೂ ವಿಸ್ತರಣೆಯಾದಂತಾಗಿದೆ. ಕೆಲವು ದಿನಗಳ ಹಿಂದಷ್ಟೇ ಅಲ್ಪಸಂಖ್ಯಾತರಿಗೆ ಮೀಸಲಾದ ಶಾದಿ ಭಾಗ್ಯ ಯೋಜನೆಯನ್ನು ಎಲ್ಲ ಬಿಪಿಎಲ್ ಕುಟುಂಬಕ್ಕೂ ವಿಸ್ತರಿಸಲಾಗಿತ್ತು. ಈ ಎರಡೂ ಕಾರ್ಯಕ್ರಮಗಳು ಸಮಾಜದ ಸ್ವಾಸ್ಥ್ಯಕ್ಕೆ ಹಾನಿಕಾರಕ ಎಂದು 'ಕನ್ನಡಪ್ರಭ' ಮುಖಪುಟದಲ್ಲಿ ವರದಿ ಮಾಡಿತ್ತು. ಅದರ ನಂತರ ರಾಜ್ಯಾದ್ಯಂತ ಈ ಎರಡೂ ಯೋಜನೆಗಳ ಬಗ್ಗೆ ಭಾರೀ ವಿರೋಧ ವ್ಯಕ್ತವಾಗಿತ್ತು.
ಕನಕಪುರದಲ್ಲಿ ಶನಿವಾರ ಕೃಷಿಮೇಳ ಮತ್ತು ಕನಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಇದ್ದ ಶೈಕ್ಷಣಿಕ ಪ್ರವಾಸವನ್ನು ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರಿಗೂ ವಿಸ್ತರಿಸಿ ಆಯವ್ಯಯದಲ್ಲೇ ಘೋಷಿಸಲಾಗಿತ್ತು. ಇದು ಪ್ರವಾಸೋದ್ಯಮ ಇಲಾಖೆಯ ಕಾರ್ಯಕ್ರಮ ಎಂದು ಅವರು ಹೇಳಿದರು.
ರಾಜಕೀಯ ಬಣ್ಣ ಬೇಡ: ಸಾಮಾಜಿಕ ನ್ಯಾಯದಿಂದ ವಂಚಿತವಾದ ಸಮುದಾಯದವರನ್ನು ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಜಾರಿಗೊಳಿಸಲಾದ ಇಂಥ ಕಾರ್ಯಕ್ರಮಕ್ಕೆ ರಾಜಕೀಯ ಬಣ್ಣ ಕಟ್ಟಲಾಗಿದೆಯಷ್ಟೇ ಎಂದು ಆರೋಪಿಸಿದರು.
ಹೊರಬಿದ್ದಿದೆ ಹೊಸ ಆದೇಶ
ಪ್ರೌಢಶಾಲೆಯ ಅಹಿಂದ ಮಕ್ಕಳ ಪ್ರವಾಸ ಕುರಿತು ಪ್ರವಾಸೋದ್ಯಮ ಇಲಾಖೆ ಶನಿವಾರ ಹೊಸ ಆದೇಶವೊಂದನ್ನು ಹೊರಡಿಸಿದ್ದು, ಎಲ್ಲ ಮಕ್ಕಳನ್ನೂ ಪ್ರವಾಸದ ವ್ಯಾಪ್ತಿಗೆ ತರಬೇಕೆಂದು ಹೇಳಿದೆ. ಪ್ರತಿ ಜಿಲ್ಲೆಯಿಂದ 450 ಮಕ್ಕಳನ್ನು ಅಂದರೆ ರಾಜ್ಯಾದ್ಯಂತ 13,500 ಮಕ್ಕಳನ್ನುಪ್ರತಿ ವರ್ಷ ಪ್ರವಾಸಕ್ಕೆ ಕಳುಹಿಸಲು ಹೊಸ ಆದೇಶದಲ್ಲಿ ಪ್ರಸ್ತಾಪಿಸಲಾಗಿದೆ. ಪ್ರತಿ ಮಕ್ಕಳಿಗೆ 3,500ರಂತೆ ಇದಕ್ಕಾಗಿ ಪ್ರವಾಸೋದ್ಯಮ ಇಲಾಖೆಯಿಂದ 4.72 ಕೋಟಿ ಮಂಜೂರು ಮಾಡಿರುವುದಾಗಿ ಹೇಳಿದ್ದಾರೆ.
ವಿದ್ಯಾರ್ಥಿಗಳ ನಡುವೆ ತಾರತಮ್ಯ ಮಾಡುವ ಅಥವಾ ಅವರ ಮುಗ್ಧ ಮನಸ್ಸಿನಲ್ಲಿ ವಿಷಬೀಜ ಬಿತ್ತುವ ಯಾವುದೇ ದುರುದ್ದೇಶ ಸರ್ಕಾರಕ್ಕೆ ಇರಲಿಲ್ಲ. ಜನರ ಅಭಿಪ್ರಾಯದಂತೆ ಈಗ ಯೋಜನೆಯನ್ನು ಎಲ್ಲ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗಿದೆ. ಅದಕ್ಕೆ ಸಂಬಂಧಿಸಿದ ಪರಿಷ್ಕೃತ ಆದೇಶವನ್ನೂ ಶನಿವಾರವೇ ಹೊರಡಿಸಲಾಗಿದೆ.
-ಆರ್.ವಿ. ದೇಶಪಾಂಡೆ ಪ್ರವಾಸೋದ್ಯಮ ಮತ್ತು ಉನ್ನತ ಶಿಕ್ಷಣ ಸಚಿವ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

