ಕೌನ್ಸಿಲರ್ಗಳ ಕೊರತೆ
ವಿಶೇಷ ವರದಿ
ಕ.ಪ್ರ.ವಾರ್ತೆ ಬೆಂಗಳೂರು ನ.27
ಮಹಿಳಾ ಸಮಾಲೋಚನಾ ಅಧಿಕಾರಿಗಳ ಕೊರತೆಯಿಂದ ನೊಂದ ಮಹಿಳೆಯರು ತೊಂದರೆ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ದೌರ್ಜನ್ಯಕ್ಕೊಳಗಾದ ಮಹಿಳೆಯರ ಸಂರಕ್ಷಣೆಗೆ, ಸಮಸ್ಯೆ ಆಲಿಸಲೆಂದು ನೇಮಿಸಿದ್ದ ಮಹಿಳಾ ಸಂರಕ್ಷಣಾಧಿಕಾರಿಗಳ ಅರ್ಥಾತ್ ಕೌನ್ಸಿಲರ್ಗಳ ಕೊರತೆ ಎದುರಾಗಿದೆ. ಈ ಸಮಸ್ಯೆ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಹೆಚ್ಚಾಗಿದ್ದು, ಹಲವು ಬಾರಿ ಬೇಡಿಕೆ ಇಟ್ಟಿದ್ದರೂ ಪ್ರಯೋಜನವಾಗಿಲ್ಲ. ಇದರಿಂದ ಅನಿವಾರ್ಯವಾಗಿ ಸಾಕಷ್ಟು ಬಾರಿ ಸಂಘಸಂಸ್ಥೆಗಳ ಕೌನ್ಸಿಲರ್ಗಳ ಮೊರೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಇಲಾಖೆ ಹಿರಿಯ ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಮಹಿಳೆಯರ ಸಮಸ್ಯೆ ಆಲಿಸಿ ಪರಿಹಾರ ಸೂಚಿಸುವ ಉದ್ದೇಶದಿಂದ ಒಂದೂವರೆ ವರ್ಷದ ಹಿಂದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಈ 'ಮಹಿಳಾ ಸಂರಕ್ಷಣಾಧಿಕಾರಿ'ಗಳನ್ನು ನೇಮಿಸಲಾಗಿತ್ತು.
ಆದರೆ, ದೂರುಗಳು ಹೆಚ್ಚುತ್ತಿರುವುದರಿಂದ ಸಂರಕ್ಷಣಾಧಿಕಾರಿಗಳ ಕೊರತೆ ಹೆಚ್ಚಿದೆ. ಮಹಿಳೆಯರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಉದ್ದೇಶ: ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಸಮರ್ಪಕ ಜಾರಿ ಉದ್ದೇಶದಿಂದ ಈ ಅಧಿಕಾರಿಗಳನ್ನು ನೇಮಿಸಲಾಗಿದೆ. ಇವರು ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಾರೆ. ಜನರು ಪೊಲೀಸ್ ಠಾಣೆಗೆ ಹೋಗದೆ ಸಂರಕ್ಷಣಾಧಿಕಾರಿಗಳ (ಸಿಡಿಪಿಒ- ಚೈಲ್ಡ್ ಡೆವಲಪ್ಮೆಂಟ್ ಪ್ರಾಜೆಕ್ಟ್ ಆಫೀಸರ್) ಬಳಿ
ತರುವ ದೂರುಗಳನ್ನು ಸಮಾಲೋಚನೆ ಮೂಲಕ ಬಗೆಹರಿಸುತ್ತಾರೆ.
ಸಮಸ್ಯೆ ಕೇಳುವ ಅಧಿಕಾರಿಗಳು ಪತ್ನಿ, ಪತಿ, ಕುಟುಂಬ ಸದಸ್ಯರು. ಹೀಗೆ ವಿವಿಧ ಹಂತಗಳಲ್ಲಿ ಸಮಾಲೋಚನೆ ನಡೆಸಿ ಸಮಸ್ಯೆ ನಿವಾರಿಸುತ್ತಾರೆ.
ಒಂದು ವೇಳೆ ಸಮಾಲೋಚನೆಗೆ ಸಮಸ್ಯೆ ಬಗೆಹರಿಯದಿದ್ದಲ್ಲಿ ಸರ್ಕಾರದ ಸಾಂತ್ವನ ಕೇಂದ್ರ ಅಥವಾ ನ್ಯಾಯಾಲಯ ಮೊರೆ ಹೋಗಲು ಸೂಚಿಸುತ್ತಾರೆ.
ಈ ನಡುವೆ ಪ್ರತಿನಿತ್ಯ ಇಂತಹ ಪ್ರಕರಣಗಳು ಬರುವುದರಿಂದ ಸಮಾಲೋಚನೆ ಮುಗಿಯುವವರೆಗೂ ದೂರುದಾರರು ಕಾಯಬೇಕು. ಅಧಿಕಾರಿಗಳೇ ನ್ಯಾಯಾಲಯಕ್ಕೂ ಹಾಗೂ ವಿವಿಧ ಕೆಲಸಗಳಲ್ಲಿ ತೊಡಗುವುದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಿದೆ ಎನ್ನುತ್ತಾರೆ ಅಧಿಕಾರಿಗಳು.
ಠಾಣೆಗೆ ಹೋಗುವುದಿಲ್ಲ: ಪೊಲೀಸ್ ಠಾಣೆಗೆ ಹೋದರೆ ನ್ಯಾಯಾಲಯದ ಮೆಟ್ಟಿಲೇರಬೇಕು. ಪ್ರಕರಣ ಇತ್ಯರ್ಥವಾಗುವವರೆಗೂ ನ್ಯಾಯಾಲಯ ಹಾಗೂ ಪೊಲೀಸ್ ಠಾಣೆಗೆ ಅಲೆಯಬೇಕು ಎಂಬ ಉದ್ದೇಶದಿಂದ ಹೆಚ್ಚಿನ ಮಂದಿ ಮಹಿಳಾ ಸಂರಕ್ಷಣಾಧಿಕಾರಿಗಳ ಬಳಿ ಸಮಸ್ಯೆ ಬಗೆಹರಿಸಿಕೊಳ್ಳಲು ಮುಂದಾಗುತ್ತಾರೆ.
ದಿನದಿಂದ ದಿನಕ್ಕೆ ದೂರುಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ವಾರಕ್ಕೊಮ್ಮೆ ವಕೀಲರನ್ನು ಕರೆಸಿ ಅಲ್ಲಿಯೇ ಸಮಾಲೋಚನೆ ನೀಡಲಾಗುತ್ತದೆ. ಹಾಗಾಗಿ ಒಂದು ಕೇಂದ್ರಕ್ಕೆ ಕನಿಷ್ಠ ಇಬ್ಬರನ್ನು ನೇಮಿಸಿದರೆ ಒಳಿತು ಎನ್ನುತ್ತಾರೆ ಹಿರಿಯ ಅಧಿಕಾರಿಗಳು.
ರಾಜ್ಯದಲ್ಲಿ 47 ಕಡೆ ಸಂರಕ್ಷಣಾಧಿಕಾರಿಗಳನ್ನು ನೇಮಿಸುವ ಬಗ್ಗೆ ಪ್ರಸ್ತಾಪವಾಗಿತ್ತು. ಆದರೆ, ಎಲ್ಲಾ ಕಡೆ ನೇಮಕವಾಗಿಲ್ಲ. ಬೆಂಗಳೂರು ನಗರ, ಗ್ರಾಮಾಂತರದಲ್ಲಿ ಒಟ್ಟು 9 ಮಂದಿ ಇದ್ದಾರೆ. ಇನ್ನೂ 3 ಹುದ್ದೆ ಖಾಲಿ ಇವೆ. ಕೆಪಿಎಸ್ಸಿ ಮುಖಾಂತರವೇ ನೇಮಕವಾಗಬೇಕು ಎಂದು ಮೂಲಗಳು ತಿಳಿಸಿವೆ.
ಯಾವ ರೀತಿಯ ದೂರು ಬರುತ್ತವೆ: ವರದಕ್ಷಿಣೆ ಕಿರುಕುಳ, ಪತಿ ಹಾಗೂ ಕುಟುಂಬ ಸದಸ್ಯರ ಕಿರುಕುಳ, ಬೇರೆಯಾದ ನಂತರ ಮಕ್ಕಳನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳುವುದು, ಪತಿಯಿಂದ ಸಿಗಬೇಕಾದ ಜೀವನಾಂಶದಿಂದ ವಂಚಿತರಾದವರು, ಮಕ್ಕಳಿಂದ ನೊಂದವರು ಸೇರಿ ವಿವಿಧ ರೀತಿ ಕೌಟುಂಬಿಕ ಸಮಸ್ಯೆಗಳನ್ನು ಹೊತ್ತು ಸಾರ್ವಜನಿಕರು ಇಲ್ಲಿಗೆ ಬರುತ್ತಾರೆ.
ನಗರದಲ್ಲಿ 3 ಹುದ್ದೆ ಖಾಲಿ ಇದ್ದು, ಉಳಿದ ಹುದ್ದೆ ಭರ್ತಿ ಮಾಡಲಾಗಿದೆ. ಆದರೆ, ದೂರುಗಳು ಹೆಚ್ಚುತ್ತಿರುವುದರಿಂದ ಸಮಸ್ಯೆ ಸಹಜವಾಗಿದೆ. ಆದರೆ, ಸಂಘಸಂಸ್ಥೆಯವರ ಸಹಾಯದಿಂದ ಸಮಸ್ಯೆ ನಿವಾರಿಸಲು ಯತ್ನಿಸಲಾಗುತ್ತಿದೆ.
- ರಮೇಶ್ ಹಾಲಬಾವಿ, ಸಹಾಯಕ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (ಬೆಂಗಳೂರು ನಗರ)
ಬೆಂಗಳೂರು ಗ್ರಾಮಾಂತರದಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಅದೇ ರೀತಿ ಬೆಂಗಳೂರು ನಗರದಲ್ಲೂ ಇರುವ ಬಗ್ಗೆ ಕೇಳಿದ್ದೇವೆ. ಇಲಾಖೆಯ ಕಾರ್ಯಕ್ರಮಗಳಲ್ಲಿ ಕೌನ್ಸಿಲರ್ಗಳ ಕೊರತೆ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ.
- ಅಸ್ಲಂ ಅಹಮದ್, ಸಹಾಯಕ ನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (ಬೆಂಗಳೂರು ಗ್ರಾಮಾಂತರ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

