ಸದ್ದು, ಸಂಧಾನ, ಸಮಾಧಾನ

- ಸರ್ಕಾರದ ಮೇಲೆ ಮುಗಿಬಿದ್ದ ಬಿಜೆಪಿ, ಧರಣಿಯಿಂದ ಅಂತರ ಕಾಯ್ದ ಜೆಡಿಎಸ್
ಸುವರ್ಣ ವಿಧಾನಸೌಧ: ಕಬ್ಬು ಬೆಳೆಗಾರನ ಆತ್ಮಹತ್ಯೆ ಪ್ರಕರಣ ವಿಧಾನ ಮಂಡಲದ ಉಭಯ ಸದನದಲ್ಲಿ ಪ್ರತಿಧ್ವನಿಸಿದ್ದರಿಂದ ಅರಂಭದಲ್ಲಿ ಸರ್ಕಾರಕ್ಕೆ ಬಿಕ್ಕಟ್ಟು ಎದುರಾಗಿತ್ತಾದರೂ ಸಂಜೆ ವೇಳೆಗೆ ಸಂಕಷ್ಟ ನಿವಾರಣೆಯಾಗಿ ಕಲಾಪದ ಹಾದಿ ಸುಗಮವಾಯಿತು.
ಕಂಕಣವಾಡಿಯ ರೈತ ವಿಠಲ್ ಅರಭಾವಿ ಆತ್ಮಹತ್ಯೆ ಪ್ರಕರಣ ಕುರಿತು ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸುವುದಾಗಿ ಸರ್ಕಾರ ಘೋಷಿಸಿದ್ದು, ಕಬ್ಬು ಬೆಳೆಗಾರರ ಹಿತ ಕಾಯುವ ವಿಚಾರದಲ್ಲಿ ಕೇಂದ್ರ ಸರ್ಕಾರದ ಬಳಿಗೆ ಸರ್ವಪಕ್ಷ ಮುಖಂಡರ ನಿಯೋಗ ಕೊಂಡೊಯ್ಯುವುದಾಗಿಯೂ ಪ್ರಕಟಿಸಿದೆ. ಈ ಮಧ್ಯೆ, ಬುಧವಾರ ಆತ್ಮಹತ್ಯೆ ಮಾಡಿಕೊಂಡ ರೈತ ವಿಠಲ್ ಭೀಮಪ್ಪ ಅರಭಾವಿಯ ಪಾರ್ಥಿವ ಶರೀರದ ಅಂತ್ಯಕ್ರಿಯೆ ನೆರೆದಿದ್ದ ಸಾವಿರಾರು ರೈತರ ಸಮ್ಮುಖದಲ್ಲಿ ಸ್ವಗ್ರಾಮವಾದ ಕಂಕಣವಾಡಿಯಲ್ಲಿ ಗುರುವಾರ ಮಧ್ಯಾಹ್ನ ನೆರವೇರಿತು.
ಪ್ರತಿಪಕ್ಷಗಳ ಆರ್ಭಟ; ಸಂಜೆಗೆ ಸಮಾಧಾನ: ಗುರುವಾರ ಬೆಳಗ್ಗೆ ವಿಧಾನ ಮಂಡಲದ ಉಭಯ ಸದನದಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ನಿರೀಕ್ಷಿಸಿದ್ದಂತೆ ಪ್ರತಿಪಕ್ಷಗಳು ಕಬ್ಬು ಬೆಳೆಗಾರ ವಿಠಲ್ ಅರಬಾವಿಯ ಆತ್ಮಹತ್ಯೆ ವಿಚಾರ ಪ್ರಸ್ತಾಪಿಸಿ, ಸರ್ಕಾರದ ಮೇಲೆ ಮುಗಿಬಿದ್ದವು. ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಆರೋಪ, ಪ್ರತ್ಯಾರೋಪ, ಟೀಕಾಸ್ತ್ರಗಳ ವಿನಿಮಯ ಮತ್ತು ವಾಗ್ಯುದ್ಧದ ಪರಿಣಾಮ ಗದ್ದಲ, ಕೋಲಾಹಲದ ವಾತಾವರಣ ಉಂಟಾಗಿ ಕಲಾಪ ನಡೆಯದಂತೆ ಆಯಿತು. ಇದರಿಂದಾಗಿ ವಿಧಾನ ಪರಿಷತ್ತಿನಲ್ಲಿ ಯಾವುದೇ ನಡವಳಿಕೆ ಇಲ್ಲದೆ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಿದರೆ, ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಸತತವಾಗಿ ನಡೆಸಿದ ಸಂಧಾನ ಪ್ರಕ್ರಿಯೆಯಿಂದಾಗಿ ಬಿಜೆಪಿ ಮತ್ತು ಕೆಜೆಪಿ ಸದಸ್ಯರು ತಾವು ನಡೆಸುತ್ತಿದ್ದ ಧರಣಿ ವಾಪಸ್ ಪಡೆದಿದ್ದರಿಂದ ವಿಧಾನಸಭೆ ಕಲಾಪದ ಹಾದಿ ಸಂಜೆ ವೇಳೆಗೆ ಸುಗಮವಾಯಿತು.
ಬಿಜೆಪಿ ಮತ್ತು ಕೆಜೆಪಿಯವರ ಹೋರಾಟದಲ್ಲಿ ಪ್ರಮುಖ ಪ್ರತಿಪಕ್ಷವಾದ ಜೆಡಿಎಸ್ ಕೈಜೊಡಿಸದೆ ಸರ್ಕಾರದ ಬಗ್ಗೆ ಕೊಂಚ ಮೃದು ಧೋರಣೆ ಅನುಸರಿಸಿದ್ದು, ಇದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಪಕ್ಷ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದು ಕಾರಣವಾಗಿತ್ತು.
ವಿಧಾನಸಭೆಯಲ್ಲಿ ಏನಾಯ್ತು?
ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಸರ್ಕಾರ ಮತ್ತು ಮುಖ್ಯಮಂತ್ರಿ ಮತ್ತು ಸರ್ಕಾರದ ವಿರುದ್ಧ ಧರಣಿ ಮುಂದುವರಿಸಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಕೆಜೆಪಿ ಸದಸ್ಯರೂ ಕೈಜೋಡಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕಾಂಗ್ರೆಸ್ ಸದಸ್ಯರ ಜತೆಗೆ ಪ್ರತಿಪಕ್ಷ ಜೆಡಿಎಸ್ ಸದಸ್ಯರು ಕೂಡ ಧರಣಿಗೆ ವಿರೋಧ ವ್ಯಕ್ತಪಡಿಸಿದರು. ಧರಣಿ ವಾಪಸ್ ಪಡೆಯುವಂತೆ ಸ್ಪೀಕರ್ ನಡೆಸಿದ ಯತ್ನ ವಿಫಲವಾದ ಬಳಿಕ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಕಲಾಪವನ್ನು ಮುಂದೂಡಿದರು. ಸದನ ಮತ್ತೆ ಸಮಾವೇಶಗೊಂಡಾಗಲೂ ಪರಿಸ್ಥಿತಿ ತಿಳಿಯಾಗದೆ ಕೋಲಾಹಲದ ವಾತಾವರಣ ಉಂಟಾಯಿತು. ಈ ಗದ್ದಲದ ನಡುವೆಯೂ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಕಲಾಪ ಮುಂದುವರಿಸಿ ಪ್ರಶ್ನೋತ್ತರ ಕೈಗೆತ್ತಿಕೊಂಡರು. ಲಿಖಿತ ಮೂಲಕ ಉತ್ತರಿಸುವ ಪ್ರಶ್ನೆಗಳು, ಕಾಗದಪತ್ರಗಳು, ವರದಿಗಳನ್ನು ಮಂಡಿಸಲಾಯಿತು. ಜತೆಗೆ ಎಂಟು ವಿಧೇಯಕಗಳನ್ನು ಕೂಡ ಮಂಡಿಸಲಾಯಿತು. ಇಷ್ಟೆಲ್ಲಾ ನಡೆಯುವಾಗಲೂ ಬಿಜೆಪಿ ಮತ್ತು ಕೆಜೆಪಿ ಸದಸ್ಯರು ಧರಣಿ ಮುಂದುವರಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಲೇ ಇದ್ದರು. ಬಳಿಕ ಕಲಾಪ ಮುಂದಕ್ಕೆ ಹೋಯಿತು. ಬಳಿಕ ನಡೆದ ಸಂಧಾನ ಸಭೆ ಯಶಸ್ವಿಯಾಗಿ ಕಲಾಪ ಶುರುವಾಯಿತು.
ವಿಧಾನ ಪರಿಷತ್ತಿನಲ್ಲಿ ಏನಾಯ್ತು?
ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ಮುಂದುವರಿಸಿದರು. ಈ ಮಧ್ಯೆ, ಆಡಳಿತ ಮತ್ತು ಪ್ರತಿಪಕ್ಷಗಳ ಮಧ್ಯೆ ಭಾರಿ ವಾಗ್ಯುದ್ಧವೇ ನಡೆಯಿತು. ಇದರಿಂದ ಗದ್ದಲ ಮತ್ತು ಕೋಲಾಹಲದ ವಾತಾವರಣ ಉಂಟಾಗಿ ಕಲಾಪ ನಡೆಸಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಯಿತು. ಕಪ್ಪು ಪಟ್ಟಿ ಧರಿಸಿ ಬಂದಿದ್ದ ಬಿಜೆಪಿ ಸದಸ್ಯರು ಧರಣಿ ಆರಂಭಿಸಿದರೆ, ಪ್ರತಿಪಕ್ಷ ನಾಯಕ ಡಿ.ವಿ. ಸದಾನಂದಗೌಡ ಸರ್ಕಾರದ ಕ್ರಮ, ನಿಧಾನಗತಿಯ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿದರು. ಮುಖ್ಯಮಂತ್ರಿಗಳು ರಾಜಿನಾಮೆ ನೀಡಬೇಕು. ಟನ್ ಕಬ್ಬಿಗೆ ಸರ್ಕಾರವೇ ರು. 1 ಸಾವಿರ ಬೆಂಬಲ ಬೆಲೆ ನೀಡಬೇಕೆಂದು ಆಗ್ರಹಿಸಿದರು. ಇದಕ್ಕೆಲ್ಲ ಮುಖ್ಯಮಂತ್ರಿಗಳು ಉತ್ತರ ನೀಡಿದರು. ಈ ಸಂದರ್ಭದಲ್ಲಿ ಆಡಳಿತ ಪ್ರತಿಪಕ್ಷದ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಆಗ ಸಭಾಪತಿ ಡಿ.ಎಚ್. ಶಂಕರಮೂರ್ತಿ ಸದನವನ್ನು 15 ನಿಮಿಷ ಕಾಲ ಮುಂದೂಡಿದರು. ಈ ಮಧ್ಯೆ ಎರಡು ಬಾರಿ ಸಂಧಾನ ಸಭೆ ನಡೆದರೂ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಲೇ ಇಲ್ಲ. ಬಿಜೆಪಿ ನಾಯಕರು ತಮ್ಮ ಬೇಡಿಕೆಗೆ ಅಂಟಿಕೊಂಡಿದ್ದರೆ, ಸರ್ಕಾರ ತನ್ನ ಪಟ್ಟನ್ನು ಸಡಿಲಿಸಲಿಲ್ಲ.ಹೀಗಾಗಿ ಸಭಾಪತಿಯವರು ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಿದರು.
ನ್ಯಾಯಾಂಗ ತನಿಖೆ
ವಿಠಲ್ ಅರಬಾವಿ ಆತ್ಮಹತ್ಯೆ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ನೀಡಿದ್ದಾರೆ. ಈ ಸಾವಿನ ಬಗ್ಗೆ ಪ್ರತಿಪಕ್ಷಗಳು ಸಾಕಷ್ಟು ಆರೋಪ ಮಾಡಿವೆ. ಹಿರಿಯ ಸದಸ್ಯ ರಮೇಶ್ಕುಮಾರ್ ತನಿಖೆ ಅಗತ್ಯದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಹೀಗಾಗಿ ಈ ಬಗ್ಗೆ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸುತ್ತೇವೆ ಎಂದು ಸಿಎಂ ಹೇಳಿದ್ದಾರೆ.
ಸಿಎಂ ಸಿಡಿಮಿಡಿ
ಕಬ್ಬು ಬೆಳೆಗಾರನ ಆತ್ಮಹತ್ಯೆ ಹಿನ್ನೆಲೆಯಲ್ಲಿ ಸಕ್ಕರೆ ಸಚಿವ ಪ್ರಕಾಶ್ ಹುಕ್ಕೇರಿ ಅವರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಸಿಡಿಮಿಡಿ ವ್ಯಕ್ತಪಡಿಸಿದ್ದಾರೆ. ರೈತ ಆತ್ಮಹತ್ಯೆ ಹಿನ್ನೆಲೆಯಲ್ಲಿ ಬಿಜೆಪಿ, ಕೆಜೆಪಿ ಸದಸ್ಯರು ಸದನ ಕಲಾಪಕ್ಕೆ ಅಡ್ಡಿ ಪಡಿಸಿದ್ದರಿಂದ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚಿಸಲು ಕರೆದ ಮಂತ್ರಿ ಪರಿಷತ್ ಸಭೆಯಲ್ಲಿ ಈ ಘಟನೆ ನಡೆದಿದೆ.
ಹೋರಾಟ ತೀವ್ರ
ರೈತರ ಚಳವಳಿಯನ್ನು ಗಂಭೀರವಾಗಿ ಪರಿಗಣಿಸದ, ಸ್ಪಂದಿಸದ, ನಿರ್ಲಕ್ಷಿಸಿದ ಸರ್ಕಾರದ ಕ್ರಮ ವಿರೋಧಿಸಿ ಸುವರ್ಣ ವಿಧಾನಸೌಧದ ಎದುರು ಅನ್ನದಾತರ ಹೋರಾಟ ಮುಂದುವರೆದಿದ್ದು, ಶುಕ್ರವಾರ, ಶನಿವಾರದಿಂದ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ನಿರ್ಧರಿಸಲಾಗಿದೆ.
ವಿಠಲ್ ಅಂತ್ಯಕ್ರಿಯೆ: ಕಣ್ಣೀರಿನಲ್ಲಿ ಮುಳುಗಿದ ಕಂಕಣವಾಡಿ
ಬುಧವಾರ ಆತ್ಮಹತ್ಯೆ ಮಾಡಿಕೊಂಡ ರೈತ ವಿಠಲ್ ಅರಬಾವಿ ಪಾರ್ಥಿವ ಶರೀರದ ಅಂತ್ಯಕ್ರಿಯೆ ನೆರೆದಿದ್ದ ಸಾವಿರಾರು ರೈತರ ಸಮ್ಮುಖದಲ್ಲಿ ಸ್ವಗ್ರಾಮವಾದ ಕಂಕಣವಾಡಿಯಲ್ಲಿ ಗುರುವಾರ ಮಧ್ಯಾಹ್ನ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ನೆರವೇರಿತು. ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ರೈತ ಸಾಗರವೇ ಗ್ರಾಮಕ್ಕೆ ಹರಿದು ಬಂದಿತ್ತು. ಈ ಸಂದರ್ಭದಲ್ಲಿ ವಿಠಲ್ ಅರಬಾವಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಇಡೀ ಗ್ರಾಮ ಶೋಕ ಸಾಗರದಲ್ಲಿ ಮುಳುಗಿ ಹೋಗಿತ್ತು. ಕೆಜೆಪಿ ನಾಯಕ ಯಡಿಯೂರಪ್ಪ, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮತ್ತಿತರರು ಕುಟುಂಬದವರಿಗೆ ಸಾಂತ್ವನ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


