ಪ್ರಧಾನ ಸುದ್ದಿ

ಗಟ್ಟಿ ಮನಸ್ಸಿಂದ ಜಯ

Published On :

ಮಡಿಕೇರಿ: ನಾನು ಕೊಡಗಿನ ಪೂವಮ್ಮ (ಹೆಸರು ಬದಲಿಸಲಾಗಿದೆ). ಎಚ್ಐವಿಯಂಥ ಮಾರಕ ಕಾಯಿಲೆ ಬಂದರೂ ಧೈರ್ಯ ಕಳೆದುಕೊಳ್ಳದೇ ಬದುಕಿದ್ದೇನೆ. ಸಮಯಕ್ಕೆ ಸರಿಯಾಗಿ ಔಷಧ ತೆಗೆದುಕೊಳ್ಳುತ್ತಿದ್ದರೆ ಈ ಕಾಯಿಲೆ ಮೆಟ್ಟಿ ನಿಲ್ಲಬಹುದು. ಮಾನಸಿಕವಾಗಿ ಆಘಾತಕ್ಕೊಳಗಾಗದೇ ಮನಸ್ಸನ್ನು ಗಟ್ಟಿ ಮಾಡಿಕೊಂಡಿದ್ದೇ ಆದಲ್ಲಿ ಮೊದಲ ಜಯ ಸಿಕ್ಕದಂತೆ.
ನಾಗರಹಾವು ಕಚ್ಚಿದರೆ ಅನೇಕರ ಭಯದಿಂದಲೇ ಹೇಗೆ ಮೃತಪಡುತ್ತಾರೋ, ಹಾಗೆಯೇ ಎಚ್ಐವಿ ಇದೆ ಎಂದ ಕೂಡಲೇ ಅನೇಕರು ಭಯದಿಂದಲೇ ಜೀವನದ ಆಸೆ ಕಳೆದುಕೊಳ್ತಾರೆ. ಆದರೆ ಖಂಡಿತಾ ಇದು ಅಂತ್ಯ ಅಲ್ಲ. ಮತ್ತೊಂದು ಹೊಸ ಜೀವನದ ಆರಂಭ. ಧೈರ್ಯ, ಆತ್ಮವಿಶ್ವಾಸ ಜತೆಗಿದ್ದರೆ ಖಂಡಿತಾ ಮತ್ತಷ್ಟು ವರ್ಷ ಸುಂದರವಾದ ಜೀವನ ಕಳೆಯಬಹುದು.
ಅತಿಯಾಗಿ ಪ್ರೀತಿಸುವ ಗಂಡ, ತಾಯಿಯಂತೆ ಇರುವ ಅತ್ತೆ, ಮುದ್ದಾದ ಎರಡು ಮಕ್ಕಳು ಇಷ್ಟು ಸಾಕು ನನ್ನ ಜೀವನಕ್ಕೆ ಎಂದು ನಾನು ಸಂತಾನಹರಣ ಶಸ್ತ್ರಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗೆ ತೆರಳಿದೆ. ಅಲ್ಲಿ ನಡೆಸಿದ ಪರೀಕ್ಷೆಯಲ್ಲಿ ಎಚ್ಐವಿ ಸೋಂಕು ತಗುಲಿದ ವಿಚಾರ ಪತ್ತೆಯಾಯಿತು. ಇದು ಗಂಡನ ಮೂಲಕವೇ ನನಗೆ ಬಂತು ಎಂಬುದು ತಿಳಿಯಿತು. ಮನಸ್ಸಿಗೆ ನೋವಾಯಿತು. ಇದನ್ನು ತಾಯಿಯಂತೆಯೇ ಇದ್ದ ಅತ್ತೆ ಬಳಿ ಹೇಳಿಕೊಂಡೆ. ಅತ್ತೆಯ ಮನಸ್ಸೇ ಬದಲಾಯಿತು. ನಾನು ಬಳಸಿದ ಲೋಟದಿಂದ ಹಿಡಿದು ಯಾವ ವಸ್ತುವನ್ನೂ ಆಕೆ ಮುಟ್ಟುತ್ತಿರಲಿಲ್ಲ. ನನ್ನ ಪಾಲಿಗಿದು ಮತ್ತೊಂದು ಮಾನಸಿಕ ಆಘಾತ. ಅದೊಂದು ದಿನ ಮನವೊಲಿಸಿ ಗಂಡ, ಇಬ್ಬರು ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ಮಾಡಿಸಿದಾಗ ಗಂಡ ಮಾತ್ರವಲ್ಲ, ಇಬ್ಬರು ಮಕ್ಕಳಿಗೂ ಎಚ್ಐವಿ ಸೋಂಕು ತಗುಲಿರುವ ಮತ್ತೊಂದು ಆಘಾತಕಾರಿ ವಿಚಾರ ತಿಳಿದುಬಂತು.
ಗಂಡನಿಂದಲೇ ಸೋಂಕು ತಗುಲಿದ್ದರೂ ಅವರ ಮೇಲೆ ಪ್ರೀತಿ ಕಡಿಮೆಯಾಗಲಿಲ್ಲ. ನನಗೆ ಮತ್ತು ಕುಟುಂಬ ಸದಸ್ಯರಿಗೆ ಚಿಕಿತ್ಸೆ ಆರಂಭವಾಯಿತು. ಗಂಡ ಹೆಚ್ಚು ದಿನ ಬದುಕಲಿಲ್ಲ. ಮಗನ ಸಾವಿನ ಬಳಿಕ ನನ್ನ ಅತ್ತೆಯ ಮನಸ್ಥಿತಿ ಬದಲಾಯಿತು. ಇದಕ್ಕೆಲ್ಲ ಮಗನೇ ಕಾರಣ ಎಂದು ತಿಳಿದು ನನ್ನನ್ನು ಮೊದಲಿನಂತೆ ಪ್ರೀತಿಸತೊಡಗಿದಳು. ಚಿಕಿತ್ಸೆ ಜತೆ ಜತೆಗೇ ಸಾಂತ್ವನ ಕೇಂದ್ರಕ್ಕೂ ತೆರಳಿ ಅಲ್ಲಿನ ಆಪ್ತಸಮಾಲೋಚಕಿಯರಿಂದ ಮಾನಸಿಕ ಸ್ಥೈರ್ಯ ಪಡೆಯುತ್ತಿದ್ದೇನೆ. ಸ್ಥಿತಿ ಗೊತ್ತಿರುವ ನೆಂಟರು, ಸಮಾಜದವರು ಧೈರ್ಯ ತುಂಬುತ್ತಿದ್ದಾರೆ.

ಅನಿಲ್ ಎಚ್.ಟಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.