ಪ್ರಧಾನ ಸುದ್ದಿ

ಮಂಗಳನ ಕಕ್ಷೆಯತ್ತ

ಮಂಗಳನ ಕಕ್ಷೆಯತ್ತ
Published On :

ಹೈದರಾಬಾದ್:  ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಮಂಗಳಯಾನ ಮತ್ತೊಂದು ಮಹತ್ವದ ಘಟ್ಟ ತಲುಪಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಶನಿವಾರ ಮಧ್ಯರಾತ್ರಿ 12.49ರಿಂದಲೇ ಮಂಗಳನತ್ತ ಮಾರ್ಸ್ ಆರ್ಬಿಟರ್‌ನ ಪ್ರಯಾಣ ಆರಂಭವಾಗಲಿದೆ.
8 ತಿಂಗಳ ಪಯಣ: ಡಿ.1ರಂದು ಮಾರ್ಸ್ ಆರ್ಬಿಟರ್ ಭೂಮಿಯ ತೆಕ್ಕೆಯಿಂದ ಜಾರಿ ಮಂಗಳನತ್ತ ಮುಖ ಮಾಡಲಿದೆ ಎಂದು ಈ ಹಿಂದೆಯೇ ಇಸ್ರೋ ತಿಳಿಸಿತ್ತು. ಅದರಂತೆಯೇ ಈ ಕಾರ್ಯ ಯಶಸ್ವಿಯಾಗಿ ನೆರವೇರಿದರೆ, ಮುಂದಿನ 8 ತಿಂಗಳ ಕಾಲ ಪ್ರಯಾಣ ಬೆಳೆಸಿ ಮಾರ್ಸ್ ಆರ್ಬಿಟರ್ ಮಂಗಳನ ನೆಲವನ್ನು ಸ್ಪರ್ಶಿಸಲಿದೆ.
ಟ್ರಾನ್ಸ್ ಮಾರ್ಸ್ ಇಂಜೆಕ್ಷನ್: ಭೂಮಿಯ ಕಕ್ಷೆಯಲ್ಲೇ ಸುತ್ತುತ್ತಿದ್ದ ಆರ್ಬಿಟರ್ ಅನ್ನು ಇಸ್ರೋ ವಿಜ್ಞಾನಿಗಳು ಭೂಕಕ್ಷೆಯಿಂದ ಹೊರಕ್ಕೆ ತಳ್ಳಲಿದ್ದಾರೆ. ಇದಕ್ಕಾಗಿ ಮಾರ್ಸ್ ಆರ್ಬಿಟರ್ ಮಿಷನ್‌ನಲ್ಲಿದ್ದ 440 ನ್ಯೂಟನ್ ಲಿಕ್ವಿಡ್ ಅಪೋಜೀ ಮೋಟಾರ್(ಎಲ್‌ಎಎಂ) ಅನ್ನು ಫೈರ್ ಮಾಡಲಾಗುತ್ತದೆ. ಆಗ ಆರ್ಬಿಟರ್ ಭೂಮಿಯ ಪ್ರಭಾವಿ ಗೋಳದಿಂದ ನುಣುಚಿಕೊಂಡು ಹೋಗಿ 2014ರ ಸೆಪ್ಟೆಂಬರ್ 24ಕ್ಕೆ ಮಂಗಳನ ಸಾಮೀಪ್ಯಕ್ಕೆ ತೆರಳುತ್ತದೆ. ಆ ಸಂದರ್ಭದಲ್ಲಿ ಮತ್ತೊಮ್ಮೆ ನ್ಯೂಟನ್ ಲಿಕ್ವಿಡ್ ಅಪೋಜೀ ಮೋಟಾರ್ ಅನ್ನು ಫೈರ್ ಮಾಡಿ, ಆರ್ಬಿಟರ್‌ನ ವೇಗ ತಗ್ಗಿಸುವಂತೆ ಮಾಡಿ, ಅದು ಮಂಗಳನ ಗುರುತ್ವಾಕರ್ಷಣೆಗೆ ಒಳಗಾಗುವಂತೆ ಮಾಡಲಾಗುತ್ತದೆ ಎಂದು ಇಸ್ರೋ ಹೇಳಿದೆ.         

ಹೇಗೆ ನೆರವು ನೀಡುತ್ತೆ?: ಟಿಟಿಸಿ ಗ್ರೌಂಡ್ ಸ್ಟೇಷನ್‌ಗಳು, ಗ್ರೌಂಡ್ ಸ್ಟೇಷನ್ ಮತ್ತು ನಿಯಂತ್ರಣ ಕೇಂದ್ರದ ನಡುವೆ ಸಂವಹನ ಜಾಲ (ಕಂಪ್ಯೂಟರ್, ಸ್ಟೋರೇಜ್, ಡಾಟಾ ನೆಟ್‌ವರ್ಕ್, ನಿಯಂತ್ರಣ ಕೇಂದ್ರದ ಸೌಲಭ್ಯಗಳು ಒಳಗೊಂಡಂತೆ)ವಾಗಿ ಇದು ಕಾರ್ಯನಿರ್ವಹಿಸುತ್ತದೆ.
ಇಸ್‌ಟ್ರ್ಯಾಕ್ ಬೆಂಗಳೂರು: ಬೆಂಗಳೂರಿನಲ್ಲಿರುವ ಇಸ್‌ಟ್ರ್ಯಾಕ್, ಟಿಟಿಸಿ ಗ್ರೌಂಡ್ ಸ್ಟೇಷನ್ ಅನ್ನು ಒಳಗೊಂಡಿದೆ. ಇದು ಬಾಹ್ಯಾಕಾಶ ನೌಕೆಯ ಕಾರ್ಯಾಚರಣೆಗೆ ಹಾಗೂ ಅದರ ನಿಯಂತ್ರಣಕ್ಕೆ, ಜತೆಗೆ ನೆಟ್‌ವರ್ಕ್ ಸ್ಟೇಷನ್‌ನೊಂದಿಗಿನ ಸಮನ್ವಯ ಸಾಧಿಸಲು ಮಲ್ಟಿ-ಮಿಷನ್ ಸ್ಪೇಸ್‌ಕ್ರಾಫ್ಟ್ ಕಂಟ್ರೋಲ್ ಸೆಂಟರ್ ಅನ್ನು ಹೊಂದಿದೆ.
ಟಿಟಿಸಿ ಗ್ರಾಂಡ್ ಸ್ಟೇಷನ್ಸ್: ಇಸ್‌ಟ್ರ್ಯಾಕ್ ಬೆಂಗಳೂರು, ಲಖನೌ, ಶ್ರೀಹರಿಕೋಟಾ, ತಿರುವನಂತಪುರ, ಪೋರ್ಟ್ ಬ್ಲೇರ್ ಐಲ್ಯಾಂಡ್, ಬ್ರೂನೆ, ಇಂಡೋನೇಷ್ಯಾದ ಬಿಯಾಕ್ ಹಾಗೂ ಮಾರೀಷಸ್‌ನಲ್ಲಿ ಟಿಟಿಸಿ ಗ್ರೌಂಡ್ ಸ್ಟೇಷನ್‌ಗಳನ್ನು ಹೊಂದಿದೆ.
ಆ್ಯಂಟೆನ್ನಾಗಳು: ದೊಡ್ಡ ದೊಡ್ಡ ಆ್ಯಂಟೆನ್ನಾಗಳು ಹಾಗೂ ಸಂವಹನ ವ್ಯವಸ್ಥೆಗಳ ಜಾಲವನ್ನು ಹೊಂದಿರುವ ಇಂಡಿಯನ್ ಡೀಪ್ ಸ್ಪೇಸ್ ನೆಟ್‌ವರ್ಕ್(ಐಡಿಎಸ್‌ಎನ್) ಅಂತರ್‌ಗ್ರಹೀಯ ಬಾಹ್ಯಾಕಾಶ ಯೋಜನೆಗಳಿಗೆ ನೆರವಾಗುತ್ತದೆ. ಇದಲ್ಲದೇ, ರಾಡಾರ್ ವ್ಯವಸ್ಥೆಯ ಅಭಿವೃದ್ಧಿ, ಇಸ್ರೋದ ಭಾರತೀಯ ಪ್ರಾದೇಶಿಕ ನೇವಿಗೇಷನ್ ಉಪಗ್ರಹಕ್ಕೆ ಗ್ರೌಂಡ್ ಸೆಗ್ಮೆಂಟ್ ನೆಟ್‌ವರ್ಕ್ ಅನ್ನು ಒದಗಿಸುವ ಕಾರ್ಯವನ್ನೂ ಇಸ್‌ಟ್ರ್ಯಾಕ್ ಮಾಡುತ್ತದೆ.

ಶಕ್ತಿಕೇಂದ್ರ ಇಸ್‌ಟ್ರ್ಯಾಕ್
ಇಸ್ರೋದ ಟೆಲಿಮೆಟ್ರಿ ಟ್ರ್ಯಾಕಿಂಗ್ ಆ್ಯಂಡ್ ಕಮಾಂಡ್ ನೆಟ್‌ವರ್ಕ್(ಐಎಸ್‌ಟಿಆರ್‌ಎಸಿ) ಸೆಂಟರ್. ಇದು ಮಂಗಳಯಾನದ ಪ್ರಮುಖ ನಿಯಂತ್ರಣ ಕೇಂದ್ರವಾಗಿದೆ.
ಟ್ರ್ಯಾಕಿಂಗ್
ಇಸ್‌ಟ್ರ್ಯಾಕ್‌ನಲ್ಲಿರುವ ವಿಜ್ಞಾನಿಗಳು ನಿರಂತರವಾಗಿ ಬಾಹ್ಯಾಕಾಶ ನೌಕೆಯನ್ನು ಟ್ರ್ಯಾಕ್ ಮಾಡುವ ಕೆಲಸದಲ್ಲಿ ತೊಡಗಿರುತ್ತಾರೆ. ಬಾಹ್ಯಾಕಾಶದಲ್ಲಿ ಅತಿ ಹೆಚ್ಚು ಟ್ರ್ಯಾಕ್ ಆಗುತ್ತಿರುವ ನೌಕೆಯೆಂದರೆ ಮಾರ್ಸ್ ಆರ್ಬಿಟರ್ ಮಿಷನ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.