ಕನ್ನಡ ಒಂದು ಪ್ರಜ್ಞೆ

ಕ.ಪ್ರ.ವಾರ್ತೆ ಬೆಂಗಳೂರು ನ. 30
ಐದು ಸಾವಿರ ವರ್ಷಗಳಿಂದಲೂ ಕನ್ನಡ ಸಾಯುತ್ತಿದೆ ಎಂದು ಹೇಳುತ್ತಲೇ ಇದ್ದಾರೆ, ಆದರೆ ಕನ್ನಡ ಎಂದಿಗೂ ಸತ್ತಿಲ್ಲ, ಇಂದಿಗೂ ನೆಟ್ಟಗಿದೆ ಎಂದು ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಹೇಳಿದ್ದಾರೆ. ಕನ್ನಡ ನಶಿಸುತ್ತಿದೆ ಎಂದು ಪಂಪ ಕೂಡ ತನ್ನ ಮಹಾಕಾವ್ಯದಲ್ಲಿ ಹೇಳಿದ್ದ. ಆದರೆ ಕನ್ನಡವಿರುವುದು ಕೇವಲ ಸಾಹಿತ್ಯದಲ್ಲಲ್ಲ. ಪ್ರತಿಯೊಬ್ಬ ಕನ್ನಡಿಗನ ಮನಸ್ಸಿನಲ್ಲಿದೆ. ಕನ್ನಡ ಎನ್ನುವುದು ಒಂದು ಪ್ರಜ್ಞೆ. ಈ ಭಾಷೆ ಎಂದಿಗೂ ಸಾಯಲು ಸಾಧ್ಯವಿಲ್ಲ ಎಂದು ಅವರು ನಗರದಲ್ಲಿ ಶನಿವಾರ 'ಮೆಲೂಹದ ಮೃತ್ಯುಂಜಯ' ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ಕೆಲ ವರ್ಷಗಳ ಹಿಂದೆ ಬೆಳಗಾವಿಯಲ್ಲೊಂದು ಸಾಹಿತ್ಯ ಗೋಷ್ಠಿ ನಡೆದಿತ್ತು. ಮೂರು ದಿನಗಳ ಕಾಲ ಅಲ್ಲಿ ಸಾಹಿತ್ಯದ ನಾನಾ ಪ್ರಕಾರಗಳ ಬಗ್ಗೆ ಗೋಷ್ಠಿಗಳು ನಡೆದಿದ್ದವು. ಆ ಗೋಷ್ಠಿಗೆ ಬಂದ ಸಾಹಿತ್ಯಾಸಕ್ತರಿಗೆ ಊಟ ನೀಡಿದ ಗೌರೀಶ್ ಶೆಟ್ಟಿ ಎಂಬ ವ್ಯಕ್ತಿಯೂ ಸುಮ್ಮನೇ ನೋಡುತ್ತಿದ್ದರು. ಸಮಾರೋಪ ಕಾರ್ಯಕ್ರಮದಲ್ಲಿ ಸಾಹಿತಿಯೊಬ್ಬರು ಮಾತನಾಡುತ್ತಾ, 'ಸಾಹಿತ್ಯವಿಲ್ಲದಿದ್ದರೇ ಬದುಕಿಲ್ಲ' ಎಂದುಬಿಟ್ಟರು. ಇದರಿಂದ ರೊಚ್ಚಿಗೆದ್ದ ಶೆಟ್ಟಿ, 'ನಾನು ಪುಸ್ತಕ ಓದಿಲ್ಲ, ಹಾಗಿದ್ರೆ ಮನುಷ್ಯನಲ್ಲವೇ?' ಎಂದು ಪ್ರಶ್ನಿಸಿದರು. ಹೀಗೆ ಸಾಹಿತ್ಯ ಹಾಗೂ ಭಾಷೆ ಎನ್ನುವುದು ಕೇವಲ ಪುಸ್ತಕಕ್ಕೆ ಸೀಮಿತವಲ್ಲ ಎಂದು ಯೋಗರಾಜ್ ಭಟ್ ಅಭಿಪ್ರಾಯಪಟ್ಟರು. 'ಮೆಲೂಹದ ಮೃತ್ಯುಂಜಯ' ಪುಸ್ತಕದ ಮೂಲ ಕೃತಿಯ ಲೇಖಕ ಅಮೀಶ್ ತ್ರಿಪಾಠಿ ಅವರು 39ನೇ ವಯಸ್ಸಿನಲ್ಲಿ ಕೋಟ್ಯಂತರ ಓದುಗರನ್ನು ತಲುಪಿದ್ದಾರೆ. ಸಾಹಿತ್ಯದ ಸಾಲುಗಳ ಮೂಲಕ ಇಷ್ಟೊಂದು ದೊಡ್ಡ ಸಂಖ್ಯೆಯ ಮನ ಮುಟ್ಟುವುದು ಸಂಸತದ ವಿಚಾರ ಎಂದು ಅವರು ಹೇಳಿದರು.
ಟ್ವೀಟರ್ನಲ್ಲಿ ಕತೆ ಬರೆಯುವ ಕಾಲ: ನಾವಿಂದು ವಿಚಿತ್ರ ಕಾಲಗಟ್ಟದಲ್ಲಿದ್ದೇವೆ. ಹಳೆಯ ಸೊಗಡಿನ ಜತೆ, ಹೊಸದನ್ನು ಹಿಡಿದುಕೊಳ್ಳುವ ಧಾವಂತವಿದೆ. ಟ್ವೀಟರ್ ಜಗತ್ತಿನ 140 ಅಕ್ಷರಗಳಲ್ಲಿ ಸಂವಹನ ಮಾಡುವ ತವಕದಲ್ಲಿದ್ದೇವೆ. ಫೇಸ್ಬುಕ್ ಹಾಗೂ ಟ್ವೀಟರ್ ಜಗತ್ತಿನಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದೇವೆ. ಇಂತಹ ಪ್ರಸ್ತುತ ಆಧುನಿಕ ಜಗತ್ತು ಹಾಗೂ ಅಧ್ಯಾತ್ಮದ ವಿಚಾರಗಳೆರಡರನ್ನು 'ಮೆಲೂಹದ ಮೃತ್ಯುಂಜಯ' ಪುಸ್ತಕದಲ್ಲಿ ಸಿಗುತ್ತದೆ ಎಂದು 'ಕನ್ನಡಪ್ರಭ'- ಸುವರ್ಣ ಸುದ್ದಿ ವಾಹಿನಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅಭಿಪ್ರಾಯಪಟ್ಟರು.
ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಶ್ವೇಶ್ವರ ಭಟ್ ಅವರು, 'ಮೆಲೂಹದ ಮೃತ್ಯುಂಜಯ' ಪುಸ್ತಕದ ಇಂಗ್ಲಿಷ್ ಮೂಲಕೃತಿಯನ್ನು ನೋಡಿದಾಗಲೆಲ್ಲ ಪುಸ್ತಕದ ಮುಖಪುಟ ನೋಡಿ ಖರೀದಿಸುವ ಗೋಜಿಗೆ ಹೋಗಿರಲಿಲ್ಲ. ಯಾವುದೋ ಅಧ್ಯಾತ್ಮಿಕ ವಿಚಾರಕ್ಕೆ ಸಂಬಂಧಿಸಿದ ಕೃತಿಯೆಂದು ಸುಮ್ಮನಾಗಿದ್ದೆ. ಈ ಪುಸ್ತಕದ ಕುರಿತ ವಿಮರ್ಶೆ ಹಾಗೂ ಕೆಲ ಲೇಖನಗಳು ಪ್ರಕಟವಾದಾಗಲೂ ಓದಲು ಮನವಾಗಿರಲಿಲ್ಲ. ಆದರೆ ಇತ್ತೀಚೆಗೆ ನನ್ನ ಸ್ನೇಹಿತರೊಬ್ಬರು ಪುಸ್ತಕ ಓದಲು ಶಿಫಾರಸು ಮಾಡಿದಾಗ ಅರೆ ಮನದಿಂದಲೇ ಓದಲು ಪ್ರಾರಂಭಿಸಿದೆ. ಆದರೆ ಕೃತಿಯನ್ನು ಕೈನಲ್ಲಿ ಹಿಡಿದ ಕ್ಷಣದಿಂದ ಕೊನೆಯವರೆಗೂ ಓದಿಸುವ ಶಕ್ತಿ ಹೊಂದಿದೆ. ಪ್ರತಿಯೊಬ್ಬ ಸಾಹಿತ್ಯಾಸಕ್ತರು ಓದಲೇ ಬೇಕಾದ ಕೃತಿಯಿದು ಎಂದು ಅವರು ಹೇಳಿದರು.
ಮಾಂತ್ರಿಕ ಸಾಹಿತ್ಯ: ಮುಖಪುಟ ನೋಡಿ ಅಧ್ಯಾತ್ಮಿಕ ಕೃತಿ ಎಂದುಕೊಂಡರೆ ಅದು ತಪ್ಪು. ಆಧುನಿಕ ಜಗತ್ತಿನ ಅಬ್ಬರಗಳ ಜತೆ ಪುರಾಣವನ್ನು ಹೇಳುತ್ತಾ ಪುಸ್ತಕದ ಕೊನೆಯಲ್ಲಿ ಮತ್ತೆ ವಾಸ್ತವಕ್ಕೆ ಓದುಗರನ್ನು ತಂದುಬಿಡುವ ಮಾಂತ್ರಿಕ ಸಾಹಿತ್ಯವಿದು. ಕನ್ನಡದಲ್ಲಿ ಒಂದು ಸಾವಿರ ಕೃತಿ ಮಾರಾಟವಾದರೆ ದೊಡ್ಡ ಸಂಗತಿ ಎನ್ನುವಾಗ 15 ಲಕ್ಷ ಪ್ರತಿಗಳು 'ಮೆಲೂಹದ ಮೃತ್ಯುಂಜಯ'ದ ಮೂಲ ಕೃತಿ ಮಾರಾಟವಾಗಿದೆಯೆಂದರೆ ಪುಸ್ತಕದಲ್ಲಿನ ಅದ್ಭುತ ಕಸುಬುಗಾರಿಕೆ ಅರ್ಥವಾಗುತ್ತದೆ ಎಂದು ವಿಶ್ವೇಶ್ವರ ಭಟ್ ನುಡಿದರು.
ಈ ಪುಸ್ತಕ ಕೇವಲ ಪುರಾಣದ ಕತೆಯಲ್ಲ. ಪುರಾಣದ ಕತೆಗಳ ಜತೆ ವಾಸ್ತವಗಳು ತೆರೆದುಕೊಳ್ಳುತ್ತವೆ. ಶಿವನ ಪ್ರತಿಯೊಂದು ಗುಣವನ್ನು ಆಧುನಿಕ ಜಗತ್ತಿನ ನಮ್ಮ ಜೀವನದ ಜತೆಗೆ ಸಂಬಂಧ ಕಲ್ಪಿಸಿಕೊಳ್ಳಲು ಸಹಾಯವಾಗುತ್ತದೆ. ಕೃತಿ ಓದುತ್ತಾ ಸಾಗಿದಂತೆ ನಮ್ಮ ಜೀವನದಲ್ಲಿಯೂ ಶಿವನನ್ನು ಹೇಗೆ ಕಲ್ಪಿಸಿಕೊಂಡು ವ್ಯಕ್ತಿತ್ವ ಕಟ್ಟಿಕೊಳ್ಳಬಹುದು ಎಂಬ ವಿಚಾರವನ್ನು ಪುಸ್ತಕ ಕಟ್ಟಿ ಕೊಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
'ದಿ ಇಮ್ಮಾರ್ಟಲ್ಸ್ ಆಫ್ ಮೆಲೂಹ' ಇಂಗ್ಲಿಷ್ ಕೃತಿಯನ್ನು ಓದಲು ಪ್ರಾರಂಭಿಸಿ ಕನ್ನಡಕ್ಕೆ ಭಾಷಾಂತರವಾದ 'ಮೆಲೂಹದ ಮೃತ್ಯುಂಜಯ'ದೊಂದಿಗೆ ಓದು ಮುಗಿಸಿದೆ. ಇದೊಂದು ವಿಶೇಷ ಅನುಭವವಾದರೂ ಓದಿನಲ್ಲಿ ಯಾವುದೆ ವ್ಯತ್ಯಾಸ ಗೊತ್ತಾಗಲಿಲ್ಲ. ಭಾಷಾಂತರ ಮಾಡಿರುವ ಎಸ್. ಉಮೇಶ್ ಅವರು ಕೃತಿಯನ್ನು ಅವಗಾಹನೆ ಮಾಡಿ ಉತ್ತಮವಾಗಿ ಕನ್ನಡಕ್ಕೆ ನೀಡಿದ್ದಾರೆ. ಕಿಬ್ಬೊಟ್ಟೆ ಚೀಲದಲ್ಲಿರುವ ಕಾಂಗರೂ ಮರಿಯಂತೆ ಲೇಖಕ ಮನಹೊಕ್ಕಿ ಭಾಷಾಂತರ ಮಾಡಿದಾಗ ಮಾತ್ರ ಉತ್ತಮ ಕೃತಿ ದೊರೆಯುತ್ತದೆ. ಮೂಲ ಲೇಖಕ ಹಾಗೂ ಕೃತಿಯನ್ನು ಸಂಪೂರ್ಣವಾಗಿ ಆವರಿಸಿಕೊಂಡು ಮೈಮೇಲೆ ಭೂತ ಭರಿಸಿಕೊಂಡರೆ ಮಾತ್ರ ಇಂತಹ ಕಸುಬಿನಲ್ಲಿ ಯಶಸ್ವಿಯಾಗಬಹುದು ಎಂದು ಅವರು ಹೇಳಿದರು.
ಅಮೀಶ್ ತ್ರಿಪಾಠಿಯ 'ದಿ ಇಮ್ಮಾರ್ಟಲ್ಸ್ ಆಫ್ ಮೆಲೂಹ' ಕೃತಿಯನ್ನು ಕನ್ನಡಕ್ಕೆ ಎಸ್. ಉಮೇಶ್ ಭಾಷಾಂತರಿಸಿದ್ದಾರೆ. 'ಮೆಲೂಹದ ಮೃತ್ಯುಂಜಯ' ಪುಸ್ತಕವನ್ನು ಧಾತ್ರಿ ಪ್ರಕಾಶನ ಪ್ರಕಟಿಸಿದೆ.
ಮನಸ್ಸಿನ ಭಾಷೆ
ನನ್ನ ಮೂಲ ಕೃತಿ ಇಂಗ್ಲಿಷ್ನಲ್ಲಿ ಬಂದಿದೆ. ಇದು ಬುದ್ದಿಯ ಭಾಷೆ. ಆದರೆ ಮನಸ್ಸಿನ ಭಾಷೆಯಲ್ಲಿ ಕೃತಿ ಪ್ರಕಾಶನಗೊಳ್ಳಬೇಕು ಎನ್ನುವುದು ನನ್ನ ಕನಸು. ಸಾಮಾನ್ಯ ಜನರನ್ನು ಸಾಹಿತ್ಯ ಮುಟ್ಟಲು ಜನರ ಅಥವಾ ಮನಸಿನ ಭಾಷೆಯಾದ ಪ್ರಾದೇಶಿಕ ಭಾಷೆಗಳಲ್ಲಿ ದೊರೆಯಬೇಕು. ಆದ್ದರಿಂದ 'ದಿ ಇಮ್ಮಾರ್ಟಲ್ಸ್ ಆಫ್ ಮೆಲೂಹ' ಕೃತಿ ಕನ್ನಡ ಹೊರತುಪಡಿಸಿ ಹಿಂದಿ, ಅಸ್ಸಾಮಿ, ಮರಾಠಿ, ಗುಜರಾತಿ, ತೆಲುಗು, ತಮಿಳು, ಮಲೆಯಾಳಂನಲ್ಲೂ ಪ್ರಕಟಗೊಳ್ಳುತ್ತಿದೆ ಎಂದು ಲೇಖಕ ಅಮೀಶ್ ತ್ರಿಪಾಠಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


