ದಳ ಬಿಟ್ಟು ಹೊರ ನಡೆದ ಯತ್ನಾಳ
ಬೆಂಗಳೂರು: ಜೆಡಿಎಸ್ನಲ್ಲಿ ಬೂದಿ ಮುಚ್ಚಿದ ಕೆಂಡದ ಒಂದು ಕೆನ್ನಾಲಿಗೆ ಬೆಂಕಿಯಾಗಿ ಹೊರಬಿದ್ದಿದೆ. ಜೆಡಿಎಸ್ನಲ್ಲಿ ಒಳಗೊಳಗೆ ಇರುವ ಅಸಮಾಧಾನ ಬಹಿರಂಗವಾಗಿದೆ. ಮಹಾ ಪ್ರಧಾನ ಕಾರ್ಯದರ್ಶಿ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಹೊರನಡೆದಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷನಾಗುವ ಪ್ರಬಲ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದ ಬಸನಗೌಡ ಪಾಟೀಲ್ ಯತ್ನಾಳ್, ಇದಕ್ಕಾಗಿ ಸಾಕಷ್ಟು ಪ್ರಯತ್ನವನ್ನೂ ಮಾಡಿದ್ದರು. ಎಚ್.ಡಿ. ಕುಮಾರಸ್ವಾಮಿ ರಾಜಿನಾಮೆಯಿಂದ ತೆರವಾಗಿದ್ದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವ ಎಲ್ಲ ಸಭೆಗಳಲ್ಲೂ ಎಚ್.ಡಿ. ದೇವೇಗೌಡರೊಂದಿಗೆ ಭಾಗಿಯಾಗಿದ್ದರು. ಆದರೆ, ಕೊನೆಯ ಹಂತದಲ್ಲಿ ಅವರಿಗೆ ಆ ಸ್ಥಾನ ಸಿಗಲಿಲ್ಲ. ಎ. ಕೃಷ್ಣಪ್ಪ ರಾಜ್ಯಾಧ್ಯಕ್ಷರಾಗಿ ಸ್ಥಾನ ಅಲಂಕರಿಸಿದ ಕೂಡಲೇ ಬಸನಗೌಡ ಪಾಟೀಲ್ ಯತ್ನಾಳ್ ಅಸಮಾಧಾನ ಹೆಚ್ಚುತ್ತಾ ಹೋಯಿತು.
ನೋವು ಹೊರ ಹಾಕಿದ್ದರು: ರಾಜ್ಯಾಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಇದು ಪರೋಕ್ಷವಾಗಿ ಬಹಿರಂಗವೂ ಆಗಿತ್ತು. ಸೆ.13ರಂದು ನಡೆದ ಸಮಾರಂಭದಲ್ಲಿ ಭಾಗವಹಿಸಿದ್ದ ಬಸನಗೌಡ ಪಾಟೀಲ್ ಯತ್ನಾಳ್, 'ರಾಜ್ಯಾಧ್ಯಕ್ಷರಾಗಲು ನಾನು ರೇಸ್ನಲ್ಲಿ ಇರಲಿಲ್ಲ. ವಿಸಿಟಿಂಗ್ ಕಾರ್ಡ್ ಅಧ್ಯಕ್ಷನಾಗಲು ನನಗೆ ಇಷ್ಟ ಇಲ್ಲ. ಹೊರಗಿನವರು-ಒಳಗಿನವರು ಎಂಬ ಭೇದ ಇಲ್ಲ. ಪಕ್ಷದ ಸಂಘಟನೆಯೇ ಮುಖ್ಯ. ಗಣಿ ಹಾಗೂ ರಿಯಲ್ ಎಸ್ಟೇಟ್ನವರು ರಾಜಕಾರಣಕ್ಕೆ ಶಾಪವಾಗಿದ್ದಾರೆ. ಅವರು ಖರ್ಚು ಮಾಡುವಷ್ಟು ಹಣ ನಮ್ಮಲ್ಲಿ ಇಲ್ಲ. ಹೀಗಾಗಿ ಪ್ರಾಮಾಣಿಕರು ಸಮಾಜದಲ್ಲಿ ರಾಜಕಾರಣಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ನಾವೆಲ್ಲ ಅಪ್ರಸ್ತುತರಾಗಿದ್ದೇವೆ' ಎಂದಿದ್ದರು.
ಪ್ರಮುಖರು ಗೈರಾಗಿದ್ದರು: ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕಾಗಿ ಆ ಪಕ್ಷ ತೊರೆದು ಎ. ಕೃಷ್ಣಪ್ಪ ಜೆಡಿಎಸ್ ಸೇರಿದ್ದರು. ಹಿರಿಯೂರು ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದರು. ಇವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಲಾಯಿತು. ಇದರಿಂದ ಪಕ್ಷದಲ್ಲಿ ಹಿರಿಯ ನಾಯಕರೆಲ್ಲರೂ ಬೇಸತ್ತಿದ್ದರು. ಅದಕ್ಕೇ ಅವರ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಹಿರಿಯ ನಾಯಕರಾದ ಎಂ.ಸಿ. ನಾಣಯ್ಯ, ಬಸವರಾಜ ಹೊರಟ್ಟಿ ಅವರೂ ಬಂದಿರಲಿಲ್ಲ. ಪಕ್ಷದಲ್ಲಿ ಸಾಕಷ್ಟು ಭಿನ್ನಾಭಿಪ್ರಾಯ ಹಾಗೂ ಅಸಮಾಧಾನ ಇದ್ದೇ ಇದೆ.
ಸಂಬಂಧ ಹಳಸಿತ್ತು: ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆ ಎಚ್.ಡಿ. ಕುಮಾರಸ್ವಾಮಿ ಸಾಕಷ್ಟು ಭರವಸೆ ಇಟ್ಟುಕೊಂಡಿದ್ದವರು. ಅವರೇ ಯತ್ನಾಳ್ ಅವರನ್ನು ಪಕ್ಷಕ್ಕೆ ಕರೆತಂದದ್ದು. ಪಕ್ಷದ ಮಹಾಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡುವ ಜತೆಗೆ, ಬಿಜಾಪುರ ಗುಲ್ಬರ್ಗಾ ಭಾಗದಲ್ಲಿ ಪಕ್ಷದ ಸಂಘಟನೆಯ ಸಂಪೂರ್ಣ ಜವಾಬ್ದಾರಿ ವಹಿಸಿದ್ದರು. ಆದರೆ, ಕಳೆದ ವಿಧಾನಸಭೆ ಚುನಾವಣೆ ಫಲಿತಾಂಶದ ನಂತರ ಕುಮಾರಸ್ವಾಮಿ ಹಾಗೂ ಯತ್ನಾಳ್ ನಡುವಿನ ಸಂಬಂಧ ಹಳಸಿತ್ತು.
ಮುಸುಕಿನ ಗುದ್ದಾಟ: ಆ ಭಾಗದಲ್ಲಿ ಹೆಚ್ಚು ಸ್ಥಾನಗಳನ್ನು ಪಕ್ಷ ಗೆಲ್ಲಬಹುದಿತ್ತು. ಯತ್ನಾಳ್ ಸೂಕ್ತ ರೀತಿಯಲ್ಲಿ ಕೆಲಸ ಮಾಡಲಿಲ್ಲ. ಪಕ್ಷ ಸಂಘಟಿಸಲಿಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ತಮ್ಮ ಆತ್ಮೀಯರೊಂದಿಗೆ ಹೇಳಿಕೊಂಡಿದ್ದರು. ಅಲ್ಲದೆ, ಇದು ಯತ್ನಾಳ್ ಕಿವಿ ತಲುಪುವಂತೆಯೂ ಮಾಡಿದ್ದರು. ಎಚ್.ಡಿ. ಕುಮಾರಸ್ವಾಮಿ ಸ್ವಾರ್ಥ ಸಾಧನೆಗಾಗಿ ರಾಜಕಾರಣ ಮಾಡಿದರು. ಟಿಕೆಟ್ ಹಂಚಿಕೆಯಲ್ಲಿ ಸಾಕಷ್ಟು ಗೊಂದಲ ಸೃಷ್ಟಿಸಿದರಲ್ಲದೆ 'ಅನುಕೂಲ' ಮಾಡಿಕೊಟ್ಟವರಿಗೆ ಟಿಕೆಟ್ ನೀಡಿದ್ದರು ಎಂದು ಯತ್ನಾಳ್ ಕೂಡ ಟೀಕಿಸಿ, ಅವರು ಕೂಡ ಈ ಮಾತುಗಳು ಕುಮಾರಸ್ವಾಮಿ ಅವರ ಕಿವಿಗೆ ತಲುಪುವಂತೆಯೂ ಮಾಡಿದ್ದರು. ಹೀಗೆ ಎಚ್.ಡಿ. ಕುಮಾರಸ್ವಾಮಿ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಅವರ ನಡುವಿನ ಶೀಥಲ ಸಮರ ನಡೆಯುತ್ತಲೇ ಇತ್ತು.
ಗೌಡರ ಆಶೀರ್ವಾದ ಬೇಡಿದ್ದಾರೆ: ದೇವೇಗೌಡ ಅವರೊಂದಿಗೆ ಯತ್ನಾಳ್ ಚೆನ್ನಾಗಿದ್ದರು. ಅದಕ್ಕೇ ಅವರು ರಾಜಿನಾಮೆ ಪತ್ರದಲ್ಲಿ ದೇವೇಗೌಡರನ್ನು ಸಾಕಷ್ಟು ಶ್ಲಾಘಿಸಿದ್ದಾರೆ. ಅವರ ಆಶೀರ್ವಾದವನ್ನೂ ಬೇಡಿದ್ದಾರೆ. ರಾಷ್ಟ್ರಮಟ್ಟದ ರಾಜಕಾರಣದಲ್ಲಿ ಮುಂದಿನ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ಗೆ ಅಸ್ತಿತ್ವ ಇಲ್ಲ ಎಂಬುದು ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಮನವರಿಕೆ ಆಗಿತ್ತು. ಹೀಗಾಗಿ, ಅವರು ಅವಕಾಶಕ್ಕಾಗಿ ಕಾಯುತ್ತಿದ್ದರು. ಸ್ಯಾಂಪಲ್ ಎಂಬುವಂತೆ ಮೋದಿಗೆ ಬೆಂಬಲಿಸಿ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಇದಕ್ಕೆ ಕುಮಾರಸ್ವಾಮಿ ಹಾಗೂ ದೇವೇಗೌಡ ಪ್ರತಿಕ್ರಿಯಿಸಿದರು. ಅದನ್ನೇ ಮೂಲವಾಗಿಟ್ಟುಕೊಂಡು ಯತ್ನಾಳ್ ಜೆಡಿಎಸ್ಗೆ ರಾಜಿನಾಮೆ ನೀಡಿ ಹೊರ ನಡೆದಿದ್ದಾರೆ. ಅವರು ಬಿಜೆಪಿ ಸೇರುವುದು ಬಹುತೇಕ ಖಚಿತವಾಗಿದೆ.
ಅದೇನೇ ಇದ್ದರೂ, ಜೆಡಿಎಸ್ಗೆ ಇದು ನುಂಗಲಾರದ ತುಪ್ಪ. ಯಾರೇ ಬಿಟ್ಟುಹೋದರೂ ಹೋಗಲಿ ಎನ್ನಬಹುದು. ಎಲ್ಲರೂ ಹೋದರೆ ಉಳಿಯುವವರಾದರೂ ಯಾರು? ಕುಟುಂಬ ರಾಜಕಾರಣವೇ ಉಳಿಯಬೇಕಾಗುತ್ತದೆ. ಇದನ್ನು ಇತ್ತೀಚಿನ ಜೆಡಿಎಸ್ ಸಮಾವೇಶ, ಸಮಾರಂಭಗಳು ಸಾಬೀತು ಪಡಿಸುತ್ತಿವೆ. ಜೆಡಿಎಸ್ ಕಾರ್ಯಕ್ರಮದಲ್ಲಿ ದೇವೇಗೌಡ ಪಾಲ್ಗೊಳ್ಳುತ್ತಾರೆ ಎಂದರೆ ಹಿರಿಯ ನಾಯಕರೆಲ್ಲರೂ ಇರುತ್ತಿದ್ದರು. ಗಾಂಧಿ ಜಯಂತಿ ಆಚರಣೆಯಲ್ಲಿ ದೇವೇಗೌಡರೊಂದಿಗೆ ರಾಜ್ಯಾಧ್ಯಕ್ಷರೇ ಇರಲಿಲ್ಲ. ಜೆಡಿಎಸ್ನಲ್ಲಿ ಅಸಮಾಧಾನ ಇಲ್ಲ ಎಂದು ಇನ್ನಾವ ಸಾಕ್ಷ್ಯದ ಮೂಲಕ ಹೇಳಲಾದೀತು?
ಬಸನಗೌಡ ಪಾಟೀಲ್ ಯತ್ನಾಳ್ ಅವರ ರಾಜಿನಾಮೆ ಫ್ಯಾಕ್ಸ್ ಮೂಲಕ ಗುರುವಾರ ಮಧ್ಯಾಹ್ನ ಜೆಡಿಎಸ್ ಕಚೇರಿ ತಲುಪಿದೆ. ಈ ಸಂಬಂಧ ರಾಷ್ಟ್ರಾಧ್ಯಕ್ಷ ಎಚ್.ಡಿ. ದೇವೇಗೌಡ ಅವರೊಂದಿಗೆ ಚರ್ಚಿಸಿ, ಮಹಾ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ನೀಡಿರುವ ರಾಜಿನಾಮೆ ಅಂಗೀಕರಿಸಲಾಗಿದೆ.
- ಎ. ಕೃಷ್ಣಪ್ಪ, ಜೆಡಿಎಸ್ ರಾಜ್ಯಾಧ್ಯಕ್ಷ
ಜೆಡಿಎಸ್ಗೆ ರಾಜಿನಾಮೆ ನೀಡಿದ್ದೇನೆ. ಯಾವ ಪಕ್ಷಕ್ಕೆ ಸೇರಬೇಕು ಎಂಬ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಇನ್ನೆರಡು ದಿನದಲ್ಲಿ ನನ್ನ ಹಿತೈಷಿಗಳೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ರಾಜಕೀಯ ಹೆಜ್ಜೆ ನಿರ್ಧರಿಸುತ್ತೇನೆ. ಈಗಲೇ ಯಾವುದನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ.
- ಬಸನಗೌಡ ಪಾಟೀಲ್ ಯತ್ನಾಳ್
ಕೆರೆ ಮಂಜುನಾಥ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

