ಮೌಢ್ಯಕ್ಕೆ ಸೆಡ್ಡು

ಕನ್ನಡಪ್ರಭ ವಾರ್ತೆ ಚಾಮರಾಜನಗರ ಅ.7
ಚಾಮರಾಜನಗರದ ಜನರಿಗೆ ಸೋಮವಾರ ಸಂಭ್ರಮದ ದಿನ. ಕಾರಣ, ರಾಜ್ಯದ ಮುಖ್ಯಮಂತ್ರಿಯನ್ನು ನೋಡುವ 'ಭಾಗ್ಯ' ಅವರಿಗೆ ಕೊನೆಗೂ ಸಿಕ್ಕಿತ್ತು.
ಇದರಲ್ಲೇನು ವಿಶೇಷ ? ಎಂಬ ಪ್ರಶ್ನೆಯೇ.
ಚಾಮರಾಜನಗರದ ಹೆಸರು ಕೇಳಿದರೆ ಸಾಕು ಅಲ್ಲಿಗೆ ಹೋಗಲು ಅಧಿಕಾರಸ್ಥರು ಅದರಲ್ಲೂ ಮುಖ್ಯಮಂತ್ರಿ ಹುದ್ದೆಯಲ್ಲಿದ್ದವರು ಹೆದರಿಕೊಂಡಿದ್ದೇ ಹೆಚ್ಚು. ಚಾಮರಾಜನಗರದಲ್ಲಿ ಕಾಲಿಟ್ಟರೆ ಅಧಿಕಾರ ಹೋಗುತ್ತದೆ ಎಂಬ ಭಯ, ಮೂಢನಂಬಿಕೆ ಇದಕ್ಕೆ ಕಾರಣ.
ನಾನು ಚಾಮರಾಜನಗರಕ್ಕೆ ಭೇಟಿ ನೀಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಆದರೆ, ಅವರು ಇಲ್ಲಿಗೆ ಬರುವ ವರೆಗೆ ಯಾರಲ್ಲೂ ನಂಬಿಕೆ ಇರಲಿಲ್ಲ. ಏಕೆಂದರೆ ಬರುತ್ತೇನೆ ಎಂದವರು ಬರಲೇ ಇಲ್ಲ. ಹೀಗಾಗಿ ಸಿದ್ದರಾಮಯ್ಯ ಅವರ ಮಾತಿಗೂ ಯಾರೂ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ, ಸಿದ್ದರಾಮಯ್ಯ ಅವರು ಸೋಮವಾರ ತಮ್ಮ ಮಾತು ನಿಜ ಮಾಡಿದರು. ಹೀಗಾಗಿಯೇ ತಮ್ಮ ನೆಲದಲ್ಲಿ ಮುಖ್ಯಮಂತ್ರಿಯವರನ್ನು ಕಂಡ ತಕ್ಷಣ ನೆರೆದಿದ್ದ ಜನಸ್ತೋಮ ಹರ್ಷೋದ್ಗಾರ ಮಾಡಿತು.
ಮೂಢನಂಬಿಕೆಯ ಪ್ರತಿಬಿಂಬದ ನಡುವೆ ಅವರು ಚಾಮರಾಜನಗರಕ್ಕೆ ಭೇಟಿ ನೀಡಿ ಮೌಢ್ಯಕ್ಕೆ ಸೆಡ್ಡು ಹೊಡೆದಿದ್ದಾರೆ. ಅಧಿಕಾರಾವಧಿ ಇನ್ನೂ ನಾಲ್ಕುವರೆ ವರ್ಷವಿದ್ದರೂ ಕುರ್ಚಿ ಕಳೆದುಕೊಳ್ಳುವ ಭೀತಿ ಪಕ್ಕಕ್ಕಿಟ್ಟು ಮೌಢ್ಯತೆ ಅಳಿಸುವ ಕ್ರಾಂತಿಕಾರಿ ಹೆಜ್ಜೆಯಿರಿಸಿದ್ದಾರೆ.
ಸೋಮವಾರ ಚಾಮರಾಜನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ವಿಧವೆಯರು ಮತ್ತು ವಿಚ್ಛೇಧಿತ ಮಹಿಳೆಯರಿಗೆ ಆಸರೆಯಾಗಬಲ್ಲ 'ಮನಸ್ವಿನಿ' ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಕಿಕ್ಕಿರಿದು ತುಂಬಿದ್ದ ಜನಸ್ತೋಮದ ನಡುವೆ ಮಾತನಾಡಿ, ನನಗೆ ಮೌಢ್ಯದ ಬಗ್ಗೆ ನಂಬಿಕೆ ಇಲ್ಲ. ಚಾಮರಾಜನಗರಕ್ಕೆ ಭೇಟಿ ನೀಡಿದ ಮಾತ್ರಕ್ಕೆ ಅಧಿಕಾರ ಕಳೆದುಕೊಳ್ಳುವುದಿಲ್ಲ. ಕೆಲವರು ಇಂಥ ಮೂಢನಂಬಿಕೆಯನ್ನು ಸೃಷ್ಟಿ ಮಾಡಿದ್ದಾರೆ. ಚುನಾವಣಾ ವೇಳೆ ಅಧಿಕಾರ ಬೇಕು ಎಂದು ಬರುತ್ತೇವೆ. ಅಧಿಕಾರ ಸಿಕ್ಕ ಮೇಲೆ ಇದು ಶಾಪಗ್ರಸ್ತ ಎಂದು ಹೀಯಾಳಿಸುತ್ತೇವೆ.
ಚುನಾವಣೆ ಸಂದರ್ಭದಲ್ಲಿ ಪ್ರಚಾರಕ್ಕೆ ಬಂದಾಗ ಕಾಂಗ್ರೆಸ್ ಸರ್ಕಾರ ಬಂದು ನಾನು ಮುಖ್ಯಮಂತ್ರಿಯಾದರೆ ತಕ್ಷಣ ಚಾಮರಾಜನಗರಕ್ಕೆ ಬರುತ್ತೇನೆ ಎಂದು ಭರವಸೆ ನೀಡಿದ್ದೆ. ಇದೀಗ ನಾನು ಧೈರ್ಯದಿಂದ ಬಂದಿದ್ದೇನೆ. ಇಲ್ಲಿಗೆ ಬಂದಿದ್ದರಿಂದ ಇನ್ನೂ ಹೆಚ್ಚಿನ ಅಧಿಕಾರ ಸಿಗಬಹುದು. ಈ ಜಿಲ್ಲೆಯ ಬಗ್ಗೆ ಕೆಲವರು ಕಳಂಕ ತಂದರು. ಅಂಥವರು ಅಧಿಕಾರ ಕಳೆದುಕೊಂಡರು. ಜನರೇ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರು. ಮೌಢ್ಯಗಳು ಅಧಿಕಾರ ನೀಡುವುದಿಲ್ಲ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು ಎಂದರು.
ಜಿಲ್ಲೆಯ ಅಭಿವೃದ್ಧಿಗೆ 1000 ಕೋಟಿ: ಜಿಲ್ಲೆಯ ಸಮಗ್ರ ಅಭಿವೃದ್ದಿಗಾಗಿ ಸರ್ಕಾರ 1000 ಕೋಟಿಗೂ ಅಧಿಕ ಅನುದಾನ ಬಳಕೆ ಮಾಡಲಾಗುತ್ತಿದೆ. ಅವುಗಳ ಪೈಕಿ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಈಗಾಗಲೇ 256 ಕೋಟಿ ಅಂದಾಜು ತಯಾರಿಸಲಾಗಿದ್ದು ಪ್ರಸ್ತುತ 29 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಪ್ರತಿ 6 ಹೋಬಳಿಗೆ ಮೊರಾರ್ಜಿ ವಸತಿ ಶಾಲೆ ತೆರೆಯಲು 50 ಕೋಟಿ ಬಿಡುಗಡೆ ಮಾಡಲಾಗುವುದು. 15 ಕೋಟಿ ಅಂದಾಜಿನಲ್ಲಿ ಬಾಲಕಿಯರ ಸ್ನಾತಕೋತ್ತರ ಬಾಲಕಿಯರ ಕಾಲೇಜು ಸ್ಥಾಪಿಸಲಾಗುವುದು. 4 ತಾಲೂಕುಗಳಲ್ಲಿಯೂ 1 ಕೋಟಿ ಅನುದಾನದಲ್ಲಿ ದೇವರಾಜು ಅರಸು ಅವರ ಭವನ ನಿರ್ಮಾಣ ಮಾಡಲಾಗುವುದು ಎಂದರು.
ಜಿಲ್ಲೆಯಲ್ಲಿ ಮನಸ್ವಿನಿ ಯೋಜನೆಗೆ 4075 ಮಂದಿಯನ್ನು ಗುರುತಿಸಲಾಗಿದೆ. ಬಡತನದಿಂದ ಬಂದವರಿಗೆ ಮಾತ್ರ ಬಡವರ ಕಷ್ಟ ಗೊತ್ತು. ಮದುವೆಯಾಗಿ ಗಂಡನನ್ನು ಬಿಟ್ಟವರು, ಮದುವೆಯಾಗದೇ ಉಳಿದವರು ಸೇರಿದಂತೆ 40 ವರ್ಷ ಮೇಲ್ಪಟ್ಟವರು ಈ ಯೋಜನೆಯ ಸೌಲಭ್ಯ ಪಡೆಯಬಹುದು. ಪ್ರತಿ ತಿಂಗಳು 500 ನೀಡುವ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ. ಈಗಾಗಲೇ ಕಬ್ಬು ಬೆಲೆ ನಿಯಂತ್ರಣ ಕಾಯ್ದೆ ತಂದಿದ್ದು ಇದಕ್ಕಾಗಿ ಒಂದು ಸಮಿತಿ ನೇಮಿಸಲಾಗಿದೆ. ದಸರಾ ಮುಗಿದ ತಕ್ಷಣ ಸಭೆ ಕರೆದ ಕಬ್ಬು ಬೆಲೆ ನಿಗದಿ ಮಾಡಲಾಗುವುದು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


