ಪ್ರಧಾನ ಸುದ್ದಿ

ಬಸವ ಭೂಮಿ ಸಂಪೂರ್ಣ ಬಂದ್

Published On :

ಬಸವನಬಾಗೇವಾಡಿ: 'ಸಿದ್ಧರಾಮೇಶ್ವರ ಚರಿತ್ರೆ' ಕೃತಿಯಲ್ಲಿ ಬಸವಣ್ಣ ಸೇರಿದಂತೆ ವಿವಿಧ ಶರಣರನ್ನು ಅವಮಾನಿಸಿದ್ದನ್ನು ಖಂಡಿಸಿ ಪಟ್ಟಣದ ವಿರಕ್ತಮಠದ ಸಿದ್ಧಲಿಂಗದೇವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸದಸ್ಯರು ಗುರುವಾರ ಕರೆ ನೀಡಿದ್ದ ಬಸವನ ಬಾಗೇವಾಡಿ ಬಂದ್ಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಯಿತು.
ಬಸವನ ಬಾಗೇವಾಡಿಯಲ್ಲಿ ಎಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಬಸ್ ಸೇರಿದಂತೆ ಖಾಸಗಿ ವಾಹನಗಳ ಸಂಚಾರವೂ ಸ್ಥಗಿತಗೊಂಡಿತ್ತು. ಬೇರೆ ಊರುಗಳಿಂದ ಬ.ಬಾಗೇವಾಡಿಗೆ ಆಗಮಿಸಬೇಕಿದ್ದ ಜನರು ಪಟ್ಟಣದ ಹೊರವಲಯದಲ್ಲಿಯೇ ಇಳಿದು ನಡೆದುಕೊಂಡು ಬಂದರು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆಕಾರರು ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಬಂದ್ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದೆ, ಬಂದ್ ಶಾಂತಿಯುತವಾಗಿತ್ತು.
ಬಸವೇಶ್ವರ ವೃತ್ತದಲ್ಲಿ ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಸಾಹಿತಿ ಲ.ರು. ಗೊಳಸಂಗಿ, ಸೊಲ್ಲಾಪುರದಿಂದ ಪ್ರಕಟಗೊಂಡಿರುವ 'ಸಿದ್ಧರಾಮ ಚರಿತೆ' ಕೃತಿಯಲ್ಲಿ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಕುರಿತು ಅವಮಾನಕರ ರೀತಿಯಲ್ಲಿ ಬರೆಯಲಾಗಿದೆ. ಇದು ಬಸವ ಭಕ್ತರಿಗಷ್ಟೇ ಅಲ್ಲ, ಇಡೀ ಮನುಕುಲಕ್ಕೆ ನೋವಾಗಿದೆ. ಬಸವಾದಿ ಶರಣರು ಸಾಮಾಜಿಕ ಸುಧಾರಣೆಗಾಗಿ ಶ್ರಮಿಸಿದರು. ಅವರು ಸಮಾಜದಲ್ಲಿ ಸಮಾನತೆ, ಸಾಮರಸ್ಯಕ್ಕಾಗಿ ವಚನಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿದ್ದಾರೆ. ಆದರೆ ಇಂದು ಕೆಲವರು ಬಸವಾದಿ ಶರಣರನ್ನು ಅವಮಾನಿಸುವ ರೀತಿಯಲ್ಲಿ ಕೃತಿಗಳನ್ನು, ಚಿತ್ರಗಳನ್ನು ಹೊರತರುತ್ತಿರುವುದು ಖಂಡನೀಯ ಎಂದರು.
ನೇತೃತ್ವ ವಹಿಸಿದ್ದ ಸಿದ್ದಲಿಂಗದೇವರು ಮಾತನಾಡಿ, ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಸೇರಿದಂತೆ ಶರಣರ ಬಗ್ಗೆ ವಿವಾದತ್ಮಾಕ ವಿವರಣೆ ಇರುವ 'ಸಿದ್ಧರಾಮೇಶ್ವರ ಚರಿತ್ರೆ' ಕೃತಿಯನ್ನು ಮಹಾರಾಷ್ಟ್ರ ಹಾಗೂ ಕರ್ನಾಟಕ ಸರ್ಕಾರಗಳು ಮುಟ್ಟುಗೋಲು ಹಾಕಬೇಕು. ಇತಿಹಾಸವನ್ನು ತಿರುಚುವ ಕೃತಿಗಳ ಮಾರಾಟವನ್ನು ಸರ್ಕಾರ ನಿಷೇಧಿಸಬೇಕು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.