ಅಕ್ರಮಕ್ಕೆ ಗಿಫ್ಟ್!
ಕನ್ನಡಪ್ರಭ ವಾರ್ತೆ ಬೆಂಗಳೂರು ಅ. 11-
ರಾಜ್ಯದ ನಗರ ಪ್ರದೇಶದ ಅಕ್ರಮ ಕಟ್ಟಡಗಳ ಮಾಲೀಕರಿಗೆ ದಸರಾ ಕೊಡುಗೆ ನೀಡಿರುವ ರಾಜ್ಯ ಸರ್ಕಾರ, ಬೈಲಾ ಉಲ್ಲಂಘಿಸಿರುವ ಕಟ್ಟಡಗಳನ್ನು ಸಕ್ರಮ ಮಾಡಲು ಸರ್ಕಾರಿ ಅಧಿಸೂಚನೆ ಹೊರಡಿಸಲು ನಿರ್ಧರಿಸಿದೆ.
ನಗರ-ಗ್ರಾಮ ಪ್ರದೇಶಗಳಲ್ಲಿ ಸಕ್ಷಮ ಪ್ರಾಧಿಕಾರದಿಂದ ನಕ್ಷೆ ಪಡೆದು ನಿರ್ಮಿಸಲಾಗಿರುವ ಕಟ್ಟಡಗಳಲ್ಲಿ ಬೈಲಾ ಉಲ್ಲಂಘನೆಯಾಗಿದ್ದರೆ ಅದನ್ನು ಸಕ್ರಮಗೊಳಿಸಲಾಗುತ್ತದೆ. ನಗರ ಮತ್ತು ಗ್ರಾಮಾಂತರ ಯೋಜನೆಯ ಕಾಯಿದೆಯನ್ವಯ ನಕ್ಷೆ ಪಡೆದು ನಿರ್ಮಿಸಲಾಗಿರುವ ಕಟ್ಟಡಗಳಲ್ಲಿ ಬೈಲಾ ಉಲ್ಲಂಘನೆಯಾಗಿದ್ದರೆ ಸಕ್ರಮವಾಗುತ್ತದೆ.
ಈ ಅಕ್ರಮ-ಸಕ್ರಮ ಯೋಜನೆಯಂತೆ ವಸತಿ ಕಟ್ಟಡಗಳಲ್ಲಿ ಶೇ.50ರವರೆಗಿನ ಉಲ್ಲಂಘನೆ ಹಾಗೂ ವಾಣಿಜ್ಯ ಕಟ್ಟಡಗಳಲ್ಲಿ ಶೇ.25ರವರೆಗಿನ ಉಲ್ಲಂಘನೆ ಸಕ್ರಮವಾಗುತ್ತದೆ. ಈ ಉಲ್ಲಂಘನೆಯ ಅವಧಿ ಹಿಂದಿನ ಸರ್ಕಾರದಲ್ಲಿ 2009ರ ಡಿಸೆಂಬರ್ ಎಂದು ನಮೂದಿಸಲಾಗಿತ್ತು. ಆದರೆ, ಸಚಿವ ಸಂಪುಟ ಶುಕ್ರವಾರ ಕೈಗೊಂಡಿರುವ ನಿರ್ಧಾರದ ಪ್ರಕಾರ, ಅಕ್ರಮ-ಸಕ್ರಮಕ್ಕೆ ರಾಜ್ಯಪಾಲರಿಂದ ಸಹಿಪಡೆದು ಹೊರಡಿಸುವ ಅಧಿಸೂಚನೆಯ ದಿನವರೆಗಿನ ಅಕ್ರಮ ಸಕ್ರಮವಾಗುತ್ತದೆ.
ಅಕ್ರಮ-ಸಕ್ರಮ ಕಾಯಿದೆಗೆ ರಾಜ್ಯಪಾಲರು ಸಹಿ ಹಾಕಿದ್ದಾರೆ. ಇದೀಗ ನಿಯಮಗಳನ್ನು ರೂಪಿಸಿ ಅಧಿಸೂಚನೆ ಹೊರಡಿಸುವುದಷ್ಟೇ ಬಾಕಿ ಉಳಿದಿದೆ. ಈ ನಿಯಮಗಳಲ್ಲೇ ದಿನಾಂಕ, ಶುಲ್ಕ ಹಾಗೂ ಅರ್ಜಿ ಸಲ್ಲಿಸುವ ಮಾಹಿತಿಯನ್ನು ತಿಳಿಸಲಾಗುತ್ತದೆ. ನಿಯಮಾವಳಿಗಳು ಅಂತಿಮವಾಗಿದ್ದು, ಸದ್ಯದಲ್ಲಿಯೇ ಸರ್ಕಾರಿ ಅಧಿಸೂಚನೆ ಹೊರಬೀಳಲಿದೆ ಎಂದು ಸಚಿವ ಸಂಪುಟ ನಿರ್ಧಾರವನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಟಿ.ಬಿ. ಜಯಚಂದ್ರ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ವಿವರಿಸಿದರು.
ಕಾಲುಬಾಯಿಗೆ ಪರಿಹಾರ
ರಾಜ್ಯದಲ್ಲಿ ಕಾಲುಬಾಯಿ ರೋಗದಿಂದ ಅಸುನೀಗಿರುವ ಹಸುಗಳಿಗೆ ತಲಾ 25 ಸಾವಿರ ರುಪಾಯಿ ಪರಿಹಾರ ನೀಡಲು ಸಚಿವ ಸಂಪುಟ ನಿರ್ಧರಿಸಿದೆ. ಕಾಲುಬಾಯಿ ರೋಗದಿಂದ ಅಸುನೀಗಿರುವ ಹಸುವಿಗೆ 25 ಸಾವಿರ ಪರಿಹಾರ ನೀಡಲಾಗುತ್ತದೆ. ಕರುಗಳಿಗೆ 10 ಅಥವಾ 15 ಸಾವಿರ ನೀಡಲಾಗುತ್ತದೆ. ಎಮ್ಮೆ ಹಾಗೂ ಇತರೆ ರಾಸುಗಳಿಗೆ ಯಾವ ಪ್ರಮಾಣದಲ್ಲಿ ಪರಿಹಾರದ ಹಣ ನೀಡಲಾಗುತ್ತದೆ ಎಂಬುದು ಸರ್ಕಾರಿ ಆದೇಶದಲ್ಲಿ ನಮೂದಿಸಲಾಗುತ್ತದೆ. ವಿಮೆಗೆ ಒಳಪಡುವ ರಾಸುಗಳಿಗೆ ಈ ಪರಿಹಾರ ಅನ್ವಯವಾಗುವುದಿಲ್ಲ ಎಂದು ಪಶುಸಂಗೋಪನೆ ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು.
ರಾಜ್ಯದಲ್ಲಿ ಕಾಲುಬಾಯಿ ರೋಗದಿಂದ 2000ಕ್ಕೂ ಹೆಚ್ಚು ಹಸುಗಳು ಮರಣಹೊಂದಿವೆ. ನಿಖರವಾದ ಸಂಖ್ಯೆಯ ಅರಿವಿಲ್ಲ. ಹಸುಗಳು ಕಾಲುಬಾಯಿ ರೋಗದಿಂದಲೇ ಮೃತಪಟ್ಟಿವೆ ಎಂಬುದನ್ನು ದೃಢೀಕರಣ ಪತ್ರ ನೀಡಿದ ಮೇಲೆ ಪರಿಹಾರ ನೀಡಲಾಗುತ್ತದೆ. ಬೋಗಸ್ ಪರಿಹಾರ ವಿತರಣೆ ಆಗದಂತೆ ತಡೆಗಟ್ಟಲೂ ಕ್ರಮ ಕೈಗೊಳ್ಳಲಾಗಿದೆ. ಅರ್ಹರಿಗೆ ಪರಿಹಾರ ಸಿಕ್ಕೇ ಸಿಗುತ್ತದೆ. ಕೆಎಂಎಫ್, ಸಂಘ ಹಾಗೂ ಇಲಾಖೆಯಿಂದ ಪರಿಹಾರ ನೀಡಲಾಗುತ್ತದೆ ಎಂದು ಹೇಳಿದರು.
ರಾಜ್ಯಕ್ಕೆ ಲಭ್ಯವಾಗುವ ರೇಲ್ವೆ ಯೋಜನೆಗಳನ್ನು ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಹೆಚ್ಚು ಮಾಡಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಬಜೆಟ್ನಲ್ಲಿ 350 ಕೋಟಿ ಹಣವನ್ನು ಮೀಸಲಿಟ್ಟಿದ್ದು, ಇದೀಗ ಹೆಚ್ಚುವರಿಯಾಗಿ 200 ಕೋಟಿ ನೀಡಲು ಸಚಿವ ಸಂಪುಟ ನಿರ್ಧರಿಸಿದೆ.
ರು. 1 ಸಾವಿರ ಪ್ರೋತ್ಸಾಹ ಧನ
35 ಸಾವಿರ ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರದ ವತಿಯಿಂದ ರು. 1000 ಪ್ರೋತ್ಸಾಹ ಧನ ನೀಡಲು ಸಚಿವ ಸಂಪುಟ ನಿರ್ಧರಿಸಿದ್ದು, ಇದಕ್ಕಾಗಿ ಐದು ಕೋಟಿ ಹೆಚ್ಚುವರಿ ಹೊರೆಯಾಗಲಿದೆ. ಸೀಮೆಎಣ್ಣೆ ವಿತರಣೆಗೆ ಹೊಸ ನೀತಿಯನ್ನು ರೂಪಿಸಲು ನಿರ್ಧರಿಸಲಾಗಿದ್ದು, ಎಪಿಎಲ್, ಬಿಪಿಎಲ್ನಲ್ಲಿ ಸದಸ್ಯರನುಸಾರ ಸೀಮೆಎಣ್ಣೆ ಹಂಚಿಕೆಗೆ ನಿಯಮ ರೂಪಿಸಲಾಗುತ್ತದೆ. ಮೀನುಗಾರರ ಬೋಟ್ಗಳಿಗೆ 150 ಲೀಟರ್ ಬದಲು 300 ಲೀಟರ್ ಸೀಮೆಎಣ್ಣೆ ನೀಡಲಾಗುತ್ತದೆ. ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಿಸಲಾಗುವ ಆಹಾರಧಾನ್ಯಗಳ ಮೇಲೆ ನಿಗಾವಹಿಸಲು ರಾಜ್ಯ, ಜಿಲ್ಲಾ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗುತ್ತದೆ. ಆಯಾ ಪಂಚಾಯಿತಿಗಳ ಅಧ್ಯಕ್ಷರ ನೇತೃತ್ವದಲ್ಲಿ ಸಮಿತಿ ರಚಿಸಿ, ಪ.ಜಾ., ಪಂಗಡ ಹಾಗೂ ಮಹಿಳೆಯರು ಸದಸ್ಯರಾಗಿರುತ್ತಾರೆ. ಅವರು ಪಡಿತರ ವ್ಯವಸ್ಥೆ ಬಗ್ಗೆ ನಿಗಾ ವಹಿಸಲಿದ್ದಾರೆ. ಕರಾವಳಿ ಭಾಗದಲ್ಲಿ ಎಂಡೋಸಲ್ಫಾನ್ ಪೀಡಿತರ ಪುನರ್ವಸತಿಗಾಗಿ ಸರ್ಕಾರ ಐದು ಕೋಟಿ ರುಪಾಯಿಗಳನ್ನು ಮೀಸಲಿಡಲಾಗಿತ್ತು. ಈ ಮೊತ್ತ ಸಾಲುವುದಿಲ್ಲ ಎಂದು ನಿರ್ಧರಿಸಿ, ಈ ಮೊತ್ತವನ್ನು 20 ಕೋಟಿಗೆ ನಿಗದಿ ಮಾಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

