ಪ್ರಧಾನ ಸುದ್ದಿ

ತಾಯಿ ಜೀವಕ್ಕಿಲ್ಲ ಬೆಲೆ!

Published On :

ಕ.ಪ್ರ.ವಾರ್ತೆ , ಕೊಪ್ಪಳ , ಅ. 23
ವಿಶ್ವಸಂಸ್ಥೆ ಸಹಕಾರದೊಂದಿಗೆ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಸೇರಿದಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತಾಯಿ ಮರಣ ಪ್ರಮಾಣ ತಗ್ಗಿಸಲು ಅನೇಕ ಯೋಜನೆಗಳನ್ನೂ ಜಾರಿಗೊಳಿಸಿದರೂ ಫಲ ನೀಡುತ್ತಿಲ್ಲ. ರಾಜ್ಯವೂ ಸೇರಿದಂತೆ ದೇಶಾದ್ಯಂತ ತಾಯಿ ಮರಣ ಪ್ರಮಾಣ ಹೆಚ್ಚುತ್ತಲೇ ಇದೆ.
ದೇಶದಲ್ಲಿ ಮೃತಪಡುವ ತಾಯಿ ಮರಣ ಪ್ರಮಾಣಕ್ಕೆ ಹೋಲಿಸಿದಲ್ಲಿ ರಾಜ್ಯದಲ್ಲಿ ಈ ಸಂಖ್ಯೆ ಕಡಿಮೆ ಇದ್ದರೂ, ಗುಲ್ಬರ್ಗ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಇದರ ಸರಾಸರಿ ಪ್ರಮಾಣ ದೇಶದ ಸರಾಸರಿ ಸಾವಿನ ಪ್ರಮಾಣಕ್ಕಿಂತಲೂ ದುಪ್ಪಟ್ಟಾಗಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ.
ಆರೋಗ್ಯ ಇಲಾಖೆಯೇ ನೀಡಿರುವ ಮಾಹಿತಿಯಂತೆ ದೇಶದಲ್ಲಿ 2012-13ರಲ್ಲಿ ತಾಯಿಯ ಮರಣ ಪ್ರಮಾಣ ಲಕ್ಷಕ್ಕೆ ತಾಯಿ ಮರಣ ಸರಾಸರಿ ದರ 212 ಇದ್ದರೆ, ರಾಜ್ಯದಲ್ಲಿ 147. ಇದು ಮೇಲ್ನೋಟಕ್ಕೆ ಸಮಾಧಾನಕರವಾಗಿದ್ದರೂ ಜಿಲ್ಲಾವಾರು ಲೆಕ್ಕಾಚಾರವನ್ನು ಗಣನೆಗೆ ತೆಗೆದುಕೊಂಡರೆ ಬೆಚ್ಚಿ ಬೀಳುವಂಥ ಅಂಶಗಳು ಬೆಳಕಿಗೆ ಬರುತ್ತವೆ.
ಗುಲ್ಬರ್ಗ ಜಿಲ್ಲೆಯಲ್ಲಿ ಈ ಮರಣ ದರ ವರ್ಷಕ್ಕೆ 484.13 ಇದ್ದರೆ, ಬೆಳಗಾವಿ ಜಿಲ್ಲೆಯಲ್ಲಿ 386.80. ಹಾಗೆಯೇ ಬಾಗಲಕೋಟೆ ಜಿಲ್ಲೆಯಲ್ಲಿ 381.53 ಇದ್ದರೆ, ಧಾರವಾಡ ಜಿಲ್ಲೆಯಲ್ಲಿ ಈ ದರ 317.91. ಹೀಗೆ ರಾಜ್ಯದ ಸುಮಾರು ಅರ್ಧದಷ್ಟು ಜಿಲ್ಲೆಗಳಲ್ಲಿ ತಾಯಿ ಮರಣ ದರ ರಾಜ್ಯ ಮತ್ತು ರಾಷ್ಟ್ರೀಯ ಸರಾಸರಿಗಿಂತಲೂ ದುಪ್ಪಟ್ಟಿದೆ. ರಾಮನಗರ ಜಿಲ್ಲೆಯಲ್ಲಿ ಮಾತ್ರ ಈ ಪ್ರಮಾಣ ಕೇವಲ 3.19 ರಷ್ಟಿದೆ.
ತಾಯಿಯ ಮರಣ ಎಂದರೇನು?
ಹೆರಿಗೆ ಸಮಯದಲ್ಲಿ ಮಹಿಳೆ ಮರಣ ಹೊಂದುವುದನ್ನು ತಾಯಿ ಮರಣ ಎನ್ನಲಾಗುತ್ತದೆ. ಹೆರಿಗೆಯಾಗುವ ಹಾಗೂ ನಂತರ 42 ದಿನಗಳ ಅವಧಿಯಲ್ಲಿ ಹೆರಿಗೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಮಹಿಳೆ ಮರಣ ಹೊಂದಿರುವ ಪ್ರಕರಣವನ್ನು ತಾಯಿ ಸಾವು ಎಂದು ಪರಿಗಣಿಸಲಾಗುತ್ತದೆ. ಇದೇ ಅವಧಿಯಲ್ಲಿ ತಾಯಿ ಹೃದಯಾಘಾತವಾಗಿ ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳುವುದು ಸೇರಿದಂತೆ ಇನ್ನಿತರೆ ಕಾರಣಗಳಿಗೆ ಮೃತಪಟ್ಟರೆ ಅಂಥ ಸಾವನ್ನು ಈ ವ್ಯಾಪ್ತಿಯೊಳಗೆ ಸೇರಿಸುವುದಿಲ್ಲ.
ಕಾರಣವೇನು?
ಗರ್ಭಿಣಿಯಾಗಿರುವಾಗ ಸೂಕ್ತ ಪೌಷ್ಟಿಕಾಂಶಗಳು ದೊರೆಯದಿರುವುದು, ಸರಿಯಾದ ಚಿಕಿತ್ಸೆ ಸಿಗದೆ ಇರುವುದು ತಾಯಿ ಸಾವಿಗೆ ಪ್ರಮುಖ ಕಾರಣ. ಇನ್ನು ವಿಶೇಷವಾಗಿ ಅಶಕ್ತ ಮಹಿಳೆಯರು ಇಂಥ ಸಾವಿಗೆ ತುತ್ತಾಗುತ್ತಾರೆ. ಹೀಗಾಗಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಾಯಿಯ ಮರಣ ತಡೆಯಲು ವಿಶೇಷ ಒತ್ತು ನೀಡುತ್ತವೆ. ಇದನ್ನು ವಿಶ್ವಸಂಸ್ಥೆಯೂ ಗಮನಿಸುತ್ತದೆ.
ಮರಣ ದರ ಕಂಡು ಹಿಡಿಯೋದು ಹೇಗೆ?
ಹೆರಿಗೆಯ ವೇಳೆಯ ಸಮಸ್ಯೆಗಳಿಂದ ಮೃತಳಾಗುವ ಮಹಿಳೆಯ ಸಾವಿನ ಪ್ರಮಾಣವನ್ನು ಕಂಡು ಹಿಡಿಯಲು ವಿಶ್ವಸಂಸ್ಥೆ ಸೂತ್ರವೊಂದನ್ನು ರೂಪಿಸಿದೆ. ಒಂದು ನಿರ್ದಿಷ್ಟ ಪ್ರದೇಶದಲ್ಲಿ ಮರಣ ಹೊಂದುವ ತಾಯಿಯರ ಮರಣ ಸಂಖ್ಯೆಯನ್ನು, ಅದೇ ಪ್ರದೇಶದಲ್ಲಿ ಹೆರಿಗೆಯಾಗುವ ಸಂಖ್ಯೆಯಿಂದ ಭಾಗಿಸಿ, ನಂತರ ಲಕ್ಷದಿಂದ ಗುಣಿಸಿದರೆ ಬರುವ ಸಂಖ್ಯೆಯನ್ನು ತಾಯಿಯ ಮರಣ ದರ ಎಂದು ಪರಿಗಣಿಸಲಾಗುತ್ತದೆ. ಸೂತ್ರ ಹೀಗಿದೆ: ತಾಯಿಯ ಮರಣ ಪ್ರಮಾಣ(ಎಂಎಂಆರ್) ವಾರ್ಷಿಕವಾಗಿ ನಿರ್ದಿಷ್ಟ ಪ್ರದೇಶದಲ್ಲಿ ಮೃತಪಟ್ಟ ತಾಯಿಂದಿರ ಸಂಖ್ಯೆ ÷ ವಾರ್ಷಿಕವಾಗಿ ಅದೇ ನಿರ್ದಿಷ್ಟ ಪ್ರದೇಶದಲ್ಲಿ ಹೆರಿಗೆಯಾದವರ ಸಂಖ್ಯೆ ್ಗ 100000 ಹೆರಿಗೆಗಳು.
ನಗರ ಯೋಜನೆ ವಿಸ್ತರಣೆ
ತಾಯಿ ಮರಣವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ವಿಶ್ವ ಸಂಸ್ಥೆಯ ಸಹಯೋಗದಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನವನ್ನು 2005ರಲ್ಲಿ ಪ್ರಾರಂಭಿಸಿತು. ಈ ಯೋಜನೆಯ ಗುರಿ 2012ರ ವೇಳೆ ತಾಯಿ ಮರಣ ದರವನ್ನು ನೂರಕ್ಕೂ ಕಡಿಮೆ ಮಾಡುವ ಗುರಿ ಹೊಂದಿತ್ತು. ಆದರೆ, ಗುರಿ ತಲುಪದ ಕಾರಣ ಯೋಜನೆಯನ್ನು ನಗರ ಪ್ರದೇಶಗಳಿಗೂ ವಿಸ್ತರಿಸಲಾಗಿದೆ.
ದೇಶದ ಅಂಕಿ ಸಂಖ್ಯೆಗೆ ಹೋಲಿಸಿದಲ್ಲಿ ರಾಜ್ಯದಲ್ಲಿ ತಾಯಿ ಮರಣ ದರ ಸರಾಸರಿ ಕಡಿಮೆ ಇದೆ. ಆದರೆ, ಕೆಲವೊಂದು ಜಿಲ್ಲೆಯಲ್ಲಿ ಇದರ ಪ್ರಮಾಣ ಅಧಿಕವಾಗಿದೆ. ಆದರೆ, ಇಲ್ಲಿ ವಿವಿಧ ಜಿಲ್ಲೆಯವರು ಆಸ್ಪತ್ರೆಗೆಂದು ಆಗಮಿಸಿದಾಗ ಸಂಭವಿಸುವ ಸಾವು ಇದೇ ಜಿಲ್ಲೆಯ ವ್ಯಾಪ್ತಿಗೆ ಬರುವುದರಿಂದ ಹೀಗಾಗುತ್ತದೆ.
- ರಮೇಶ ಮೂಲಿಮನಿ, ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯಾಧಿಕಾರಿ, ಕೊಪ್ಪಳ.

2012-13ನೇ ಸಾಲಿನ ಜಿಲ್ಲಾವಾರು ತಾಯಿ ಮರಣ ಪ್ರಮಾಣ
ಜಿಲ್ಲೆ     ಲೈವ್ ಬರ್ತ್    ತಾಯಿಮರಣ    ದರ
ರಾಮನಗರ     93977    3    3.19
ಚಾಮರಾಜನ ನಗರ    35213    8    22.72
ಉಡುಪಿ    25129    6    23.88
ಉತ್ತರ ಕನ್ನಡ    32137    9    28.01
ಹಾಸನ    49358    15    30.39
ಚಿತ್ರದುರ್ಗ    78038    24    30.75
ಹಾವೇರಿ    41185    13    31.56
ಮಂಡ್ಯ    24509    8    32.64
ಚಿಕ್ಕಮಗಳೂರು    30023    10    33.31
ಚಿಕ್ಕಬಳ್ಳಾಪುರ    37335    13    34.82
ಕೊಡಗು    17389    7    40.26
ಕೊಪ್ಪಳ     34517    17    49.25
ಕೋಲಾರ    32070    20    62.36
ದಾವಣಗೆರೆ    45078    32    70.99
ದ.ಕನ್ನಡ    25716    20    77.77
ಗದಗ    20965    17    81.09
ತುಮಕೂರು    16807    14    83.30
ಯಾದಗಿರಿ    28051    28    99.82
ಬೆಂಗಳೂರು(ಗ್ರಾ)    9726    10    102.8
ಬಿಜಾಪುರ    21718    30    138.13
ಬೀದರ್    16078    24    149.27
ರಾಯಚೂರು    23456    37     157 .74
ಮೈಸೂರು    15862    29    182.83
ಬೆಂಗಳೂರು(ನ)    40318    78    193.46
ಶಿವಮೊಗ್ಗ     11962    28    234.07
ಬಳ್ಳಾರಿ    20499    63    307.33
ಧಾರವಾಡ    24535    78    317.91
ಬಾಗಲಕೋಟೆ    7601    29    381.53
ಬೆಳಗಾವಿ    24302    94    386.80
ಗುಲ್ಬರ್ಗ    10741    52    484.13
ಒಟ್ಟು    894295     816     91.25
 ರಾಷ್ಟ್ರವ್ಯಾಪಿ ವಿವರ
ವಿವರ     2010-11    2011-12    2012-13
ರಾಷ್ಟ್ರ      395    310    212
ರಾಜ್ಯ     225    213    147


-ಸೋಮರಡ್ಡಿ ಅಳವಂಡಿ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.