ಪ್ರಧಾನ ಸುದ್ದಿ

ಬಾಂಬಿಗೂ ಜಗ್ಗದ ಹೂಂಕಾರ

ಬಾಂಬಿಗೂ ಜಗ್ಗದ ಹೂಂಕಾರ
Published On :

ಪಿಟಿಐ , ಪಟನಾ/ನವದೆಹಲಿ , ಅ.27
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ 'ಹೂಂಕಾರ್ ರ್ಯಾಲಿ' ಆರಂಭಕ್ಕೆ ಮುನ್ನವೇ ಬಿಹಾರ ರಾಜಧಾನಿ ಪಟನಾದಲ್ಲಿ 7 ಅಲ್ಪಪ್ರಮಾಣದ ಸರಣಿ ಸ್ಫೋಟಗಳು ಸಂಭವಿಸಿವೆ. ಈ ದುರಂತದಲ್ಲಿ ಐವರು ಅಸುನೀಗಿದ್ದಾರೆ. 83 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರು ಇಲ್ಲಿನ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಒಬ್ಬನ ಸ್ಥಿತಿ ಗಂಭೀರವಾಗಿದೆ. ಬೆಳಗ್ಗೆ 9.30ರ ಸುಮಾರಿಗೆ ಪಟನಾ ರೇಲ್ವೆ ನಿಲ್ದಾಣದ ಪ್ಲಾಟ್‌ಫಾರಂ ಸಂಖ್ಯೆ 10ರಲ್ಲಿ ಮೊದಲ ಸ್ಫೋಟ ಸಂಭವಿಸಿತು. ಇದಾದ ಬಳಿಕ ರ್ಯಾಲಿ ನಡೆಯಬೇಕಾಗಿದ್ದ ಬೆಳಗ್ಗೆ 11.40ರಿಂದ 11.45ರ ನಡುವಿನ ಅವಧಿಯಲ್ಲಿ ಗಾಂಧಿ ಮೈದಾನ ಸುತ್ತಮುತ್ತ ಆರು ಅಲ್ಪಪ್ರಮಾಣದ ಸ್ಫೋಟಗಳು ಸಂಭವಿಸಿದವು.
ಘಟನೆ ನಡೆದ ಕೂಡಲೇ ಬಿಹಾರ ಮತ್ತು ಕೇಂದ್ರ ರಕ್ಷಣಾ ಕಾರ್ಯಾಚರಣೆಗೆ ಇಳಿದವು. ನವದೆಹಲಿಯಿಂದ ರಾಷ್ಟ್ರೀಯ ತನಿಖಾ ದಳ, ರಾಷ್ಟ್ರೀಯ ಭದ್ರತಾ ಪಡೆಗಳನ್ನು ತುರ್ತು ಆದ್ಯತೆಯ ಮೇಲೆ ಬಿಹಾರಕ್ಕೆ ಕಳುಹಿಸಿ ಕೊಡಲಾಯಿತು.
ಸ್ಥಳಕ್ಕೆ ದೌಡು:  ರೇಲ್ವೆ ನಿಲ್ದಾಣದಲ್ಲಿ ಮೊದಲ ಸ್ಫೋಟ ಸಂಭವಿಸುತ್ತಿದ್ದಂತೆ ಬಾಂಬ್ ನಿಷ್ಕ್ರಿಯ ದಳ, ಪಟನಾ ಪೊಲೀಸರು ಸ್ಥಳಕ್ಕೆ ಧಾವಿಸಿದರು.             
ಇದೇ ಸಂದರ್ಭದಲ್ಲಿ ಶೌಚಾಲಯದಲ್ಲಿ ಇರಿಸಲಾಗಿದ್ದ ಬಾಂಬ್ ಒಂದನ್ನು ನಿಷ್ಕ್ರಿಯಗೊಳಿಸುವ ವೇಳೆ ಭದ್ರತಾ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ.
ಸಿಕ್ಕಿತು ಬಾಂಬ್: ರ್ಯಾಲಿ ನಡೆಯಬೇಕಾಗಿದ್ದ ಸ್ಥಳದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ಫೋಟಗಳು ಸಂಭವಿಸುತ್ತಿದ್ದಂತೆ ವಿಶೇಷ ಪೊಲೀಸ್ ಪಡೆ ಸ್ಥಳವನ್ನು ಸುಪರ್ದಿಗೆ ತೆಗೆದುಕೊಂಡಿತು. ಸ್ಫೋಟದ ಬಳಿಕ ಗಾಂಧಿ ಮೈದಾನದ ಸುತ್ತಮುತ್ತ ಹೊಗೆ ಆವರಿಸಿಕೊಂಡಿತ್ತು.  ಬಾಂಬ್ ನಿಷ್ಕ್ರಿಯ ದಳ, ಪಟನಾ ಪೊಲೀಸರು, ಶ್ವಾನದಳ ಸ್ಥಳದಲ್ಲಿ ಬಾಂಬ್ ಇದೆಯೇ ಎಂದು ಶೋಧ ಕಾರ್ಯಾಚರಣೆ ನಡೆಸಲಾರಂಭಿಸಿದರು. ಈ ಸಂದರ್ಭದಲ್ಲಿ ಸಜೀವ ಬಾಂಬ್ ಒಂದು ಪತ್ತೆಯಾಯಿತು. ಅದನ್ನು ಬಾಂಬ್ ನಿಷ್ಕ್ರಿಯ ದಳ ನಿಷ್ಕ್ರಿಯಗೊಳಿಸಿತು.
ವರದಿಗೆ ಸೂಚನೆ: ಘಟನೆ ಬಗ್ಗೆ ಸಮಗ್ರ ವರದಿ ನೀಡುವಂತೆ ಕೇಂದ್ರ ಸರ್ಕಾರ ಬಿಹಾರ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದೆ.
ಪೂರ್ವ ಸೂಚನೆ ಇರಲಿಲ್ಲ: ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ನಿತೀಶ್‌ಕುಮಾರ್ ಸ್ಫೋಟ ಸಂಭವಿಸುವ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆಗಳಿಂದ ಯಾವುದೇ ಪೂರ್ವಸೂಚನೆ ಇರಲಿಲ್ಲ ಎಂದಿದ್ದಾರೆ. ಹೀಗಾಗಿ ರ್ಯಾಲಿಗೆ ಭದ್ರತೆ ಒದಗಿಸುವಲ್ಲಿ ಲೋಪವಾಗಿದೆ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು. ಬಿಹಾರದಲ್ಲಿ ಕಾನೂನು ಸುವ್ಯವಸ್ಥೆ ಉಲ್ಲಂಘಿಸುವ ಯತ್ನ ಇದಾಗಿದೆ ಎಂದು ಮುಖ್ಯಮಂತ್ರಿ ಆರೋಪಿಸಿದರು. ಸಾಕಷ್ಟು ಪ್ರಮಾಣದಲ್ಲಿ ಭದ್ರತಾ ಕ್ರಮ ಕೈಗೊಂಡಿದ್ದರೂ ಇಂಥ ಅವಘಡ ಸಂಭವಿಸಿದೆ ಎಂದಾದರೆ ಅದು ನಿಜಕ್ಕೂ ಕಳವಳಕಾರಿ ಎಂದು ಹೇಳಿದರು.
ನಿತೀಶ್ ಜತೆ ಆಡ್ವಾಣಿ ಚರ್ಚೆ: ಘಟನೆ ಬಗ್ಗೆ ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ ತಮ್ಮ ಜತೆ ಚರ್ಚಿಸಿದರು ಎಂದು ನಿತೀಶ್ ಕುಮಾರ್ ತಿಳಿಸಿದರು. ಜತೆಗೆ ಪ್ರಧಾನಿ ಮನಮೋಹನ್ ಸಿಂಗ್ ಕೂಡ ಎಲ್ಲ ರೀತಿಯ ನೆರವು ನೀಡುವ ವಾಗ್ದಾನ ಮಾಡಿದ್ದಾರೆ. ಘಟನೆಯನ್ನು ಖಂಡಿಸಿದ್ದಾರೆ ಎಂದು ನಿತೀಶ್‌ಕುಮಾರ್ ತಿಳಿಸಿದರು. ಘಟನೆ ನಡೆಯುವ ಮೊದಲು ನಿತೀಶ್ ಮುಂಗೇರ್ ಜಿಲ್ಲಾ ಪ್ರವಾಸ ಕೈಗೊಳ್ಳುವ ಸಿದ್ಧತೆಯಲ್ಲಿದ್ದರು. ಸ್ಫೋಟದ ಸುದ್ದಿ ಗೊತ್ತಾಗುತ್ತಿದ್ದಂತೆಯೇ ಕಾರ್ಯಕ್ರಮ ರದ್ದುಗೊಳಿಸಿದರು.
5 ಲಕ್ಷ ಪರಿಹಾರ: ಅಸುನೀಗಿದ ವ್ಯಕ್ತಿಗಳ ಕುಟುಂಬ ಸದಸ್ಯರಿಗೆ 5 ಲಕ್ಷ ಪರಿಹಾರ ನೀಡಲಾಗುತ್ತದೆ. ಜತೆಗೆ ಗಾಯಗೊಂಡವರ ಆಸ್ಪತ್ರೆ ವೆಚ್ಚವನ್ನು ಬಿಹಾರ ಸರ್ಕಾರದ ವತಿಯಿಂದಲೇ ಭರಿಸಲಾಗುತ್ತದೆ ಎಂದು ನಿತೀಶ್ ಕುಮಾರ್ ತಿಳಿಸಿದ್ದಾರೆ.
ಸ್ಫೋಟ ಘಟನೆ ನಿಜಕ್ಕೂ ಖಂಡನೀಯ. ಸ್ಫೋಟ ದುರದೃಷ್ಟಕರ. ಸಾವಿಗೀಡಾದ ಮತ್ತು ಗಾಯಗೊಂಡವರ ಕುಟುಂಬ ಸದಸ್ಯರಿಗೆ ನಾನು ಸಾಂತ್ವನ ಹೇಳಲು ಬಯಸುತ್ತೇನೆ.
- ನರೇಂದ್ರ ಮೋದಿ, ಗುಜರಾತ್ ಮುಖ್ಯಮಂತ್ರಿ

ಇದೊಂದು ಹೇಡಿಗಳ ಕೃತ್ಯ. ಪ್ರಜಾಪ್ರಭುತ್ವ ಮೇಲೆ ನಡೆದ ಗದಾ ಪ್ರಹಾರವಿದು. ಇಂಥ ಘಟನೆಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು.
-ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷೆ

ಘಟನೆ ನಿಜಕ್ಕೂ ಹೇಯ ಹಾಗೂ ಖಂಡನೀಯ. ರಾಷ್ಟ್ರೀಯ ಶಕ್ತಿಗಳ ಮೇಲೆ ಭಯ ಹುಟ್ಟಿಸುವ ಪ್ರಯತ್ನ ಇದಾಗಿದೆ. ಆದರೆ ಇಂಥ ಕೃತ್ಯಗಳಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ.
-ಕೊಚ್ಚಿಯಲ್ಲಿ ಆರ್‌ಎಸ್‌ಎಸ್ ಹೇಳಿಕೆ

ಪಟನಾದಲ್ಲಿ ಮತ್ತೊಂದು ಸ್ಫೋಟವಾಗಿದೆ. ನಾನು ಇದನ್ನು ತೀವ್ರವಾಗಿ ಖಂಡಿಸುತ್ತೇನೆ. ಘಟನೆಗೆ ಕಾರಣರಾದವರನ್ನು ನಿತೀಶ್ ಕಂಡುಹಿಡಿಯಲೇಬೇಕು. ಇಲ್ಲದಿದ್ದರೆ ಬಿಹಾರದಲ್ಲಿ ನರೇಂದ್ರ ಮೋದಿ ಉದಯಿಸಲು ಅವರೇ ಕಾರಣರಾಗುತ್ತಾರೆ
-ದಿಗ್ವಿಜಯ ಸಿಂಗ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ

ಪಟನಾದಲ್ಲಿ ನಡೆದ ಘಟನೆ ಖಂಡನೀಯ. ಸರಣಿ ಸ್ಫೋಟದ ವಿರುದ್ಧ ರಾಜ್ಯ ಬಿಜೆಪಿ ಘಟಕದ ವತಿಯಿಂದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಇಂದು ಪ್ರತಿಭಟನೆ ನಡೆಸಲಿದ್ದೇವೆ.
- ಪ್ರಹ್ಲಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ

ಎಲ್ಲಿ, ಏನಾಯ್ತು?
ಬೆ.9.30     ಮೊದಲ ಸ್ಫೋಟ - ರೇಲ್ವೆ ನಿಲ್ದಾಣದ ಪ್ಲಾಟ್‌ಫಾರಂ 10
ಬೆ.11.40     ಎರಡನೇ ಸ್ಫೋಟ- ಗಾಂಧಿ ಮೈದಾನದ ಉದ್ಯೋಗ ಭವನ
ಮ.12.05     ಮೂರನೇ ಸ್ಫೋಟ- ರೀಜೆಂಟ್ ಸಿನಿಮಾ
ಮ. 12.10    ನಾಲ್ಕನೇ ಸ್ಫೋಟ- ಹಳೆ ಗಾಂಧಿ ಪ್ರತಿಮೆ ಸಮೀಪ
ಮ. 12.15    ಐದನೇ ಸ್ಫೋಟ- ಅವಳಿ ಗೋಪುರ
ಮ. 12.20    ಆರನೇ ಸ್ಫೋಟ- ಎಸ್‌ಬಿಐ ಕಚೇರಿ
ಮ. 12.45    ಏಳನೇ ಸ್ಫೋಟ- ಮಕ್ಕಳ ಉದ್ಯಾನ
ಒಬ್ಬನ ಬಂಧನ, ನಾಲ್ವರು ವಶಕ್ಕೆ
ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ಬಂಧಿಸಲಾಗಿದೆ. ಜತೆಗೆ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ಅವರ ಕೈಯಿಂದ ಕೆಲವೊಂದು ದಾಖಲೆ, ದೂರವಾಣಿ ಸಂಖ್ಯೆಗಳನ್ನು ವಶಕ್ಕೆ ಪಡೆಯಲಾಗಿದೆ. ಅವರಿಗೂ ಪ್ರಕರಣಕ್ಕೂ ಸಂಬಂಧ ಇದೆಯೇ ಎಂಬ ಬಗ್ಗೆ ವಿಚಾರಣೆ ನಡೆಯುತ್ತಿದೆ.
ಕದಲದ ಜನ
ಗಾಳಿಮಾತು ಕೇಳಿ ಮಧ್ಯಪ್ರದೇಶದ ದಟಿಯಾ ಜಿಲ್ಲೆಯ ದೇಗುಲದಲ್ಲಿ 115 ಮಂದಿ ಅಸುನೀಗಿದ್ದರು. ಭಾನುವಾರ ಪಟನಾದಲ್ಲಿ ಆಯೋಜಿಸಲಾಗಿದ್ದ ಮೋದಿಯವರ ರ್ಯಾಲಿಯಲ್ಲಿ 5 ಲಕ್ಷ ಮಂದಿ ಸೇರಿದ್ದರು ಎಂದು ಹೇಳಲಾಗಿದೆ. ಮೈದಾನದ ಆಸುಪಾಸಿನಲ್ಲಿ ಸ್ಫೋಟ ಸಂಭವಿಸಿದರೂ ಅಲ್ಲಿ ಸೇರಿದ್ದ ಜನರು ಕೊಂಚವೂ ಗೊಂದಲ, ಗದ್ದಲಕ್ಕೆ ಎಡೆಮಾಡದಂತೆ ಇದ್ದದ್ದು ಗಮನಾರ್ಹವಾಗಿತ್ತು. ಒಂದು ವೇಳೆ ಅಲ್ಲಿ ಸೇರಿದ್ದ ಜನರು ಗಲಿಬಿಲಿಯಿಂದ ವರ್ತಿಸಿದ್ದರೆ ಭಾರಿ ಪ್ರಾಣ ಹಾನಿ ಸಂಭವಿಸುತ್ತಿತ್ತು. ಗಮನಾರ್ಹ ಅಂಶವೆಂದರೆ ಮೈದಾನದಲ್ಲಿ ಸಂಭವಿಸಿದ್ದು ಒಂದೇ ಸ್ಫೋಟ. ಆದರೆ ಅದರ ತೀವ್ರತೆ ಕಡಿಮೆ ಪ್ರಮಾಣದಲ್ಲಿದ್ದುದರಿಂದ ಜನರಲ್ಲಿ ಹೆಚ್ಚಿನ ಗೊಂದಲ ಉಂಟಾಗಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.