ಪ್ರಧಾನ ಸುದ್ದಿ

ಭಾರತಕ್ಕೆ ಭರ್ಜರಿ ಗೆಲವು

ಭಾರತಕ್ಕೆ ಭರ್ಜರಿ ಗೆಲವು
Published On :

ನಾಗ್ಪುರ: ಜೈಪುರದಲ್ಲಿನ ಐತಿಹಾಸಿಕ ವಿಜಯೋತ್ಸವದ ಸವಿನೆನಪನ್ನು ಮತ್ತೊಮ್ಮೆ ಮೆಲಕು ಹಾಕಿಸಿದ ಭಾರತ ತಂಡದ ಯುವಶಕ್ತಿಯ ಗರ್ಜನೆಯಿಂದ ಕಾಂಗರೂ ಸೇನೆ ಮತ್ತೆ ಕಂಗೆಟ್ಟು ಓಡುವಂತಾಗಿದೆ.
ವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಆರನೇ ಏಕದಿನ ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್‌ಗಳಿಂದ ಆಸ್ಟ್ರೇಲಿಯಾ ವಿರುದ್ಧ ಜಯಭೇರಿ ಬಾರಿಸಿತು. ಆ ಮೂಲಕ ಏಳು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯನ್ನರ ಜೊತೆ 2-2ರಿಂದ  ಸಮಗೌರವ ಸಾಧಿಸಿ ಸರಣಿ ಗೆಲ್ಲುವ ಆಸೆ ಜೀವಂತವಾಗಿರಿಸಿಕೊಂಡಿತು.
ಅಲ್ಲದೇ, ಏಕದಿನ ಕ್ರಿಕೆಟ್‌ನಲ್ಲಿ 350 ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಗುರಿಯನ್ನು ಎರಡು ಬಾರಿ ಯಶಸ್ವಿಯಾಗಿ ಬೆಂಬತ್ತಿದ ಏಕೈಕ ತಂಡ ಎಂಬ  ಹೆಗ್ಗಳಿಕೆಗೂ ಭಾರತ ಪಾತ್ರವಾಯಿತು.
ಹೀಗಾಗಿ, ಬೆಂಗಳೂರಿನಲ್ಲಿ ನವೆಂಬರ್ 2ರಂದು ನಡೆಯಲಿರುವ ಏಳನೇ ಹಾಗೂ ಅಂತಿಮ ಪಂದ್ಯಕ್ಕೆ ಎಲ್ಲಿಲ್ಲದ ಮಹತ್ವ ಬಂದಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡ ಪ್ರವಾಸಿ ಆಸ್ಟ್ರೇಲಿಯಾ, ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 350 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ಭಾರತ ತಂಡ 49.3 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 351 ರನ್ ಪೇರಿಸಿತು.
ವಿದರ್ಭದಲ್ಲಿ ದೊಡ್ಡ ರನ್ ಹೊಳೆಯೇ ಹರಿಯಿತು. ಒಟ್ಟು 701 ರನ್‌ಗಳು ದಾಖಲಾಗಿ 10 ವಿಕೆಟ್‌ಗಳಷ್ಟೇ ಉರುಳಿದವು. 
ಆಸ್ಟ್ರೇಲಿಯಾ ನೀಡಿದ ಬೃಹತ್ ಮೊತ್ತದ ಗುರಿ ಸುಲಭದ್ದಾಗಿರಲಿಲ್ಲ. ಆದರೆ, ಭಾರತದ ಅಗ್ರಕ್ರಮಾಂಕದ ದಾಂಡಿಗರು ಕೆಚ್ಚೆದೆಯಿಂದ ಬ್ಯಾಟಿಂಗ್ ಪ್ರದರ್ಶನ ನೀಡಿ ಆಸ್ಟ್ರೇಲಿಯನ್ನರ ಚಳಿಬಿಡಿಸಿದರು.
ಭಾರತ ತಂಡಕ್ಕೆ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಭದ್ರ ಅಡಿಪಾಯ ಹಾಕಿಕೊಟ್ಟರು.
ಈ ಜೋಡಿ ಮೊದಲ ವಿಕೆಟ್‌ಗೆ 178 ರನ್ ಕಲೆ ಹಾಕಿತು. ಈ ವೇಳೆ 89 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 79 ರನ್ ದಾಖಲಿಸಿದ್ದ ರೋಹಿತ್ ಶರ್ಮಾ, ಎರಾನ್ ಫಿಂಚ್ ಎಸೆತದಲ್ಲಿ ಫಾಕ್ನರ್‌ಗೆ ಕ್ಯಾಚ್ ನೀಡಿದರು.
ಈ  ವೇಳೆ ಕೊಹ್ಲಿ ಹಾಗೂ ಧವನ್ ಜತೆಗೂಡಿ 56 ರನ್‌ಗಳ ಜತೆಯಾಟ ನೀಡಿದರು. ಈ ವೇಳೆ ಏಕದಿನದಲ್ಲಿ 4ನೇ ಶತಕ ದಾಖಲಿಸಿದ ಶಿಖರ್ ಧವನ್, ಫಾಕ್ನರ್ ಎಸೆತದಲ್ಲಿ ಬೌಲ್ಡ್ ಆದರು. ಧವನ್ 102 ಎಸೆತಗಳಲ್ಲಿ 11 ಬೌಂಡರಿ ನೆರವಿನಿಂದ 100 ರನ್ ದಾಖಲಿಸಿದರು. ನಂತರ ಕೊಹ್ಲಿ ಜತೆಯಾದ ಸುರೇಶ್ ರೈನಾ 56 ರನ್‌ಗಳ ಜತೆಯಾಟ ನೀಡಿದರು. ಈ ವೇಳೆ 16 ರನ್ ಗಳಿಸಿದ್ದ ರೈನಾ, ಜಾನ್ಸನ್ ಎಸೆತದಲ್ಲಿ ಔಟಾದರು. ಅದೇ ಓವರ್‌ನಲ್ಲಿ ಯುವರಾಜ್ ಸಿಂಗ್ ಬೌಲ್ಡ್ ಆಗುವ ಮೂಲಕ ನಿರಾಸೆ ಮೂಡಿಸಿದರು.
5ನೇ ವಿಕೆಟ್‌ಗೆ ಜತೆಯಾದ ಕೊಹ್ಲಿ ಹಾಗೂ ಮಹೇಂದ್ರ ಸಿಂಗ್ ಧೋನಿ ಮುರಿಯದ 61 ರನ್ ಜತೆಯಾಟ ನೀಡಿದರು. ಆಗ ಕೊಹ್ಲಿ ತಮ್ಮ ಏಕದಿನ ಕ್ರಿಕೆಟ್‌ನಲ್ಲಿ 17ನೇ ಶತಕ ದಾಖಲಿಸಿದರು. 66 ಎಸೆತಗಳಲ್ಲಿ ಅಜೇಯ 115 ರನ್ ಗಳಿಸಿದ ಕೊಹ್ಲಿ ಪಂದ್ಯದ ಗೆಲವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಂತಿಮವಾಗಿ ಧೋನಿ ಅಜೇಯ 25 ರನ್‌ಗಳಿಸಿ ಅಜೇಯರಾಗುಳಿದರು.
ಈ ಪಂದ್ಯದಲ್ಲಿ ಭಾರತ ತಂಡ ವಿಶ್ವ ಕ್ರಿಕೆಟ್‌ನಲ್ಲಿ ಮೂರನೇ ಅತಿ ದೊಡ್ಡ ಮೊತ್ತವನ್ನು ಯಶಸ್ವಿಯಾಗಿ ಬೆನ್ನತ್ತಿದ ಸಾಧನೆ ಮಾಡಿತು.

ಬೇಯ್ಲಿ ಭರ್ಜರಿ ಆಟ: ಇದಕ್ಕೆ ಮುನ್ನ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಶೇನ್ ವ್ಯಾಟ್ಸನ್ ಹಾಗೂ ನಾಯಕ ಜಾರ್ಜ್ ಬೇಯ್ಲಿ ತಂಡಕ್ಕೆ ಸ್ಫೋಟಕ ಶತಕಗಳ ಮೂಲಕ ತಂಡಕ್ಕೆ ಭಾರಿ ಚೇತರಿಕೆ ನೀಡಿದರು.  ಈ ಜೋಡಿ ಮೂರನೇ ವಿಕೆಟ್‌ಗೆ 168 ರನ್‌ಗಳ ಜತೆಯಾಟ ನೀಡಿ ತಂಡಕ್ಕೆ ಆಧಾವಾದರು.
94 ಎಸೆತಗಳಲ್ಲಿ 13 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 102 ರನ್ ದಾಖಲಿಸಿದ ಶೇನ್ ವ್ಯಾಟ್ಸನ್, ಮೊಹಮದ್ ಶಮಿ ಎಸೆತದಲ್ಲಿ ಬೌಲ್ಡ್ ಆಗುವ ಮೂಲಕ ತಮ್ಮ ಉತ್ತಮ ಇನಿಂಗ್ಸ್‌ಗೆ ತೆರೆ ಎಳೆದರು. ನಂತರ ಬಂದ ಮ್ಯಾಕ್ಸ್‌ವೆಲ್ ಕೇವಲ 9 ರನ್ ಗಳಿಸಿ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದರು.
ಮತ್ತೊಂದೆಡೆ ಬೌಲರ್‌ಗಳನ್ನು ದಂಡಿಸುತ್ತಿದ್ದ ಜಾರ್ಜ್ ಬೇಯ್ಲಿ 114 ಎಸೆತಗಳಲ್ಲಿ 13 ಬೌಂಡರಿ ಹಾಗೂ 6 ಭರ್ಜರಿ ಸಿಕ್ಸರ್ ದಾಖಲಿಸಿದ ಬೇಯ್ಲಿ 156 ರನ್ ದಾಖಲಿಸಿದರು.
ಜಡೇಜಾ 100 ವಿಕೆಟ್: ಆಸೀಸ್ ತಂಡದ ಎರಡು ವಿಕೆಟ್ ಕಬಳಿಸಿದ ಆಲ್ರೌಂಡರ್ ರವೀಂದ್ರ ಜಡೇಜಾ ಏಕದಿನ ಕ್ರಿಕೆಟ್‌ನಲ್ಲಿ 100 ವಿಕೆಟ್‌ಗಳ ಗಡಿ ಮುಟ್ಟಿದ್ದಾರೆ. ಶತಕ ದಾಖಲಿಸಿ ಭಾರತಕ್ಕೆ ಮಾರಕವಾಗಿದ್ದ ಶೇನ್ ವ್ಯಾಟ್ಸನ್ ಹಾಗೂ ಜಾರ್ಜ್ ಬೇಯ್ಲಿ ವಿಕೆಟ್ ಪಡೆದ ಜಡೇಜಾ ವಿಶೇಷ ರೀತಿಯಲ್ಲಿ ನೂರರ ಗಡಿ ಮುಟ್ಟಿದ್ದಾರೆ. ಜಡೇಜಾ ತಮ್ಮ 85ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.

ಸ್ಕೋರ್ ವಿವರ
ಆಸ್ಟ್ರೇಲಿಯಾ 350/6 (50 ಓವರ್)
ಫಿಲ್ ಹ್ಯೂಸ್ ಸಿ ಕೊಹ್ಲಿ ಬಿ ಕುಮಾರ್     13(22)
ಎರಾನ್ ಫಿಂಚ್ ಬಿ ಅಶ್ವಿನ್     20(28)
ಶೇನ್ ವ್ಯಾಟ್ಸನ್ ಬಿ ಮೊಹಮದ್ ಶಮಿ     102(94)
ಜಾರ್ಜ್ ಬೇಯ್ಲಿ ಸಿ ಕೊಹ್ಲಿ ಬಿ ಜಡೇಜಾ     156(114)
ಮ್ಯಾಕ್ಸ್‌ವೆಲ್ ಸಿ ಕುಮಾರ್ ಬಿ ಅಶ್ವಿನ್     9(6)
ವೊಗ್ಸ್ ಅಜೇಯ     44(38)
ಮಿಚೆಲ್ ಜಾನ್ಸನ್ ಸಿ ಧವನ್ ಬಿ ಜಡೇಜಾ     0(1)
ಬ್ರಾಡ್ ಹ್ಯಾಡಿನ್ ಅಜೇಯ     0(0)
ಇತರೆ: ವೈಡ್ 3, ನೊಬಾಲ್ 3     ಒಟ್ಟು 6
ವಿಕೆಟ್ ಪತನ: 1-30, 2-45, 3-213, 4-224, 5-344, 6-346
ಬೌಲಿಂಗ್: ಭುವನೇಶ್ವರ್ 8-0-42-1, ಶಮಿ 8-1-66-1, ಜಡೇಜಾ 10-0-68-2, ಅಶ್ವಿನ್ 10-0-64-2, ಮಿಶ್ರಾ 10-0-78-0, ಕೊಹ್ಲಿ 2-0-15-0, ರೈನಾ 2-0-17-0

ಭಾರತ 351/4 (49.3 ಓವರ್)
ರೋಹಿತ್ ಶರ್ಮಾ ಸಿ ಫಾಕ್ನರ್ ಬಿ ಫಿಂಚ್     79(89)
ಶಿಖರ್ ಧವನ್ ಬಿ ಫಾಕ್ನರ್     100(102)
ವಿರಾಟ್ ಕೊಹ್ಲಿ ಅಜೇಯ     115 (66)
ಸುರೇಶ್ ರೈನಾ ಸಿ ಹ್ಯಾಡಿನ್ ಬಿ ಜಾನ್ಸನ್     16(15)
ಯುವರಾಜ್ ಬಿ ಜಾನ್ಸನ್     0(3)
ಧೋನಿ ಅಜೇಯ     25(23)
ಇತರೆ: (ಲೆಗ್ ಬೈ 8, ವೈಡ್ 7, ನೊಬಾಲ್ 1)    16
ವಿಕೆಟ್ ಪತನ: 1-178, 2-234, 3-290, 4-290
ಬೌಲಿಂಗ್: ಜಾನ್ಸನ್ 10-0-72-2, ಮಕಾಯ್ 7-0-47-0, ಫಾಕ್ನರ್ 9.3-0-73-1, ದೊಹಾರ್ಟಿ 6-0-40-0, ವ್ಯಾಟ್ಸನ್ 6-0-51-0, ಮ್ಯಾಕ್ಸ್‌ವೆಲ್ 7-0-40-0, ಫಿಂಚ್ 4-0-20-1

ಬೆಸ್ಟ್ ಚೇಸ್
ದಕ್ಷಿಣ ಆಫ್ರಿಕಾ 438/9 (434)     ಆಸ್ಟ್ರೇಲಿಯಾ ವಿರುದ್ಧ ಜೊಹಾನ್ಸ್ಬರ್ಗ್ 2006
ಭಾರತ 362/1 (360)     ಆಸ್ಟ್ರೇಲಿಯಾ ವಿರುದ್ಧ ಜೈಪುರ 2013
ಭಾರತ 351/4 (350)     ಆಸ್ಟ್ರೇಲಿಯಾ ವಿರುದ್ಧ ನಾಗ್ಪುರ 2013
ನ್ಯೂಜಿಲೆಂಡ್ 350/9 (347)     ಆಸ್ಟ್ರೇಲಿಯಾ ವಿರುದ್ಧ ಹ್ಯಾಮಿಲ್ಟನ್ 2007
ನ್ಯೂಜಿಲೆಂಡ್ 340/9 (336)     ಆಸ್ಟ್ರೇಲಿಯಾ ಆಕ್ಲೆಂಡ್ 2007

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.