ಪ್ರಧಾನ ಸುದ್ದಿ

ನಾಯಕರ ಬಡಾಯಿ; ಕನ್ನಡ ಬಡಪಾಯಿ

Published On :

ಶಾಲೆಗಳಲ್ಲಿ ನಿತ್ಯ ಕನ್ನಡ ಬೆಳಗದೇ ಇದ್ದರೆ ಕನ್ನಡವೇ ಸತ್ತೀತು!
ರಾಜ್ಯದಲ್ಲಿ ಬರೋಬ್ಬರಿ 60,036 ಪ್ರಾಥಮಿಕ ಶಾಲೆಗಳಿವೆ. 83.95 ಲಕ್ಷ ಮಕ್ಕಳು ಅಲ್ಲಿ ಅಭ್ಯಸಿಸುತ್ತಿದ್ದಾರೆ. ಇವರಲ್ಲಿ 62.11 ಲಕ್ಷ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದಾರೆ. ಉಳಿದ 21.84 ಲಕ್ಷ ಮಕ್ಕಳು ಇಂಗ್ಲಿಷ್, ತಮಿಳು, ತೆಲುಗು, ಉರ್ದು, ಮರಾಠಿ ಹಾಗೂ ಹಿಂದಿ ಮಾಧ್ಯಮದಲ್ಲಿ ಓದುತ್ತಿದ್ದಾರೆ. ಅಂದರೆ ಶೇ.26ರಷ್ಟು ಕನ್ನಡನಾಡಿನ ವಿದ್ಯಾರ್ಥಿಗಳು ಬೇರೆ ವಿಭಾಗದಲ್ಲಿ ಓದುತ್ತಿದ್ದಾರೆ.
ಬಹುತೇಕ ಇತರೆ ಮಾಧ್ಯಮಗಳ ಶಿಕ್ಷಣದಲ್ಲಿ ಕನ್ನಡವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತಿದೆ. ಮಾಧ್ಯಮ ಯಾವುದೇ ಇರಲಿ ಕನ್ನಡ ವಿಷಯವನ್ನು ಕಡ್ಡಾಯಗೊಳಿಸಬೇಕು ಹಾಗೂ ಪ್ರಥಮ ಭಾಷೆಯನ್ನಾಗಿ ಕಲಿಸಬೇಕು ಎನ್ನುವ ವಿಚಾರ ಕೇವಲ ಚುನಾವಣೆ ವಿಷಯವಾಗಷ್ಟೇ ಉಳಿದಿದೆ.
ರಾಜ್ಯದ 60,036 ಶಾಲೆಗಳಲ್ಲಿ 45 ಸಾವಿರ ಶಾಲೆಗಳನ್ನು ಸರ್ಕಾರ ನಡೆಸುತ್ತಿದೆ. ಇದರಲ್ಲಿ 851 ಶಾಲೆಗಳಿಗೆ ಸ್ವಂತ ಕಟ್ಟಡವೇ ಇಲ್ಲ. ಶೇ.35 ಶಾಲೆಗಳಿಗೆ ಆಟದ ಮೈದಾನವಿಲ್ಲ. ಕುಡಿಯುವ ನೀರು, ಶೌಚಾಲಯ ಹಾಗೂ ಗ್ರಂಥಾಯಲಗಳನ್ನು ಶೇ.95ಕ್ಕೂ ಅಧಿಕ ಶಾಲೆಗಳಿಗೆ ನೀಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಹೇಳುತ್ತಿದ್ದರೂ ವಾಸ್ತವದಲ್ಲಿ ಈ ಲೆಕ್ಕಾಚಾರವೇ ಸುಳ್ಳು ಎಂದು ಹೇಳಲಾಗುತ್ತಿದೆ.
ಸರ್ಕಾರದ ಬಹುತೇಕ ಸವಲತ್ತುಗಳು ಹಾಗೂ ಮೂಲಸೌಕರ್ಯ ಕೇವಲ ಪುಸ್ತಕದಲ್ಲಿರುವುದರಿಂದ ನಗರ ಪ್ರದೇಶಗಳಲ್ಲಿ ವಿದ್ಯಾರ್ಥಿಗಳು ಖಾಸಗಿ ಶಾಲೆಯತ್ತ ವಾಲುತ್ತಿದ್ದಾರೆ. ಸರ್ಕಾರೇತರ ಶಾಲೆಗಳಲ್ಲಿ 40 ಲಕ್ಷಕ್ಕೂ ಅಧಿಕ ಮಕ್ಕಳು ಅಭ್ಯಸಿಸುತ್ತಿದ್ದಾರೆ. ವಿಚಿತ್ರವೆಂದರೆ ರಾಜ್ಯದಲ್ಲಿರುವುದು ಕೇವಲ 14 ಸಾವಿರ ಖಾಸಗಿ ಶಾಲೆಗಳು. ಶೇ.18 ರಷ್ಟು ಶಾಲೆಗಳು ರಾಜ್ಯದ ಶೇ.48 ರಷ್ಟು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. ಇದೇ ಕಾರಣದಿಂದ ರಾಜ್ಯ ಸರ್ಕಾರ ಕನ್ನಡ ಅಭಿವೃದ್ಧಿಗೆ ಕೇವಲ ಸರ್ಕಾರಿ ಶಾಲೆಯನ್ನು ಗಮನದಲ್ಲಿರಿಸಿಕೊಂಡರೆ ಸಾಲದು. ಖಾಸಗಿ ಅನುದಾನಿತ, ಅನುದಾನರಹಿತ ಶಾಲೆಗಳತ್ತ ಗಮನ ನೀಡಬೇಕಿದೆ. ಖಾಸಗಿ ಶಾಲೆಗಳಲ್ಲಿ ಓದುತ್ತಿರುವವರಲ್ಲಿ ಅರ್ಧದಷ್ಟು ಜನ ಇಂಗ್ಲಿಷ್ ಅಥವಾ ಬೇರೆ ಮಾಧ್ಯಮದಲ್ಲಿ ಓದುತ್ತಿದ್ದಾರೆ. ರಾಜ್ಯ ಸರ್ಕಾರ ತನ್ನ ಅಸಡ್ಡೆಯನ್ನು ಮುಂದುವರಿಸಿದರೆ ಈ ಮಕ್ಕಳಿಗೆ ಕನ್ನಡದ ಗಂಧಗಾಳಿ ಇರದೇ ಹೋದೀತು.
ಇದಲ್ಲದೇ ರಾಜ್ಯದಲ್ಲಿರುವ ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಶಾಲೆಗಳು ಈ ನಾಡಿನ ಯಾವುದೆ ನಿಯಮಗಳನ್ನು ಪಾಲಿಸುತ್ತಿಲ್ಲ. ಶುಲ್ಕ ಅಥವಾ ಶೈಕ್ಷಣಿಕ ಮಾಧ್ಯಮ ತಮಗೆ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿವೆ. ಈ ಬಗ್ಗೆ ಕೋರ್ಟ್‌ನಲ್ಲಿರುವ ಪ್ರಕರಣದ ತ್ವರಿತ ವಿಚಾರಣೆಗೂ ರಾಜ್ಯ ಸರ್ಕಾರ ರಾಜಕೀಯ ಇಚ್ಛಾಶಕ್ತಿ ತೋರುತ್ತಿಲ್ಲ.
ನಗರ ಪ್ರದೇಶಗಳಲ್ಲಿ ಖಾಸಗಿ ಶಾಲೆಯತ್ತ ಒಲವು ಹೆಚ್ಚಿದೆ. ಮತ್ತೊಂದೆಡೆ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ. ಸರ್ಕಾರ ಇದೇ ನಿರ್ಲಕ್ಷ್ಯ ಮುಂದುವರೆಸಿದರೆ ಗ್ರಾಮೀಣ ಪ್ರದೇಶದಲ್ಲಿಯೂ ಖಾಸಗಿ ಇಂಗ್ಲಿಷ್ ಶಾಲೆಗಳ ಬಸ್ ಒಡಾಟ ಹೆಚ್ಚಾಗಲಿದೆ. ಇವೆಲ್ಲದರ ನಡುವೆ ಕಳೆದೆರಡು ವರ್ಷದಲ್ಲಿ ಸುಮಾರು 73 ಸಾವಿರ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದಿದ್ದಾರೆ. ವಾಸ್ತವವಾಗಿ ಇದು 5 ಲಕ್ಷಕ್ಕೂ ಅಧಿಕ ಸಂಖ್ಯೆಯಿದೆ ಎಂದು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಅರ್ಜಿ ದಾಖಲಾಗಿದೆ. ಇದಕ್ಕೆ ವೈರುಧ್ಯವೆಂಬಂತೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂದು ಸುಮಾರು 6653 ಶಾಲೆಗಳನ್ನು ಭಾಗಶಃ ಮುಚ್ಚಲಾಗಿದೆ.


ಮಾಧ್ಯಮ ನೀತಿ ಗೊಂದಲ
ಕಳೆದ 3 ದಶಕಗಳಿಂದ ಮಾಧ್ಯಮ ನೀತಿ ಕುರಿತಂತೆ ನ್ಯಾಯ ಸಮರ ನಡೆಯುತ್ತಿದೆ. ರಾಜ್ಯ-  ಕೇಂದ್ರ ಸರ್ಕಾರದ 'ಖಾಸಗಿ' ಸ್ನೇಹದ ವ್ಯವಹಾರಗಳಿಂದ ಹಳ್ಳಹಿಡಿದು ಕೂತಿದೆ. ಕಿರಿಯ ಪ್ರಾಥಮಿಕ ಶಾಲೆಗೆ ಯಾವುದೇ ಕಾರಣಕ್ಕೂ ಇಂಗ್ಲಿಷ್ ಮಾಧ್ಯಮ ಶಿಕ್ಷಣಕ್ಕೆ ಅವಕಾಶ ನೀಡಬಾರದೆಂಬ ವಾದಕ್ಕೆ ಸಾಕಷ್ಟು ಕಡೆ ಮನ್ನಣೆ ದೊರೆತಿದೆ. ಆದರೆ ಸರ್ಕಾರ ಮಾತ್ರ ಈ ಬಗ್ಗೆ ಸ್ಪಷ್ಟನೆ ಹೊಂದಿರುವಂತೆ ಭಾಸವಾಗುವುದಿಲ್ಲ. ಕಿರಿಯ ಪ್ರಾಥಮಿಕ ಶಿಕ್ಷಣದ ಮಾಧ್ಯಮ ಎಲ್ಲ ಶಾಲೆಗಳಲ್ಲಿಯೂ ಕನ್ನಡ ಮಾಧ್ಯಮದಲ್ಲಿಯೇ ಇರಬೇಕು, ಮುಂದಿನ ಶಿಕ್ಷಣದಲ್ಲಿ ಕನ್ನಡವನ್ನು ಕಡ್ಡಾಯ ಭಾಷೆಯಾಗಿ ಅನುಸರಿಸಬೇಕೆನ್ನುವುದು ಕನ್ನಡಪರ ಚಿಂತಕರ ವಾದ. ವಿಶ್ವಸಂಸ್ಥೆಯ ಸಂಶೋಧನಾ ತಂಡವು ಪ್ರಾದೇಶಿಕ ಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ನೀಡುವ ಬಗ್ಗೆ ಒತ್ತು ನೀಡಲು ಸಲಹೆ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು. ಭಾಷಾನೀತಿ ಕುರಿತು ಸುಪ್ರೀಂಕೋರ್ಟ್‌ನ ಪೂರ್ಣ ಪೀಠದಲ್ಲಿರುವ ಅರ್ಜಿಯನ್ನು ಕೂಡಲೇ ಬಗೆಹರಿಸಿಕೊಳ್ಳದಿದ್ದರೆ ಕನ್ನಡಕ್ಕೆ ಮತ್ತಷ್ಟು ಕೆಟ್ಟ ಕಾಲ ಬರಬಹುದು.

ಮಕ್ಕಳಿಲ್ಲದ ಗ್ರಾಮಸಭೆ!
ಗ್ರಾಮೀಣ ಪ್ರದೇಶದ ಕನ್ನಡ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಶಾಲೆ ಬಿಟ್ಟ ವಿದ್ಯಾರ್ಥಿಗಳನ್ನು ಮರಳಿ ತರುವ ನಿಟ್ಟಿನಲ್ಲಿ ವರ್ಷಕ್ಕೆರಡು ಮಕ್ಕಳ ಗ್ರಾಮಸಭೆ ನಡೆಸಬೇಕು ಎಂದು ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ರಾಜ್ಯ ಸರ್ಕಾರ 3 ವರ್ಷದ ಹಿಂದೆಯೇ ಸೂಚಿಸಿದೆ. ಆದರೆ ರಾಜ್ಯದ 5 ಸಾವಿರಕ್ಕೂ ಅಧಿಕ ಪಂಚಾಯಿತಿಗಳಲ್ಲಿ ಕೇವಲ 135 ಪಂಚಾಯಿತಿಗಳು ಮಕ್ಕಳ ಗ್ರಾಮಸಭೆ ನಡೆಸಿವೆ. ವರ್ಷಕ್ಕೆರಡು ಸಭೆ ನಡೆಸುವುದು ಹಾಗಿರಲಿ, ಒಂದನ್ನೂ ನಡೆಸುತ್ತಿಲ್ಲ. ಈ ಮೂಲಕ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಶಾಲೆಯ ಉದ್ಧಾರ ಮಾಡುವುದರ ಬದಲು ಕೇವಲ ಕೇರಿ ರಾಜಕೀಯಕ್ಕೇ ಶಾಲೆಯನ್ನು ಬಳಸಿಕೊಳ್ಳುತ್ತಿದ್ದಾರೆ.

ವೋಟಿಲ್ಲದ ಕಡೆ ಜನಪ್ರತಿನಿಧಿಗಳಿಲ್ಲ!
ವಿದ್ಯಾರ್ಥಿಗಳಿಗೆ ಮತದಾನದ ಹಕ್ಕು ಇಲ್ಲ ಎಂಬ ಕಾರಣದಿಂದ ಬಹುತೇಕ ಜನಪ್ರತಿನಿಧಿಗಳು ಶಾಲೆಗಳಿಂದ ದೂರವಿರುತ್ತಿದ್ದಾರೆ. ಒಂದೆಡೆ ಮಕ್ಕಳ ಗ್ರಾಮಸಭೆ ನಡೆಸುತ್ತಿಲ್ಲ, ಮತ್ತೊಂದೆಡೆ ಶಾಲೆ ಬಿಟ್ಟ ಮಕ್ಕಳನ್ನು ಪುನರ್ ಸಂಘಟಿಸುವ ಕುರಿತಂತೆ ಶಿಕ್ಷಣ ಇಲಾಖೆ ಸಹಕಾರ ನೀಡುತ್ತಿಲ್ಲ. ಕೇವಲ ಶಾಲಾ ಅಭಿವೃದ್ಧಿ ಸಮಿತಿಯ ಚಿಲ್ಲರೆ ರಾಜಕಾರಣಕ್ಕೆ ತಮ್ಮನ್ನು ತಾವು ಸೀಮಿತಗೊಳಿಸಿಕೊಂಡಿದ್ದಾರೆ. ಶಾಲೆ ಪ್ರಾರಂಭವಾದ ದಿನ ಕಡ್ಡಾಯವಾಗಿ ಸ್ಥಳೀಯ ಜನಪ್ರತಿನಿಧಿಗಳು ಶಾಲೆಯ ಕಾರ್ಯಕ್ರಮಕ್ಕೆ ಹಾಜರಿರಬೇಕು. ಇದನ್ನು ಹೊರತುಪಡಿಸಿದರೆ ಮತ್ಯಾವ ಸಂದರ್ಭದಲ್ಲಿಯೂ ಸಕಾರಾತ್ಮಕ ಪ್ರತಿಕ್ರಿಯೆ ನೀಡುತ್ತಿಲ್ಲ.
ಸಮುದಾಯ ಸಹಭಾಗಿತ್ವ ನೆನೆಗುದಿಯಲ್ಲಿ..
ಕನ್ನಡ ಅಥವಾ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಮುದಾಯದ ಸಹಭಾಗಿತ್ವ ಪಡೆಯಲು ಹಿಂದಿನ ಸರ್ಕಾರ ನಿರ್ಧರಿಸಿತ್ತು. ಸುಮಾರು 100ಕ್ಕೂ ಅಧಿಕ ಶಾಲೆಗಳನ್ನು ಈ ಯೋಜನೆಯಡಿ ರಾಜ್ಯಾದ್ಯಂತ ಅಭಿವೃದ್ಧಿಪಡಿಸಲಾಗುತ್ತಿದೆ. ಈಗ ಹೊಸ ಸರ್ಕಾರವು ಕಾರ್ಪೊರೇಟ್ ಜಗತ್ತನ್ನು ಶಿಕ್ಷಣ ಇಲಾಖೆಯತ್ತ ಆಕರ್ಷಿಸಲು ಮುಂದಾಗಿದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಯ ಜವಾಬ್ದಾರಿಯನ್ನು ಕಾರ್ಪೊರೇಟ್ ವಲಯಕ್ಕೆ ನೀಡಲು ನೂತನ ಸಚಿವರು ಚಿಂತಿಸಿದ್ದಾರೆ. ಆದರೆ ಇದಕ್ಕೆ ಸಂಬಂಧಿಸಿದ ಕೆಲಸ ಮಾತ್ರ ಆಮೆ ಗತಿಯಲ್ಲಿ ಸಾಗುತ್ತಿದೆ. ಸರ್ಕಾರಿ ಶಾಲೆಯಲ್ಲಿ ಸಮುದಾಯದ ಸಹಭಾಗಿತ್ವ ಹೆಚ್ಚಾದಂತೆ ಕನ್ನಡದ ಅಭಿವೃದ್ಧಿಯಾಗುತ್ತದೆ. ಏಕೆಂದರೆ ಇಲ್ಲಿ ಕಲಿಸುವುದು ಕನ್ನಡ ಮಾಧ್ಯಮದಲ್ಲಿಯೇ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.