ಸಾವಿರ ಟನ್ ವಿಷಾನಿಲ ಪತ್ತೆ
ಪಿಟಿಐ ವಾಷಿಂಗ್ಟನ್/ಡಮಾಸ್ಕಸ್ ಸೆ.2
ಸಿರಿಯಾ ಮೇಲೆ ದಾಳಿ ನಡೆಸಲು ಅಮೆರಿಕ ಹರಸಾಹಸ ಪಡುತ್ತಿರುವ ನಡುವೆಯೇ ಸಿರಿಯಾ ಅಧ್ಯಕ್ಷ ಬಷರ್-ಉಲ್-ಅಸದ್ ಅವರು ತನ್ನ ನಾಗರಿಕರ ಮೇಲೆ ರಾಸಾಯನಿಕ ಅಸ್ತ್ರ ದಾಳಿ ನಡೆಸಿರುವುದು ಸತ್ಯ ಎಂಬ ಅಂಶ ಬಹಿರಂಗವಾಗಿದೆ.
ರಹಸ್ಯ ವರದಿ ಸೋರಿಕೆ: ಫ್ರಾನ್ಸ್ನ ಗುಪ್ತಚರ ಏಜೆಂಟ್ಗಳು ನಡೆಸಿದ ಅಧ್ಯಯನದ ವರದಿ ಸೋರಿಕೆಯಾಗಿದ್ದು, ಅಸದ್ ಸರ್ಕಾರದ ಶಸ್ತ್ರಾಗಾರದಲ್ಲಿ ಸಾವಿರ ಟನ್ ವಿಷಕಾರಿ ಅನಿಲವನ್ನು ಸಂಗ್ರಹಿಸಿರುವ ವಿಚಾರ ಬೆಳಕಿಗೆ ಬಂದಿದೆ. ಸರಿನ್ ಮತ್ತು ವಿಎಕ್ಸ್ ಸೇರಿದಂತೆ ಅತ್ಯಂತ ವಿಷಕಾರಿ ಅನಿಲವನ್ನು ಕ್ಷಿಪಣಿಗಳ ಮೂಲಕ ಹೊರಬಿಡಲಾಗಿದೆ. ಈ ಕ್ಷಿಪಣಿಗಳು ರಾಸಾಯನಿಕ ವಿಷವನ್ನು 300 ಮೈಲುಗಳಷ್ಟು ದೂರದವರೆಗೆ ಪಸರಿಸುವಂತಹ ಸಾಮರ್ಥ್ಯ ಹೊಂದಿವೆ. ಜತೆಗೆ, ರಾಸಾಯನಿಕಗಳನ್ನು ಖರೀದಿಸಲು ಸಿರಿಯಾ ಸರ್ಕಾರವು ಹಲವಾರು ನಕಲಿ ಕಂಪನಿಗಳ ಹೆಸರನ್ನು ಬಳಸಿಕೊಂಡಿದೆ ಎಂದೂ ಸೋರಿಕೆಯಾದ ವರದಿ ತಿಳಿಸಿದೆ.
ಇದೇ ವೇಳೆ, ಅಮೆರಿಕಕ್ಕೂ ಸಿರಿಯಾ ವಿರುದ್ಧದ ಆರೋಪಗಳಿಗೆ ಸಾಕ್ಷ್ಯಗಳು ದೊರೆತಿವೆ ಎಂದು ಅಮೆರಿಕ ವಿದೇಶಾಂಗ ಸಚಿವ ಜಾನ್ ಕೆರ್ರಿ ಹೇಳಿದ್ದಾರೆ. ಡಮಾಸ್ಕಸ್ ಜನರ ಕೂದಲು ಮತ್ತು ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಅದರಲ್ಲಿ ನರಕ್ಕೆ ಹಾನಿಪಡಿಸಬಲ್ಲ ರಾಸಾಯನಿಕ ಅಂಶವಿರುವುದು ಪತ್ತೆಯಾಗಿದೆ. ಹೀಗಾಗಿ ಸಿರಿಯಾ ಅಧ್ಯಕ್ಷ ಅಸದ್ ಅವರು ಈಗ ಹಿಟ್ಲರ್, ಸದ್ದಾಂ ಹುಸೇನ್ರಂತಹ ಕ್ರೂರ ಸರ್ವಾಧಿಕಾರಿಗಳ ಪಟ್ಟಿಗೆ ಸೇರಿದಂತಾಗಿದೆ ಎಂದಿದ್ದಾರೆ ಕೆರ್ರಿ.
ಲಾಬಿ ಆರಂಭ: ರಾಸಾಯನಿಕ ಅಸ್ತ್ರ ದಾಳಿಗೆ ಸಾಕ್ಷ್ಯಗಳು ದೊರೆತ ಹಿನ್ನೆಲೆಯಲ್ಲಿ ಅಮೆರಿಕವು ಈಗ ಸಿರಿಯಾ ಮೇಲಿನ ದಾಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ಕೋರಲು ಲಾಬಿ ನಡೆಸುತ್ತಿದೆ.
ಅಪರಾಧವೆಸಗಿದ ಅಸದ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲೇಬೇಕು. ಅದಕ್ಕೆ ನಿಮ್ಮ ಬೆಂಬಲ ಬೇಕು ಎಂದು ಅಮೆರಿಕ ಹಲವು ರಾಷ್ಟ್ರಗಳನ್ನು ಒತ್ತಾಯಿಸುತ್ತಿದೆ. ಇದೇ ವೇಳೆ, ಸಿರಿಯಾ ದಾಳಿ ಪ್ರಸ್ತಾಪಕ್ಕೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ ಒಪ್ಪಿಗೆ ಸಿಗುವ ಸಾಧ್ಯತೆ 50-50 ಮಾತ್ರ ಎಂದು ಅಮೆರಿಕದ ರಿಪಬ್ಲಿಕನ್ ಸೆನೇಟರ್ ಅಭಿಪ್ರಾಯಪಟ್ಟಿದ್ದಾರೆ. ಏತನ್ಮಧ್ಯೆ, ಅಮೆರಿಕದ ನಿರ್ಧಾರವನ್ನು ವಿರೋಧಿಸುತ್ತಲೇ ಬಂದಿರುವ ರಷ್ಯಾ ತನ್ನ ಗುಪ್ತಚರ ನೌಕೆಯೊಂದನ್ನು ಸಿರಿಯಾ ಕರಾವಳಿಯಾಚೆಗೆ ಕಳುಹಿಸಿದೆ. ಅಮೆರಿಕದ ಯೋಜನೆ ಬಗ್ಗೆ ಮಾಹಿತಿ ಕಲೆಹಾಕಲು ರಷ್ಯಾ ಚಿಂತನೆ ನಡೆಸಿದೆ.
ಒಬಾಮ ಹೇಡಿ ಎಂದ ಸಿರಿಯಾ ನಾಗರಿಕರು: 'ಬೊಗಳುವ ನಾಯಿ ಕಚ್ಚುವುದಿಲ್ಲ' ಎಂಬ ಗಾದೆಯಂತೆ ಸಿರಿಯಾ ವಿಚಾರದಲ್ಲಿ ಒಬಾಮ ವರ್ತಿಸಿದ್ದಾರೆ ಎಂದು ಸಿರಿಯಾ ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ. ಒಬಾಮ ಒಬ್ಬ ಹೇಡಿ, ಅಂಜುಬುರುಕ ಎಂದಿರುವ ಅವರು ಸಿರಿಯಾ ಮೇಲೆ ಅಮೆರಿಕ ದಾಳಿ ನಡೆಸದು. ಏಕೆಂದರೆ, ಅಸದ್ ಎಷ್ಟು ಬಲಿಷ್ಠರು ಎಂಬುದು ಒಬಾಮಗೆ ಗೊತ್ತು. ಒಬಾಮ ಸಿರಿಯಾ ಬಗ್ಗೆ ಮಾತೆತ್ತುವಾಗಲೇ ತರಗೆಲೆಯಂತಾಗುತ್ತಾರೆ ಎಂದಿದ್ದಾರೆ ನಾಗರಿಕರು.
ಸಾವಿನ ರುದ್ರ ನರ್ತನ
ಸಿರಿಯಾದ ಕೆಲವು ಭಾಗಗಳಲ್ಲಿ ಸಾವಿನ ರುದ್ರತಾಂಡವ... ತಿನ್ನಲು ತುತ್ತು ಆಹಾರವಿಲ್ಲದೆ, ಕುಡಿಯಲು ನೀರೂ ಇಲ್ಲದೆ ಮಕ್ಕಳು ಕೊನೆಯುಸಿರೆಳೆಯುತ್ತಿದ್ದಾರೆ. ಮರಾಸ್ಮಸ್(ಗಂಭೀರ ಪ್ರಮಾಣದ ಅಪೌಷ್ಟಿಕತೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದಿದ್ದರೆ ಸಾವು ಖಚಿತ) ಎಂಬ ಕಾಯಿಲೆ ಕಾಣಿಸಿಕೊಳ್ಳುತ್ತಿದೆ. ಮಕ್ಕಳ ಸ್ಥಿತಿ ಗಂಭೀರವಾಗಿದ್ದು, ಆಗಲೋ, ಈಗಲೋ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಬ್ರಿಟನ್ ಮೂಲದ ಮಾನವ ಹಕ್ಕುಗಳ ಸಂಸ್ಥೆ ಮಾಹಿತಿ ನೀಡಿದೆ. ಕಳೆದ ನವೆಂಬರ್ನಲ್ಲಿ ಸಿರಿಯಾ ಪಡೆ ಮೌದಾಮಿಯಾ ನಗರವನ್ನು ಆಕ್ರಮಿಸಿಕೊಂಡಿತ್ತು. ನಂತರ ಅಲ್ಲಿಗೆ ಬರುವ ರಸ್ತೆಗಳನ್ನೂ ಮುಚ್ಚಲಾಗಿದೆ. ಅಂದರೆ, ಆಹಾರ, ಬಟ್ಟೆಬರೆ, ವೈದ್ಯಕೀಯ ಮುಂತಾದ ಯಾವುದೇ ವಸ್ತುಗಳ ಪೂರೈಕೆಯಾಗುತ್ತಿಲ್ಲ. ಒಂದು ತುಂಡು ಬ್ರೆಡ್ ಕೂಡ ನೋಡದೆ 6 ತಿಂಗಳಾಯ್ತು ಎನ್ನುತ್ತಾರೆ ನಾಗರಿಕರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

