ಪ್ರಧಾನ ಸುದ್ದಿ

ಕ್ಷೀಣಿಸುತ್ತಿದೆ ಓಝೋನ್...

ಕ್ಷೀಣಿಸುತ್ತಿದೆ ಓಝೋನ್...
Published On :

ಕ.ಪ್ರ.ವಾರ್ತೆ, ಬೆಂಗಳೂರು, ಸೆ. 15-
ರಾಸಾಯನಿಕ ವಸ್ತುಗಳ ಅತಿ ಬಳಕೆಯಿಂದ ತನ್ನ ಗಟ್ಟಿತನ ಕಳೆದುಕೊಂಡಿದ್ದ ಓಝೋನ್ ಪದರದ ಸಾಮರ್ಥ್ಯ ಹೆಚ್ಚಿ, ಮೊದಲಿನಂತಾಗಲೂ ಇನ್ನೂ ಕನಿಷ್ಠ 60 ವರ್ಷ ಬೇಕು..!
ರಾಸಾಯನಿಕ ವಸ್ತುಗಳಲ್ಲಿನ ಕಣಗಳು ಪ್ರತಿನಿತ್ಯ ಪರಿಸರಕ್ಕೆ ಸೇರುತ್ತಿರುವುದರಿಂದ ತಾಪಮಾನದಲ್ಲಿ ಸಾಕಷ್ಟು ವೈಪರೀತ್ಯ ಉಂಟಾಗಿದ್ದು, ವೈಪರೀತ್ಯ ಮುಂದುವರಿಯಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಡುತ್ತಿದ್ದಾರೆ.
ಓಝೋನ್ ಪದರದ ಗುಣಮಟ್ಟ ಮೊದಲಿನಂತಾಗಲೂ ವಿಶ್ವದ ಸಾಕಷ್ಟು ರಾಷ್ಟ್ರಗಳು ಶ್ರಮಿಸುತ್ತಿವೆ. ಆದರೆ, ಜನರಲ್ಲಿ ಮಾತ್ರ ಈ ಬಗ್ಗೆ ಅರಿವಿಲ್ಲದಿರುವುದರಿಂದ ಸಮಸ್ಯೆ ನಿವಾರಣೆಯಾಗಿಲ್ಲ. ಈ ಸಮಸ್ಯೆ ಕ್ರಮೇಣವಾಗಿ ನಿವಾರಣೆಯಾಗಲಿದ್ದು, ಇನ್ನೂ 50ರಿಂದ 60 ವರ್ಷಗಳು ಬೇಕಾಗಬಹುದು. ಅದುವರೆಗೂ ಪ್ರಕೃತಿಯಲ್ಲಿ ಏರುಪೇರುಗಳು ಉಂಟಾಗುತ್ತಲೇ ಇರುತ್ತವೆ. ಕಾಲಕ್ಕೆ ಮಳೆಬರದಿರುವುದು, ಸಮುದ್ರದಲ್ಲಿ ಅಲೆಗಳು ಉಂಟಾಗುವುದು, ಬೇಸಿಗೆಯಲ್ಲಿ ಮಳೆ ಬರುವುದು, ಚಂಡಮಾರುತ, ಅರಣ್ಯ ಪ್ರದೇಶಕ್ಕೆ ಬೆಂಕಿ ಬೀಳುವುದು ಸೇರಿದಂತೆ ಹಲವು ವೈಪರೀತ್ಯಗಳು ಮುಂದುವರಿಯುತ್ತವೆ ಎನ್ನುತ್ತಾರೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು.

ಜನರಲ್ಲಿ ಅರಿವಿಲ್ಲ: ಓಝೋನ್ ಪದರ ಹಾಗೂ ಅದಕ್ಕೆ ಆಗಿರುವ ಅನಾಹುತದ ಬಗ್ಗೆ ಜನರಲ್ಲಿ ಅರಿವಿಲ್ಲ. ಕೈಗಾರಿಕೋದ್ಯಮ, ಕಾರ್ಖಾನೆಗಳು ಹೆಚ್ಚುತ್ತಲೇ ಇವೆ. ಮತ್ತೊಂದೆಡೆ ಗೃಹೋಪಯೋಗಿ, ದಿನಬಳಕೆ ವಸ್ತುಗಳಲ್ಲಿ ಬಿಡುಗಡೆಯಾಗುವ ರಾಸಾಯನಿಕ ವಸ್ತುಗಳ ಕಣಗಳು (ಮಾಲಿಕ್ಯೂಲ್) ಗಾಳಿಯಲ್ಲಿ ಸೇರಿ ಓಝೋನ್ ಪದರ ಹಾಳುಮಾಡುತ್ತಿವೆ. (10 ವರ್ಷಕ್ಕೆ 4 ಪಟ್ಟಷ್ಟು ಓಝೋನ್ ಪದರ ಕಡಿಮೆಯಾಗುತ್ತಿತ್ತು)
ಅದನ್ನು ತಡೆಗಟ್ಟುವ ಉದ್ದೇಶದಿಂದ ಸರ್ಕಾರ ವಿವಿಧ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ. ಗೃಹೋಪಯೋಗಿ ವಸ್ತುಗಳನ್ನು ತಯಾರಿಸುವ ವೇಳೆ ಹೆಚ್ಚು ರಾಸಾಯನಿಕ ವಸ್ತುಗಳನ್ನು ಬಳಸದೆ ಹಾಗೂ ಅವುಗಳಿಂದ ವಿಷಕಾರಿಕ ಅಣು ಬಿಡುಗಡೆ ಆಗದಂತೆ ಎಚ್ಚರ ವಹಿಸಿದೆ. ಜನರು ಎಚ್ಚೆತ್ತಲ್ಲಿ ಮಾತ್ರ ಓಝೋನ್ ಪದರ ಮೊದಲಿನ ಸ್ಥಿತಿಗೆ ಬರಲು ಸಾಧ್ಯ ಎನ್ನುತ್ತಾರೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ವಾಮನಾಚಾರ್ಯ ಅವರು.

350 ಡಬ್ಸಿನ್ ಇರಬೇಕು: ಓಝೋನ್ ಪದರ ಸುಮಾರು 250ರಿಂದ 305 ಡಾಬ್ಸನ್ ಯುನಿಟ್ ನಷ್ಟು ದಪ್ಪ (ಗಟ್ಟಿ) ಇರಬೇಕು. ಆದರೆ, ಈ ಹಿಂದೆ ಓಝೋನ್ ಪದರ ರಂಧ್ರವಾಗಿದೆ, ಅದರ ಸಾಂದ್ರತೆ ಕಡಿಮೆಯಾಗಿದೆ ಎಂದು ತಿಳಿದಾಗ ಕೇವಲ 90 ಡಬ್ಸಿನ್‌ನಷ್ಟಿತ್ತು.
ಓಝೋನ್ ಪದರ ತೆಳುವಾದರೆ ಸೂರ್ಯನ ಕಿರಣ ನೇರವಾಗಿ ಭೂಮಿಗೆ ತಲುಪಿ ಅದರಲ್ಲಿನ ಯುವಿ ಕಿರಣಗಳಿಂದ (ಅಲ್ಟ್ರಾವೈಯಲೆಟ್ ಕಿರಣಗಳು) ಮಾನವ, ಪ್ರಾಣಿ, ಪಕ್ಷಿ ಹಾಗೂ ಸಸ್ಯ ಸಂಕುಲಕ್ಕೆ ತೊಂದರೆಯಾಗುತ್ತದೆ. ಹಾಗಾಗಿ ಓಝೋನ್ ಪದರದ ಸಾಂಧ್ರತೆ ಕಾಪಾಡಲು ವಿಶ್ವದ ಎಲ್ಲಾ ರಾಷ್ಟ್ರಗಳು ಮುಂದಾಗಿವೆ.

ಯಾವಾಗ ಆಚರಣೆ, ಏಕೆ: 1985ರಲ್ಲಿ ಓಝೋನ್ ಪದರದಲ್ಲಿ ರಂಧ್ರ ಹಾಗೂ ಪದರ ತೆಳುವಾಗಿರುವುದು ಕಂಡುಬಂದಿದೆ. ಇದರಿಂದುಂಟಾಗುವ ದುಷ್ಪರಿಣಾಮಗಳ ಬಗ್ಗೆ ಅರಿತ ವಿವಿಧ ದೇಶಗಳ ಸರ್ಕಾರದ ಮುಖ್ಯಸ್ಥರು ಒಟ್ಟಾಗಿ ಸೇರಿ ಓಝೋನ್ ಪದರ ರಕ್ಷಿಸಲು ಮುಂದಾದರು. 1995ರಲ್ಲಿ ಈ ಆಚರಣೆ ಜಾರಿಗೆ ಬಂತು. ಪ್ರತಿ ವರ್ಷ ಸೆಪ್ಟಂಬರ್ 16ರಂದು ವಿಶ್ವ ಓಝೋನ್ ದಿನವನ್ನಾಗಿ ಆಚರಿಸಲು ವಿವಿಧ ರಾಷ್ಟ್ರಗಳು ಸಮ್ಮತಿ ಸೂಚಿಸಿ, ಸಹಿ ಹಾಕಿವೆ. ಅಂದಿನಿಂದ ಪ್ರತಿ ವರ್ಷ ಸೆ.16ರಂದು ಈ ದಿನಾಚರಣೆ ಜಾರಿಗೆ ಬಂತು. ಪ್ರತಿವರ್ಷ ಆಚರಣೆ ವೇಳೆ ಮಾತ್ರ ಓಝೋನ್ ಪದರ ಹಾಗೂ ಅದರಿಂದಾಗುವ ಅನಾಹುತದ ಬಗ್ಗೆ ಅರಿವು ಮೂಡಿಸಲಾಗುತ್ತದೆ.

ಓಝೋನ್ ಸಮಸ್ಯೆ ಇಂದು ನಿನ್ನೆಯದಲ್ಲ. ಆದರೆ, ಜನರಲ್ಲಿ ಅರಿವಿಲ್ಲದ ಕಾರಣ ಆ ಸಮಸ್ಯೆ ನಿರಂತರವಾಗಿದೆ ಹಾಗೂ ತಾಪಮಾನದಲ್ಲೂ ಏರುಪೇರುಂಟಾಗಿದೆ. ಸರ್ಕಾರದ ಜತೆಗೆ ಕೈಜೋಡಿಸುವ ಮೂಲಕ ಈ ಸಮಸ್ಯೆ ಬಗೆಹರಿಸಲು ಜನ ಮುಂದಾಗಬೇಕು.
- ಡಾ.ಆರ್.ಲಕ್ಷ್ಮಿನಾರಾಯಣ್, ಪರಿಸರ ವಿಜ್ಞಾನಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿ, ನೆಲಮಂಗಲ

- ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.