ವಾಮಾಚಾರ ನಿಯಂತ್ರಣಕ್ಕೆ ಹೊಸ ಕಾನೂನು: ಜಯಚಂದ್ರ
ಕ.ಪ್ರ.ವಾರ್ತೆ, ಬೆಂಗಳೂರು, ಸೆ.23-
ಮೂಢ ನಂಬಿಕೆ ಹಾಗೂ ವಾಮಾಚಾರ ನಿಯಂತ್ರಣಕ್ಕೆ ರಾಜ್ಯದಲ್ಲಿ ಹೊಸ ಕಾನೂನು ಜಾರಿಗೆ ತರಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶದ ಜನರ ಅನಕ್ಷರತೆ ಹಾಗೂ ಕಡಿಮೆ ಶೈಕ್ಷಣಿಕ ಮಟ್ಟವನ್ನು ಆಧಾರವಾಗಿಸಿಕೊಂಡು ವಾಮಾಚಾರ, ಬಾನಾಮತಿ, ಭೂತೋಚ್ಛಾಟನೆ, ಭವಿಷ್ಯ, ಪುನರ್ಜನ್ಮ ಇತ್ಯಾದಿ ಹೆಸರಿನಲ್ಲಿ ಅಮಾಯಕರನ್ನು ನಿರಂತರವಾಗಿ ಶೋಷಣೆ ಮಾಡಲಾಗುತ್ತಿದೆ. ಇದನ್ನು ನಿಯಂತ್ರಿಸುವುದಕ್ಕಾಗಿ ಹೊಸ ಕಾನೂನು ತರಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.
ಈ ಕಾನೂನಿಗೆ ಕರ್ನಾಟಕ ನರಬಲಿ ಮತ್ತು ಇತರೆ ಅಮಾನವೀಯ ಕೃತ್ಯಗಳು, ಅಗೋರಿ, ವಾಮಾಚಾರ ನಿಯಂತ್ರಣ ಮತ್ತು ನಿರ್ಮೂಲನಾ ಕಾಯಿದೆ-2013 ಎಂದು ಕರೆಯಲಾಗುವುದು. ಈ ಬಗ್ಗೆ ಕರಡು ತಯಾರಿಸುವುದಕ್ಕೆ ಹಾಗೂ ನಿಯಮ ರಚಿಸುವುದಕ್ಕೆ ಕಾನೂನು ಶಾಲೆಯ ತಜ್ಞರ ಜತೆ ಸಮಾಲೋಚನೆ ನಡೆಸಲಾಗಿದೆ.
ಈ ಸಂಬಂಧ ಮಹಾರಾಷ್ಟ್ರ ಸರ್ಕಾರ ಈಗಾಗಲೇ ಒಂದು ಸುಗ್ರೀವಾಜ್ಞೆಯನ್ನು ಜಾರಿಗೆ ತಂದಿದೆ. ಇದನ್ನು ರಾಜ್ಯ ಸರ್ಕಾರ ಅಧ್ಯಯನ ನಡೆಸಿದೆ ಎಂದು ಹೇಳಿದರು.
ಟಿವಿ ಮೇಲೆ ನಿಯಂತ್ರಣ: ಇದೆಲ್ಲದಕ್ಕಿಂತ ಹೆಚ್ಚಾಗಿ ರಾಜ್ಯದ ಎಲ್ಲ ಸುದ್ದಿವಾಹಿನಿಗಳಲ್ಲಿ ಪ್ರತಿದಿನ ಬೆಳಗ್ಗೆ ಇಂತಹ ಮೌಢ್ಯ ಬಿತ್ತುವ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಇವುಗಳ ಮೇಲೆ ನಿಯಂತ್ರಣ ಹೇರುವುದಕ್ಕೆ ಚಿಂತನೆ ನಡೆಸಲಾಗುತ್ತದೆ ಎಂದರು.
ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಒಂದಿಲ್ಲೊಂದು ರೀತಿಯಲ್ಲಿ ಇಂಥ ಮೌಢ್ಯಗಳಿಗೆ ದಾಸರಾಗಿದ್ದಾರೆ. ಹೀಗಿರುವಾಗ ಇಂಥ ಕಾನೂನು ಜಾರಿಗೆ ತರುವುದಕ್ಕೆ ಸರ್ಕಾರಕ್ಕೆ ಬದ್ಧತೆ ಇದೆಯೇ ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಾರು ಎಷ್ಟೇ ಒತ್ತಡ ತಂದರೂ ಮೂಢನಂಬಿಕೆ ನಿಯಂತ್ರಣ ಕಾಯಿದೆಯನ್ನು ಜಾರಿಗೆ ತರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮನೆಯೇ ಪ್ರೇರಣೆ?: ಬೆಳಗ್ಗೆ ಟಿವಿ ಯಲ್ಲಿ ಪ್ರಸಾರವಾಗುವ ಭವಿಷ್ಯ, ಪುನರ್ಜನ್ಮದಂಥ ಕಾರ್ಯಕ್ರಮಗಳು ಪ್ರತಿ ಮನೆಯಲ್ಲೂ ಸಮಸ್ಯೆ ಸೃಷ್ಟಿಸುತ್ತಿವೆ. ಇದಕ್ಕೆ ನಮ್ಮ ಮನೆಯೂ ಹೊರತಲ್ಲ. ಬೆಳಗ್ಗೆ ಎದ್ದ ತಕ್ಷಣ ಕಾಫಿ ಕೊಡು ಎಂದರೆ ಪತ್ನಿ ಭವಿಷ್ಯ ಕಾರ್ಯಕ್ರಮ ನೋಡುತ್ತಿರುತ್ತಾರೆ. ಒಮ್ಮೆ ಸಿಟ್ಟು ಬಂದು ಟಿವಿ ಒಡೆದು ಹಾಕುತ್ತೇನೆ ಎಂದು ಪತ್ನಿಗೆ ಗದರಿದ್ದೆ ಎನ್ನುವ ಮೂಲಕ ಕಾನೂನು ರಚನೆಗೆ ಮನೆಯೇ ಪ್ರೇರಣೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಸಂತೋಷ್ ಲಾಡ್ ರಾಜಿನಾಮೆ ಅನಗತ್ಯ
ಸಚಿವ ಸಂತೋಷ್ ಲಾಡ್ ಅವರು ಸಂಪುಟಕ್ಕೆ ರಾಜಿನಾಮೆ ನೀಡುವ ಅಗತ್ಯವಿಲ್ಲ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಅಭಿಪ್ರಾಯಪಟ್ಟಿದ್ದಾರೆ. ಸಂತೋಷ್ ಲಾಡ್ ಅವರನ್ನು ಸಂಪುಟದಿಂದ ಕೈ ಬಿಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಲಾಡ್ ವಿರುದ್ಧದ ಆರೋಪದ ದಾಖಲೆ ಪರಿಶೀಲಿಸಿದ ನಂತರ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆಯೇ ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ತಮ್ಮ ಮೇಲೆ ಯಾವುದೇ ಆರೋಪವಿಲ್ಲ ಎಂದು ಲಾಡ್ ಈಗಾಗಲೇ ಸರ್ಕಾರ ಮತ್ತು ಲೋಕಾಯುಕ್ತಕ್ಕೆ ಮಾಹಿತಿ ನೀಡಿದ್ದಾರೆ. ಮಾತ್ರವಲ್ಲ ನನಗೂ ದಾಖಲೆಗಳನ್ನು ತೋರಿಸಿದ್ದಾರೆ ಎಂದರು. ಈ ಎಲ್ಲ ಹಿನ್ನೆಲೆಯಲ್ಲಿ ಲಾಡ್ ರಾಜಿನಾಮೆ ನೀಡುವ ಅಗತ್ಯವಿಲ್ಲ. ಮುಖ್ಯಮಂತ್ರಿಗಳು ನೀಡಿರುವ ಹೇಳಿಕೆಯಲ್ಲಿ ಅರ್ಥವಿದೆ ಎಂದು ಅಭಿಪ್ರಾಯಪಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

