ತಂಟೆ ಬಿಡಿ, ನಂತ್ರ ಮಾತಾಡಿ

ಪಿಟಿಐ, ನ್ಯೂಯಾರ್ಕ್, ಸೆ.29-
'ನಿಮ್ಮ ಜತೆ ಮಾತುಕತೆ ನಡೆಸಬೇಕಿದ್ದರೆ ಗಡಿ ನಿಯಂತ್ರಣ ರೇಖೆಯಲ್ಲಿ ಉದ್ವಿಗ್ನ ಸ್ಥಿತಿ ತಗ್ಗಬೇಕು. ಗಡಿಯಾಚೆಯಿಂದ ಗುಂಡಿನ ದಾಳಿ ನಡೆಯುತ್ತಿದೆ. ಅದು ನಿಲ್ಲಬೇಕು. ಸದ್ಯಕ್ಕೆ ಅಂಥ ವಾತಾವರಣ ಇಲ್ಲ. ಎಲ್ಲವೂ ಒಂದು ಹಂತಕ್ಕೆ ಬಂದ ಬಳಿಕ ಮಾತುಕತೆ ಬಗ್ಗೆ ನೋಡೋಣ'
- ಹೀಗೆಂದು ಪ್ರಧಾನಿ ಮನಮೋಹನ್ ಸಿಂಗ್ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರಿಗೆ ಖಡಕ್ ಆಗಿ ಹೇಳಿದ್ದಾರೆ. ಆದರೆ ಪಾಕ್ ಪ್ರಧಾನಿ ನವಾಜ್ ಷರೀಫ್ ಈ ಬಗ್ಗೆ ಸ್ಪಷ್ಟ ಮಾತು ನೀಡಲು ನಿರಾಕರಿಸಿದರು. ಈ ಭೇಟಿಯಿಂದ 2 ರಾಷ್ಟ್ರಗಳ ನಡುವಿನ ಬಾಂಧವ್ಯ ಸುಧಾರಿಸುವ ಫಲಿತಾಂಶವೇನೂ ಬಂದಿಲ್ಲ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನ ಬಳಿಕ ಇಬ್ಬರು ಮುಖಂಡರು ನ್ಯೂಯಾರ್ಕ್‌ನಲ್ಲಿ ಭಾನುವಾರ ಭೇಟಿಯಾಗಿದ್ದರು. ಗುರುವಾರ ಜಮ್ಮುವಿನಲ್ಲಿ ಉಗ್ರರ ದಾಳಿಯ ಕಹಿ ಘಟನೆ ಬೆನ್ನಲ್ಲೇ ಮಾತುಕತೆ ನಡೆದದ್ದು ಮಹತ್ವ ಪಡೆದಿತ್ತು.
ಸಮಯ ನಿಗದಿಯಾಗಿಲ್ಲ: ಒಂದು ಗಂಟೆ ಕಾಲ ಇಬ್ಬರು ನಾಯಕರು ಮಾತುಕತೆ ನಡೆಸಿದರು. ಉಗ್ರರ ಉಪಟಳವೇ ಪ್ರಮುಖ ವಿಚಾರವಾಗಿತ್ತು ಎಂದು ಮಾತುಕತೆ ಬಳಿಕ ವಿವರಣೆ ನೀಡಿದ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ ಮೆನನ್ ತಿಳಿಸಿದರು. ಮಾತುಕತೆಗೆ ಯಾವುದೇ ಸಮಯ ನಿಗದಿ ಮಾಡಲು ಸಾಧ್ಯವಿಲ್ಲ ಎಂಬ ವಿಚಾರವನ್ನು ಪಾಕ್ ಪ್ರಧಾನಿಗೆ ವಿಷದಪಡಿಸಲಾಯಿತು ಎಂದರು ಮೆನನ್.
ಗುಂಡಿನ ಚಕಮಕಿ ನಡೆಯುತ್ತಿದೆ: ಷರೀಫ್ ಜತೆಗಿನ ಭೇಟಿ ವೇಳೆ ಪಾಕಿಸ್ತಾನದ ಸೇನೆ ಮತ್ತು ಉಗ್ರರು ಗಡಿಯಾಚೆಯಿಂದ ಅಪ್ರಚೋದಿತವಾಗಿ ದಾಳಿ ನಡೆಸುತ್ತಿರುವುದನ್ನು ಸಿಂಗ್ ಪ್ರಸ್ತಾಪಿಸಿದರು.
ಪರಿಸ್ಥಿತಿ ಸುಧಾರಿಸಲು ಮಾತುಕತೆ ನಡೆಸೋಣ ಎಂಬ ಪಾಕ್ ಪ್ರಧಾನಿ ಆಹ್ವಾನ ತಿರಸ್ಕರಿಸಿದ ಸಿಂಗ್ 'ಸದ್ಯಕ್ಕೆ ಪರಿಸ್ಥಿತಿ ಅನುಕೂಲವಾಗಿಲ್ಲ. ಗಡಿಯಲ್ಲಿನ ಸ್ಥಿತಿ ಶಮನಗೊಳಿಸಲು ಕ್ರಮ ಕೈಗೊಳ್ಳಿ. ಬಳಿಕ ನೋಡೋಣ' ಎಂದರು.
ನಿರ್ದೇಶಕ ಮಟ್ಟದ ಮಾತುಕತೆ: ಗಡಿಯಲ್ಲಿ ಉಂಟಾಗಿರುವ ಪರಿಸ್ಥಿತಿ ತಗ್ಗಿಸಲು 2 ರಾಷ್ಟ್ರಗಳ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರಿಗೆ (ಡಿಜಿಎಂಒ) ಯೋಜನೆ ಸಿದ್ಧಪಡಿಸಲು ಸೂಚಿಸಲು ನಿರ್ಧಾರ ಕೈಗೊಳ್ಳಲಾಯಿತು. ಈ ಮೂಲಕ ಸಮಸ್ಯೆ ಪರಿಹಾರಿಸಲು ಯತ್ನಿಸಲಾಗಿದೆ.
ಕ್ರಮ ಕೈಗೊಳ್ಳಿ: 26/11ರ ದಾಳಿಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲೇಬೇಕು ಎಂದು ಪ್ರತಿಪಾದಿಸಿದರು. ಈ ನಿಟ್ಟಿನಲ್ಲಿ ಪಾಕಿಸ್ತಾನದಲ್ಲಿ ನಡೆಯುತ್ತಿರುವ ತನಿಖೆಗಳ ಬಗ್ಗೆ ಪ್ರಧಾನಿ ಅತೃಪ್ತಿ ವ್ಯಕ್ತಪಡಿಸಿದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಪಾಕ್ ಪಿಎಂ ಷರೀಫ್ ತಮ್ಮ ದೇಶದ ನ್ಯಾಯಾಂಗ ಆಯೋಗ ಭಾರತ ಪ್ರವಾಸದಲ್ಲಿದೆ ಎಂದರು.
ಉಗ್ರ ಸಂಘಟನೆ ಜಮಾತ್-ಉದ್-ದಾವಾ ಉಗ್ರ ಸಂಘಟನೆಗೆ ಹೇರಳ ಪ್ರಮಾಣದಲ್ಲಿ ಹಣಕಾಸಿನ ನೆರವು ಸಿಗುತ್ತಿರುವ ಬಗ್ಗೆ ಮನಮೋಹನ್ ಸಿಂಗ್ ಪ್ರಸ್ತಾಪಿಸಿದರು. ಮಾತ್ರವಲ್ಲದೆ ಸಂಘಟನೆ ಮುಖಂಡ ಹಪೀಜ್ ಸಯೀದ್‌ಗೆ ಪಾಕ್ ಸರ್ಕಾರದಿಂದಲೇ ನೆರವು ಸಿಗುತ್ತಿದೆ. ಈ ಬಗ್ಗೆ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು.
ಆರೋಪಕ್ಕೆ ತಿರಸ್ಕಾರ: ಪಾಕಿಸ್ತಾನದಲ್ಲಿ ಭಾರತದ ನೇತೃತ್ವದಲ್ಲಿ ಭಯೋತ್ಪಾದಕ ಕೃತ್ಯಗಳು ನಡೆಯುತ್ತಿವೆ ಎಂಬ ಷರೀಫ್ ಆರೋಪವನ್ನು ಪ್ರಧಾನಿ ಸಿಂಗ್ ತಳ್ಳಿಹಾಕಿದರು. ಇದರಲ್ಲಿ ಯಾವುದೇ ಆಧಾರ ಇಲ್ಲ ಎಂದರು ಪ್ರಧಾನಿ. ಇದೇ ಸಂದರ್ಭದಲ್ಲಿ ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ಕೂಡ 'ಭಾರತದಂತೆ ಪಾಕಿಸ್ತಾನ ಕೂಡ ಉಗ್ರರ ಉಪಟಳದಿಂದ ಕಂಗೆಟ್ಟಿದೆ' ಎಂದರು.
ಎಲ್ಲವೂ ಸರಿಯಾಗಿತ್ತು: ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ ಮೆನನ್ ಸುದ್ದಿಗೋಷ್ಠಿ ನಡೆಸುತ್ತಿರುವ ವೇಳೆಯಲ್ಲಿಯೇ ಬೇರೊಂದು ಕಡೆ ಮಾತನಾಡಿದ ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಅಬ್ಬಾಸ್ ಜಿಲಾನಿ ಸಿಯಾಚಿನ್, ಸರ್ ಕ್ರೀಕ್, ಜಮ್ಮು-ಕಾಶ್ಮೀರ ವಿವಾದಗಳನ್ನು ಪರಿಹರಿಸುವ ಬಗ್ಗೆ ಭಾರತದ ಪ್ರಧಾನಿ ಪ್ರಸ್ತಾಪಿಸಿದರು. 2004ರಲ್ಲಿ ಮಾಡಿಕೊಂಡಿರುವ ಒಪ್ಪಂದದಂತೆ ಗಡಿನಿಯಂತ್ರಣ ರೇಖೆಯಲ್ಲಿ ಪರಿಸ್ಥಿತಿ ಕಾಯ್ದುಕೊಂಡು ಬರಬೇಕು ಎಂಬುದನ್ನು ಉಭಯ ನಾಯಕರು ಒಪ್ಪಿಕೊಂಡರು ಎಂದರು.
ಪರಸ್ಪರ ಆಹ್ವಾನ
ಪಾಕಿಸ್ತಾನಕ್ಕೆ ಭೇಟಿ ನೀಡಿ ಎಂದು ನವಾಜ್ ಷರೀಫ್ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಆಹ್ವಾನ ನೀಡಿದರು. ಅದನ್ನು ಒಪ್ಪಿಕೊಂಡ ಪ್ರಧಾನಿ ಪಾಕ್ ಪ್ರಧಾನಿಗೂ ನವದೆಹಲಿ ಪ್ರವಾಸ ಕೈಗೊಳ್ಳುವಂತೆ ಹೇಳಿದರು. ಷರೀಫ್ ಅದನ್ನು ಸ್ವೀಕರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


