ಪ್ರಧಾನ ಸುದ್ದಿ

ಯುವಭರವಸೆ

ಯುವಭರವಸೆ
Published On :

ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ಮತಜಾತ್ರೆಗೆ ಸಿದ್ಧವಾಗುತ್ತಿದೆ. ಈ ಜಾತ್ರೆಯ ಪ್ರಮುಖ ಆಕರ್ಷಣೆಯಾದ ಯುವ ಮತದಾರರು ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮತಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿದ್ದಾರೆ. ಈ ತಂತ್ರಜ್ಞಾನ ಪ್ರಿಯ ಮತದಾರರು ಆರ್ಥಿಕ ಸುಧಾರಣೆ, ವಿದೇಶಿ ಹೂಡಿಕೆಯ ಫಲವನ್ನು ಉಣ್ಣುತ್ತಿರುವವರು. ಬೆಂಗಳೂರಿನಲ್ಲೇ ಕೂತು ಆಗುಹೋಗುಗಳ ಮೇಲೆ ಕಣ್ಣಿಡುವವರು. ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ರಾಜಕೀಯ ಅಭಿಪ್ರಾಯವನ್ನು ಯಾವುದೇ ಬಹಿರಂಗವಾಗಿ ಪ್ರಕಟಿಸುವವರು.

ನವದೆಹಲಿ:
1996ರಿಂದೀಚಿಗಿನ ವರೆಗಿನ ಲೋಕಸಭಾ ಚುನಾವಣೆಯಲ್ಲಿ ದೇಶದ ಬಹುಸಂಖ್ಯಾತ ಯುವಜನರು ರಾಷ್ಟ್ರದ ಎರಡು ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ಅನ್ನು ಬೆಂಬಲಿಸುತ್ತಲೇ ಬಂದಿದ್ದಾರೆ. ಇಷ್ಟಾದರೂ ಈ ಎರಡೂ ರಾಜಕೀಯ ಪಕ್ಷಗಳ ನೀತಿಗಳು, ಕಾರ್ಯಕ್ರಮಗಳು ಮತ್ತು ಪ್ರಣಾಳಿಕೆಗಳು ಹೆಸರಿಗಷ್ಟೇ ಯುವಕೇಂದ್ರಿತ. ಯುವಜನರ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಯಾವುದೇ ಪಕ್ಷಕ್ಕೆ ನಿಜವಾದ ಕಾಳಜಿ ಇಲ್ಲವೇ ಇಲ್ಲ. ಇದು ಆ ಪಕ್ಷಗಳ ಪ್ರಣಾಳಿಕೆಯನ್ನು ನೋಡಿದರೇ ಅರಿವಿಗೆ ಬರುತ್ತದೆ ಎನ್ನುತ್ತಾರೆ ರಾಜಕೀಯ ಪಂಡಿತರು. ಶಿಕ್ಷಣ ಮತ್ತು ನಿರುದ್ಯೋಗ ಇಂದಿನ ಯುವಜನರನ್ನು ಕಾಡುತ್ತಿರುವ ಗಂಭೀರ ಸಮಸ್ಯೆ. ಈ ಸಮಸ್ಯೆ ಪರಿಹಾರಕ್ಕೆ ರಾಜಕೀಯ ಪಕ್ಷಗಳಿಗೆ ನಿಜವಾದ ಇಚ್ಛಾಶಕ್ತಿ ಇದ್ದಂತೆ ಕಾಣುತ್ತಿಲ್ಲ. ದುರಂತವೆಂದರೆ ಯುವಕರೂ ತಮ್ಮ ಮೇಲೆ ಪ್ರಭಾವ ಬೀರುವ ನೀತಿಗಳ ಅನುಷ್ಠಾನಕ್ಕೆ ರಾಜಕೀಯ ಪಕ್ಷಗಳನ್ನು ಒತ್ತಾಯಿಸುತ್ತಲೂ ಇಲ್ಲ. ಇದರ ಒಟ್ಟಾರೆ ಪರಿಣಾಮ ಪ್ರಣಾಳಿಕೆಯಲ್ಲಿ ಪ್ರಮುಖ ಸ್ಥಾನಪಡೆಯಬೇಕಿದ್ದ ಯುವಜನರು ಮೂಲೆಗುಂಪಾಗುತ್ತಿದ್ದಾರೆ. ಇದರ ಒಟ್ಟಾರೆ ಪರಿಣಾಮ ಮತದಾನದ ಮೇಲೆ ಬೀಳುತ್ತದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಕೆಲವು ಆಯ್ದ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿ ನಡೆಸಿದ ಅಧ್ಯಯನಗಳ ಪ್ರಕಾರ 25ರಿಂದ 40ರ ನಡುವಿನ ಯುವ ಅಭ್ಯರ್ಥಿಗಳು ಸ್ಪರ್ಧಿಸಿದ ಕ್ಷೇತ್ರಗಳಲ್ಲೂ ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿಲ್ಲ. 2009ರ ಚುನಾವಣೆಗೆ ಸಂಬಂಧಿಸಿ ಪ್ಯಾಟ್ರಿಕ್ ಫ್ರೆಂಚ್ ನಡೆಸಿದ ಅಧ್ಯಯನದ ಪ್ರಕಾರ 38 ಯುವ ಸಂಸದರರಲ್ಲಿ 35 ಮಂದಿ ರಾಜಕೀಯಕ್ಕೆ ಕಾಲಿಟ್ಟದ್ದು ತಮ್ಮ ಸಂಬಂಧಿಕರ ನೆರವಿನಿಂದ. ಹಾಗಾಗಿ ರಾಜಕೀಯಕ್ಕೆ ಬರುವ ಬಹುತೇಕ ಯುವ ಮುಖಗಳು ವಂಶಪಾರಂಪರ್ಯ ರಾಜಕೀಯದ ಭಾಗವೇ ಹೊರತು ಬೇರಿನ್ನೇನೂ ಅಲ್ಲ.

ಎರಡು ಹೊಸ ಭರವಸೆ
ಈ ಬಾರಿ ಯುವಜನರನ್ನು ಪ್ರತಿನಿಧಿಸುವ ಮುಖಗಳನ್ನು ಬಿಜೆಪಿ ಮತ್ತು ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಿವೆ. ಹಾಗಾಗಿ 16ನೇ ಲೋಕಸಭಾ ಚುನಾವಣೆಯಲ್ಲಾದರೂ ಯುವಕರು ಮನಸ್ಸು ಬದಲಾಯಿಸುತ್ತಾರಾ? ಪ್ರಜಾತಂತ್ರವನ್ನು ಬಲಪಡಿಸಲು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಹಕ್ಕು ಚಲಾಯಿಸಲು ಮುಂದೆ ಬರುತ್ತಾರಾ? ಈ ಪ್ರಶ್ನೆಗೆ ಯುವಜನರೇ ಉತ್ತರ ನೀಡಬೇಕು.


ಮತದಾನ ದೇಶದಲ್ಲಿರುವ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನಕ್ಕೆ ಅತ್ಯುನ್ನತ ಸ್ಥಾನ ಇದೆ. ದೇಶದ ಅಭಿವೃದ್ಧಿಗಾಗಿ ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡುವಲ್ಲಿ ನನ್ನ ಮುಖ್ಯ. ಒಳ್ಳೆಯ ವ್ಯಕ್ತಿಗೆ ಮತ ಚಲಾಯಿಸುತ್ತೇನೆ.
- ಅಶ್ವಿನಿ ನಾನಾಗೌಡ ಪಾಟೀಲ, ಯಾದಗಿರಿ


ನಮ್ಮ ಹಿರಿಯರು ಹಾಕಿದ ಮತ ವ್ಯರ್ಥವಾಯಿತಲ್ಲ ಎಂದು ಗೊಣಗಾಡುತ್ತಿದ್ದ ಕಾಲವನ್ನು ನಾನು ಕಂಡಿದ್ದೇನೆ. ಇದೀಗ ನಾನು ವಿದ್ಯಾವಂತ ಮತ್ತು ಜನರಿಗೆ ಸ್ಪಂದಿಸುವ ಅಭ್ಯರ್ಥಿಗೆ ಮತ ಹಾಕಲು ಬಯಸುತ್ತಿದ್ದೇನೆ.
- ಪ್ರಿಯಾಂಕಾ ಶಿವಯೋಗಿ

ಯಾರಿಗೆ ಮತ ನೀಡಬೇಕೆಂಬ ಬಗ್ಗೆ ಆತಂಕವಿದೆ. ಗೆಲ್ಲುವ ಕುದುರೆಗೆ ಮತ ನೀಡಬೇಕು ಎಂದೇನೂ ಇಲ್ಲ. ಶಿವಮೊಗ್ಗ ಕ್ಷೇತ್ರದಲ್ಲಿ ಹೊಸಬರೂ ಇದ್ದಾರೆ, ಹಳಬರೂ ಇದ್ದಾರೆ. ಯಾರು ಅಭಿವೃದ್ಧಿ ಕುರಿತು ಚಿಂತಿಸುತ್ತಿದ್ದಾರೆ ಎಂಬುದನ್ನು ನೋಡುತ್ತೇನೆ.
- ಕಾಂಚನಾ ಶಿವಶಂಕರ್, ಶಿವಮೊಗ್ಗ

ಜನತಂತ್ರ ವ್ಯವಸ್ಥೆಯಲ್ಲಿ ಜನರಿಂದ ಆರಿಸಿ ಹೋದ ವ್ಯಕ್ತಿಯೇ ದೇಶ ಆಳಲು ಸಶಕ್ತನಾಗುತ್ತಾನೆ. ಅಂಥ ವ್ಯಕ್ತಿಯನ್ನು ಆಯ್ಕೆ ಮಡುವುದರಲ್ಲಿ ಮತದಾನ ಪಾತ್ರ ಮಹತ್ವದ್ದು. ದೇಶದ ಸರ್ವತೋಮುಖ ಬೆಳವಣಿಗೆಗೆ ಸಹಕರಿಸುವ ವ್ಯಕ್ತಿಗೆ ಮತ ಹಾಕುತ್ತೇನೆ.
- ರಾಧಿಕಾ ಡಿಗ್ಗಾವಿ, ಕೆಂಭಾವಿ

ಮೊದಲ ಬಾರಿ ಮತದಾರ ಪಟ್ಟಿಗೆ ನನ್ನ ಹೆಸರು ಸೇರಿದೆ. ಆ ಮೂಲಕ ಒಳ್ಳೆಯ ನಾಯಕತ್ವ ಗುಣ, ಸಾಮಾಜಿಕ ಕಾಳಜಿಯುಳ್ಳವರನ್ನು ಆಯ್ಕೆ ಮಾಡುವ ಸುವರ್ಣಾವಕಾಶ ಕಲ್ಪಿಸಿರುವುದು ನಮ್ಮ ವ್ಯವಸ್ಥೆಯ ಹೆಮ್ಮೆ.
- ಎಸ್. ಶಾಂಭವಿ, ಚಾಮರಾಜನಗರ

ಯುವ ಜನಾಂಗಕ್ಕೆ ಇಂಥ ವ್ಯವಸ್ಥೆಯನ್ನು ಹೋಗಲಾಡಿಸಲು ಅಗತ್ಯವಾಗಿರುವ ಮತದಾನದ ಹಕ್ಕು ನಮಗೀಗ ಸಿಕ್ಕಿರುವುದು ಸಂತಸವಿದೆ. ಮತದಾನ ಮಾಡುವ ಕುತೂಹಲವಿದೆ. ಅತ್ಯುತ್ತಮ ಆಡಳಿತಕ್ಕೆ ನನ್ನ ಮತ.
- ನಿವೇದಿತಾ ಜಯರಾಜ ದಾಬಶೆಟ್ಟಿ

ಕುತೂಹಲ ಇದೆ. ಖುಷಿ ಆಗ್ತಿದೆ. ಸರಿಯಾದ ವ್ಯಕ್ತಿಯನ್ನು ಬೆಂಬಲಿಸಬೇಕು ಎಂದೆನಿಸುತ್ತಿದೆ. ಇತಿಹಾಸ, ನಡೆದು ಬಂದ ಹಾದಿ ನೋಡಬೇಕು. ವೈಯಕ್ತಿಕ, ರಾಜಕಾರಣ ಜೀವನ ನೋಡಬೇಕು. ಹೊಸಬರನ್ನು ನಂಬುವುದು ಕಷ್ಟ.
- ಮದನ್ ಬಿ.ಎಸ್. ಶಿವಮೊಗ್ಗ

ಈ ಬಾರಿ ನನಗೆ ಮತದಾನ ಭಾಗ್ಯ ದೊರಕಿರುವುದು ಸಂತೋಷ. ಯುವ ಸಮೂಹವನ್ನು ದೇಶದ ಶಕ್ತಿಯನ್ನಾಗಿ ಬಳಸಿಕೊಳ್ಳುವ, ಮಹಿಳೆಯರ ಬಗ್ಗೆ ಕಾಳಜಿವುಳ್ಳ ವ್ಯಕ್ತಿಗೆ ನನ್ನ ಮೊದಲ ಆದ್ಯತೆ.
- ಪದ್ಮ,  ರಾಮಸಮುದ್ರ ಚಾಮರಾಜನಗರ

ಜಗತ್ತಿನ ಶಕ್ತಿಶಾಲಿ ರಾಷ್ಟ್ರವನ್ನಾಗಿ ಮಾಡಲು ನನ್ನ ಮತ ಚಲಾಯಿಸುವ ಬಗ್ಗೆ ಹೆಮ್ಮೆ ಇದೆ. ಭ್ರಷ್ಟಾಚಾರ ನಿರ್ಮೂಲನೆ ಮಾಡಬೇಕು. ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗ ನಮ್ಮ ಊರಲ್ಲೇ, ಸೃಷ್ಟಿಯಾಗಬೇಕು.
- ಎನ್. ಅರುಂಧತಿ, ದಾವಣಗೆರೆ

ದೇಶದ ಮೇಲೆ ನಡೆಯುತ್ತಿರುವ ಅತಿಕ್ರಮಣ, ಭಯೋತ್ಪಾದನೆ ಮೆಟ್ಟಿ ನಿಲ್ಲುವ ಮೂಲಕ ಸಮಸ್ತ ಭಾರತವನ್ನು ಅಭಿವೃದ್ಧಿಯತ್ತ ಕೊಂಡ್ಯೊಯುವ ಪಕ್ಷ ಯಾವುದು ಎಂಬುದನ್ನು ಅಳಿದು ತೂಗಿ ನೋಡಿಯೇ ಮತ ನೀಡುತ್ತೇನೆ.
- ಸುಪ್ರಿಯಾ ದೊಡ್ಡಗೌಡರ, ಧಾರವಾಡ

ನನಗೆ ಇದು ಮೊದಲ ಮತದಾನದ ಸಂಭ್ರಮ. ಒಂದು ರೀತಿ ಭಯ, ಕುತೂಹಲ ಇದೆ. ಚುನಾವಣೆಗೆ ಅಷ್ಟೆಲ್ಲ ಅಬ್ಬರ, ಭಾಷಣಗಳೆಲ್ಲ ನಡೆಯುತ್ತಿದೆ. ನಾನು ಯಾವಾಗ ಮತದಾನ ಮಾಡ್ತೀನೋ ಅಂತ ಕಾಯ್ತಿದ್ದೇನೆ.  
- ರಾಜಲಕ್ಷ್ಮಿ ಹೆಗಡೆ, ವಿದ್ಯಾರ್ಥಿನಿ, ದಂಟಕಲ್

ನನ್ನ ಮತ ದೇಶದ ಭದ್ರತೆಗೆ, ಜನರಿಗೆ ನೆಮ್ಮದಿಯ ಬದುಕು ಕಟ್ಟಿಕೊಡಲು, ಭಾರತವನ್ನು ಶಕ್ತಿಶಾಲಿ ರಾಷ್ಟ್ರವನ್ನಾಗಿ ಮಾಡಲು, ನಿರು ದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಸರ್ಕಾರಕ್ಕಾಗಿ ನೀಡಬೇಕೆಂದಿದ್ದೇನೆ.
- ಪಿ. ಸ್ವಾತಿ, ವಿದ್ಯಾರ್ಥಿನಿ, ದಾವಣಗೆರೆ


ಇಂದು ಎಲ್ಲ ರಾಜಕೀಯ ಪಕ್ಷಗಳಲ್ಲಿಯೂ ಕುಟುಂಬ ರಾಜಕಾರಣ ಕಂಡು ಬರುತ್ತದೆ. ಆದ್ದರಿಂದ ದೇಶದ ಒಳಿತನ್ನು ಗಮನದಲ್ಲಿಟ್ಟುಕೊಂಡು ಹಾಗೂ ಮುಂದಿನ ಯುವ ಜನಾಂಗದ ಉತ್ತಮ ಭವಿಷ್ಯ ರೂಪಿಸುವಂತಹ ಪಕ್ಷಕ್ಕೆ ನನ್ನ ಮತ.
- ಸುಕನ್ಯಾ ಪಾಟೀಲ, ಧಾರವಾಡ

ದೇಶದಲ್ಲಿ ಮೋದಿ ಅಲೆಯಿದೆ. ನನಗೂ ಮೋದಿ ಬರಬೇಕೆಂಬ ಆಸೆಯಿದೆ. ಹೊಸ ಅವಕಾಶಕ್ಕೆ ಆದ್ಯತೆ ನೀಡಬೇಕೆಂಬ ಬಯಕೆಯಿದೆ. ಆದ್ದರಿಂದ ಮೊದಲ ಓಟು ಯಾರಿಗೆ ನೀಡಲಿ ಎನ್ನುವ ಗೊಂದಲ ನನ್ನನ್ನು ಕಾಡುತ್ತಿದೆ.
- ಟಿ.ಎಸ್. ತಿಲಕ್ ರಾಜ್, ಧಾರವಾಡ

ನಾನೊಬ್ಬಳು ಮಹಿಳೆಯಾಗಿ ನನ್ನ ವೋಟನ್ನು ಮಹಿಳೆಯ ರಕ್ಷಣೆ ಪರ ಹೋರಾಟ ಮಾಡುವ ವ್ಯಕ್ತಿ ಅಥವಾ ಪಕ್ಷದ ಅಭ್ಯರ್ಥಿಗೆ ಮತ ಹಾಕುವೆ. ಇದೇ ಪ್ರಥಮ ಬಾರಿಗೆ ಮತ ಚಲಾಯಿಸಲಿರುವ ನನಗೆ ಖುಷಿ ಅನಿಸುತ್ತಿದೆ.
- ಪಿ. ದಿವ್ಯಾಶ್ರೀ, ಬೆಳಗಾವಿ

ದೇಶ ಮತ್ತು ಸಮಾಜವನ್ನು ಪ್ರಗತಿಯತ್ತ ತೆಗೆದುಕೊಂಡು ಹೋಗುವ ಪಕ್ಷಕ್ಕೆ ವೋಟ್ ಮಾಡುತ್ತೇನೆ. ದೇಶದ ಗಡಿ ಮತ್ತು ಆಂತರಿಕ ಭದ್ರತೆಗೆ ಒತ್ತು ನೀಡುವ ನಾಯಕ ಬೇಕು. ಮೊದಲ ಮತದಾನ ತೀವ್ರ ಕುತೂಹಲ ಮೂಡಿಸಿದೆ.
- ಕಾಂಚನಾ ಪಟ್ಟಣ, ಬೆಳಗಾವಿ

ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಿದ್ದಕ್ಕೆ ಬಹಳ ಸಂತೋಷವಾಗಿದೆ. ನಿರುದ್ಯೋಗ ನಿವಾರಣೆ, ನೀರಾವರಿ, ಶೈಕ್ಷಣಿಕ ಸುಧಾರಣೆ ತರುವ ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡಲು ಮತ ಚಲಾಯಿಸುವೆ.
- ಶಾಂತು ಹದಗಲ್ಲ, ಇಂಡಿ

ಏ.17ರಂದು ನಡೆಯುವ ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡಲು ಉತ್ಸಕತೆಯಿಂದ ಕಾಯುತ್ತಿದ್ದೇನೆ. ಮತಗಟ್ಟೆ ತೆರಳಿ ಮತದಾನ ಮಾಡುವುದು ಮತದಾರನ ಕರ್ತವ್ಯವೆಂದು ತಿಳಿದು ಒಳ್ಳೆಯ ಅಭ್ಯರ್ಥಿ ಮತ ಚಲಾಯಿಸುವ ಜೊತೆಗೆ ಮಹಿಳೆಯರ ಅಭಿವೃದ್ಧಿ ಆದ್ಯತೆ ನೀಡುವ ಅಭ್ಯರ್ಥಿಗೆ ನನ್ನ ಮತ ಹಾಕಲು ಬಯಸುತ್ತೇನೆ.
- ಕಲಾವತಿ ಜಮಖಂಡಿ, ಬಸವನ ಬಾಗೇವಾಡಿ

ಮತದಾನ ಮಾಡುವ ಬಗ್ಗೆ ಕೇಳಿದ್ದೇ. ಈಗ ಮತದಾನ ಮಾಡುವ ಅವಕಾಶ ಸಿಕ್ಕಿದೆ. ಪ್ರಥಮ ಬಾರಿಗೆ ಮತದಾನ ಮಾಡಲು ಹೊರಟಿರುವ ನನಗೆ ಖುಷಿಯಾಗುತ್ತಿದೆ.ದೇಶವನ್ನು ಮುನ್ನಡೆಸುವ ಸಮರ್ಥ ನಾಯಕನಿಗೆ ಮತ ನೀಡಬೇಕೆಂದು ಇಚ್ಛಿಸಿದ್ದೇನೆ.
- ಸುಚಿತ್ ಬಾಲನ್ನವರ, ಹುಬ್ಬಳ್ಳಿ

ಅಪ್ಪ-ಅಮ್ಮ ಮತದಾನ ಮಾಡಲು ಹೋಗುವಾಗ ನಾನೂ ಮತದಾನ ಮಾಡಬೇಕೆಂಬ ಆಸೆಯಾಗುತ್ತಿತ್ತು. ಆದರೆ ಏಕೆ ಮತ ಹಾಕುತ್ತಾರೆಂಬ ಪ್ರಜ್ಞೆ ಆಗಿರಲಿಲ್ಲ. ದೇಶವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸುವ, ಉದ್ಯೋಗ, ಶಿಕ್ಷಣಕ್ಕೆ ಒತ್ತು ನೀಡುವ ಪಕ್ಷ ನನ್ನ ಚಾಯ್ಸ್.
- ಪ್ರೀತಿ ಲೊಡ್ಯಾ, ಹುಬ್ಬಳ್ಳಿ

ನಾವು ಕಾಲೇಜಿನಲ್ಲಿ ಕುಳಿತು ರಾಜಕೀಯ ವ್ಯವಸ್ಥೆಯನ್ನು ಹೀಗಳೆದ್ದಿದ್ದು ಉಂಟು. ಹದಗೆಟ್ಟಿರುವ ರಾಜಕೀಯ ವ್ಯವಸ್ಥೆಯಲ್ಲಿ ಯಾವ ಪಕ್ಷಕ್ಕೆ ಮತದಾನ ಮಾಡಬೇಕೆಂಬ ಗೊಂದಲದಲ್ಲಿದ್ದೇನೆ. ಆದರೂ ದೇಶದ ಬೇಕು ಬೇಡಗಳ ಬಗ್ಗೆ ಸ್ಪಂದಿಸುವ ಪಕ್ಷಕ್ಕೆ ನನ್ನ ಅಮೂಲ್ಯ ಮತ ನೀಡುತ್ತೇನೆ.
- ಸೌಜನ್ಯಾ ಪಾಟೀಲ, ಹುಬ್ಬಳ್ಳಿ

ಮತದಾನದ ಬಗ್ಗೆ ಕೇವಲ ಕೇಳಿದ್ದೆವು, ಓದಿದ್ದೆವು. ಆದರೆ ಈ ಬಾರಿ ನಾನೇ ಮತದಾನ ಮಾಡುತ್ತಿರುವುದು ಸಂತೋಷವನ್ನುಂಟು ಮಾಡಿದೆ. ದೇಶಕ್ಕಾಗಿ ನನ್ನ ಕೊಡುಗೆಯನ್ನು ಈ ಮೂಲಕ ನೀಡಬೇಕು.
- ಈರಣ್ಣ ಹೂಗಾರ, ಕೋಟುಮಚಗಿ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನಕ್ಕೆ ಇರುವ ಪ್ರಾಮುಖ್ಯತೆಯನ್ನು ಓದಿ ತಿಳಿದಿದ್ದೆ. ದೇಶಕ್ಕಾಗಿ ಮತದಾನದ ಮೂಲಕ ವಿಶೇಷ ಕೊಡುಗೆ ನೀಡಲು ಇದೊಂದು ಉತ್ತಮ ಅವಕಾಶ. ಉತ್ತಮರು ಅಧಿಕಾರಕ್ಕೆ ಬರಲಿ.
- ರಫೀಕ್ ಕುದುರಿ. ಗದಗ

ನಾನು ಈ ಚುನಾವಣೆ ಮೂಲಕ ಮತ ಚಲಾಯಿಸುವ ಮಹತ್ತರ ಹಕ್ಕು ಪಡೆಯುತ್ತಿದ್ದೇನೆ. ಮತವನ್ನು ಯಾವುದೇ ಕಾರಣಕ್ಕೂ ದುರುಪಯೋಗಪಡಿಸಿಕೊಳ್ಳುವುದಿಲ್ಲ. ಸ್ಥಿರ ಮತ್ತು ದೃಢ ಸರ್ಕಾರ ನೀಡುವ ಪಕ್ಷದ ಅಭ್ಯರ್ಥಿಗೆ ಮತ ನೀಡುತ್ತೇನೆ.
- ಸಂತೋಷ್ ಎನ್.ಎಂ., ಕೊಟ್ಟೂರು

ಇದೇ ಮೊದಲ ಬಾರಿಗೆ ಮತ ನೀಡಲು ಕುತೂಹಲಿಯಾಗಿದ್ದೇನೆ. ರಾಷ್ಟ್ರದ ಬೆಳವಣಿಗೆಗೆ ಲೋಕಸಭೆಯ ಚುನಾವಣೆ ಪೂರಕ ಎಂಬ ಕಾರಣಕ್ಕಾಗಿಯೇ ಮತ ನೀಡುವುದನ್ನು ಪ್ರಥಮ ಪ್ರಾಶಸ್ತ್ಯವನ್ನಾಗಿರಿಸಿಕೊಂಡು ಮತ ಚಲಾಯಿಸುವೆ.
- ಪ್ರೀತಿ ಜಿ.ಯು., ವಿದ್ಯಾರ್ಥಿ, ಕೊಟ್ಟೂರು

ಉತ್ತಮ ವ್ಯಕ್ತಿಗಳ ಆಯ್ಕೆಯಲ್ಲಿ ಗೊಂದಲವಿದೆ. ಆದರೂ ದೇಶದ ಪ್ರಜೆಯಾಗಿ ನಾನು ತಪ್ಪದೇ ಮತದಾನ ಮಾಡುತ್ತೇನೆ. ಸ್ವಾತಂತ್ರ್ಯಾನಂತರದ ಭಾರತ ಎಷ್ಟರ ಮಟ್ಟಿಗೆ ಅಭಿವೃದ್ಧಿ ಕಂಡಿದೆ? ವಂಶಾವಳಿ ರಾಜಕೀಯ ಬೇಡ.
- ರೇಣುಕಾ ಕೆ. ಮಾಗಳ

ನನಗೂ ಮತದಾನ ಸಿಗೋದು ಯಾವಾಗ ಎಂದು ಕಾತುರದಿಂದ ಕಾಯುತ್ತಿದ್ದೆ. ಈಗ ಆ ಅವಕಾಶ ಒದಗಿ ಬಂದಿದೆ. ಈ ದೇಶದ ಚುಕ್ಕಾಣಿಯನ್ನು ನನ್ನ ಒಂದು ಮತವೂ ನಿರ್ಧರಿಸಬಲ್ಲದು ಎನ್ನುವ ಹೆಮ್ಮ ನನಗಿದೆ.
  - ಶಿಲ್ಪ, ರಾಮನಗರ

ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಪ್ರಜಾಪ್ರಭುತ್ವ ಎನ್ನುವುದು ನಿಜಕ್ಕೂ ಅತ್ಯದ್ಭುತ. ರಾಷ್ಟ್ರಪತಿ, ಪ್ರಧಾನಿ, ನ್ಯಾಯಮೂರ್ತಿಯಿಂದಿಡಿದು ಸಾಮಾನ್ಯನಿಗೂ ಒಂದೇ ಮತ. ತಪ್ಪದೇ ಮತ ಹಾಕ್ತೇನೆ.
- ಕಾವ್ಯಶ್ರೀ, ರಾಮನಗರ

ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ವಿಶ್ವದಲ್ಲೇ ಸರ್ವಶ್ರೇಷ್ಠ ಎನ್ನುವುದನ್ನು ಓದಿ, ಕೇಳಿ ತಿಳಿದಿದ್ದೇವೆ. ಇಂತಹ ವ್ಯವಸ್ಥೆಯಲ್ಲಿ  ಮತ ಚಲಾಯಿಸುವ ಮೂಲಕ ನಾನೂ ಪಾಲುದಾರ ಆಗುತ್ತಿರುವುದಕ್ಕೆ ಅತೀವ ಸಂತಸವಾಗುತ್ತಿದೆ.
- ಪುನೀತ್ , ರಾಮನಗರ

ಫಸ್ಟ್ ಟೈಂ ಖುಷಿ ಇದೆ. ರಾಷ್ಟ್ರ ರಾಜಕಾರಣಕ್ಕೆ ಮತದಾನ ಮಾಡುತ್ತಿರುವುದರಿಂದ ದೇಶಕ್ಕೆ ಉತ್ತಮ ನಾಯಕರ ಅವಶ್ಯಕತೆ ಇದೆ. ಆ ನಿಟ್ಟಿನಲ್ಲಿ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಅವಕಾಶ ಸಿಕ್ಕಿದೆ.
- ಪ್ರಿಯಾ, ಹಾಸನ

ಜಾಗತೀಕರಣದೊಂದಿಗೆ ದೇಶವನ್ನು ಮುನ್ನಡೆಸುವ ನಾಯಕತ್ವ ಹೊಂದಿರುವ ಪಕ್ಷಕ್ಕೆ ನನ್ನ ಮತ ನೀಡುವೆ. ವೋಟಗಾಗಿ ಜಾತಿ, ಭಾಷೆ ಹಾಗೂ ತೊಳ್ಬಲದ ರಾಜಕೀಯ ಮಾಡುವ ರಾಜಕಾರಣಿಗಳ ವಿರುದ್ಧ ನನ್ನ ಹಕ್ಕು ಚಲಾಯಿಸುವೆ. ಮೊದಲ ಮತದಾನ ಹಕ್ಕು ಸಿಕ್ಕಿರುವುದಕ್ಕೆ ಖುಷಿಯಾಗಿದೆ.
- ರವಿಕುಮಾರ, ಬೆಳಗಾವಿ

ಮೊದಲ ಬಾರಿಗೆ ಮತದಾನ ಮಾಡುತ್ತಿರುವುದು ಸಂತಸ ತಂದಿದೆ. ಸ್ವಲ್ಪ ಭಯ ಕೂಡ ಇದೆ. ಉತ್ತಮ ಅಭ್ಯರ್ಥಿಗೆ ಮತದಾನ ಮಾಡಲು ಚಿಂತಿಸಿದ್ದೇನೆ. ನಾವು ಸಹ ಮತದಾನದ ಹಕ್ಕನ್ನು ಹೊಂದಿರುವುದು ಹೆಚ್ಚಿನ ಸಂತೋಷ ಉಂಟು ಮಾಡಿದೆ.
- ಹೇಮಲತಾ, ಹಾಸನ

ಮತದಾನ ನನ್ನ ಕರ್ತವ್ಯ. ಪ್ರಜಾತಂತ್ರ ವ್ಯವಸ್ಥೆಯನ್ನು ಬಲಪಡಿಸಲು ನಾನು ಸಹ ಕೈಜೋಡಿಸುತ್ತೇನೆ, ಮತದಾನದಲ್ಲಿ ಕಡ್ಡಾಯವಾಗಿ ಭಾಗವಹಿಸುವುದೇ ನನ್ನ ಮೊದಲ ಆದ್ಯತೆ ಹಾಗೂ ಕರ್ತವ್ಯ.
- ಎಸ್. ರೇಖಾ, ವಿದ್ಯಾರ್ಥಿನಿ, ಕೋಲಾರ

ಇದೇ ಪ್ರಥಮ ಬಾರಿಗೆ ವೋಟ್ ಮಾಡ್ತಾ ಇರೋದು, ನಿಜಕ್ಕೂ ಖುಷಿಯಾಗುತ್ತಿದೆ. ಯುವ ಸಮೂಹವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಹಲವು ಯೋಜನೆ ರೂಪಿಸಬೇಕಾದ ಅವಶ್ಯಕತೆ ಇದೆ.
- ರೂಪಾ, ಚಿಕ್ಕಮಗಳೂರು

ದೇಶ ಭ್ರಷ್ಟಾಚಾರದಿಂದ ನಲುಗುತ್ತಿದೆ. ಅಭಿವೃದ್ಧಿ ಇಲ್ಲದಂತಾಗಿದೆ. ಇದನ್ನು ನೋಡಿ ನನಗೂ ನೋವಾಗಿದೆ. ಪರಿಹಾರ ನೀಡಲು ನನಗೆ ಮತವೇ ಸಾಧನ. ದೇಶ ಅಭಿವೃದ್ಧಿಯಾಗಿ, ಶಿಕ್ಷಣ ವ್ಯವಸ್ಥೆ ಸುಧಾರಿಸಲಿ ಎಂಬುದು ನನ್ನ ಆಶಯ.
- ಪ್ರಶಾಂತಕುಮಾರ್,  ಮೈಸೂರು

ಪ್ರತಿಯೊಬ್ಬರೂ ತಪ್ಪದೆ ಮತ ಚಲಾವಣೆ ಮಾಡಬೇಕೆಂಬುದು ನನ್ನ ಅಭಿಲಾಷೆ. ದೇಶದ ಹಿತ ಕಾಪಾಡುವ, ಅಭಿವೃದ್ಧಿಗೆ ಆದ್ಯತೆ ನೀಡುವ ಪಕ್ಷದ ಆಯ್ಕೆ ನಮ್ಮದಾಗಬೇಕು. ಆ ನಿಟ್ಟಿನಲ್ಲಿ ಒಳ್ಳೆಯ ವ್ಯಕ್ತಿಗೆ ನನ್ನ ವೋಟ್.
- ಎಂ.ಬಿ. ಮಾನಸ. ಚಿಕ್ಕಮಗಳೂರು

ಮೊದಲ ಸಲ ಚಲಾಯಿಸುತ್ತಿರುವುದು ಹಾಗೂ ಒಳ್ಳೆಯ ಅಭ್ಯರ್ಥಿ ಆಯ್ಕೆಗೆ ನನಗೂ ಸ್ವಾತಂತ್ರ್ಯ ಸಿಕ್ಕಿರುವುದಕ್ಕೆ ಹರ್ಷವಾಗುತ್ತಿದೆ. ದೇಶವನ್ನು ಸಮಾನತೆಯತ್ತ ಕೊಂಡೊಯ್ದು ಅಭಿವೃದ್ಧಿಪಡಿಸಬೇಕು. ಅಂತವರಿಗೆ ಮತ ನೀಡುತ್ತೇನೆ.
- ಎಂ. ಆರಾಧನಾ, ಗೋಕುಲಂ, ಮೈಸೂರು

ಫಸ್ಟ್ ಟೈಂ ವೋಟ್ ಮಾಡ್ತಾ ಇದೀನಿ, ನಿಜಕ್ಕೂ ಖುಷಿಯಾಗ್ತಾ ಇದೆ. ದೇಶದ ಏಳಿಗೆಗಾಗಿ ಶ್ರಮಿಸುವ ರಾಜಕೀಯ ಪಕ್ಷ ಹಾಗೂ ಆ ಪಕ್ಷದಿಂದ ಸ್ಪರ್ಧಿಸಿರುವ ವ್ಯಕ್ತಿಯನ್ನು ನೋಡಿ ಮತ ಚಲಾವಣೆ ಮಾಡುತ್ತೇನೆ.
- ಯಶವಂತ್, ಚಿಕ್ಕಮಗಳೂರು

ಸ್ವಾರ್ಥಕ್ಕಾಗಿ ಹಾಗೂ ಸಮಯ ಸಾಧಕತನಕ್ಕಾಗಿ ದುರುಪಯೋಗ ಮಾಡಿಕೊಳ್ಳುವವರಿಗೆ ಎಚ್ಚರಿಕೆ ನೀಡುವ ಸಲುವಾಗಿ ನನ್ನ ಮತ ಚಲಾಯಿಸುತ್ತೇನೆ, ಎಲ್ರೂ ಇದೇ ರೀತಿ ಚಿಂತನೆ ಮಾಡಿದರೆ ಸಂಸತ್ತಿಗೆ ಯೋಗ್ಯರನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ.
- ವಿ.ಆರ್. ಸುರಜ್, ವಿದ್ಯಾರ್ಥಿ, ಕೋಲಾರ

ಇಂದು ದೇಶದಲ್ಲಿ ಮಹಿಳೆಯರಿಗೆ ಅಭದ್ರತೆ ಕಾಡುತ್ತಿದೆ. ಆದ್ದರಿಂದ ಯಾವ ಪಕ್ಷ ಮಹಿಳೆಯರಿಗೆ ಗೌರವ ಹಾಗೂ ರಕ್ಷಣೆ ನೀಡಬಹುದು ಎಂಬುದನ್ನು ಯೋಚಿಸಿ ಆ ಪಕ್ಷದ ಅಭ್ಯರ್ಥಿಗೆ ಮತ ಹಾಕಲಿದ್ದೇನೆ. ಹಾಗಂತ ಆ ಪಕ್ಷದ ಅಭ್ಯರ್ಥಿ ಹೇಗಿದ್ದರೂ ಮತ ಚಲಾಯಿಸುವುದಿಲ್ಲ.
- ನಿಖಿತಾ ಜೆ., ವಿದ್ಯಾರ್ಥಿನಿ, ಹಾವೇರಿ

ಇದುವರೆಗೆ ಆಸಕ್ತಿಯಿದ್ದರೂ ಮತದಾನದ ಹಕ್ಕು ಸಿಕ್ಕಿರಲಿಲ್ಲ. ಈ ಬಾರಿ ಹಕ್ಕು ಸಿಕ್ಕಿದ್ದರಿಂದ ಯೋಗ್ಯ ವ್ಯಕ್ತಿಯ ಆಯ್ಕೆ ಮಾಡುವ ನಿಟ್ಟಿನಲ್ಲಿ ಯೋಚಿಸಿ ಮತ ಚಲಾಯಿಸಲಿದ್ದೇನೆ. ಕ್ಷೇತ್ರದ ಸಮಸ್ಯೆ ಅರಿತಿರುವ ಹಾಗೂ ಭ್ರಷ್ಟಾಚಾರ ರಹಿತ ವ್ಯಕ್ತಿಗೆ ನಾನು ಮತ ಹಾಕುತ್ತೇನೆ.
- ಸಚಿನ್ ಜಾನವೇಕರ, ವಿದ್ಯಾರ್ಥಿ, ಹಾವೇರಿ

ಮತದಾನ ಪ್ರಜಾಪ್ರಭುತ್ವದ ಮಹತ್ವದ ಅಂಶವಾಗಿದ್ದು, ಸಂಸತ್ತಿಗೆ ಯೋಗ್ಯರನ್ನು ಆಯ್ಕೆ ಮಾಡಿ ಕಳುಹಿಸುವುದು ಅಗತ್ಯವಾಗಿದೆ. ಆದ್ದರಿಂದ ಏ.17ರ ಮತದಾನದ ದಿನಕ್ಕಾಗಿ ಕಾಯುತ್ತಿದ್ದೇನೆ. ದೇಶದ ರಕ್ಷಣೆ, ನಿರುದ್ಯೋಗ ನಿವಾರಣೆ, ಬೆಲೆ ಏರಿಕೆ ತಡೆ ಇತ್ಯಾದಿ ಅಂಶಗಳಿಗೆ ಮಹತ್ವ ನೀಡುವ ಪಕ್ಷವನ್ನು ಬೆಂಬಲಿಸಲಿದ್ದೇನೆ.
- ನೇತ್ರಾ ಎಸ್. ರಿತ್ತಿ, ಗೃಹಿಣಿ, ಹಾವೇರಿ

ಒಂದು ದಿನ ರಜೆ ಸಿಕ್ಕಿತೆಂದು ಮನೆಯೊಳಗೆ ಕುಳಿತರೆ ಮುಂದಿನ ಐದು ವರ್ಷಗಳ ಕಾಲ ಕಷ್ಟದ ಪರಿಸ್ಥಿತಿ ಅನುಭವಿಸಬೇಕಾಗುತ್ತದೆ. ಅದ್ದರಿಂದ ನಾನು ಕಡ್ಡಾಯವಾಗಿ ಮತದಾನ ಮಾಡುತ್ತೇನೆ. ಮೊದಲ ಬಾರಿ ಮತದಾನಕ್ಕೆ ಅವಕಾಶ ಸಿಕ್ಕಿರುವುದನ್ನು ಮಿಸ್ ಮಾಡಿಕೊಳ್ಳುವುದಿಲ್ಲ.
- ಮಾರುತಿ ನಾಯಕ, ಯಾದಗಿರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.