ತಾಯಿ ಗಂಗೆಯೇ ಬಾ ಎಂದಳು

ವಾರಾಣಸಿ: ಅದು ಮೋದಿ ಅಲೆಯಲ್ಲ, ಮಹಾಪೂರ...
ಹೌದು. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಗುರುವಾರ ನಾಮಪತ್ರ ಸಲ್ಲಿಸುವ ಮುನ್ನ ವಾರಾಣಸಿಯಲ್ಲಿ ನಡೆಸಿದ ರೋಡ್ಶೋಗೆ ಸಾಗರದಂತೆ ಜನರು ಹರಿದುಬಂದರು. ಎಲ್ಲಿ ನೋಡಿದರಲ್ಲಿ ಜನ ಪ್ರವಾಹವೇ ಕಾಣುತ್ತಿತ್ತು. ಭಾರಿ ಸಂಖ್ಯೆಯ ಜನರ ಬೆಂಬಲದೊಂದಿಗೆ ಮೋದಿ ಅವರು ದೇಗುಲ ನಗರಿಯಲ್ಲಿ ತಮ್ಮ ನಾಮಪತ್ರವನ್ನು ಸಲ್ಲಿಸಿದರು. ವಾರಾಣಸಿ ಜನತೆ ತೋರಿಸಿದ ಪ್ರೀತಿ ನೋಡಿ ಭಾವುಕರಾದ ಮೋದಿ, 'ನನ್ನನ್ನು ತಾಯಿ ಗಂಗೆಯೇ ಇಲ್ಲಿಗೆ ಆಹ್ವಾನಿಸಿದಳು' ಎಂದರು.
ಸೂಚಕರಾರು?: ಮದನ್ ಮೋಹನ್ ಮಾಳವೀಯ ಅವರ ಮೊಮ್ಮಗ ಗಿರಿಧರ್ ಮಾಳವೀಯ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಚಂದು ಲಾಲ್ ಮಿಶ್ರಾ, ಅಂಬಿಗ ವೀರಭದ್ರ ನಿಶಾದ್, ನೇಕಾರ ಅಶೋಕ್ ಅವರು ಮೋದಿ ನಾಮಪತ್ರಕ್ಕೆ ಸೂಚಕರಾಗಿದ್ದರು.
ಮಾಳವೀಯಗೆ ನಮನ: ನಾಮಪತ್ರ ಸಲ್ಲಿಸುವ ಮುನ್ನ ಮೋದಿ ಅವರು ನೇರವಾಗಿ ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ ತೆರಳಿ ಮದನ್ ಮೋಹನ್ ಮಾಳವೀಯರ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು. ಬಳಿಕ ಲಹುರಾಬೀರ್ನಿಂದ ಕಛ್ರಿವರೆಗೆ 3 ಕಿ.ಮೀ. ರೋಡ್ ಶೋ ನಡೆಸಿದರು. ತಮ್ಮ ನೆಚ್ಚಿನ ನಾಯಕನನ್ನು ನೋಡಲು ಭಾರಿ ಸಂಖ್ಯೆಯಲ್ಲಿ ಸೇರಿದ್ದ ಜನ, ಮೋದಿಯವರ ಮೇಲೆ ಹೂಮಳೆಗೆರೆದು ಸ್ವಾಗತಿಸಿದರು. ನಗರದ ಎಲ್ಲ 9 ವಾರ್ಡ್ಗಳಲ್ಲಿನ ಬಿಜೆಪಿ ಘಟಕದ ಸದಸ್ಯರೂ ಮೆರವಣಿಗೆಯ ಮೂಲಕ ರೋಡ್ಶೋ ನಡೆಯುವ ಪ್ರದೇಶ ತಲುಪಿದ್ದರು.
ಮಾತೆ ಗಂಗೆಯ ಆಹ್ವಾನವಿದು: ಮೋದಿ
ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಮೋದಿ, 'ಮೊದ ಮೊದಲು ನನ್ನನ್ನು ಬಿಜೆಪಿ ಇಲ್ಲಿಗೆ ಕಳುಹಿಸಿತು ಎಂದು ತಿಳಿದಿದ್ದೆ. ಕೆಲವೊಮ್ಮೆ ನಾನು ಕಾಶಿಗೆ ಹೋಗುತ್ತಿದ್ದೇನೆ ಎಂದು ಭಾವಿಸುತ್ತಿದ್ದೆ. ಆದರೆ ಇಲ್ಲಿ ಬಂದ ಮೇಲೆ ನನಗೆ ಗೊತ್ತಾಯಿತು, ನನ್ನನ್ನು ಯಾರೂ ಇಲ್ಲಿಗೆ ಕಳುಹಿಸಿಲ್ಲ, ನಾನಾಗಿಯೇ ಬಂದಿಲ್ಲ. ಬದಲಾಗಿ ತಾಯಿ ಗಂಗಯೇ ನನ್ನನ್ನು ಇಲ್ಲಿಗೆ ಆಹ್ವಾನಿಸಿದಳು' ಎಂದರು. ತನ್ನ ತಾಯಿಯ ಮಡಿಲಿಗೆ ಬಂದು ಸೇರಿದಾಗ ಮಗುವಿನ ಭಾವನೆ ಹೇಗಿರುತ್ತದೋ, ವಾರಾಣಸಿಗೆ ಬಂದಾಗ ನನಗೂ ಅಂತಹುದೇ ಭಾವನೆ ಬಂತು ಎಂದೂ ಹೇಳಿದರು ಮೋದಿ. ದೇವರೇ, ನನ್ನ ನಗರಕ್ಕಾಗಿ ದುಡಿಯಲು, ನನ್ನ ಬಡ ನೇಕಾರ ಬಂಧುಗಳಿಗೆ ನೆರವಾಗಲು, ಕಾಶಿಯನ್ನು ಆಧ್ಯಾತ್ಮಿಕ ರಾಜಧಾನಿಯನ್ನಾಗಿಸಲು ನನಗೆ ಶಕ್ತಿ ಕೊಡು ಎಂದೂ ಮೋದಿ ಪ್ರಾರ್ಥಿಸಿದರು. ಇದೇ ವೇಳೆ, ಗಂಗೆಯನ್ನು ಶುದ್ಧೀಕರಿಸಲು ತುಂಬಾ ಕೆಲಸ ಮಾಡಬೇಕಿದೆ. ಗಂಗಾವನ್ನು ಸಾಬರಮತಿಯಂತೆ ಮಾಡುತ್ತೇನೆ ಎಂಬ ಭರವಸೆಯನ್ನೂ ನೀಡಿದರು.
ನೇಕಾರರಿಗೆ ಭರವಸೆ ನೀಡಿದ ಮೋದಿ: ವಾರಾಣಸಿ ಕ್ಷೇತ್ರದಲ್ಲಿ ಅಧಿಕವಾಗಿರುವ ನೇಕಾರ ಸಮುದಾಯದ ಮತ ಸೆಳೆಯುವ ನಿಟ್ಟಿನಲ್ಲೂ ಮೋದಿ ಅನೇಕ ಭರವಸೆಗಳನ್ನು ನೀಡಿದರು. ನಾನು ಪ್ರಧಾನಿಯಾದರೆ ನೇಕಾರರ ವ್ಯಾಪಾರ ಸುಧಾರಿಸುವಂತೆ ಅವರಿಗೆ ಉತ್ತೇಜನ ನೀಡುತ್ತೇನೆ. ತಾಂತ್ರಿಕ ಮೇಲ್ದರ್ಜೆ, ಮಾರ್ಕೆಟಿಂಗ್, ಬ್ರ್ಯಾಂಡಿಂಗ್, ವಿನ್ಯಾಸಕ್ಕೆ ಬೇಕಾದ ಎಲ್ಲ ಸೌಲಭ್ಯಗಳನ್ನೂ ಒದಗಿಸುತ್ತೇನೆ. ಚೀನೀಯರ ಜತೆ ಕಾಶಿ ನೇಕಾರರು ಸ್ಪರ್ಧೆ ಮಾಡಲು ಏಕೆ ಸಾಧ್ಯವಿಲ್ಲ ಎಂಬುದನ್ನು ನಾನೂ ನೋಡುತ್ತೇನೆ ಎಂದರು ಮೋದಿ. ಏತನ್ಮಧ್ಯೆ, ನಾಮಪತ್ರ ಸಲ್ಲಿಸಿದ ಮೋದಿ ಅವರಿಗೆ ಬಿಜೆಪಿ ನಾಯಕ ಮುರಳಿ ಮನೋಹರ ಜೋಶಿ ಸೇರಿದಂತೆ ಹಲವರು ಅಭಿನಂದಿಸಿದರು.
ಎಫ್ಐಆರ್ಗೆ ಕಾಂಗ್ರೆಸ್ ಒತ್ತಾಯ: ಇದೇ ವೇಳೆ, ಗುರುವಾರ ಮತದಾನ ನಡೆಯುತ್ತಿದ್ದ ಕ್ಷೇತ್ರಗಳಲ್ಲೂ ಮೋದಿ ರೋಡ್ಶೋವನ್ನು ಮಾಧ್ಯಮಗಳು ಪ್ರಸಾರ ಮಾಡುವ ಮೂಲಕ ನೀತಿ ಸಂಹಿತೆಯನ್ನು ಉಲ್ಲಂಘಿಸಿವೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇದು ಮತದಾನ ನಡೆಯುತ್ತಿರುವ ಕ್ಷೇತ್ರಗಳ ಜನರ ಮೇಲೆ ಪ್ರಭಾವ ಬೀರಲು ಬಿಜೆಪಿ ನಡೆಸಿದ ತಂತ್ರ ಎಂದೂ ದೂರಿದೆ.
ಮೋದಿ ಅಲೆ ಇನ್ನು ಸುನಾಮಿ: ಶಾ
ವಾರಾಣಸಿ/ನವದೆಹಲಿ: ಮೋದಿ ಸುನಾಮಿಗೆ ಉತ್ತರಪ್ರದೇಶದಲ್ಲಿ ಎಸ್ಪಿ, ಬಿಎಸ್ಪಿ ಮತ್ತು ಕಾಂಗ್ರೆಸ್ ನಾಶವಾಗಲಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮಿತ್ ಶಾ ಹೇಳಿದ್ದಾರೆ. ಮೋದಿ ನಾಮಪತ್ರ ಸಲ್ಲಿಕೆ ಬಳಿಕ ಅವರು ಮಾತನಾಡಿದರು. ಇದುವರೆಗೆ ಉತ್ತರ ಪ್ರದೇಶದಲ್ಲಿ ಮೋದಿ ಅಲೆ ಇತ್ತು. ಅವರು ನಾಮಪತ್ರ ಸಲ್ಲಿಸಿದ ಬಳಿಕ ಅದು ಸುನಾಮಿಯಾಗಿ ಪರಿವರ್ತನೆಯಾಗಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಲೇವಡಿ: ಉತ್ತರಪ್ರದೇಶದಲ್ಲಿ ಮೋದಿ ಅಲೆ ಸುನಾಮಿಯಾಗಿ ಪರಿವರ್ತನೆಯಾಗಲಿದೆ ಎಂಬ ಶಾ ಹೇಳಿಕೆಗೆ ಕಾಂಗ್ರೆಸ್ ಲೇವಡಿ ಮಾಡಿದೆ. 'ಮೋದಿ ಅವರು ದೊಡ್ಡ ಅಧಿಕಾರದಾಹಿ. ಸುನಾಮಿ ಯಾವತ್ತೂ ನಾಶ ಹಾಗೂ ನೋವನ್ನು ತರುವಂಥದ್ದು. ಹಾಗಾಗಿ ಮೋದಿ ದೇಶವನ್ನೇ ನಾಶ ಮಾಡಲಿದ್ದಾರೆಂದು ಕಾಂಗ್ರೆಸ್ ವಕ್ತಾರ ಆನಂದ್ ಶರ್ಮಾ ಹೇಳಿದ್ದಾರೆ. ಜತೆಗೆ, ದೇಶವನ್ನು ರಕ್ಷಿಸಲೆಂದು ದೇವರು ನನ್ನನ್ನು ಆಯ್ಕೆ ಮಾಡಿದ್ದಾರೆ ಎಂಬ ಮೋದಿ ಹೇಳಿಕೆಗೂ ಶರ್ಮಾ ತಿರುಗೇಟು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


