ಪ್ರಧಾನ ಸುದ್ದಿ

ಮೇವಿಲ್ಲದ ಮಾಸ

ಮೇವಿಲ್ಲದ ಮಾಸ
Published On :

-ಹಾಸನದಲ್ಲಿ ಹೊರರಾಜ್ಯಕ್ಕೆ ಮೇವು ಸಾಗಾಟ ನಿಷೇಧ ಚಾಮರಾಜನಗರದಲ್ಲಿ 6 ಗೋಶಾಲೆ ಆರಂಭ ಉಡುಪಿಗೆ ಶಿವಮೊಗ್ಗದಿಂದ ಮೇವು ಆಮದು ರಾಯಚೂರಲ್ಲಿ ಲೋಡ್ ಹುಲ್ಲಿಗೆ 7, 8 ಸಾವಿರ ಕೊಟ್ಟು ಖರೀದಿ ಗದಗಿನಲ್ಲಿ ಶ್ರೀಗಳು ತೆರೆದ ಗೋಶಾಲೆಯಲ್ಲಿ ಜಾನುವಾರು ಬಿಡುತ್ತಿರುವ ರೈತರು ಕೊಪ್ಪಳದಲ್ಲಿ ಮೇವಿಗೆ ಬರವಿದ್ದರೂ, ಹೊರ ಜಿಲ್ಲೆಗೆ ಸಾಗಾಟಕ್ಕೆ ನಿಷೇಧವಿಲ್ಲ ಹುಬ್ಬಳ್ಳಿಯಲ್ಲಿ ಇನ್ನೂ ಮೇವು ಬ್ಯಾಂಕ್ ಸ್ಥಾಪನೆಗೆ ಚಿಂತಿಸದ ಜಿಲ್ಲಾಡಳಿತ ಹಾವೇರಿಯಲ್ಲಿ ಒಣಗಿದ ಕೆರೆ, ಕಟ್ಟೆಗಳು, ಜಾನುವಾರುಗಳಿಗೆ ಸಿಗದ ಮೇವು ಚಿಕ್ಕಮಗಳೂರಲ್ಲಿ ಮೇವಿಗಾಗಿ ದಿನಕ್ಕೆ 100ರಿಂದ 150 ವೆಚ್ಚ ಬೀದರ್‌ನಲ್ಲಿ 8 ವರ್ಷಗಳ ಹಿಂದಿನ ಜಾನುವಾರು ಗಣತಿ ಆಧಾರದಲ್ಲಿ ಸಿದ್ಧತೆ ಬಿಜಾಪುರದಲ್ಲಿ ಅಕಾಲಿಕ ಮಳೆಯಿಂದಾಗಿ ಹಾಳಾದ ಬಿಳಿಜೋಳ ಚಿಕ್ಕಬಳ್ಳಾಪುರದಲ್ಲಿ ಮೇವಿಲ್ಲದೇ ಗುಡ್ಡಗಳಲ್ಲಿ ಮೇಯಿಸಲಾಗುತ್ತಿದೆ ಯಾದಗಿರಿಯಲ್ಲಿ 5, 6 ಸಾವಿರ ಕೊಟ್ಟು ಮೇವು ಖರೀದಿ ಗುಲ್ಬರ್ಗದಲ್ಲಿ ಜಿಲ್ಲಾಡಳಿತದಿಂದ ಯಾವುದೇ ಕ್ರಮವಿಲ್ಲ



ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಜಲಕ್ಷಾಮವಷ್ಟೇ ಅಲ್ಲ. ಮೇವಿನ ಕ್ಷಾಮವೂ ತಲೆದೋರುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ.
ಸದ್ಯದ ಮಟ್ಟಿಗೆ ಬಹುತೇಕ ಜಿಲ್ಲೆಗಳಲ್ಲಿ ಅಷ್ಟಾಗಿ ಸಮಸ್ಯೆ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದರೂ, ಆಂತರಿಕವಾಗಿ ಗಮನಿಸಿದಲ್ಲಿ ಬಿಗಡಾಯಿಸುವಂತೆ ಕಾಣುತ್ತಿದೆ. ಇನ್ನು ವಾರ ಅಥವಾ 15 ದಿನದಲ್ಲಿ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ 'ಮೇವು' ಜಾನುವಾರಗಳ ಬಾಯಿಗೆ ಸಿಗುವುದಿಲ್ಲ. ಬದಲಾಗಿ ವಿರೋಧ ಪಕ್ಷಗಳ ಬಾಯಿಗೆ ಸಿಗುತ್ತದೆ.
ಯಾವ ಜಿಲ್ಲೆಯಲ್ಲಿ ಸಮಸ್ಯೆ ಅಷ್ಟಾಗಿ ಇಲ್ಲ, ಎಲ್ಲಿ ಅಲ್ಪ ಪ್ರಮಾಣದಲ್ಲಿದೆ, ತೀವ್ರ ಬವಣೆ ಎದುರಿಸುತ್ತಿರುವ ಜಿಲ್ಲೆ ಯಾವುದು ಎಂಬ ಬಗ್ಗೆ 'ಕನ್ನಡಪ್ರಭ' ರಿಯಾಲಿಟಿ ಚೆಕ್ ಮಾಡಿದಾಗ ಸಿಕ್ಕ ಮಾಹಿತಿಯನ್ನು ನಿಮ್ಮ ಮುಂದಿಡುತ್ತಿದ್ದೇವೆ.
ಸಮಸ್ಯೆ ಎಲ್ಲುಂಟು: ಕೊಪ್ಪಳ, ಗದಗ, ಧಾರ ವಾಡ, ಯಾದಗಿರಿ, ಬಿಜಾಪುರ, ಬೀದರ್, ಗುಲ್ಬರ್ಗ, ಹಾವೇರಿ, ಚಿಕ್ಕಮಗಳೂರು, ರಾಯಚೂರು ಹಾಗೂ ಹಾಸನದಲ್ಲಿ ಮೇವಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಆದರೆ ಜಿಲ್ಲಾಡಳಿತ, ಅಧಿಕಾರಿಗಳು ಮಾತ್ರ ಅಂತಹ ಯಾವುದೇ ಸಮಸ್ಯೆ ಇಲ್ಲ ಎಂದೇ ಹೇಳಿಕೊಳ್ಳುತ್ತಿದ್ದಾರೆ.
ಶಿವಮೊಗ್ಗ, ಕೋಲಾರ, ಚಿತ್ರದುರ್ಗ, ಬಳ್ಳಾರಿ, ಮಂಡ್ಯ ಜಿಲ್ಲೆಗಳಲ್ಲಿನ ರೈತರು ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ತಡೆದುಕೊಳ್ಳುವಷ್ಟು ಕ್ರಮವನ್ನು ಅವರೇ ಕೈಗೊಂಡಿದ್ದಾರೆ. ಆದರೆ, ಮೈಸೂರು, ತುಮಕೂರು, ರಾಮನಗರ, ಬಾಗಲಕೋಟೆ, ದಕ್ಷಿಣಕನ್ನಡ, ಕೊಡಗು, ದಾವಣಗೆರೆ ಜಿಲ್ಲೆಗಳಲ್ಲಿ ಅಷ್ಟಾಗಿ ಸಮಸ್ಯೆ ಇಲ್ಲ.
ಕೊರತೆ: ಹಾಸನದಲ್ಲಿ ಕೆರೆ, ಕಟ್ಟೆಗಳು ಬತ್ತಿದ್ದರಿಂದ ಮೇವಿಗೆ ತೀರಾ ಸಮಸ್ಯೆಯಾಗಿದೆ. ಇದರಿಂದಾಗಿ ಹೊರರಾಜ್ಯಗಳಿಗೆ ಮೇವು ಸಾಗಾಟವನ್ನು ನಿಷೇಧಿಸಲಾಗಿದೆ. ಚಾಮರಾಜನಗರದಲ್ಲಿ ಮಳೆ ಬಾರದಿದ್ದರೆ ಗೋಶಾಲೆಗಳೇ ಗತಿ ಎಂಬ ಸ್ಥಿತಿ ತಲುಪಿದೆ. ಇಷ್ಟು ವರ್ಷ ಸಮಸ್ಯೆ ಇಲ್ಲದೇ ನಿರಾಳವಾಗಿದ್ದ ಉಡುಪಿ ಜಿಲ್ಲೆಯಲ್ಲಿ ಪ್ರಸಕ್ತ ಬಾರಿ ದಿಢೀರ್ ಕೊರತೆ ಎದುರಾಗಿದೆ. ರಾಯಚೂರಿನಲ್ಲಿ ಜಿಲ್ಲಾಡಳಿತದ ಪ್ರಕಾರ ಯಾವುದೇ ಸಮಸ್ಯೆ ಇಲ್ಲ. ಆದರೆ ರೈತರ ಕಷ್ಟ ಕೇಳುವವರಿಲ್ಲ. ಹೀಗಾಗಿ ಹೆಚ್ಚಿನ ರೈತರು ಮೇವು ಖರೀದಿಯಲ್ಲಿ ತೊಡಗಿದ್ದಾರೆ. ಗದಗಿನಲ್ಲಿ ಮೇವಿಗೆ ತೀವ್ರ ತತ್ವಾರವಿದೆ. ಸಣ್ಣ, ಮಧ್ಯಮ ರೈತರು ಮೇವು ಕೊಳ್ಳಲಾಗದೇ ಜಾನುವಾರಗಳನ್ನು ಮಾರಾಟ ಮಾಡುವ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಬರಪೀಡಿತ ಜಿಲ್ಲೆಯಂದು ಕೊಪ್ಪಳವನ್ನು ಘೋಷಣೆ ಮಾಡಿದ್ದರೂ ಮೇವಿಗಾಗಿ ಜಿಲ್ಲಾಡಳಿತ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಧಾರವಾಡದಲ್ಲಿ ಹಣ ಕೊಟ್ಟರೂ ಮೇವು ಸಿಗದ ಸ್ಥಿತಿ ಇದ್ದು ರೈತ ಹೈರಾಣಾಗಿದ್ದಾನೆ. ಹಾವೇರಿಯ ಆರೂ ತಾಲೂಕುಗಳು ಬರಪೀಡಿತವಾಗಿದ್ದು, ಜಾನುವಾರುಗಳಿಗೆ ಹಸಿರು, ಒಣ ಆಹಾರ ಸಿಗದಂತಾಗಿದೆ. ಚಿಕ್ಕಮಗಳೂರಿನ ರೈತರ ಸಮಸ್ಯೆ ಅಧಿಕಾರಿಗಳಿಗೆ ಅರ್ಥವೇ ಆಗುತ್ತಿಲ್ಲ. ಇಲ್ಲಿ ಜಾನುವಾರು ಸಾಕಣೆ ದುಬಾರಿಯಾಗಿದೆ. ಬೀದರ್‌ನಲ್ಲೂ ಅಧಿಕಾರಿಗಳ ಲೆಕ್ಕಾಚಾರದಲ್ಲಿ ಎಲ್ಲವೂ ಸುಗಮವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಹಲವೆಡೆ ಸಮಸ್ಯೆ ತೀರಾ ಉಲ್ಬಣಗೊಂಡಿದೆ.
ಬಿಜಾಪುರದಲ್ಲಿ ಈಗಾಗಲೇ ಮೇವಿನ ಅನ್ವೇಷಣೆ ಆರಂಭವಾಗಿದ್ದು, ರೈತರು ತಮ್ಮ ಕೈಲಾದ ಮಟ್ಟಿಗೆ ಕೊಂಡುಕೊಳ್ಳುತ್ತಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಸಮಸ್ಯೆ ಹೆಚ್ಚಾಗಿದ್ದು, ಇರುವ ಮೇವನ್ನು ಯಾರೂ ಮಾರುತ್ತಿಲ್ಲ. ಯಾದಗಿರಿಯಲ್ಲಿ ಭೂಮಿಯೂ ಒಣಗಿರುವುದರಿಂದ ಮೇಯಲು ಏನೂ ಸಿಗುತ್ತಿಲ್ಲ. ಆದರೆ ಅಧಿಕಾರಿಗಳದ್ದು ಅದೇ ರಾಗ. ನೋಪ್ರಾಬ್ಲಂ. ಗುಲ್ಬರ್ಗದಲ್ಲಿ ಸಮಸ್ಯೆ ಇದ್ದರೂ ಗೋಶಾಲೆ ತೆರೆದಿಲ್ಲ. ಮೇವು ಬ್ಯಾಂಕ್ ಸಹ ಆರಂಭವಾಗಿಲ್ಲ.
ಉಳಿದೆಡೆ ಹೇಗೆ?: ಇನ್ನುಳಿದ ಜಿಲ್ಲೆಗಳಲ್ಲಿ ಜಿಲ್ಲಾಡಳಿತ ಹಾಗೂ ಅಧಿಕಾರಿಗಳ ಪ್ರಕಾರ, ಕೆಲವು ಕಡೆ 15 ದಿನ ಮೇವು ಸಾಕಾದರೆ, ಮತ್ತೆ ಕೆಲವು ಕಡೆ ತಿಂಗಳು, ಎರಡು ಅಥವಾ ಮೂರು ತಿಂಗಳು ಸಾಕಾಗುವಷ್ಟು ಮೇವಿನ ಸಂಗ್ರಹ ಇದೆ. ಆದರೆ ಇದು ಕೇವಲ ಅವರ ಲೆಕ್ಕಾಚಾರವೇ. ವಾಸ್ತವದಲ್ಲಿ ಸ್ಥಿತಿ ಬೇರೆಯೇ ಇದೆ ಎಂಬುದು ಇನ್ನು 10 ದಿನದಲ್ಲಿ ಮಳೆ ಬರದಿದ್ದರೆ ತಿಳಿಯುತ್ತದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.