ರಾಜಸ್ತಾನ: ನರ್ಸ್ ವರ್ಗಾವಣೆಗೆ ಸಂಬಂಧಿಸಿದಂತೆ ಚೀಫ್ ಮೆಡಿಕಲ್ ಆ್ಯಂಡ್ ಹೆಲ್ತ್ ಆಫೀಸರ್ ಗೆ (ಸಿಎಂಹೆಚ್‌ಓ) ಬೆದರಿಕೆಯೊಡ್ಡಿದ ಪ್ರಕರಣದಲ್ಲಿ ಬಿಜೆಪಿ ಶಾಸಕನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ರಾಜಸ್ತಾನದ ಗೃಹ ಸಚಿವರು ಹೇಳಿದ್ದಾರೆ.
ಬಿಜೆಪಿ ಶಾಸಕ ಮೆಡಿಕಲ್ ಆಫೀಸರ್‌ನ್ನು ಬೆದರಿಸುತ್ತಿರುವ ಆಡಿಯೋ ಕ್ಲಿಪ್ ವಾಟ್ಸಾಪ್‌ನಲ್ಲಿ ಹರಿದಾಡಿತ್ತು.
ಫೋನ್ ಮೂಲಕ ವೈದ್ಯರಿಗೆ ಬೆದರಿಕೆಯೊಡ್ಡಿದ ಶಾಸಕ ಪ್ರಹ್ಲಾದ್ ಗುಂಜಾಲ್ ಅವರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ತನ್ನ ಪಕ್ಷದ ಕಾರ್ಯಕರ್ತನಾಗಿರುವ ಪುರುಷ ನರ್ಸ್ ಒಬ್ಬರಿಗೆ ವರ್ಗಾವಣೆ ಕೊಡಿಸದಿದ್ದಕ್ಕೆ ಕೋಟಾ ವಿಧಾನಸಭಾ ಕ್ಷೇತ್ರದ ಶಾಸಕ ಕೋಟಾ ಜಿಲ್ಲೆಯ ಸಿಎಂಹೆಚ್‌ಒ ಡಾ. ಆರ್. ಎನ್. ಯಾದವ್ ಅವರಿಗೆ ಬೆದರಿಕೆಯನ್ನೊಡ್ಡಿದ್ದರು.
ಪ್ರಕರಣದ ಬಗ್ಗೆ ಮಾತನಾಡಿದ ಗುಂಜಾಲ್ ನಾನು ವೈದ್ಯರನ್ನು ಬೈದಿದ್ದೇನೆಯೇ ಹೊರತು ಬೆದರಿಕೆಯನೊಡ್ಡಿಲ್ಲ ಎಂದಿದ್ದಾರೆ.
ಆದಾಗ್ಯೂ, ಗುಂಜಾಲ್ ವಿರುದ್ಧದ ದೂರನ್ನು ಗಂಭೀರವಾಗಿ ಪರಿಗಣಿಸಿದ ರಾಜಸ್ತಾನದ ಗೃಹ ಸಚಿವ ಗುಲಾಬ್ ಚಂದ್ರ ಕತಾರಿಯಾ, ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.