ಪ್ರಧಾನ ಸುದ್ದಿ

ಡಿಇಡಿ ಕೋರ್ಸ್ ಡೆಡ್?

Published On :

ಧಾರವಾಡ: ಪ್ರಾಥಮಿಕ ಶಾಲಾ ಶಿಕ್ಷಕ ಹುದ್ದೆಗೆ ನೇಮಕಾತಿ ಪಕ್ರಿಯೆ ನಡೆಯದಿರುವುದು ಸೇರಿದಂತೆ ವಿವಿಧ ಕಾರಣಗಳಿಗಾಗಿ ಡಿಇಡಿ ಕಲಿಕಾ ಪ್ರಮಾಣ ಧಾರವಾಡ ನಗರ ಸೇರಿದಂತೆ ಇಡೀ ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ.
ಒಂದು ಸಮಯದಲ್ಲಿ ವಿಪರೀತ ಬೇಡಿಕೆ ಕಂಡುಕೊಂಡಿದ್ದ ಅಂದಿನ ಟಿಸಿಎಚ್ ಅಥವಾ ಇಂದಿನ 'ಡಿಪ್ಲೋಮಾ ಇನ್ ಎಜ್ಯುಕೇಷನ್‌' ಕೋರ್ಸ್ ಅನ್ನು ಇಂದು ಕೇಳುವವರು ಇಲ್ಲ. ಪಿಯುಸಿ ಮುಗಿಸಿದ ತಕ್ಷಣ ಪದವಿಗಳತ್ತ ಆಸಕ್ತಿ ತೋರದೇ ಬರೀ ಡಿಇಡಿ ಕೋರ್ಸ್‌ನತ್ತ ವಿದ್ಯಾರ್ಥಿಗಳು ವಾಲುತ್ತಿದ್ದರು. ಅಲ್ಲದೆ, ತರಬೇತಿ ಮುಗಿದ ತಕ್ಷಣ ಒಂದೆರೆಡು ವರ್ಷಗಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯೂ ಆಗುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಪಿಯುಸಿ ಪಾಸಾದ ವಿದ್ಯಾರ್ಥಿಗಳು ಡಿಇಡಿ ಕಲಿಯಲು ಆಸಕ್ತಿ ವಹಿಸದಿರಲು ಶಿಕ್ಷಕರ ನೇಮಕಾತಿ ನಡೆಯದಿರುವುದು ಒಂದು ಪ್ರಮುಖ ಕಾರಣ. ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯದಲ್ಲೂ ಜಾರಿಗೆ ತರಲು ಇಚ್ಛಿಸಿರುವ ಮೂರು ಹಂತದ ಕಲಿಕಾ ಪದ್ಧತಿಯೂ(1-5 ಕಿರಿಯ ಪ್ರಾಥಮಿಕ, 6-8 ಹಿರಿಯ ಪ್ರಾಥಮಿಕ ಹಾಗೂ 9-12 ಪ್ರೌಢ ಶಿಕ್ಷಣ ) ಒಂದು ಕಾರಣ. ಕೇವಲ ಕಿರಿಯ ಪ್ರಾಥಮಿಕ ಹಂತದಲ್ಲಿ ಅಂದರೆ 1ರಿಂದ 5ನೇ ತರಗತಿ ವರೆಗೆ ಮಾತ್ರ ಡಿಇಡಿ ತರಬೇತಿ ಹೊಂದಿದವರು ಹಾಗೂ ಹಳೇ ಟಿಸಿಎಚ್ ತರಬೇತಿ ಹೊಂದಿದವರು ಬೋಧಿಸಬೇಕಾಗಿರುವುದು ಸಹ ಡಿ.ಇಡಿ ಕಲಿಕೆಗೆ ಆಸಕ್ತಿ ಕಡಿಮೆಯಾಗಲು ಕಾರಣ.
ಒಂದೂ ಪ್ರವೇಶವಿಲ್ಲ!: 150ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಧಾರವಾಡದ ಗಂಡು ಮಕ್ಕಳ ಟ್ರೇನಿಂಗ್ ಕಾಲೇಜು (ಡಯಟ್) ಪ್ರಾಥಮಿಕ ಶಾಲಾ ಶಿಕ್ಷಕರಿಗೆ ತರಬೇತಿ ನೀಡುತ್ತಿದ್ದು, ಪ್ರಸಕ್ತ ಪ್ರಥಮ ವರ್ಷದ ಡಿಇಡಿಗೆ ಒಬ್ಬ ವಿದ್ಯಾರ್ಥಿ ಕೂಡ ಪ್ರವೇಶ ಪಡೆದಿಲ್ಲ. 2013ರ ಸಾಲಿನಲ್ಲಿ ಒಬ್ಬ ವಿದ್ಯಾರ್ಥಿ ಪ್ರವೇಶ ಪಡೆದಿದ್ದ ಎಂಬುದು ಸೋಜಿಗದ ಸಂಗತಿ. ಇನ್ನು 2010-11ನೇ ಸಾಲಿನಲ್ಲಿ ನೂರಕ್ಕೂ ಹೆಚ್ಚಿದ್ದ ಪ್ರವೇಶ ಸಂಖ್ಯೆಯು 2011-12ರಲ್ಲಿ 63ಕ್ಕೆ ಇಳಿಯಿತು. 2013ರಲ್ಲಿ ಏಕಾಏಕಿ ಒಂದಂಕಿ ಸ್ಥಾನಕ್ಕೆ ಕುಸಿದಿದೆ. ಹಾಗೆಯೇ ಶತಮಾನ ಕಂಡ ಇಲ್ಲಿಯ ಹೆಣ್ಣು ಮಕ್ಕಳ ಟ್ರೇನಿಂಗ್ ಕಾಲೇಜು ಸೇರಿದಂತೆ ಧಾರವಾಡ ಜಿಲ್ಲೆಯಲ್ಲಿರುವ 30 ಖಾಸಗಿ ಡಿಇಡಿ ಕಾಲೇಜುಗಳಲ್ಲಿ ವರ್ಷದಿಂದ ವರ್ಷಕ್ಕೆ ಡಿಇಡಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂಬುದು ಅಂಕಿ ಅಂಶಗಳಿಂದ ಸ್ಪಷ್ಟವಾಗುತ್ತದೆ. ರಾಜ್ಯದಲ್ಲಿನ ಡಿಇಡಿ ತರಬೇತಿ ಕೇಂದ್ರಗಳ ಸ್ಥಿತಿಯೂ ಇದರಿಂದ ಹೊರತಾಗಿಲ್ಲ.  
ಪದವಿಯತ್ತ ಆಕರ್ಷಣೆ: ಡಿಇಡಿ ಕಲಿಕೆಗೆ ಎರಡು ವರ್ಷ ತರಬೇತಿ ಹಾಗೂ ಆರು ತಿಂಗಳು ಸೇವಾ ಪೂರ್ವ ಶಾಲಾ ಬೋಧನೆ ಒಟ್ಟು ಎರಡೂವರೆ ವರ್ಷ ಅವಧಿಯವರೆಗೂ ಕಲಿತು ಮನೆಯಲ್ಲಿ ಸುಮ್ಮನೆ ಕೂರುವುದಕ್ಕಿಂತ ಮೂರು ವರ್ಷಗಳ ಅವಧಿಯ ಕಲೆ, ವಿಜ್ಞಾನ ಹಾಗೂ ವಾಣಿಜ್ಯ ಪದವಿಗೆ ಹೆಚ್ಚು ವಿದ್ಯಾರ್ಥಿಗಳು ಆಸಕ್ತಿ ತೋರುತ್ತಿದ್ದಾರೆ. ರಾಜ್ಯ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಕ್ರಮ ತೆಗೆದುಕೊಳ್ಳಬೇಕಿದೆ. ಹಲವಾರು ವರ್ಷಗಳ ಅವಧಿಯಲ್ಲಿ ಡಿ.ಇಡಿ ತರಬೇತಿ ಹೊಂದಿರುವವರ ಸಂಖ್ಯೆ ಗಣನೀಯವಾಗಿದ್ದು, ಅದಕ್ಕೆ ಸಮಾನಂತರವಾಗಿ ನಿಯಮಿತವಾಗಿ ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯಬೇಕಿದೆ. ಕಳೆದ ಬಜೆಟ್‌ನಲ್ಲಿ 9 ಸಾವಿರಕ್ಕೂ ಹೆಚ್ಚು ಪ್ರಾಥಮಿಕ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದಾರೆ. ಆದರೆ, ಕಣ್ಮುಂದೆ ಲೋಕಸಭಾ ಚುನಾವಣೆ ಬಂದಿದೆ. ಈ ಹಿನ್ನೆಲೆಯಲ್ಲಿ ಆದಷ್ಟು ಶೀಘ್ರ ಈ ಕುರಿತು ಅಧಿಸೂಚನೆ ಹೊರಡಿಸಬೇಕಿದೆ ಎಂಬುದು ಶಿಕ್ಷಣ ತಜ್ಞರೊಬ್ಬರ ಒತ್ತಾಸೆ.
ಧಾರವಾಡದ ಡಯಟ್‌ನಲ್ಲಿ 2013ರಲ್ಲಿ ಓರ್ವ ಹಾಗೂ ಪ್ರಸಕ್ತ ವರ್ಷಕ್ಕೆ ಒಂದೂ ಪ್ರವೇಶವಾಗಿಲ್ಲ. ಹಾಗೆಂದ ಮಾತ್ರಕ್ಕೆ ಸರಿಯಾಗಿ ತರಬೇತಿ ನೀಡುತ್ತಿಲ್ಲ ಎಂದರ್ಥವಲ್ಲ. ಶಿಕ್ಷಕರ ನೇಮಕಾತಿ ಆಗದ ಕಾರಣ ಬೇಡಿಕೆ ಕುಸಿದಿದೆ. ಬರುವ ದಿನಗಳಲ್ಲಿ ರಾಜ್ಯ ಸರ್ಕಾರ ನೇಮಕಾತಿ ಪ್ರಕ್ರಿಯೆ ಆರಂಭಿಸಿದರೆ ಬೇಡಿಕೆ ಜಾಸ್ತಿಯಾಗಬಹುದು. ಸದ್ಯ ಈ ವಿಭಾಗದ ಸಿಬ್ಬಂದಿ ಇಲಾಖೆಯ ಬೇರೆ ಕೆಲಸಗಳಲ್ಲಿ ತೊಡಗಿದ್ದು, ಕಾದು ನೋಡೋಣ.
-ಗಂಗಪ್ಪ
(ಡಯಟ್ ಪ್ರಾಚಾರ್ಯ, ಧಾರವಾಡ)  

ಬಸವರಾಜ ಹಿರೇಮಠ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.