ಮದ್ಯರಾತ್ರಿ ವಿಸ್ತರಣೆ

ಕನ್ನಡಪ್ರಭ ವಾರ್ತೆ ಬೆಂಗಳೂರು ಮಾ.1
ಬೆಂಗಳೂರಿನಲ್ಲಿ ನೈಟ್ಲೈಫ್ ಅವಧಿ ವಿಸ್ತರಿಸುವಂತೆ ಬುದ್ಧಿಜೀವಿಗಳು ಹಾಗೂ ಐಟಿ ಮಂದಿ ಹೇರಿದ್ದ ಒತ್ತಡಕ್ಕೆ ರಾಜ್ಯ ಸರ್ಕಾರ ಭಾಗಶಃ ಮಣಿದಿದ್ದು, ವಾರ ಪೂರ್ತಿ ಹೊಟೇಲ್ಗಳ ಮತ್ತು ವಾರಾಂತ್ಯದ ಎರಡು ದಿನ ಬಾರ್-ರೆಸ್ಟೋರೆಂಟ್ಗಳ ಅವಧಿ ವಿಸ್ತರಿಸಲು ಒಪ್ಪಿಗೆ ನೀಡಿದೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ವ್ಯಾಪ್ತಿಗೆ ಒಳಪಡುವ ಪ್ರದೇಶದಲ್ಲಿ ಪ್ರತಿ ಶುಕ್ರವಾರ ಹಾಗೂ ಶನಿವಾರ ಬಾರ್ ಆಂಡ್ ರೆಸ್ಟೋರೆಂಟ್ಗಳನ್ನು ಮಧ್ಯರಾತ್ರಿ 1 ಗಂಟೆಯವರೆಗೆ ನಡೆಸುವುದಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ತಿಳಿಸಿದ್ದಾರೆ.
ಜತೆಗೆ ಸಾರ್ವಜನಿಕ ಹಿತದೃಷ್ಟಿಯಿಂದ ನಗರದಲ್ಲಿ ಎಲ್ಲ ಹೊಟೇಲ್ಗಳು ಹಾಗೂ ತಿಂಡಿ ಅಂಗಡಿಗಳನ್ನು ಮಧ್ಯರಾತ್ರಿ 1 ಗಂಟೆವರೆಗೆ ಎಲ್ಲ ದಿನ ತೆರೆದಿರುವುದಕ್ಕೆ ಅನುಮತಿ ನೀಡಲು ಸರ್ಕಾರ ಒಪ್ಪಿಗೆ ನೀಡಿದೆ ಎಂದು ಜಾರ್ಜ್ ತಿಳಿಸಿದರು.
ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ, ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್, ಹೆಚ್ಚುವರಿ ಪೊಲೀಸ್ ಆಯುಕ್ತ ಕಮಲ್ ಪಂಥ್ ಸೇರಿದಂತೆ ಹಿರಿಯ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳನ್ನು ಹೊಂದಿದ್ದ ಸಮಿತಿ ನೀಡಿದ ಶಿಫಾರಸಿನ ಮೇರೆಗೆ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಆದರೆ ಮದ್ಯದ ಅಂಗಡಿಗಳನ್ನು ವಾರಾಂತ್ಯದ ಎರಡು ದಿನ ರಾತ್ರಿ 1 ಗಂಟೆವರೆಗೆ ತೆರೆಯುವುದು ಕೇವಲ ಪ್ರಾಯೋಗಿಕ ಕ್ರಮ ಮಾತ್ರ. ಕಾನೂನು-ಸುವ್ಯವಸ್ಥೆಗೆ ಧಕ್ಕೆಯಾದರೆ ಈ ನಿಯಮ ಬದಲಾಯಿಸಲಾಗುವುದು ಎಂದು ಹೇಳಿದರು.
ಬೆಂಗಳೂರು ನಗರದಲ್ಲಿ ರಾತ್ರಿ ಬದುಕಿನ ಅವಧಿ ವಿಸ್ತರಿಸುವಂತೆ ಐಟಿ ಉದ್ಯೋಗಿಗಳು ಆಗ್ರಹಿಸುತ್ತಿದ್ದಾರೆ. ನಗರದಲ್ಲಿ ಶೇ.23ರಷ್ಟು ಯುವ ಮತದಾರರಿದ್ದು, ಲೋಕಸಭಾ ಚುನಾವಣೆ ದೃಷ್ಟಿಯಿಂದ ಅವರ ಮೇಲೆ ಕಣ್ಣಿಟ್ಟು ಈ ಕ್ರಮ ತೆಗೆದುಕೊಳ್ಳಲಾಗಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಚುನಾವಣೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.
ಅವಧಿ ವಿಸ್ತರಣೆಯಿಂದ ಕಾನೂನು-ಸುವ್ಯವಸ್ಥೆ ಮೇಲೆ ತೊಂದರೆಯಾಗದಂತೆ ಸೂಕ್ತ ಭದ್ರತಾ ವ್ಯವಸ್ಥೆ ಮಾಡುತ್ತೇವೆ. ಹೆಚ್ಚುವರಿಯಾಗಿ 1000 ಹೋಮ್ಗಾರ್ಡ್ಸ್ಗಳನ್ನು ನಗರಕ್ಕೆ ನಿಯೋಜಿಸಲಾಗುವುದು. ಅಗತ್ಯ ಬಿದ್ದರೆ ಈ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸುತ್ತೇವೆ. ಜತೆಗೆ ರು. 5 ಕೋಟಿ ವೆಚ್ಚದಲ್ಲಿ ಹೊಸ ವಾಹನ ಖರೀದಿ ಮಾಡುವುದಕ್ಕೆ ಚಿಂತನೆ ನಡೆದಿದೆ ಎಂದರು.
ಈ ವಿಚಾರದಲ್ಲಿ ರಾಜ್ಯ ಸರ್ಕಾರ ಯಾವ ಒತ್ತಡಕ್ಕೂ ಮಣಿದಿಲ್ಲ. ನಾನು ಅಬಕಾರಿ ಲಾಬಿದಾರರ ಜತೆ ಚರ್ಚೆ ನಡೆಸಿಲ್ಲ. ಇದು ಕೇವಲ ಪ್ರಾಯೋಗಿಕ ಕ್ರಮವಷ್ಟೇ ಎಂದು ಹೇಳಿದರು.
ಪಾಲನೆ: ಅದೇ ರೀತಿ ಹೊಟೇಲ್ಗಳಲ್ಲಿ ಮಹಿಳಾ ಪರಿಚಾರಕರ ನೇಮಕ ವಿಚಾರದಲ್ಲಿ ಈ ಹಿಂದೆ ನಿಯಮ ಪಾಲನೆಯಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೆಲ ಕಾಲ ಪರವಾನಗಿ ನಿಲ್ಲಿಸಲಾಗಿತ್ತು. ಈಗ ಎಲ್ಲ ಬಾರ್ ಹಾಗೂ ರೆಸ್ಟೋರೆಂಟ್ಗಳಿಗೆ ಸಿಸಿಟಿವಿ ಅಳವಡಿಸಲಾಗಿದೆ. ಜತೆಗೆ ಇವುಗಳನ್ನು ಕಾಲ ಕಾಲಕ್ಕೆ ಪರಿಶೀಲಿಸಲಾಗುತ್ತದೆ ಎಂದು ಹೇಳಿದರು.
ಪರಿಶೀಲನೆ: ಯುಬಿ ಸಿಟಿಯ ಕೊನೆಯ ಅಂತಸ್ತಿನಲ್ಲಿ ಪರವಾನಗಿ ಇಲ್ಲದೇ ಡ್ಯಾನ್ಸ್ ಬಾರ್ ನಡೆಸಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ನನಗೆ ಯಾವುದೇ ದೂರು ಬಂದಿಲ್ಲ. ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಲಾಗುವುದು ಎಂದು ಹೇಳಿದರು.
ಅಕ್ರಮ ಗಣಿಗಾರಿಕೆ: ವಿಶೇಷ ತನಿಖಾ ದಳ
ಅಕ್ರಮ ಗಣಿಗಾರಿಕೆ ತನಿಖೆಗೆ ಅಗತ್ಯವಾದ ಪೊಲೀಸ್ ಸಿಬ್ಬಂದಿಯನ್ನು ಆದಷ್ಟು ಬೇಗ ವಿಶೇಷ ತನಿಖಾ ದಳಕ್ಕೆ (ಎಸ್ಐಟಿ) ಒದಗಿಸಲಾಗುವುದು ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ. ಲೋಕಾಯುಕ್ತದವರು ನೀಡಿದ ಶಿಫಾರಸ್ಸಿಗೆ ಅನುಗುಣವಾಗಿಯೇ ನಾವು ಅಧಿಕಾರಿಗಳನ್ನು ನಿಯೋಜಿಸಿದ್ದೇವೆ. ಇದರಲ್ಲಿ ಯಾವುದೇ ಅನುಮಾನಕ್ಕೆ ಅವಕಾಶವಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


