ದಾಳಿಂಬೆಗೆ ದು'ಬೈ'
ಕೊಪ್ಪಳ: ಆಸ್ಪ್ರೇಲಿಯಾ ಸೇರಿದಂತೆ ಮತ್ತಿತರ ದೇಶಗಳು ಕಳೆದ ವರ್ಷವೇ ಭಾರತದ ದಾಳಿಂಬೆ ಆಮದನ್ನು ನಿಷೇಧ ಮಾಡಿತ್ತು. ಇದು ಇಲ್ಲಿನ ಬೆಳೆಗಾರರಿಗೆ ಸಾಕಷ್ಟು ಹೊಡೆತ ಕೊಟ್ಟಿತ್ತು. ಇದೀಗ ದುಬೈ ಸಹ ಅದೇ ಹಾದಿ ಹಿಡಿದಿದ್ದು, ರೈತರನ್ನು ಕಂಗಾಲಾಗಿಸಿದೆ.
ಹೌದು. ಭಾರತದ ದಾಳಿಂಬೆಯಲ್ಲಿ ರಾಸಾಯನಿಕ ಅಂಶಗಳಿದ್ದು, ಆಮದನ್ನು ನಿಷೇಧಿಸಿ ಕಳೆದ ತಿಂಗಳು ದುಬೈ ಆದೇಶಿಸಿತ್ತು. ಹೀಗಾಗಿ ಭಾರಿ ಪ್ರಮಾಣದಲ್ಲಿ ದರ ಕುಸಿದಿದ್ದು, ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸಾಮಾನ್ಯವಾಗಿ ಕೆಜಿ ದಾಳಿಂಬೆ 150-200ಕ್ಕೆ ಮಾರಾಟವಾಗುತ್ತಿತ್ತು. ಆದರೀಗ ಬಹುತೇಕ ದೇಶಗಳು ಭಾರತದ ಹಣ್ಣುಗಳ ಮೇಲೆ ನಿಷೇಧ ಹೇರಿದ್ದರಿಂದ ಇದರ ದರ ಈಗ ಕೇವಲ 30-70ಕ್ಕೆ ಇಳಿದಿದೆ. ಇಷ್ಟೊಂದು ದರ ಕುಸಿದಿರುವುದು ಇದೇ ಮೊದಲು ಎಂದು ಹೇಳಲಾಗುತ್ತಿದೆ. ಇದರಿಂದ ರೈತರು ಬೆಳೆದ ದಾಳಿಂಬೆಯನ್ನು ಕಟಾವು ಮಾಡುವ ಬದಲು ನೆಲಕ್ಕೆ ಎಸೆಯುತ್ತಿದ್ದರೆ, ಮೊದಲೇ ರೈತರೊಂದಿಗೆ ದರ ಒಪ್ಪಂದ ಮಾಡಿಕೊಂಡಿದ್ದ ದಾಳಿಂಬೆ ರಫ್ತುದಾರರು ನಾಪತ್ತೆಯಾಗಿದ್ದಾರೆ.
ದರ ಕುಸಿತದ ಬರೆ: ದೇಶದಲ್ಲಿಯೇ ಅತ್ಯಧಿಕ ದಾಳಿಂಬೆ ಉತ್ಪಾದನೆ ಮಾಡುವ ಖ್ಯಾತಿ ಹೊಂದಿದ್ದ ಕೊಪ್ಪಳ ಜಿಲ್ಲೆಯಲ್ಲಿ ದುಂಡಾಣು ಅಂಗಮಾರಿ ರೋಗದಿಂದ ದಾಳಿಂಬೆ ಬೆಳೆಯುವವರ ಸಂಖ್ಯೆ ತೀರಾ ಕುಸಿದಿದೆ. ಚಿತ್ರದುರ್ಗ, ಬಳ್ಳಾರಿ ಮೊದಲಾದ ಜಿಲ್ಲೆಯಲ್ಲಿ ಅತ್ಯಧಿಕ ದಾಳಿಂಬೆಯನ್ನು ಬೆಳೆದು ರಫ್ತು ಮಾಡುತ್ತಾರಾದರೂ ದರ ಕುಸಿದು ಬರೆ ಎಳೆಯುವಂತೆ ಮಾಡಿದೆ.
ಮಾವು ಬೆಳೆಯುವ ಹೊತ್ತಿಗೆ ಸಾಮಾನ್ಯವಾಗಿ ದಾಳಿಂಬೆ ದರ ಕುಸಿಯುತ್ತದೆ. ಮಾವು ಸೀಜನ್ ಮುಗಿಯುತ್ತಿದ್ದಂತೆ ದಾಳಿಂಬೆಗೆ ಬೆಲೆ ಬರುತ್ತದೆ. ಆದರೆ ಈ ಸಾರಿ ದಾಳಿಂಬೆ ದರ ಪಾತಾಳ ಕಂಡಿರುವುದು, ಎಲ್ಲ ದಾಖಲೆ ಮುರಿದು ಕೆಜಿಗೆ 30-70 ಆಗಿದೆ ಎಂದು ರೈತರು ಅಲವತ್ತುಕೊಳ್ಳುತ್ತಿದ್ದಾರೆ. ಸ್ಥಿತಿ ಹೀಗೇ ಮುಂದುವರಿದರೆ ದಾಳಿಂಬೆ ಬೆಳೆಯಿಂದ ರೈತರು ದೂರ ಸರಿಯುತ್ತಾರೆ. ಸರ್ಕಾರ ಮಧ್ಯಪ್ರವೇಶ ಮಾಡಿ, ಬೆಳೆಗಾರರನ್ನು ರಕ್ಷಣೆ ಮಾಡಬೇಕು ಎಂದು ಒತ್ತಾಯಿಸುತ್ತಾರೆ.
ಅಂತಾರಾಷ್ಟ್ರೀಯ ಮಾಫಿಯಾ: ದರ ಕುಸಿತದ ಹಿಂದೆ ವಿದೇಶಿ ಷಡ್ಯಂತ್ರ ಅಡಗಿದೆ ಎಂದು ಹೇಳಲಾಗುತ್ತಿದೆ. ದಾಳಿಂಬೆಗೆ ಬಂದಿರುವ ರೋಗವನ್ನು ನಿಯಂತ್ರಣ ಮಾಡುವ ನೆಪದಲ್ಲಿ ನೀಡಿದ ಔಷಧಿಯೇ ಹಣ್ಣಿನಲ್ಲಿ ರಾಸಾಯನಿಕ ಬರಲು ಕಾರಣವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದೊಂದು ಅಂತಾರಾಷ್ಟ್ರೀಯ ಮಾಫಿಯಾ ಆಗಿದ್ದು, ಕೇಂದ್ರ ಸರ್ಕಾರ ಮುತುವರ್ಜಿ ವಹಿಸಿ, ಕೃಷಿ ಉತ್ಪನ್ನಗಳ ಮೇಲೆ ಬರುವ ರೋಗ ನಿಯಂತ್ರಣಕ್ಕಾಗಿ ಬರುವ ವಿದೇಶಿ ಔಷಧಿಗಳ ಪರಿಣಾಮಗಳನ್ನು ಅಧ್ಯಯನ ಮಾಡಬೇಕಾಗಿದೆ. ಇವುಗಳನ್ನು ತಡೆದು ದೇಶಿ ಕೃಷಿ ಉತ್ಪನ್ನಗಳನ್ನು ಉಳಿಸಬೇಕಾಗಿದೆ ಎನ್ನುತ್ತಾರೆ.
ಮಾವು ಬಂದಾಗಲೆಲ್ಲ ದಾಳಿಂಬೆ ದರ ಕುಸಿಯುತ್ತದೆ. ರಾಸಾಯನಿಕ ಕಾರಣ ಮುಂದೆ ಮಾಡಿ ವಿವಿಧ ದೇಶಗಳಲ್ಲಿ ಆಮದು ನಿಷೇಧ ಮಾಡಿರುವುದರಿಂದ ತೀವ್ರ ಸಮಸ್ಯೆಯಾಗಿದೆ.
- ಮಲ್ಲಣ ಗಡಗಿ, ದಾಳಿಂಬೆ ಬೆಳೆಗಾರ
ರಾಸಾಯನಿಕ ಇದೆ ಎನ್ನುವ ಕಾರಣಕ್ಕಾಗಿ ಹಲವು ದೇಶಗಳು ದಾಳಿಂಬೆ ಆಮುದನ್ನು ನಿಷೇಧಿಸಿದ ಮೇಲೂ ದುಬೈನಲ್ಲಿ ಭಾರತದ ದಾಳಿಂಬೆ ಖರೀದಿಯಾಗುತ್ತಿತ್ತು. ಈಗ ಅಲ್ಲೂ ನಿಲ್ಲಿಸಿದ್ದರಿಂದ ಸಮಸ್ಯೆಯಾಗಿದೆ.
- ಜಾಫರ್ಖಾನ್, ದಾಳಿಂಬೆ ರಫ್ತುದಾರ
-ಸೋಮರಡ್ಡಿ ಅಳವಂಡಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

