ಪ್ರಧಾನ ಸುದ್ದಿ

ಕನ್ನಡಮೇಧ

ಕನ್ನಡಮೇಧ
Published On :

ಪೋಷಕರು ಕಲಿಸುವ ಭಾಷೆಯೇ ಮಾತೃಭಾಷೆ: ಸುಪ್ರೀಂ ವ್ಯಾಖ್ಯಾನ
ಭಾಷಾ ಮಾಧ್ಯಮ ಹೇರುವ ಹಕ್ಕು ರಾಜ್ಯ ಸರ್ಕಾರಕ್ಕೆ ಇಲ್ಲವೇ ಇಲ್ಲ
ಮಾತೃಭಾಷೆ ಹೆಸರಲ್ಲಿ ಕಲಿಕೆ ಮಾಧ್ಯಮ ಹೇರಿಕೆ ಹಕ್ಕು ಉಲ್ಲಂಘನೆ
ಮಾಧ್ಯಮದ ಆಯ್ಕೆ ಹಕ್ಕು ಪೋಷಕರು, ವಿದ್ಯಾರ್ಥಿಗಳಿಗೆ ಸೇರಿದ್ದು


-ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ:
ಪೋಷಕರು ಕಲಿಸುವ ಭಾಷೆಯೇ ಮಾತೃಭಾಷೆ.
ಇದು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠದ ಮಹತ್ವದ ವ್ಯಾಖ್ಯಾನ. ವಿದ್ಯಾರ್ಥಿಗಳ ಮೇಲೆ ಭಾಷಾ ಮಾಧ್ಯಮ ಹೇರುವ ಹಕ್ಕು ರಾಜ್ಯ ಸರ್ಕಾರಕ್ಕೆ ಇಲ್ಲವೇ ಇಲ್ಲ ಎಂಬ ಐತಿಹಾಸಿಕ ತೀರ್ಪನ್ನು ಸುಪ್ರೀಂಕೋರ್ಟ್ ನೀಡಿದೆ.
ಮಾತೃಭಾಷೆ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆ ಮಾಧ್ಯಮ ಹೇರುವುದು ಸಂವಿಧಾನದತ್ತ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದೂ ಹೇಳಿದೆ.
ಒಂದರಿಂದ ನಾಲ್ಕನೆ ತರಗತಿವರೆಗೆ ಕನ್ನಡದಲ್ಲೇ ಶಿಕ್ಷಣ ನೀಡಬೇಕು ಎಂದು ಕರ್ನಾಟಕ ಸರ್ಕಾರ ಹೊರಡಿಸಿದ್ದ ಆದೇಶ ಸಂವಿಧಾನದ 19(1ಎ)ವಿಧಿಯ ಸ್ಪಷ್ಟ ಉಲ್ಲಂಘನೆ ಎಂದು ತಿಳಿಸಿರುವ ಪೀಠ, ಕಲಿಕೆಯ ಮಾಧ್ಯಮದ ಆಯ್ಕೆ ಹಕ್ಕು ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಸೇರಿದ್ದು ಎಂದು ಸ್ಪಷ್ಟಪಡಿಸಿದೆ.
ಮುಖ್ಯ ನ್ಯಾಯಾಧೀಶರಾಗಿ ಇತ್ತೀಚೆಗಷ್ಟೆ ಅಧಿಕಾರ ಸ್ವೀಕರಿಸಿದ ನ್ಯಾಯಮೂರ್ತಿ ಆರ್.ಎಂ. ಲೋಧಾ ನೇತೃತ್ವದ, ನ್ಯಾಯಮೂರ್ತಿಗಳಾದ ಎ.ಕೆ.ಪಟ್ನಾಯಕ್, ದೀಪಕ್ ಮಿಶ್ರ, ಮೊಹಮ್ಮದ್ ಖಲೀಫುಲ್ಲಾ ಮತ್ತು ಎಸ್.ಡಿ.ಮುಖ್ಯೋಪಾಧ್ಯಾಯ ಅವರನ್ನೊಳಗೊಂಡ ಸಂವಿಧಾನ ಪೀಠ, 2013 ಜು.5 ರಂದು ನ್ಯಾಯಮೂರ್ತಿಗಳಾದ ಪಿ.ಸದಾಶಿವಂ ಹಾಗೂ ರಂಜನ್ ಗೊಗೊಯ್ ಅವರಿದ್ದ ವಿಭಾಗೀಯ ಪೀಠ ಎತ್ತಿದ್ದ ಪ್ರಮುಖ ಐದು ಪ್ರಶ್ನೆಗಳಿಗೆ ಉತ್ತರ ನೀಡಿದೆ.
ಫೆ.11ರಿಂದ 13ರವರೆಗೆ ಸುದೀರ್ಘ ವಾದ-ವಿವಾದ ಆಲಿಸಿದ್ದ ಸಂವಿಧಾನ ಪೀಠ ತೀರ್ಪನ್ನು ಕಾಯ್ದಿರಿಸಿತ್ತು. ಮಂಗಳವಾರ ತೀರ್ಪು ಪ್ರಕಟಿಸಿರುವ ಸಂವಿಧಾನ ಪೀಠ, ಕರ್ನಾಟಕ ಹೈಕೋರ್ಟ್‌ನ ಪೂರ್ಣಪೀಠ 2008ರ ಜು.2 ರಂದು ನೀಡಿದ್ದ ಭಾಷಾ ಮಾಧ್ಯಮ ನೀತಿಯನ್ನು ಖಾಸಗಿ ಶಾಲೆಗಳ ಮೇಲೆ ಹೇರಲು ಬರುವುದಿಲ್ಲ ಎಂಬ ತೀರ್ಪನ್ನು ಎತ್ತಿ ಹಿಡಿದಿದೆ.
ಮಾತೃಭಾಷೆ ಮತ್ತು ಕಲಿಕೆ ಮಾಧ್ಯಮ ಕುರಿತು ವಿಶಾಲ ತಳಹದಿ ಮೇಲೆ ಪೀಠ ನೀಡಿರುವ ತೀರ್ಪು, ಕರ್ನಾಟಕದಂತೆ ಭಾಷಾ ಮಾಧ್ಯಮ ಸಮಸ್ಯೆ ಎದುರಿಸುತ್ತಿರುವ ನಾನಾ ರಾಜ್ಯಗಳಿಗೂ ಮಾರ್ಗದರ್ಶಿಯಾಗಲಿದೆ. ಒಂದರಿಂದ ನಾಲ್ಕನೆ ತರಗತಿವರೆಗೆ ವಿದ್ಯಾರ್ಥಿಗಳಿಗೆ ಆಯಾ ರಾಜ್ಯಗಳ ಭಾಷೆಯಲ್ಲೇ ಶಿಕ್ಷಣ ನೀಡಿದರೆ, ಮಕ್ಕಳ ಬೌದ್ಧಿಕ ವಿಕಸನ ಉದ್ದೀಪಿಸಲು ಸಾಧ್ಯವೆಂಬ ಸಾಹಿತಿ ಮತ್ತು ಶಿಕ್ಷಣ ತಜ್ಞರ ಅಭಿಪ್ರಾಯವನ್ನು ತಾತ್ವಿಕವಾಗಿ ಒಪ್ಪಿದ್ದು, ಇದೇ ಅಂತಿಮ ಅಭಿಪ್ರಾಯವೂ ಅಲ್ಲ ಎಂದು ಹೇಳಿದೆ.
ಮಂಗಳವಾರದ ತೀರ್ಪು ಭಾಷಾ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳು ಮತ್ತು ಅನುದಾನರಹಿತ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಅನ್ವಯವಾಗುತ್ತದೆ.
ಮಾಧ್ಯಮ ಪ್ರಕರಣ ನಡೆದು ಬಂದ ದಾರಿ
*    ಜೂನ್ 19, 1989    ಕಲಿಕಾ ಮಾಧ್ಯಮ ಅನುಷ್ಠಾನಕ್ಕೆ ಸರ್ಕಾರದ ಆದೇಶ
*    ಡಿಸೆಂಬರ್ 8, 1993    ಸರ್ಕಾರದ ಆದೇಶ ಎತ್ತಿ ಹಿಡಿದ ಸುಪ್ರೀಂ ಪೀಠ
*    ಏಪ್ರಿಲ್ 29, 1994    ಕನ್ನಡ ಕಲಿಕಾ ಮಾಧ್ಯಮ ಕಡ್ಡಾಯಗೊಳಿಸಿ ಸುತ್ತೋಲೆ
*    ಜುಲೈ 2, 2008    ರಾಜ್ಯದ ಆದೇಶ ರದ್ದುಗೊಳಿಸಿ ಹೈ ಪೂರ್ಣ ಪೀಠ
*    ಜುಲೈ 5, 2013    ಹೈಕೋರ್ಟ್ ತೀರ್ಪಿನ ಮೇಲ್ಮನವಿ ಪೂರ್ಣ ಪೀಠಕ್ಕೆ     ವರ್ಗಾಯಿಸಿದ ಸುಪ್ರೀಂ ವಿಭಾಗೀಯ ಪೀಠ.
ಮೌನವಹಿಸಿದ ಕೇಂದ್ರ ಸರ್ಕಾರ
ಸುಪ್ರೀಂ ವಿಭಾಗೀಯ ಪೀಠವು ಪ್ರಕರಣವನ್ನು ಪೂರ್ಣ ಪೀಠಕ್ಕೆ ವರ್ಗಾಯಿಸುವಾಗ 5 ಪ್ರಶ್ನೆಗಳನ್ನು ಎತ್ತಿತ್ತು. ಆ ಸಂದರ್ಭದಲ್ಲಿ 5 ಪ್ರಶ್ನೆಗಳಿಗೆ ಕೇಂದ್ರ ಸರ್ಕಾರದ ನಿಲುವೇನು ಎಂದು ಸುಪ್ರೀಂ ಕೋರ್ಟ್ ಕೇಳಿತ್ತು. ಆ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮಾನವ ಸಂಪನ್ಮೂಲ ಇಲಾಖೆಯ ಉತ್ತರವು ದೇಶದ ಭಾಷಾ ನೀತಿಯನ್ನು ನಿರ್ಧರಿಸುವ ಸಾಧ್ಯತೆಯಿತ್ತು. ಕೇಂದ್ರದ ಸಮರ್ಪಕ ಉತ್ತರ ಮಾತ್ರ ಇವೆಲ್ಲ ಗೊಂದಲಗಳಿಗೆ ಪರಿಹಾರ ಒದಗಿಸಬಲ್ಲದಾಗಿತ್ತು. ಆದರೆ ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಮೌನ ಮುಂದುವರಿಸಿದೆ. ಸಂವಿಧಾನ ಪೀಠದಲ್ಲಿ ವಿಚಾರಣೆ ನಡೆದಾಗ ಕೇಂದ್ರ ಯಾವುದೇ ವಾದ ಮಂಡಿಸಿಲ್ಲ.
ರಾಜ್ಯ ಸರ್ಕಾರಕ್ಕೆ ಹಿನ್ನಡೆ
ಸಂವಿಧಾನ ಪೀಠದ ತೀರ್ಪು ರಾಜ್ಯ ಸರ್ಕಾರಕ್ಕೆ ಹಿನ್ನಡೆ. ರಾಜ್ಯ ಸರ್ಕಾರ ಸಂವಿಧಾನದ ಪೀಠದ ಮುಂದೆ ಮಾತೃಭಾಷೆಯಲ್ಲೇ ಶಿಕ್ಷಣ ನೀಡಬೇಕೆಂಬುದನ್ನು ಸಮರ್ಥವಾಗಿ ಮಂಡಿಸಿದರೂ, ಮೂಲಭೂತ ಹಕ್ಕುಗಳ ಉಲ್ಲಂಘನೆ ಪ್ರಸ್ತಾಪವಾದಾಗ ರಾಜ್ಯದ ಸಮರ್ಥನೆ ಪ್ರಬಲವಾಗಿರಲಿಲ್ಲ. ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿದ್ದ ಭಾಷಾ ಅಲ್ಪಸಂಖ್ಯಾತರ ಪರ ನ್ಯಾಯವಾದಿಗಳು ಸಂವಿಧಾನದ 14, 19, 29, 30 ಕಲಂಗಳ ಪ್ರಕಾರ ಮೂಲಭೂತ ಹಕ್ಕು ಉಲ್ಲಂಘನೆ ಆಗುತ್ತದೆಂಬ ಅಂಶ ಪ್ರಸ್ತಾಪಿಸಿರು. ರಾಜ್ಯ ಸರ್ಕಾರಕ್ಕೆ ತನ್ನ ಆದೇಶ ಸಮರ್ಥಿಸಿಕೊಳ್ಳಲು ಇದ್ದದ್ದು ಸಂವಿಧಾನದ 350(ಎ) ವಿಧಿ ಮಾತ್ರ.
ತೀರ್ಪಿನ ಅಧ್ಯಯನ ನಡೆಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು.  ತೀರ್ಪಿನ ಪ್ರತಿ ಇನ್ನೂ ಸಿಕ್ಕಿಲ್ಲ. ಅಧ್ಯಯನ ನಡೆಸಿದ ನಂತರವೇ ಮುಂದಿನ ನಡೆಯನ್ನು ನಿರ್ಧರಿಸಲು ಸಾಧ್ಯ.
- ಸಿದ್ದರಾಮಯ್ಯ, ಮುಖ್ಯಮಂತ್ರಿ
. ಪ್ರಾಥಮಿಕ ಹಂತದಲ್ಲಿ ಯಾವುದೇ ಮಾಧ್ಯಮದಲ್ಲಿ ಕಲಿಯಲು ಸುಪ್ರೀಂ ಕೋರ್ಟ್ ಹೇಳಿದೆ. ಹಾಗೆಂದ ಮಾತ್ರಕ್ಕೆ ನಾವು ಕನ್ನಡವನ್ನು ನಿರ್ಲಕ್ಷ್ಯಿಸುವುದಿಲ್ಲ. ಕನ್ನಡವನ್ನು ಭಾಷೆಯಾಗಿ ಕಲಿಸಲು ಒತ್ತು ನೀಡುತ್ತೇವೆ.ಕನ್ನಡವನ್ನು ಕಡ್ಡಾಯವಾಗಿ ಒಂದು ಭಾಷೆಯನ್ನಾಗಿ ಕಲಿಸಲಾಗುತ್ತದೆ. ಈ ಬಗ್ಗೆ ಸರ್ಕಾರಕ್ಕೆ ಆತಂಕ ಬೇಕಿಲ್ಲ.
- ಅಜಿತಪ್ರಭು, ಕುಸ್ಮಾ ಖಜಾಂಚಿ



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.