ಪ್ರತ್ಯೇಕ ಅಪಘಾತ:11 ಸಾವು

ಪಿರಿಯಾಪಟ್ಟಣ: ತಾಲೂಕಿನ ಕಂಪಲಾಪುರ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಬುಧವಾರ ಬೆಳಗಿನ ಜಾವ ಗ್ಯಾಸ್ ಸಿಲಿಂಡರ್ ತುಂಬಿದ ಲಾರಿ ಮತ್ತು ಟೆಂಪೋ ಟ್ರಾವೆಲರ್ ಡಿಕ್ಕಿಯಾಗಿ ಒಂದೇ ಕುಟುಂಬದ 9 ಮಂದಿ ಮೃತಪಟ್ಟು, 11 ಮಂದಿ ತೀವ್ರ ಗಾಯಗೊಂಡಿದ್ದಾರೆ.
ಎಲ್ಲರೂ ಮಂಗಳೂರು ಕೊಣಾಜೆ ಬಳಿಯ ದೇರಳಕಟ್ಟೆ ನಿವಾಸಿಗಳು. ಒಂದೇ ಕುಟುಂಬದವರಾಗಿದ್ದು ತಮಿಳುನಾಡಿನ ಪ್ರವಾಸ ಮುಗಿಸಿ ಮೈಸೂರಿನಿಂದ ತಮ್ಮ ಸ್ವಗ್ರಾಮ ದೇರಳಕಟ್ಟೆಗೆ ತೆರಳುತ್ತಿದ್ದರು. ಕಂಪಲಾಪುರ ಬಳಿಯ ರಾಜ್ಯ ಹೆದ್ದಾರಿ 88ರಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಗ್ಯಾಸ್ ಸಿಲಿಂಡರ್ಗಳನ್ನು ತುಂಬಿಕೊಂಡು ಮಡಿಕೇರಿಯಿಂದ ಮೈಸೂರು ಕಡೆಗೆ ಹೋಗುತ್ತಿದ್ದ ಲಾರಿ ಹಾಗೂ ಟೆಂಪೋ ನಡುವೆ ಡಿಕ್ಕಿ ಸಂಭವಿಸಿದೆ. ಅತಿ ವೇಗ, ನಿದ್ದೆ ಮಂಪರಿನಲ್ಲಿ ವಾಹನ ಚಾಲನೆ ಮಾಡುತ್ತಿದ್ದುದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಮೃತಪಟ್ಟವರು: ಆಸಿಮ್ (60), ಅಜಿರಾ (45), ಅಮೀರ್ (45), ಫಾರೂಕುದ್ದೀನ್ (38), ಜುನೇದಾ (30), ಜೀನತ್ (23), ಹಫೀಝಾ (8), ಶಾಫಿದಾ (4), ಮಹಮ್ಮದ್ (4) ಹಾಗೂ ಒಂದೂವರೆ ವರ್ಷದ ಮುಸ್ತಾಕ್
ಗಾಯಾಳುಗಳು: ಫಾಜಿಯಾ, ಜುನಾದ್, ರುಕಿಯಾ, ರಜಿಯಾ, ಬುಸುರಾ, ಸಾಜಿಯಾ, ಸನ್ನಿ, ಮಹಮ್ಮದ್, ಆಯಿಷಾ, ಮಹಮ್ಮದ್ ಬಿ.ಎಚ್., ಮಹಮ್ಮದ್ ಇಕ್ಬಾಲ್ ಹಾಗೂ ಲಾರಿ ಚಾಲಕ ಶೇಷಪ್ಪಗೌಡ
ಪಾನಮತ್ತನಿಗೆ ಇಬ್ಬರು ಬಲಿ
ಆನೇಕಲ್ಲು: ಅತ್ತಿಬೆಲೆ ಬಳಿ ಪಾನಮತ್ತ ಲಾರಿ ಚಾಲಕ ಪ್ರಭು(47) ಎಂಬಾತನ ಎಡವಟ್ಟಿನಿಂದ ಸಂಭವಿಸಿದ ಸರಣಿ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ. ಉದ್ರಿಕ್ತರು ಲಾರಿಗೆ ಬೆಂಕಿ ಹಚ್ಚಿದ್ದು, ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ಟಿವಿಎಸ್ ಕಂಪನಿ ವಾಹನಗಳನ್ನು ಗುತ್ತಿಗೆ ಆಧಾರದ ಮೇಲೆ ಸಾಗಿಸುವ ತಮಿಳುನಾಡು ಮೂಲದ ಲಾರಿ ಚಾಲಕ ಮಂಗಳವಾರ ಅತ್ತಿಬೆಲೆ ಕಚೇರಿಯಿಂದ ಪಾನಮತ್ತನಾಗಿ ಹೊರಟಿದ್ದ. ದಾಸನಪುರ ಬಳಿ ಟಾಟಾ ಎಸ್ ವಾಹನಕ್ಕೆ ಡಿಕ್ಕಿ ಹೊಡೆದ. ಆಗ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಆಯಿತು. ಇದರಿಂದ ಭಯಭೀತನಾಗಿ ತಪ್ಪಿಸಿಕೊಳ್ಳಲು ಮತ್ತೂ ವೇಗವಾಗಿ ಸಾಗುತ್ತಿದ್ದಾಗಲೇ ಬೈಕ್ಗೆ ಡಿಕ್ಕಿ ಹೊಡೆದಿದ್ದರಿಂದ ಪಾಪರೆಡ್ಡಿ(55) ಮತ್ತು ಜನಾರ್ದನ್(30) ಸ್ಥಳದಲ್ಲೇ ಮೃತಪಟ್ಟರು.
ಇಷ್ಟೆಲ್ಲಾ ರಾದ್ಧಾಂತವಾಗುತ್ತಿದ್ದಂತೆ ಜನತೆ ಲಾರಿ ಬೆನ್ನತ್ತಿದ್ದಾರೆ. ತಪ್ಪಿಸಿಕೊಳ್ಳುವ ಭರದಲ್ಲಿ ಸರ್ಜಾಪುರ ರಸ್ತೆಯ ತಿರುವಿನಲ್ಲಿ ಬಿದರಗುಪ್ಪೆ ಕೆರೆ ಏರಿಗೆ ಡಿಕ್ಕಿ ಹೊಡೆದು 15 ಅಡಿ ಆಳದಲ್ಲಿ ಲಾರಿ ಉರುಳಿ ಬಿದ್ದಿದೆ. ಲಾರಿಯಲ್ಲಿದ್ದ ಚಾಲಕನನ್ನು ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಗಾಯಾಳುಗಳನ್ನು ಬೊಮ್ಮಸಂದ್ರದ ಸ್ಪರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ಮಾಹಿತಿ ಲಭ್ಯವಾಗಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


