ಪ್ರಧಾನ ಸುದ್ದಿ

'ಸೌರ'ಮಾನಕ್ಕೆ ಉತ್ತೇಜನ

'ಸೌರ'ಮಾನಕ್ಕೆ ಉತ್ತೇಜನ
Published On :

ಕ.ಪ್ರ. ವಾರ್ತೆ ಬೆಂಗಳೂರು  ಮೇ 15
ವಿದ್ಯುತ್ ಉತ್ಪಾದನಾ ಕ್ಷೇತ್ರಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ 2021ರವರೆಗೆ ಅನ್ವಯವಾಗುವಂತೆ ಸೌರನೀತಿ ಪರಿಷ್ಕರಣೆ, ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಳಕೆದಾರರ ಶುಲ್ಕ ಹೆಚ್ಚಳಕ್ಕೆ ಒಪ್ಪಿಗೆ ಸೇರಿದಂತೆ 20ಕ್ಕೂ ಹೆಚ್ಚು ವಿಚಾರಗಳಿಗೆ ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಪ್ರಸಕ್ತ ಸಾಲಿನಲ್ಲೇ 450 ಮೆಗಾ ವ್ಯಾಟ್ ಸೇರಿದಂತೆ ಒಟ್ಟು 1000 ಮೆಗಾ ವ್ಯಾಟ್ ಸೌರ ವಿದ್ಯುತ್ ಉತ್ಪಾದನೆ ಮಾಡುವ ಮಹತ್ವಾಕಾಂಕ್ಷೆಯನ್ನು ಸೌರನೀತಿಯಲ್ಲಿ ಅಡಕಗೊಳಿಸಲಾಗಿದ್ದು, ಸೌರ ವಿದ್ಯುತ್ ಪಾರ್ಕ್ಗಳಿಗೆ ಕೈಗಾರಿಕಾ ಸ್ಥಾನಮಾನ ನೀಡಲು ನಿರ್ಧರಿಸಲಾಗಿದೆ. ಸಂಪುಟ ಸಭೆ ಬಳಿಕ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಕಾನೂನು-ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಈ ವಿಷಯ ತಿಳಿಸಿದ್ದಾರೆ.
ಈ ಯೋಜನೆ ಅನ್ವಯ ಗ್ರಿಡ್ ಸಂಪರ್ಕಿತ ದೊಡ್ಡ ಯೋಜನೆಗಳು, ಮೇಲ್ಚಾವಣಿ, ಆಫ್ ಗ್ರಿಡ್ ಆಧಾರಿತ ಯೋಜನೆಗಳು ಎಂದು ವರ್ಗೀಕರಿಸಲಾಗಿದೆ. ರೈತರು ತಮ್ಮ ಹೊಲದಲ್ಲೇ ಕನಿಷ್ಠ 1 ಮೆಗಾ ವ್ಯಾಟ್ನಿಂದ 3 ಮೆಗಾ ವ್ಯಾಟ್ ಸಾಮರ್ಥ್ಯದವರೆಗೆ ಸೌರ ವಿದ್ಯುತ್ ಉತ್ಪಾದನಾ ಸ್ಥಾವರ ಸ್ಥಾಪಿಸುವುದಕ್ಕೆ ಅನುಮತಿ ನೀಡಲಾಗುವುದು. ಗ್ರಿಡ್ ಸಂಪರ್ಕಿತ ದೊಡ್ಡ ಯೋಜನೆಗಳಲ್ಲಿ 300 ಮೆಗಾ ವ್ಯಾಟ್ ಸಾಮರ್ಥ್ಯದ ಸ್ಥಾವರಗಳನ್ನು ಸ್ಥಾಪಿಸಲಾಗುವುದು. ಇವುಗಳು ಉತ್ಪಾದನೆ ಮಾಡಿದ ವಿದ್ಯುತ್ತನ್ನು ಕೆಇಆರ್ಸಿ ನಿಗದಿ ಮಾಡಿದ ದರದಲ್ಲಿ ಸರ್ಕಾರಿ ವಿದ್ಯುತ್ ಸರಬರಾಜು ಕಂಪನಿಗಳು ಖರೀದಿಸುತ್ತವೆ ಎಂದರು.
3 ಮೆಗಾ ವ್ಯಾಟ್ ಸಾಮರ್ಥ್ಯಕ್ಕಿಂತ ಹೆಚ್ಚಿನ ಯೋಜನೆಗಳನ್ನು ಬಿಡ್ ಮೂಲಕ ಹಂಚಿಕೆ ಮಾಡಲಾಗುವುದು. ಸ್ವಂತ ಬಳಕೆ ಮತ್ತು ಸ್ವತಂತ್ರ ವಿದ್ಯುತ್ ಉತ್ಪಾದಕ ವರ್ಗದ ಯೋಜನೆಗಳನ್ನೂ ಸೌರನೀತಿಯಲ್ಲಿ ಅಳವಡಿಸಲಾಗಿದೆ. ಅನುದಾನ ಹೊಂದಿದ ಯೋಜನೆಗಳಲ್ಲಿ ಉತ್ಪಾದನೆಯಾಗುವ ವಿದ್ಯುತ್ನ್ನು ಯುನಿಟ್ಗೆ ರು. 7.20 ಹಾಗೂ ಅನುದಾನ ರಹಿತ ವಿದ್ಯುತ್ನ್ನು ರು. 9.56ಗೆ ಖರೀದಿ ದರ ನಿಗದಿ ಮಾಡಲಾಗಿದೆ ಎಂದರು.
ಗ್ರೀಡ್ ಸಂಪರ್ಕಿತ ಸ್ಥಾವರಗಳನ್ನು ನೀರಾವರಿ ಕಾಲುವೆಗಳ ಮೇಲೆ ಸ್ಥಾಪಿಸಲಾಗುತ್ತದೆ. ರಾಜ್ಯಾದ್ಯಂತ ಸೌರ ಪಾರ್ಕ್ಗಳನ್ನು ಆರಂಭಿಸಲಾಗುವುದು. ಭೂ ಪರಿವರ್ತನೆ ಕಾಯ್ದೆಯ ಕಲಂ 109ರನ್ವಯ ಕೃಷಿ ಭೂಮಿಯಲ್ಲಿ ಸ್ಥಾವರ ಸ್ಥಾಪಿಸಲು ಕಾಲಮಿತಿಯಲ್ಲಿ ಭೂ ಪರಿವರ್ತನೆ ಮಾಡುವುದಕ್ಕೆ ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ ಎಂದು ವಿವರಿಸಿದರು.


ಸಂಪುಟದ ಇತರೆ ನಿರ್ಧಾರಗಳು

ಸಾಮಾನ್ಯ ವರ್ಗಾವಣೆಗೆ ಒಪ್ಪಿಗೆ: 2014-15 ನೇ ಸಾಲಿನಲ್ಲಿ ಸರ್ಕಾರಿ ನೌಕರರ ಸಾಮಾನ್ಯ ವರ್ಗಾವಣೆಗೆ ಒಪ್ಪಿಗೆ. ಮೇ 16ರಿಂದ ಜೂನ್ 25ರೊಳಗೆ ವರ್ಗಾವಣೆ ಪೂರ್ಣಗೊಳಿಸಲು ಸೂಚನೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಸದ್ಯದಲ್ಲೇ ಆದೇಶ ಜಾರಿ. ಕನಿಷ್ಠ 2 ವರ್ಷ ಪೂರೈಸಿದವರನ್ನು ಮಾತ್ರ ವರ್ಗಾವಣೆಗೆ ಪರಿಗಣಿಸಲು ಸೂಚನೆ.


ಟಿ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ಧಾಣದಲ್ಲಿ ಬಳಕೆದಾರರ ಶುಲ್ಕ ಹೆಚ್ಚಳಕ್ಕೆ ಘಟನೋತ್ತರ ಅನುಮತಿ. ಇದರಿಂದ ಬಳಕೆದಾರರ ಶುಲ್ಕದಲ್ಲಿ ಕನಿಷ್ಠ 25ರಿಂದ 30 ಏರಿಕೆ ಸಾಧ್ಯತೆ. ಭವಿಷ್ಯದಲ್ಲಿ 400 ಕೋಟಿ ಮೊತ್ತದ ನವೀಕರಣ ಕಾರ್ಯ ಆರಂಭವಾಗುವುದರಿಂದ ಈ ತೀರ್ಮಾನ.2011ರಿಂದ 2016ಕ್ಕೆ ಅನ್ವಯವಾಗುವಂತೆ ಒಪ್ಪಿಗೆ.
ಟಿ ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ ಅನ್ವಯ ಬೆಂಗಳೂರಿನಲ್ಲಿ ಜಠರ ಮರುಜೋಡಣೆ ಕೇಂದ್ರಕ್ಕೆ ರು. 5.47 ಕೋಟಿ ಅನುದಾನ ಮತ್ತು 7 ಹುದ್ದೆಗಳ ಭರ್ತಿಗೆ ಅನುಮತಿ.
ಟಿ ಪಂಚಾಯತ್ ರಾಜ್ ಅಧಿನಿಯಮದ ಪ್ರಕಾರ ಆಸ್ತಿ ವಿವರ ನೀಡದ ಜಿಲ್ಲಾ ಪಂಚಾಯಿತ್, ತಾಲೂಕು ಪಂಚಾಯಿತ್ ಅಧ್ಯಕ್ಷರು, ಉಪಾಧ್ಯಕ್ಷರ ಅನರ್ಹಗೊಳಿಸುವ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗದ ಬದಲು, ಸರ್ಕಾರದ ಬಳಿ ಇರಿಸಿಕೊಳ್ಳುವ ಪ್ರಸ್ತಾಪಕ್ಕೆ ಒಪ್ಪಿಗೆ.
ಟಿ ಗ್ರಾಮ ಪಂಚಾಯಿತ್ ಪಿಡಿಓಗಳಿಗೆ ಲ್ಯಾಪ್ಟಾಪ್. 5632 ಪಿಡಿಓಗಳ ಪೈಕಿ ಈಗಾಗಲೇ 2004 ಮಂದಿಗೆ ಲ್ಯಾಪ್ಟಾಪ್ ನೀಡಲಾಗಿದ್ದು, ಇನ್ನುಳಿದ 3628 ಮಂದಿಗೆ ರು. 16.32 ಕೋಟಿ ವೆಚ್ಚದಲ್ಲಿ ವಿತರಣೆ.
ಟಿ ರಾಮನಗರ-ಮೈಸೂರು ರೈಲು ಜೋಡಿ ಮಾರ್ಗದ ಪರಿಷ್ಕೃತ ಅಂದಾಜು ವೆಚ್ಚಕ್ಕೆ ಒಪ್ಪಿಗೆ. ರು. 874 ಕೋಟಿ ಯೋಜನೆ ಪೈಕಿ ರಾಜ್ಯದ ಪಾಲು ರು. 400 ಕೋಟಿ.
ಟಿ 2011-12ನೇ ಸಾಲಿನಲ್ಲಿ ಪಿಜಿ ಸಿಇಟಿ ಬರೆದು ಸೀಟು ವಾಪಾಸ್ ಮಾಡಿದ 1600 ವಿದ್ಯಾರ್ಥಿಗಳು ಕಟ್ಟಿದ್ದ ರು. 2.16 ಕೋಟಿಯನ್ನು ವಾಪಾಸ್ ಮಾಡುವುದಕ್ಕೆ ಒಪ್ಪಿಗೆ.
ಟಿ ಕರ್ನಾಟಕ ಆಡಳಿತ ನ್ಯಾಯ ಮಂಡಳಿಗೆ ಜಿ.ಶಾಂತಪ್ಪ ಅವರನ್ನು ಸದಸ್ಯರಾಗಿ ನೇಮಕ.
ಟಿ ಸಚಿವಾಲಯದ 39 ಇಲಾಖೆಗಳಲ್ಲಿ ಒಟ್ಟಾರೆಯಾಗಿ 1,26,865 ಕಡತ ಬಾಕಿ ಇದ್ದು, 2ರಿಂದ 3 ವರ್ಷದ ಹಳೆ ಕಡತವನ್ನು ತ್ವರಿತ ವಿಲೇವಾರಿ ಮಾಡಲು ಸೂಚನೆ. ಮೂರು ವರ್ಷ ಹಳೆಯ 16040, 2 ವರ್ಷ ಹಳೆಯ 11434 ಕಡತಗಳು ಇನ್ನು ಬಾಕಿ ಇದೆ.
ಟಿ ಸಕ್ಕರೆ ನಿರ್ದೇಶನಾಲಯದ ಸಿಬ್ಬಂದಿ ನೇಮಕದ ವೃಂದ ಬದಲಾವಣೆಗೆ ಒಪ್ಪಿಗೆ.
ಟಿ ಗ್ರಾಹಕ ರಕ್ಷಣಾ ಪರಿಷತ್ನ ಸದಸ್ಯರ ಸಂಖ್ಯೆ 40ರಿಂದ 25ಕ್ಕೆ ಇಳಿಕೆ.


ಕಡತ ವಿಲೇವಾರಿಯಲ್ಲಿ ಕಂದಾಯ ಮತ್ತು ನಗರಾಭಿವೃದ್ಧಿ ಇಲಾಖೆ ಹಿಂದೆ


ಕಡತ ವಿಲೇವಾರಿ ಮಾಡದ ಅಧಿಕಾರಿಗಳು ಹಾಗೂ ವರ್ಗಾವಣೆ ವಿಚಾರದಲ್ಲಿ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದಿದೆ. ವಿಲೇ ವಿಳಂಬ ಮಾಡಿದ ಇಲಾಖಾ ಪ್ರಧಾನ ಕಾರ್ಯದರ್ಶಿಗಳ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಕೆಂಡಕಾರಿದ್ದಾರೆ. ವಿಶೇಷವೆಂದರೆ ಅವರ ಅಧಿಕಾರ ವ್ಯಾಪ್ತಿಯಲ್ಲಿ ಬರುವ ಹಣಕಾಸು ಇಲಾಖೆಯಲ್ಲಿ 3973, ವಾಣಿಜ್ಯ ಮತ್ತು ಕೈಗಾರಿಕೆಯಲ್ಲಿ 4552 ಕಡತಗಳು ವಿಲೇವಾರಿಯಾಗುವುದಕ್ಕೆ ಬಾಕಿ ಇದೆ. ಆದರೆ ಕಂದಾಯ ಇಲಾಖೆ ಕಡತ ವಿಲೇವಾರಿಯಲ್ಲಿ ಹಿಂದಿದೆ. 20048 ಕಡತ ವಿಲೇವಾರಿಗೆ ಬಾಕಿ ಇದೆ. ಉಳಿದಂತೆ ಅರಣ್ಯ- 5000, ಒಳಾಡಳಿತ-9460, ಮೀನುಗಾರಿಕೆ ಮತ್ತು ಪಶು ಸಂಗೋಪನೆ - 1640, ನಗರಾಭಿವೃದ್ಧಿ 11054, ಗ್ರಾಮೀಣಾಭಿವೃದ್ಧಿ- 5511, ಕೃಷಿ- 1602, ಹಿಂದುಳಿದ ವರ್ಗ- 552, ಸಹಕಾರ -2554, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ- 13148, ಇಂಧನ 1276, ಉನ್ನತ ಶಿಕ್ಷಣ- 3788, ಪ್ರಾಥಮಿಕ ಶಿಕ್ಷಣ- 8495, ಆಹಾರ ಮತ್ತು ನಾಗರಿಕ ಪೂರೈಕೆ- 1767, ವಸತಿ 993, ಆರೋಗ್ಯ- 2449, ಜಲಸಂಪನ್ಮೂಲ- 2325, ಸಣ್ಣನೀರಾವರಿ- 1131, ವೈದ್ಯಶಿಕ್ಷಣ - 2529, ಲೋಕೋಪಯೋಗಿ - 3824 ಕಡತಗಳು ಬಾಕಿ ಇವೆ. ಕಡತ ವಿಲೇವಾರಿ ಸರಾಸರಿ ಪ್ರಮಾಣ ಶೇ.62.63ರಷ್ಟಿದೆ. ಆದರೆ ಕಂದಾಯ ಇಲಾಖೆಯಲ್ಲಿ ಮಾತ್ರ ಶೇ.15.87ರಷ್ಟಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.