ಸಾರ್ಕ್ಗೆ ಸಾರ್ಥಕ ಆಹ್ವಾನ

-ನೆರೆರಾಷ್ಟ್ರಗಳೊಂದಿಗೆ ಬಾಂಧವ್ಯ ವೃದ್ಧಿ ಯತ್ನ, ಏಷ್ಯಾ ಕೇಂದ್ರಿತ ವಿದೇಶಾಂಗ ನೀತಿ ಚಿಂತನೆ
-ಆರ್ಥಿಕತೆಗೂ ಒತ್ತು, ಅಮೆರಿಕಕ್ಕೆ ಇಲ್ಲ ಮಹತ್ವ ಚೀನಾ, ಜಪಾನ್, ರಷ್ಯಾ ಜತೆ ವಿಶ್ವಾಸ ವೃದ್ಧಿ
ನವದೆಹಲಿ: ಅಧಿಕಾರ ಸ್ವೀಕಾರಕ್ಕೆ ಮುನ್ನವೇ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಮಹತ್ವದ ರಾಜತಾಂತ್ರಿಕ ನಡೆ ಇರಿಸಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಪಾಕ್, ಬಾಂಗ್ಲಾ ಸೇರಿದಂತೆ ಸಾರ್ಕ್ ದೇಶಗಳ ಮುಖ್ಯಸ್ಥರಿಗೆ ಆಮಂತ್ರಣ ನೀಡುವ 'ಅಚ್ಚರಿದಾಯಕ' ಕ್ರಮದ ಮೂಲಕ ಸ್ನೇಹಮಯ ಬಾಂಧವ್ಯದ ನಿಲುವು ವ್ಯಕ್ತಪಡಿಸಿದ್ದಾರೆ.
ಭಾರತೀಯ ಪ್ರಧಾನಿಯೊಬ್ಬರ ಪ್ರಮಾಣ ಸ್ವೀಕಾರಕ್ಕೆ ಸಾರ್ಕ್ ಮುಖ್ಯಸ್ಥರಿಗೆ ಆಮಂತ್ರಣ ನೀಡಿರುವುದು ಇದೇ ಮೊದಲು. ಆರಂಭಕ್ಕೇ ಮೋದಿ ಇರಿಸಿರುವ ಈ 'ರಾಜ ನಡೆ'ಗೆ ಜಮ್ಮು-ಕಾಶ್ಮೀರ ಸೇರಿ ದೇಶಾದ್ಯಂತ ಪ್ರಶಂಸೆಗಳ ಮಳೆಯಾಗುತ್ತಿದೆ. ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಪ್ಘಾನಿಸ್ತಾನ, ಭೂತಾನ್, ನೇಪಾಳ, ಮಾಲ್ಡೀವ್ಸ್ಗಳು ಸಾರ್ಕ್ನ ಇತರ ಸದಸ್ಯ ರಾಷ್ಟ್ರಗಳು. ಈ ಎಲ್ಲ ರಾಷ್ಟ್ರಗಳೂ ಭಾರತದ ಸ್ನೇಹಹಸ್ತ ಸ್ವೀಕರಿಸುವ ಉತ್ಸಾಹ ತೋರಿಸಿವೆ.
ಆರ್ಥಿಕ ಕೇಂದ್ರಿತ: ಚುನಾವಣಾ ಪ್ರಚಾರದುದ್ದಕ್ಕೂ ಕಾಂಗ್ರೆಸ್ ವಿದೇಶಾಂಗ ನೀತಿಯನ್ನು 'ನಿಂತ ನೀರಾಗಿರುವ ಮತ್ತು ದುರ್ಬಲ ನೀತಿ' ಎಂದು ಮೋದಿ ಟೀಕಿಸುತ್ತ ಬಂದಿದ್ದರು. ಈಗ ಈ ಮೂಲಕ ವಿದೇಶಾಂಗ ನೀತಿ ಪುನರ್ರೂಪಿಸುವ ಸೂಚನೆ ನೀಡಿದ್ದಾರೆ. 'ನನ್ನ ವಿದೇಶಾಂಗ ನೀತಿ ಆರ್ಥಿಕ ಕೇಂದ್ರಿತ' ಎನ್ನುವುದನ್ನೂ ಮೋದಿ ಹೇಳುತ್ತಿದ್ದಾರೆ.
ದೊಡ್ಡಣ್ಣನಂತೆ ವರ್ತಿಸುತ್ತಿರುವ ಅಮೆರಿಕವನ್ನು ಬದಿಗೊತ್ತಿ ಅದಕ್ಕೆ ಪರ್ಯಾಯವಾಗಿ ಏಷ್ಯಾ ಕೇಂದ್ರಿತ ರಾಜನೀತಿಯೊಂದನ್ನು ಚಿಂತಿಸುತ್ತಿರುವುದು ಇದರಿಂದ ಸ್ಟಷ್ಟ. ದಿ. ಪ್ರಧಾನಿ ರಾಜೀವ್ಗಾಂಧಿ ಸಹ ಸಾರ್ಕ್ ದೇಶಗಳ ಬಲವೃದ್ಧಿಯ ನಿಟ್ಟಿನಲ್ಲಿ 1986ರಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದರು. ಬೆಂಗಳೂರು ಸಾರ್ಕ್ ಸಮ್ಮೇಳನದಲ್ಲಿ 'ಏಷ್ಯ ರಾಷ್ಟ್ರಗಳು ಒಗ್ಗೂಡಿದರೆ ಜಗತ್ತಿನ ದೊಡ್ಡ ಶಕ್ತಿಯಾಗಬಹುದು' ಎನ್ನುವ ಸಂದೇಶ ರವಾನಿಸಿದ್ದರು.
ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗಲೂ ಪಾಕಿಸ್ತಾನ ಜತೆಗಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವ ಸಲುವಾಗಿ ದೆಹಲಿ-ಲಾಹೋರ್ ಬಸ್, ರೈಲು ಸಂಚಾರ ಆರಂಭಿಸಿದ್ದರು. ಖುದ್ದು ಬಸ್ನಲ್ಲಿ ಲಾಹೋರ್ಗೆ ಪ್ರಯಾಣಿಸಿ ಮುಷರ್ರಫ್ ಜತೆ ಶಾಂತಿ ಮಾತುಕತೆಗೆ ಚಾಲನೆ ನೀಡಿದ್ದನ್ನು ನೆನಪಿಸಿಕೊಳ್ಳಬಹುದು.
ಮೋದಿ ಇದೀಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಏಷ್ಯಾದ ಪ್ರಬಲ ರಾಷ್ಟ್ರಗಳಾದ ಚೀನಾ, ಜಪಾನ್ ಅಲ್ಲದೆ ರಷ್ಯಾದೊಂದಿಗೂ ಬಾಂಧವ್ಯ ವೃದ್ಧಿಗೆ ಉತ್ಸುಕರಾಗಿದ್ದಾರೆ. ಅಮೆರಿಕಕ್ಕೆ ನಂತರದ ಸ್ಥಾನ ನೀಡುವುದು ಭಾವಿ ಪ್ರಧಾನಿಯ ಇರಾದೆ. ಭಾರತದಲ್ಲಿನ ಅಮೆರಿಕ ರಾಯಭಾರಿ ನ್ಯಾನ್ಸಿ ಪೊವೆಲ್ ಚುನಾವಣೆಗೆ ಮುನ್ನ ಭೇಟಿ ಆಗಿದ್ದಾಗಲೂ ಮೋದಿ ತಣ್ಣನೆಯ ಪ್ರತಿಕ್ರಿಯೆ ನೀಡಿದ್ದರು.
'ಪಾಕ್ ಪ್ರಧಾನಿ ನವಾಜ್ ಷರೀಫ್, ಶ್ರೀಲಂಕಾ ಅಧ್ಯಕ್ಷ ಮಹೀಂದ್ರಾ ರಾಜಪಕ್ಸೆ, ಬಾಂಗ್ಲಾದ ಶೇಕ್ ಹಸೀನಾ, ಅಪ್ಘಾನಿಸ್ತಾನದ ಹಮೀದ್ ಕರ್ಜೈ, ಭೂತಾನ್ನ ತ್ಸೆರಿಂಗ್ ತೋಬ್ಗೆ, ನೇಪಾಳದ ಸುಶೀಲ್ ಕೊಯಿರಾಲಾ ಅವರುಗಳಷ್ಟೇ ಅಲ್ಲದೆ ಮಾಲ್ಡೀವ್ಸ್ ಅಧ್ಯಕ್ಷ ಅಬ್ದುಲ್ಲ ಯಾಮೀನ್ ಅವರನ್ನೂ ಆಮಂತ್ರಿಸಲಾಗಿದೆ. ಈ ಪೈಕಿ ಕರ್ಜೈ, ರಾಜಪಕ್ಸೆ, ತೋಬ್ಗೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಆಸಕ್ತಿ ತೋರಿಸಿದ್ದಾರೆ. ಉಳಿದವರು ಇನ್ನೂ ಪ್ರತಿಕ್ರಿಯಿಸಿಲ್ಲ' ಎಂದು ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಸಂತಸದ ಹೊಳೆ
'ಇದೊಂದು ಅದ್ಭುತ ನಡೆ. ಅದರಲ್ಲೂ ಪಾಕ್ ಪ್ರಧಾನಿಯನ್ನು ಆಮಂತ್ರಿಸಿರುವುದು ದಿಟ್ಟ ನಿರ್ಧಾರ. ಪಾಕ್ ಜತೆಗಿನ ಸುಸ್ಥಿರ ಮಾತುಕತೆಗೆ ಈ ಕ್ರಮ ಬುನಾದಿ ಎನ್ನುವುದು ನನ್ನ ವಿಶ್ವಾಸ' ಎಂದು ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಹೇಳಿದ್ದರೆ, 'ಇದು ಅನಿರೀಕ್ಷಿತವಾದರೂ ಖುಷಿ ನೀಡುವ ಆಶ್ಚರ್ಯದ ನಡೆ' ಎಂದು ಅಲ್ಲಿನ ಪ್ರತಿಪಕ್ಷ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ. ಕಾಶ್ಮೀರ ಪ್ರತ್ಯೇಕತಾವಾದಿ ಸಂಘಟನೆ ಹುರಿಯತ್ ಕಾನ್ಫರೆನ್ಸ್ ಸಹ ಮೋದಿ ನಡೆಯನ್ನು ಸ್ವಾಗತಿಸಿದೆ. 'ಉಭಯ ರಾಷ್ಟ್ರಗಳ ನಡುವಿನ ವಿಶ್ವಾಸ ವೃದ್ಧಿಯಾಗದೆ ಕಾಶ್ಮೀರ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಇದು ಮಹತ್ವದ ಬೆಳವಣಿಗೆ' ಎಂದು ಅಧ್ಯಕ್ಷ ಮಿರ್ವಾಯಿ ಝ್ ಉಮರ್ ಫಾರೂಕ್ ಅಭಿಪ್ರಾಯಪಟ್ಟಿದ್ದಾರೆ.
ರಾಜಕೀಯವಾಗಿ ಇದು ದಿಟ್ಟ ನಿರ್ಧಾರ. ಭೌಗೋಳಿಕವಾಗಿ ವಿಶಾಲ ರಾಷ್ಟ್ರವಾಗಿರುವ ಭಾರತ, ತನ್ನ ನೆರೆರಾಷ್ಟ್ರಗಳೊಂದಿಗೆ ಸುಮಧರ ಸಂಬಂಧ ಹೊಂದುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲೇಬೇಕು.
- ಸಿ.ರಾಜಾ ಮೋಹನ್, ವಿದೇಶಾಂಗ ನೀತಿ ವಿಶ್ಲೇಷಕ
-ಷರೀಫ್ ಭೇಟಿ ಕಷ್ಟ
ಭಾರತೀಯ ವಿದೇಶಾಂಗ ಸಚಿವಾಲಯದಿಂದ ಅಧಿಕೃತ ಅಮಂತ್ರಣ ಇನ್ನೂ ತಲುಪಿಲ್ಲ ಎಂದು ಪಾಕಿಸ್ತಾನ ರಾಯಭಾರಿ ಕಚೇರಿ ತಿಳಿಸಿದೆ. ಪಾಕ್ ಪ್ರಧಾನಿ ನವಾಜ್ ಷರೀಫ್ ತಕ್ಷಣದ ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ. ಆದರೆ ಷರೀಫ್ ಭಾಗವಹಿಸುವುದು ರಾಜಕೀಯ ಕಾರಣಗಳಿಂದಾಗಿ ಅನುಮಾನ ಎನ್ನುವುದು ವಿಶ್ಲೇಷಕರ ಅಭಿಪ್ರಾಯ. ವರ್ಷದ ಹಿಂದೆ ಪಾಕ್ ಪ್ರಧಾನಿ ನವಾಜ್ ಷರೀಫ್, ತಮ್ಮ ಪ್ರಮಾಣ ಸ್ವೀಕಾರ ಸಮಾರಂಭಕ್ಕೆ ಭಾರತದ ಪ್ರಧಾನಿ ಡಾ.ಮನಮೋಹನ ಸಿಂಗ್ ಅವರನ್ನು ಆಮಂತ್ರಿಸಿದ್ದರು. ಸಿಂಗ್ ಆಹ್ವಾನ ತಿರಸ್ಕರಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


