ಸೌಹಾರ್ದಕ್ಕೆ ಅಡ್ಡಿ

ನವದೆಹಲಿ/ಕಾಬೂಲ್: ಭಾರತದ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸುವುದಾಗಿ ಆಫ್ಘನ್ ಅಧ್ಯಕ್ಷ ಹಮೀದ್ ಕರ್ಜೈ ಭರವಸೆ ನೀಡಿದ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲಿನ ಭಾರತದ ದೂತಾವಾಸ ಕಚೇರಿ ಮೇಲೆ ಉಗ್ರರ ದಾಳಿ ನಡೆದಿದೆ. ಈ ಮೂಲಕ ಎರಡೂ ರಾಷ್ಟ್ರಗಳ ನಡುವೆ ಸೌಹಾರ್ದ ಸಂಬಂಧ ಏರ್ಪಡುವುದು ನಮಗಿಷ್ಟವಿಲ್ಲ ಎಂಬ ಸಂದೇಶವನ್ನು ತಾಲಿಬಾನ್ ಉಗ್ರರು ನೀಡಿದ್ದಾರೆ.
ಇನ್ನೊಂದೆಡೆ, ಪಾಕ್ನಲ್ಲಿ ಪ್ರಧಾನಿ ನವಾಜ್ ಷರೀಫ್ ಸ್ಥಿತಿ 'ಅತ್ತ ದರಿ, ಇತ್ತ ಪುಲಿ' ಎಂಬಂತಾಗಿದೆ. ಮೋದಿ ಆಹ್ವಾನ ಸ್ವೀಕರಿಸಿ ಭಾರತಕ್ಕೆ ಬರಲು ಷರೀಫ್ ಅವರಿಗೆ ಮನಸ್ಸಿದ್ದರೂ, ಪಾಕ್ ಸೇನೆ ಅವರಿಗೆ ಅಡ್ಡಗಾಲು ಹಾಕಿ ನಿಂತಿದೆ. ಒಟ್ಟಾರೆ ಸಂದಿಗ್ಧ ಸ್ಥಿತಿಯಲ್ಲಿ ಸಿಲುಕಿರುವ ಷರೀಫ್, ಇನ್ನೂ ನಿರ್ಧಾರ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ.
ಸಂದಿಗ್ಧದಲ್ಲಿ ಷರೀಫ್: ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ಗೆ ಭಾರತ ಭೇಟಿ ವಿಚಾರ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮೋದಿ ಅವರ ಆಹ್ವಾನವನ್ನು ಒಪ್ಪಿ ಭಾರತಕ್ಕೆ ಬರಲು ಷರೀಫ್ ಉತ್ಸುಕರಾಗಿದ್ದಾರೆ. ಆದರೆ ಅವರ ಆಸೆಗೆ ಪಾಕ್ ಸೇನೆ ಮತ್ತು ಐಎಸ್ಐ ತಣ್ಣೀರು ಸುರಿಯುತ್ತಿವೆ. ಅತ್ತ ಸೇನೆಯ ಆದೇಶವನ್ನು ಧಿಕ್ಕರಿಸುವಂತಿಲ್ಲ, ಇತ್ತ ಭಾರತದ ಜತೆಗಿನ ಸಂಬಂಧವನ್ನು ಮುರಿಯುವಂತಿಲ್ಲ. ಹೀಗಾಗಿ ಷರೀಫ್ರ ತಲೆ ಗೊಂದಲದ ಗೂಡಾಗಿದೆ. ಏನೇ ಇದ್ದರೂ ಅವರ ಅಂತಿಮ ನಿರ್ಧಾರ ಶನಿವಾರ ಹೊರಬೀಳಲಿದೆ. ಏನೇ ಒತ್ತಡಗಳಿದ್ದರೂ ಷರೀಫ್ ಅವರು ಭಾರತಕ್ಕೆ ಬರುವ ಸಾಧ್ಯತೆಗಳೇ ಹೆಚ್ಚು ಎನ್ನುತ್ತವೆ ಮೂಲಗಳು.
-ಎಲ್ಲ ನಾಲ್ವರು ಉಗ್ರರ ಹತ್ಯೆ
ಆಫ್ಘನ್ನ ಹೆರಾತ್ ಪ್ರಾಂತ್ಯದಲ್ಲಿನ ಭಾರತದ ರಾಜತಾಂತ್ರಿಕ ಕಚೇರಿ ಮೇಲೆ ಉಗ್ರರು ಗ್ರೆನೇಡ್, ರಾಕೆಟ್ ಪ್ರೊಪೆಲ್ಲರ್ ಸೇರಿದಂತೆ ಭಾರಿ ಶಸ್ತ್ರಾಸ್ತ್ರಗಳನ್ನು ಹೊತ್ತು ದಾಳಿ ಮಾಡಿದ್ದಾರೆ. ಭಾರತದ ಯಾವುದೇ ರಾಜತಾಂತ್ರಿಕ ಸಿಬ್ಬಂದಿಗೆ ಹಾನಿಯಾಗಿಲ್ಲ. ಪ್ರತಿಯಾಗಿ, ಆಫ್ಘಾನಿಸ್ತಾನ ಪೊಲೀಸರು ಹಾಗೂ ಐಟಿಬಿಪಿ (ಇಂಡೊ- ಟಿಬೆಟಿಯನ್ ಗಡಿ ಭದ್ರತಾ ಪಡೆ) ಯೋಧರು ನಡೆಸಿದ ಗುಂಡಿನ ದಾಳಿಗೆ ಎಲ್ಲ ನಾಲ್ವರು ಉಗ್ರರೂ ಬಲಿಯಾಗಿದ್ದಾರೆ.
-ರಾಜಪಕ್ಸೆಗೆ ಆಹ್ವಾನ: ಮೋದಿಗೆ ಒತ್ತಡ
ಶ್ರೀಲಂಕಾ ಅಧ್ಯಕ್ಷ ಮಹಿಂದ ರಾಜಪಕ್ಸೆಗೆ ನೀಡಿದ ಆಹ್ವಾನ ವಿರೋಧಿಸುತ್ತಿರುವ ತಮಿಳುನಾಡಿನ ರಾಜಕೀಯ ಪಕ್ಷಗಳು ಈಗ ಮೋದಿ ಮೇಲೆ ಒತ್ತಡ ತರಲು ಆರಂಭಿಸಿವೆ. ಶುಕ್ರವಾರ ಎಂಡಿಎಂಕೆ ಮುಖ್ಯಸ್ಥ ವೈಕೋ ದೆಹಲಿಗೆ ಧಾವಿಸಿ, ಮೋದಿ ಮತ್ತು ರಾಜನಾಥ್ಸಿಂಗ್ರನ್ನು ಭೇಟಿಯಾಗಿ ಆಹ್ವಾನ ಮರುಪರಿಶೀಲಿಸಿ ಎಂದು ಕೋರಿಕೊಂಡಿದ್ದಾರೆ. ಆದರೆ ಬಿಜೆಪಿ ಮಾತ್ರ ಇಂತಹ ಸಾಧ್ಯತೆಗಳನ್ನು ತಳ್ಳಿಹಾಕಿದೆ.
- ತಮಿಳರ ಸಂತೈಸಲು ರಾಜಪಕ್ಸೆ ದಿಟ್ಟ ಹೆಜ್ಜೆ
ರಾಜಪಕ್ಸೆ ಮಾತ್ರ ತಮಿಳರಲ್ಲಿ ಎದ್ದಿರುವ ಆಕ್ರೋಶ ತಣಿಸಲು ಮುಂದಾಗಿದ್ದಾರೆ. ಈ ನಿಚ್ಚಿನಲ್ಲಿ ಮಹತ್ವದ ಹೆಜ್ಜೆಯನ್ನವರು ಇಟ್ಟಿದ್ದಾರೆ. ಲಂಕೆಯಲ್ಲಿ ತಮಿಳು ಬಾಹುಳ್ಯವಿರುವ ಉತ್ತರ ಪ್ರಾಂತ್ಯದ ಮುಖ್ಯಮಂತ್ರಿ ಸಿ.ವಿ. ವಿಘ್ನೇಶ್ವರನ್ರನ್ನು ಶುಕ್ರವಾರ ರಾಜಪಕ್ಸೆ ಭೇಟಿಯಾಗಿದ್ದಾರೆ. ಜತೆಗೆ, ಭಾರತಕ್ಕೆ ತೆರಳುವ ನಿಯೋಗದೊಂದಿಗೆ ಆಗಮಿಸುವಂತೆ ಆಹ್ವಾನಿಸಿದ್ದಾರೆ. ಇದಕ್ಕೆ ವಿಘ್ನೇಶ್ವರನ್ ಒಪ್ಪಿದ್ದಾರೋ, ಇಲ್ಲವೋ ಎಂಬುದು ದೃಢವಾಗಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


