ಸುದ್ದಿ ಸಂಕ್ಷೇಪ
ಅಧಿಕಾರಿ ಲೋಕಾ ಬಲೆಗೆ
ಬಿಜಾಪುರ: ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದ ಜಿಲ್ಲಾ ವ್ಯವಸ್ಥಾಪಕ ಮಹಿಬೂಬ ಅಬ್ದುಲ್ಸಾಬ ಗೌಂಡಿ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಬಿಜಾಪುರದ ಸಂತೋಷ ಕೊಳೂರು ಎಂಬ ರೈತರೊಬ್ಬರಿಗೆ ಗಂಗಾ ಕಲ್ಯಾಣ ಯೋಜನೆಯಡಿ ಬೋರ್ವೆಲ್ ಮಂಜೂರಿಯಾಗಿತ್ತು. ಹೀಗಾಗಿ ಸಂತೋಷ್ ಬಳಿ ಬೋರ್ವೆಲ್ ಹಾಕಿಸಲು ಏಜೆನ್ಸಿಗೆ ಆರ್ಡರ್ ಮಾಡಿಸುವುದಕ್ಕಾಗಿ ಮಹಿಬೂಬ್ 10 ಸಾವಿರ ಲಂಚ ಕೇಳಿದ್ದರು. ಈಗಾಗಲೇ 5 ಸಾವಿರ ಪಡೆದಿದ್ದು, ಶನಿವಾರ ಕಚೇರಿಯಲ್ಲಿ ಇನ್ನುಳಿದ 5 ಸಾವಿರ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬುದ್ಧಿ ಮಾತು; ಬಾಲಕ ಆತ್ಮಹತ್ಯೆ
ಮಳವಳ್ಳಿ: ತಾಲೂಕಿನ ಕಿರುಗಾವಲು ಸಮೀಪದ ಪುಟ್ಟೇಗೌಡನ ದೊಡ್ಡಿಯಲ್ಲಿ ತಂದೆ ಬುದ್ಧಿ ಮಾತಿಗೆ ಮನನೊಂದು ಬಾಲಕನೊಬ್ಬ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾಜು ಎಂಬುವರ ಮಗ ಗಿರೀಶ್ (13) ಮೃತ ಬಾಲಕ. 6ನೇ ತರಗತಿಯಲ್ಲಿ ಕಡಿಮೆ ಅಂಕಗಳಿಸಿದ್ದಕ್ಕೆ ತಂದೆ ಗದರಿಸಿದ್ದಾರೆ. ಮುಂದಿನ ಬಾರಿ ಹೆಚ್ಚು ಅಂಕಗಳಿಸಲು ಹೇಳಿದ್ದಾರೆ. ಇಷ್ಟಕ್ಕೆ ಮನನೊಂದ ಗಿರೀಶ್ ಕಿರುಗಾವಲಿನಲ್ಲಿ ತಂದೆ ನಡೆಸುತ್ತಿದ್ದ ಹೊಟೇಲ್ನಲ್ಲಿ ಸೀಮೆಎಣ್ಣೆ ಸುರಿದುಕೊಂಡು ಬೆಂಕಿಹಚ್ಚಿಕೊಂಡಿದ್ದಾನೆ. ಗಂಭೀರ ಗಾಯಗೊಂಡಿದ್ದ ಆತನನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಕರಣ ದಾಖಲಾಗಿದೆ.
ಮರುಮೌಲ್ಯಮಾಪನಕ್ಕೆ ಕಾಲಾವಕಾಶ
ಬೆಂಗಳೂರು: ದ್ವಿತೀಯ ಪಿಯು ಉತ್ತರಪತ್ರಿಕೆಯ ಛಾಯಾಪ್ರತಿ ಸಿಗುವುದು ವಿಳಂಬವಾದರೆ, ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಹೆಚ್ಚಿನ ಕಾಲಾವಕಾಶ ನೀಡಲು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದೆ. ವಿದ್ಯಾರ್ಥಿಗಳು ಛಾಯಾಪ್ರತಿಗೆ ಅರ್ಜಿ ಸಲ್ಲಿಸಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾಕಷ್ಟು ವಿದ್ಯಾರ್ಥಿಗಳಿಗೆ ಪ್ರತಿ ತಲುಪಿರಲಿಲ್ಲ. ಈ ಹಿನ್ನೆಲೆಯಲ್ಲಿ ಹಾಸನ, ಉಡುಪಿ, ಕೋಲಾರ, ಚಿಕ್ಕಬಳ್ಳಾಪುರದ ವಿದ್ಯಾರ್ಥಿಗಳು ಇಲಾಖೆ ಎದುರು ಪ್ರತಿಭಟನೆ ನಡೆಸಿದ್ದರು. ಇದರಿಂದ ಎಚ್ಚೆತ್ತ ಇಲಾಖೆ, ಛಾಯಾಪ್ರತಿಯನ್ನು ಕೊರಿಯರ್ ಅಥವಾ ಅಂಚೆ ಕಚೇರಿಯಿಂದ ವಿದ್ಯಾರ್ಥಿಗಳು ಪಡೆದ 48 ಗಂಟೆಯವರೆಗೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು ಎಂದಿದೆ. ಇದೇ ವೇಳೆ, ನಿಯಮದ ಪ್ರಕಾರ 6 ಅಂಕಕ್ಕಿಂತ ಹೆಚ್ಚಿದ್ದರೆ ಮಾತ್ರ ಮರುಮೌಲ್ಯಮಾಪನಕ್ಕೆ ಪರಿಗಣಿಸಲಾಗುತ್ತದೆ. ನಿಯಮ ಬದಲಾವಣೆ ಆಗುವವರೆಗೆ ಇದಕ್ಕೆ ಸಂಬಂಧಿಸಿದ ದೂರುಗಳನ್ನು ಪರಿಗಣಿಸಲು ಸಾಧ್ಯವಿಲ್ಲ. ಆದರೆ ನಿಯಮ ತಿದ್ದುಪಡಿಗೆ ಸರ್ಕಾರ ಮಟ್ಟದಲ್ಲಿ ಚರ್ಚೆ ನಡೆಸಲಾಗುವುದು ಎಂದು ಇಲಾಖೆ ನಿರ್ದೇಶಕ ರಾಮೇಗೌಡ ಹೇಳಿದ್ದಾರೆ.
ಮೋದಿ ಪ್ರಮಾಣವಚನಕ್ಕೆ ದೇವೇಗೌಡ
ಬೆಂಗಳೂರು: ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣವಚನ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭಾಗವಹಿಸಲಿದ್ದಾರೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸದಿರಲು ನಿರ್ಧರಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು ಬಹುಮತ ಗಳಿಸಿದರೆ ರಾಜ್ಯ ತೊರೆಯುತ್ತೇನೆ ಎಂದು ಹೇಳಿಕೆ ನೀಡಿ ವಿವಾದಕ್ಕೆ ಒಳಗಾಗಿದ್ದ ದೇವೇಗೌಡ ಅವರು ಶಿಷ್ಟಾಚಾರದ ಪ್ರಕಾರ ಕೇಂದ್ರ ಸರ್ಕಾರದಿಂದ ಆಮಂತ್ರಣ ಪಡೆದಿದ್ದಾರೆ. ಪ್ರಮಾಣವಚನ ಕಾರ್ಯಕ್ರಮದಲ್ಲಿ ದೇವೇಗೌಡರು ಭಾಗವಹಿಸುವುದು ಖಾತ್ರಿಯಾಗಿದೆ. ಚುನಾವಣೆ ಪ್ರಚಾರದುದ್ದಕ್ಕೂ ಮೋದಿಯನ್ನು ನರಹಂತಕ ಎಂದು ಟೀಕಿಸಿದ್ದ ಸಿದ್ದರಾಮಯ್ಯ ಅವರ ನಡೆಯ ಬಗೆಗೂ ಕುತೂಹಲವಿತ್ತು. ಪ್ರಮಾಣವಚನದ ಬಳಿಕ ದೆಹಲಿಗೆ ಭೇಟಿ ನೀಡಿ ಮೋದಿಗೆ ಶುಭ ಕೋರಲು ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

