ಪ್ರಧಾನ ಸುದ್ದಿ

ಜೈ ಭಾರತ ಜನನಿಯ ತನುಜಾತ

ಜೈ ಭಾರತ ಜನನಿಯ ತನುಜಾತ
Published On :

ಪ್ರೀತಿ ನಿಜವೇ ಆಗಿದ್ದಲ್ಲಿ ಕೈಹಿಡಿದ ಹುಡುಗಿಯ ಚಾರಿತ್ರ್ಯದ ಬಗ್ಗೆ ಕೇಳಿ ಬರುವ ಗಾಳಿ ಮಾತುಗಳನ್ನು ಅಲಕ್ಷಿಸುವ ಪ್ರಿಯಕರನಂತೆ ಈ ದೇಶದ ಜನ ಮೋದಿಯವರ ಬಗ್ಗೆ ನಡೆದುಕೊಂಡದ್ದು ಗಮನಾರ್ಹ. ಇದು ಬರೀ ಅಭಿಮಾನದ ಹೊಳಪಷ್ಟೇ ಅಲ್ಲ, ಜವಾಬ್ದಾರಿಯ ಚೆಂಬೆಳಕು ಸಹ ಹೌದು. ಈ ಸಂಗತಿ ಅಂತರ್ಗತವಾದರೆ ಮೋದಿಯವರು ಗಟ್ಟಿಯಾಗುತ್ತಾರೆ. ಇಲ್ಲದಿದ್ದರೆ ಈ ಅಂಶವೇ ಸುಡುವ ಬೆಂಕಿಯೂ ಆದೀತು.


ಈ ದೇಶವಾಸಿಗಳಿಗೆ ನರೇಂದ್ರ ಮೋದಿಯವರ ಬಗ್ಗೆ ಅಭಿಮಾನವಿದೆ. ಇದು ಹುಚ್ಚು ಅಭಿಮಾನ ಅಲ್ಲ. ಸಾಕಷ್ಟು ನಿರೀಕ್ಷೆಯಿಟ್ಟು ರೂಪಿಸಿಕೊಂಡದ್ದದು. ಎಲ್ಲ ರಾಜಕಾರಣಿಗಳಂತೆ ಅಲ್ಲ ಎಂಬ ಭರವಸೆಯೂ ಬೆಸೆದಿರುವ ಅಭಿಮಾನವದು. ಈ ಮನುಷ್ಯನಾದರೂ ಒಳ್ಳೆಯದನ್ನು ಮಾಡಬಹುದು ಎಂಬ ಸದಾಶಯವನ್ನು ಒಡಲಲ್ಲಿಟ್ಟುಕೊಂಡು ಅದಮ್ಯ ಆಕಾಂಕ್ಷೆ, ವಿಶ್ವಾಸದಿಂದ ಬೆಳೆಸಿಕೊಂಡ, ಅಂಧಾನುಕರಣೆಯಿಲ್ಲದ ಅಭಿಮಾನವದು. ಈ ಕಾರಣದಿಂದಲೇ, ಈ ದೇಶದ ಜನ ಅವರ ನೇತೃತ್ವದ ಬಿಜೆಪಿಗೆ ಇಷ್ಟು ದೊಡ್ಡ ಸಂಖ್ಯೆಯ ವಿಜಯವನ್ನು ಕೊಟ್ಟಿದ್ದು. ಹಾಗೆ ನೋಡಿದರೆ, ಮೋದಿ ರಾಷ್ಟ್ರೀಯ ನಾಯಕರೇನೂ ಆಗಿರಲಿಲ್ಲ. ಅವರು ಎರಡು ದಶಕಗಳ ಹಿಂದೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದು ಬಿಟ್ಟರೆ, ದೆಹಲಿ ರಾಜಕಾರಣದಲ್ಲಿ ನುರಿತವರಲ್ಲ. ಅಧಿಕಾರದ ಪಡಸಾಲೆಯಿಂದ ಗಾವುದ ದೂರ ಉಳಿದವರು. ಬಿಜೆಪಿಯ ಪ್ರಬಲ ಸಂಸದೀಯ ಮಂಡಳಿಯಿಂದಲೂ ಲಾಗಾಯ್ತಿನಿಂದ ದೂರ ಉಳಿದವರು. ಹಿಂದಿನ ವರ್ಷವಷ್ಟೇ ಅವರು ಈ ಮಂಡಳಿಯ ಸದಸ್ಯರಾಗಿದ್ದು. ಪಕ್ಷದ ರಾಷ್ಟ್ರೀಯ ನಾಯಕರು ಎಂದು ಹೇಳಿದಾಗ ಆರೇಳು ಮಂದಿಯ ಹೆಸರಿನಲ್ಲೂ ಮೋದಿಯವರು ಒಳಗೊಳ್ಳುತ್ತಿರಲಿಲ್ಲ. ಅವರೇನಿದ್ದರೂ ಗುಜರಾತಿಗಷ್ಟೇ ಸೀಮಿತರಾದವರು. ಅವರು ದೆಹಲಿಯಲ್ಲಿ ಕಾಣಿಸಿಕೊಂಡಿದ್ದು ಅಪರೂಪವೇ.
ಇಪ್ಪತ್ತು ವರ್ಷಗಳ ಹಿಂದೆ ಗುಜರಾತಿನಲ್ಲೂ ಎಂಥ ಸ್ಥಿತಿಯಿತ್ತು ಗೊತ್ತಾ ? ಕೇಶುಭಾಯ್ ಪಟೇಲ್ ಮುಖ್ಯಮಂತ್ರಿಯಾದಾಗ ಅವರಿಗೆ ಮೋದಿಯವರ ಬಗ್ಗೆ ಎಂಥ ಭಯವಿತ್ತೆಂದರೆ, ಅವರು ಪಕ್ಷದ ರಾಷ್ಟ್ರೀಯ ನಾಯಕರ ಮೇಲೆ ಒತ್ತಡ ತಂದು ಮೋದಿಯವರನ್ನು ಗುಜರಾತಿನಿಂದ ಹೊರಕ್ಕಿಟ್ಟಿದ್ದರು. ಆ ಐದು ವರ್ಷಗಳ ಅವಧಿಯಲ್ಲಿ, ಮೋದಿ ಅಹಮದಾಬಾದ್ ಬಿಡಿ, ತಮ್ಮ ರಾಜ್ಯಕ್ಕೇ ಕಾಲಿಟ್ಟಿರಲಿಲ್ಲ. ಕೇಶುಭಾಯ್ ಪಟೇಲ್ ಮುಖ್ಯಮಂತ್ರಿ ಪದವಿಯಿಂದ ಇಳಿದ ನಂತರವೇ ತಮ್ಮ ತಾಯ್ನಾಡಿಗೆ ಹೋಗಿದ್ದು. ಒಬ್ಬ ರಾಜಕಾರಣಿ ತನ್ನ ರಾಜ್ಯದಿಂದ ಐದು ವರ್ಷಗಳ ಕಾಲ ದೂರ ಉಳಿಯುವುದು ಅಥವಾ ಎಲ್ಲ ಸಂಪರ್ಕವನ್ನು ಕಡಿದುಕೊಳ್ಳುವುದು ರಾಜಕಾರಣದಲ್ಲಿ ಸಾಮಾನ್ಯ ಸಂಗತಿಯಲ್ಲ. ಕೇಶುಭಾಯ್‌ಗೆ ಮೋದಿ ಸಾಮರ್ಥ್ಯದ ಅರಿವಿತ್ತು. ಅದಕ್ಕಿಂತ ಹೆಚ್ಚಾಗಿ ಅವರ ಸಾಮರ್ಥ್ಯದ ಬಗ್ಗೆ ಭಯವಿತ್ತು. ಹೀಗಾಗಿ, ಅವರನ್ನು ಹೊರಗಿಟ್ಟು ಸರ್ಕಾರ ನಡೆಸಿದರು.
ರಾಜಕೀಯದ ವಿಚಿತ್ರ ಸನ್ನಿವೇಶಗಳಿಂದಾಗಿ ಪಟೇಲ್ ಮುಖ್ಯಮಂತ್ರಿ ಪದವಿ ತೊರೆಯುವಂತಾಗಿದ್ದು, ಆನಂತರ ಸುರೇಶ ಮೆಹತಾ ಮುಖ್ಯಮಂತ್ರಿಯಾಗಿದ್ದು, ನಾಲ್ಕೈದು ತಿಂಗಳುಗಳ ನಂತರ ಆ ಸ್ಥಾನಕ್ಕೆ ಮೋದಿ ಬಂದಿದ್ದು ಗೊತ್ತಿರುವ ಸಂಗತಿ.
ಗುಜರಾತಿನ ಮುಖ್ಯಮಂತ್ರಿಯಾದ ಬಳಿಕ ಸಂಭವಿಸಿದ ಗೋಧ್ರಾ ನರಮೇಧ ಪ್ರಕರಣದಿಂದ ಮೋದಿ ಅನುಭವಿಸಿದ ಮಾನಸಿಕ ಹಿಂಸೆ, ತುಮುಲ, ಆಘಾತ ಅಷ್ಟಿಷ್ಟಲ್ಲ. ಈಗಲೂ ಅವರು ಗೋಧ್ರಾ ಗುಮ್ಮನಿಂದ ಸಂಪೂರ್ಣ ಬಚಾವ್ ಆಗಿಲ್ಲ. ಆದರೆ, ಆ ರಾಜ್ಯವನ್ನು ಕಳೆದ ಒಂದು ದಶಕದಲ್ಲಿ ರೂಪಿಸಿದ ರೀತಿ ಮಾತ್ರ ಅದ್ಭುತ.
ಮೋದಿಯವರನ್ನು ಟೀಕಿಸುವವರು ಗುಜರಾತನ್ನು ಒಮ್ಮೆ ನೋಡಿಬರಬೇಕು. ನೋಡಿದ ನಂತರವೂ ಅದೇ ಟೀಕೆಯನ್ನು ಇಟ್ಟುಕೊಳ್ಳಲಾರರು. ಈ ವಿಷಯದಲ್ಲಿ ಭಿನ್ನಾಭಿಪ್ರಾಯಗಳೇನೇ ಇರಲಿ, ಅವರು ಗುಜರಾತ್‌ನಲ್ಲಿ ಪಠಿಸಿದ ಮಂತ್ರಕ್ಕೆ ಅಭಿವೃದ್ಧಿ ಅಥವಾ ವಿಕಾಸದ ಮಾವಿನಕಾಯಿಯಂತೂ ಉದುರಿರುವುದು ನಿಜ. ಇಂದು ಮೋದಿಯವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರೆ ಅದಕ್ಕೆ ಕಾರಣ ಅವರು ಪಠಿಸಿದ ಈ ಮಂತ್ರವೇ ಕಾರಣ.

ಮೋದಿಯವರಂತೆ ಅವರ ಪಕ್ಷದ ಶಿವರಾಜ್ ಸಿಂಗ್ ಚವಾಣ್ ಸಹ ಮೂರು ಸಲ ಮುಖ್ಯಮಂತ್ರಿಯಾಗಿ ಮಧ್ಯಪ್ರದೇಶದಲ್ಲಿ ಅಧಿಕಾರದಲ್ಲಿದ್ದಾರೆ.         

ಬಿಜೆಪಿ ಅವರನ್ನು ಸಹ ರಾಷ್ಟ್ರೀಯ ನಾಯಕರ ಸಾಲಿಗೆ ಸೇರಿಸುವುದಿಲ್ಲ. ಹಿಂದಿನ ವರ್ಷದವರೆಗೆ ಮೋದಿಯವರೂ ಈಗ ಚವಾಣ್ ಇರುವಂತೇ ಇದ್ದರು. ಕೇಶುಭಾಯ್ ಪಟೇಲ್ ಗುಜರಾತ್‌ನಿಂದ ಹೊರಗಿಟ್ಟಂತೆ ದಿಲ್ಲಿಯ ಪಕ್ಷದ ನಾಯಕರು ಮೋದಿಯವರನ್ನು ರಾಜಧಾನಿ ರಾಜಕೀಯದಿಂದ ಹೊರಗಿಟ್ಟಿದ್ದರು. ಮೋದಿ ಸಾಮರ್ಥ್ಯ, ತಾಕತ್ತು, ಪ್ರಭಾವ, ಪಟ್ಟುಗಳ ಬಗ್ಗೆ ಅವರಿಗೆ ಭಯ, ಆತಂಕವಿತ್ತು. ಮೋದಿ ದಿಲ್ಲಿಗೆ ಬಂದರೆ ಅವರನ್ನು ನಿಯಂತ್ರಿಸುವುದು ಹೇಗೆ, ತಮ್ಮ ಸ್ಥಾನಮಾನವೇನು ಎಂಬ ಬಗ್ಗೆ ಹೆದರಿಕೆಯಿತ್ತು. ಹೀಗಾಗಿ ಅವರನ್ನು ಗುಜರಾತಿಗೆ ಮಾತ್ರ ಸೀಮಿತವಾಗಿಡುವ ಪ್ರಯತ್ನ ನಡೆಯಿತು. ಒಂದು ರಾಜ್ಯದ ಮುಖ್ಯಮಂತ್ರಿಯಾದವರು ದಿಲ್ಲಿಯಲ್ಲಿ ಏಕಾಏಕಿ ಪ್ರಧಾನಿಯಾಗುವುದು ಸಣ್ಣ ಮಾತಲ್ಲ.
ನಮ್ಮ ದೇವೇಗೌಡರೂ ಮುಖ್ಯಮಂತ್ರಿಯಾಗಿ ಪ್ರಧಾನಿಯಾದವರು. ಆದರೆ, ಅದು ಆಕಸ್ಮಿಕ. ಅವರು ಪ್ರಧಾನಿ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸೆಣೆಸಿದವರಲ್ಲ. ಮೋದಿ ಹಾಗೆ ಬಾಂಡಲೆಯಲ್ಲಿ ಬೆಂದವರಲ್ಲ, ಒಗ್ಗರಣೆ ಹಾಕಿಸಿಕೊಂಡವರಲ್ಲ. ಒಂದು ರಾಜ್ಯಕ್ಕಷ್ಟೇ ಸೀಮಿತ ವ್ಯಕ್ತಿಯನ್ನು ಇಡೀ ದೇಶ ಒಪ್ಪಿಕೊಳ್ಳುವುದು ನಮ್ಮ ದೇಶದ ಸಂದರ್ಭದಲ್ಲಿ ಕಷ್ಟವೇ. ಈ ದೇಶ ಯಾರನ್ನೂ ಅಷ್ಟು ಸುಲಭವಾಗಿ ಸ್ವೀಕರಿಸುವುದಿಲ್ಲ. ಕಾಲು ಶತಮಾನ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಜ್ಯೋತಿ ಬಸು ಅವರಂಥವರಿಗೇ ಪ್ರಧಾನಿಯಾಗಿ ಪ್ರತಿಷ್ಠಾಪನೆಯಾಗಲು ಸಾಧ್ಯವಾಗಲಿಲ್ಲ. ಮೂರು ದಶಕಗಳಲ್ಲಿ ಪ್ರಾದೇಶಿಕ ಪಕ್ಷ ಕಟ್ಟಿಕೊಂಡವರು ಒಂದೋ ಆ ರಾಜ್ಯಕ್ಕೆ ಸೀಮಿತರಾದರು, ಇಲ್ಲವೇ ಅದೇ ಬಲದಿಂದ ಸಮ್ಮಿಶ್ರ ಸರ್ಕಾರದಲ್ಲಿ ಭಾಗಿಯಾಗಿ ಕೇಂದ್ರದಲ್ಲಿ ಮಹತ್ವದ ಸ್ಥಾನ ಹೊಡಕೊಂಡರು. ಆದರೆ, ಸ್ವಂತ ಬಲ, ಅರ್ಹತೆ, ವರ್ಚಸ್ಸು, ಸಾಮರ್ಥ್ಯದಿಂದ ಪ್ರಧಾನಿ ಪಟ್ಟಕ್ಕೇರುವಷ್ಟು ಎತ್ತರಕ್ಕೆ ಬೆಳೆಯಲಿಲ್ಲ. ಅವರೆಲ್ಲ ಸಮ್ಮಿಶ್ರ ಸರ್ಕಾರದಲ್ಲಿ ಚೌಕಾಶಿ ವ್ಯವಹಾರಕ್ಕಷ್ಟೇ ದಿಲ್ಲಿ ರಾಜಕಾರಣದಲ್ಲಿ ಪ್ರಸ್ತುತರಾಗಿದ್ದರು. ಅಂಥ ನಾಯಕರನ್ನು ಇಡೀ ದೇಶ ಒಪ್ಪಿಕೊಳ್ಳುವ ಮಾತೇ ಇರಲಿಲ್ಲ. ಈ ನಾಯಕರೆಲ್ಲ ತೃತೀಯ ರಂಗ ಎಂಬ 'ಭಜನಾ ಮಂಡಳಿ'ಯಿಂದ ಪ್ರಧಾನಿಯಾಗುವ ಕನಸು ಕಂಡರೇ ಹೊರತು ಸ್ವಂತ ಬಲದಿಂದ ಹುದ್ದೆಗೇರುವ ಪ್ರಭಾವ, ಶಕ್ತಿಯನ್ನು ಬೆಳೆಸಿಕೊಳ್ಳಲಿಲ್ಲ.

ಆದರೆ, ಮೋದಿ ಒಬ್ಬ ರಾಜ್ಯ ನಾಯಕರಾಗಿ, ರಾಷ್ಟ್ರರಾಜಕಾರಣಕ್ಕೆ ಇಟ್ಟಿದ್ದು ಹೆಜ್ಜೆಯಾಗಿರಲಿಲ್ಲ. ಅದು ದಾಪುಗಾಲು. ಪ್ರಧಾನಿ ಹುದ್ದೆಗೆ ಅವರ ಹೆಸರು ತೇಲಿಬಂದಾಗ ಅದನ್ನು ಹಾಗೇ ಗಾಳಿಯಲ್ಲಿ ಹಾರಿಸಿಬಿಡುವ ಪ್ರಯತ್ನಗಳೂ ನಡೆದವು. ಅವರ ಪಕ್ಷದ ನಾಯಕರೇ ವಿರೋಧಿಸಿದರು. ದಿಲ್ಲಿಗೆ ಬರದಂತೆ ಅಡ್ಡ ಹಾಕಿದರು. ಪ್ರತಿಪಕ್ಷಗಳಿಗಿಂತ ಬಿಜೆಪಿಯ ನಾಯಕರ ವಿರೋಧವೇ ಜಾಸ್ತಿಯಾಗಿತ್ತು. ಮೋದಿ ಪ್ರಧಾನಿ ಅಭ್ಯರ್ಥಿಯಾಗಲಿ ಎಂದು ಯಾವೊಬ್ಬ ಬಿಜೆಪಿಯ ದಿಲ್ಲಿ ನಾಯಕರೂ ಹೇಳಲಿಲ್ಲ. ಅವರು ಬರುವುದನ್ನು ತಪ್ಪಿಸಲು ಆಗುವುದಿಲ್ಲ, ಅದು ಅನಿವಾರ್ಯ ಎಂದಾ ದಾಗ ಉಗುಳು ನುಂಗಿಕೊಂಡು ಕೆಲವರು ಬಹಿರಂಗಸ್ವಾಗತಿಸಿದರು. ಇನ್ನು, ಕೆಲವರು ಹ್ಯಾಪು ಮೋರೆ ಹಾಕಿಕೊಂಡು ಹೂಂ ಅಂದರು. ಕೆಲ ಹಿರಿಯ ತಲೆಗಳಂತೂ ಈಗಲೂ ಜಾಪಾಳ ಮಾತ್ರೆ ತೆಗೆದುಕೊಂಡವರಂತೆ ವರ್ತಿಸುತ್ತಿದ್ದಾರೆ, ಬಿಡಿ. ಮೋದಿಯವರಿಗೆ ಕೊಟ್ಟ ಕೀಟಲೆ, ಕಷ್ಟ, ಒಂದಾ, ಎರಡಾ?
ಇನ್ನು ಪ್ರತಿಪಕ್ಷ ಬಿಡುವುದುಂಟಾ? ಮೋದಿ ಹಣಿಯುವ ಒಂದೇ ಒಂದು ಅವಕಾಶವನ್ನು ಸಹ ಬಿಡಲಿಲ್ಲ. ಮೋದಿ ಪ್ರಧಾನಿಯಾದರೆ ರಕ್ತಪಾತವಾಗುತ್ತದೆ, ಕೋಮು ಗಲಭೆಯಾಗುತ್ತದೆ ಎಂದೆಲ್ಲ ಸುಳ್ಳು ಪ್ರಚಾರ ಮಾಡಿದರು. ಗೋಧ್ರಾ ಹತ್ಯೆ ನಂತರ ಗುಜರಾತಿನಲ್ಲಿ ಇಂಥ ಒಂದೇ ಒಂದು ಅಹಿತಕರ ಘಟನೆ ಕೂಡ ನಡೆದಿಲ್ಲ ಎಂದರೂ ನಂಬಲಿಲ್ಲ. ಅವರ ಮಾತಿಗಾಗಲೀ, ಗ್ರಹಿಕೆಗಾಗಲಿ ಆಧಾರವೇ ಇರಲಿಲ್ಲ. ಕೆಲವು ಬುದ್ಧಿ(ಹೀನ) ಜೀವಿಗಳು ಮೋದಿಯವರ ಅಭಿವೃದ್ಧಿಯನ್ನು ಟೀಕಿಸಿದರು. ಅಭಿವೃದ್ಧಿಯ ಕಂಟಕಗಳ ಮುಂದೆ ಬಡತನದ ಸಮಾನತೆಯೇ ಮೇಲು ಎಂದು ವಾದಿಸುತ್ತಾ ಮೋದಿ ಪ್ರಣೀತ 'ಗುಜರಾತ್ ಮಾದರಿ'ಯನ್ನು ವಿರೋಧಿಸಿದರು. ಇನ್ನೂ ಕೆಲವರು ಅಭಿವೃದ್ಧಿಯೆಂಬುದು ಪ್ರಕೃತಿ ವಿರೋಧಿ ಎಂದು ಹೇಳುತ್ತಾ ತಮಗೇ ಮಂಕುಬೂದಿ ಎರಚಿಕೊಂಡರು. ಮೋದಿಯವರನ್ನು 'ನರಹಂತಕ' ಎಂದೂ ಬಣ್ಣಿಸಿದರು.
ಆದರೆ, ಅಷ್ಟರೊಳಗೆ ಈ ದೇಶದ ಜನತೆ ಮೋದಿ ನಾಯಕತ್ವವನ್ನು ಒಪ್ಪಿಕೊಂಡಾಗಿತ್ತು. ಮೋದಿಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದಾಗಲೇ ಈ ದೇಶದ ಜನ ತಮ್ಮ ಒಲವನ್ನು ನಿರ್ಧರಿಸಿದ್ದರು. ಹೀಗಾಗಿ ಅವರ ವಿರೋಧಿಗಳಿಗೆ 'ಮೋದಿ ಅಲೆ' ಕಾಣಲಿಲ್ಲ. ಆದರೆ ಮೋದಿಯವರು ಆಗ ಎದ್ದ ಅಲೆಯಲ್ಲಿ ದಡ ತಲುಪಿದ್ದರು!

ಮೋದಿಯವರು ಇಂದು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವ ಹಂತ ತಲುಪಿದ್ದರೆ ಅದಕ್ಕೆ ಕಾರಣ ಅವರ ಪಕ್ಷವೂ ಅಲ್ಲ, ಪಕ್ಷದ ಸಿದ್ಧಾಂತವೂ ಅಲ್ಲ, ಪಕ್ಷದ ಪ್ರಣಾಳಿಕೆಯೂ ಅಲ್ಲ. ಅವರ ಮಾತು, ಭಾಷಣ, ಉಡುಪು ಸಹ ಅಲ್ಲ. ಅವರ ಪಕ್ಷ ಅನ್ಯ ಪಕ್ಷಕ್ಕಿಂತ ಭಿನ್ನವಾಗಿಲ್ಲ. ಏಕಾಏಕಿ ಪಕ್ಷದ ಸಿದ್ಧಾಂತದಲ್ಲಿ ಅಂಥ ಹೇಳಿಕೊಳ್ಳುವ ಬದಲಾವಣೆಯಾಗಿಲ್ಲ. ಜನರನ್ನು ಮಂಗ ಮಾಡುವ ಪ್ರಣಾಳಿಕೆಯನ್ನೂ ಬಿಜೆಪಿ ಜನರ ಮುಂದೆ ನೀಡಿರಲಿಲ್ಲ. ಅಷ್ಟಾಗಿಯೂ ಈ ದೇಶದ ಜನತೆ ಬಿಜೆಪಿಯನ್ನು ಬೆಂಬಲಿಸಿದ್ದರೆ ಅದಕ್ಕೆ ಕಾರಣ ಮೋದಿ. ಇದು ಮೋದಿಯವರಿಗೆ ಕೊಟ್ಟ ಜನಾದೇಶ. ಇದು ಮೋದಿಯವರ ಜಯ. ಹಾಗಾದರೆ, ಜನ ಮೋದಿಯವರಿಗೇಕೆ ಈ ಜನಾದೇಶ ಅಥವಾ ಜಯವನ್ನು ಕೊಟ್ಟರು? ಇದಕ್ಕೆ ಕಾರಣ ಅವರ ಟ್ರ್ಯಾಕ್ ರೆಕಾರ್ಡ್, ಅವರು ಗುಜರಾತಿನಲ್ಲಿ ಮಾಡಿದ ಅಭಿವೃದ್ಧಿ. ಆ ಮೂಲಕ ದೇಶದ ಜನರಲ್ಲಿ ಚಿಗುರಿಸಿದ ವಿಶ್ವಾಸ, ಆಸೆ, ಆಕಾಂಕ್ಷೆ ಹಾಗೂ ಭರವಸೆ. ಈ ದೇಶದ ಜನ ತಮ್ಮ ರಾಜ್ಯದ, ತಮ್ಮ ಜಾತಿಯ, ತಮ್ಮ ಭಾಷೆ ಮಾತಾಡುವವರನ್ನೇ ಸುಲಭವಾಗಿ ನಾಯಕನೆಂದು ಸ್ವೀಕರಿಸುವುದಿಲ್ಲ.ಯಾರನ್ನೂ ಅಗ್ನಿಪರೀಕ್ಷೆಗೊಳಪಡಿಸದೇ ಒಪ್ಪಿಕೊಳ್ಳುವುದಿಲ್ಲ. ಹೀಗಿರುವಾಗ ಒಬ್ಬ ಗುಜರಾತಿಯನ್ನು ದೇಶದ ಅತ್ಯುನ್ನತ ಸ್ಥಾನದಲ್ಲಿ ಕುಳ್ಳಿರಿಸುವ ನಿರ್ಧಾರ ತೆಗೆದುಕೊಳ್ಳುತ್ತಾರೆಂದರೆ, ಅದರ ಹಿಂದಿನ ಸ್ಫೂರ್ತಿ, ಪ್ರೇರಣೆ ಏನು?

ಮೋದಿ ಈ ಎಲ್ಲ ಅಭಿಮಾನಕ್ಕೆ ಎಷ್ಟು ಅರ್ಹರು ಎಂಬುದನ್ನು ತಮ್ಮ ಕೆಲಸ, ಕಾರ್ಯ, ಆಡಳಿತ ನಿರ್ವಹಣೆಯಿಂದಲೇ ಸಾಬೀತುಪಡಿಸಬೇಕು. ಆದರೆ, ಈ ದೇಶದ ಜನ ಅವರಲ್ಲಿ ಒಂದಷ್ಟು ನಿರೀಕ್ಷೆ, ನಕ್ಷತ್ರ, ಬೆಳದಿಂಗಳು, ಬೆಳಕನ್ನು ಕಂಡಿರುವುದು ಈ ಚುನಾವಣೆಯ ಫಲಿತಾಂಶದಿಂದ ಶೃತಪಟ್ಟಿದೆ. ಇವರೆಲ್ಲರಿಗೆ ಮೋದಿ ಒಂದು ಸಂಕೇತವಾಗಿ ಕಂಡಿರಲಿಕ್ಕೂ ಸಾಕು. ಮೋದಿಯವರೇ ಹೇಳಿದಂತೆ ಈ ಸಲದ ಚುನಾವಣೆ ಫಲಿತಾಂಶ ಆಡಳಿತ ವಿರೋಧಿ ಜನಾದೇಶ ಅಲ್ಲ. ಅದು ಹೊಸ ಮನ್ವಂತರಕ್ಕೆ ಬಯಸಿ, ಹೊಸ ನಿರೀಕ್ಷೆಯನ್ನು ಆಶಿಸಿ ನೀಡಿದ ಮಮತೆಯ ಆದೇಶ. ಈ ಸಂಕೇತಕ್ಕೆ ಮೋದಿ ಮೂರ್ತರೂಪ ಕೊಡಬೇಕಷ್ಟೇ.
ಮೋದಿ ನೇತೃತ್ವದಲ್ಲಿ ಅಭೂತಪೂರ್ವ ಜಯ ಸಾಧಿಸುತ್ತಿದ್ದಂತೆ, ಅಮೆರಿಕದಲ್ಲಿ ಒಂದು ತಮಾಷೆಯ ಮಾತು ಹರಿದಾಡುತ್ತಿದೆ. '2014ರ ಲೋಕಸಭಾ ಚುನಾವಣೆ ಫಲಿತಾಂಶ ಒಂದು ಸಂಗತಿಯನ್ನು ಸಾಬೀತುಪಡಿಸಿದೆ. ಅದೇನೆಂದರೆ ಅಮೆರಿಕದ ವಿಸಾ ಗಿಟ್ಟಿಸಲು ಈ ಗುಜ್ಜು(ಗುಜರಾತಿಗಳು)ಗಳು ಏನು ಬೇಕಾದರೂ ಮಾಡುತ್ತಾರೆ'. ಇದು ಬರೀ ತಮಾಷೆ ಅಲ್ಲ, ವಾಸ್ತವವಿದೆ. ಮೋದಿಯವರ ಜಯದ ಹಿಂದೆ ಇದೇ ಕರ್ತೃತ್ವಶಕ್ತಿ ಕೆಲಸ ಮಾಡಿದೆ. ಗುಜ್ಜುಗಳಿಗಿರುವ ಹಠಸಾಧನೆ, ಪರಿಶ್ರಮ, ಕೆಲಸ ಮಾಡಿ ತೋರಿಸುವ ಛಲದ ಪ್ರತೀಕ.
ಮೋದಿಯವರನ್ನು ಜನತೆ ಬರೀ ಬೆಂಬಲಿಸಲಿಲ್ಲ. ಒಬ್ಬ ರಾಜಕಾರಣಿಯಂತೆ ಕಾಣಲಿಲ್ಲ. ಅವರನ್ನು ್ಟಢಿಟಿ ್ಡಠ ಮಾಡಿಕೊಂಡರು. ಅವರ ಮೇಲೆ ಯಜಮಾನಿಕೆ ಪಡೆದಂತೆ ವರ್ತಿಸಿದರು. ಅವರನ್ನು ವಿರೋಧಿಸಿದರೆ ತಕ್ಷಣ ಪ್ರತಿರೋಧ ವ್ಯಕ್ತವಾಗುತ್ತಿತ್ತು. ಈ ಭಾವನೆಯನ್ನು ಯಾರೋ ಬಿತ್ತಿದ್ದಲ್ಲ, ಮೂಡಿಸಿದ್ದಲ್ಲ. ಹಾಗೆ ನೋಡಿದರೆ ಇಡೀ ಮಾಧ್ಯಮವೇ ಮೋದಿ ವಿರುದ್ಧ ನಿಂತಿತ್ತು. ಅವರನ್ನು ಕೆಣಕದ, ಪ್ರಶ್ನಿಸದ, ಕಟಕಟೆಗೆ ನಿಲ್ಲಿಸದ ಮಾಧ್ಯಮಗಳೇ ಇರಲಿಲ್ಲ. ಅವರಷ್ಟು ಟೀಕೆ, ಪರೀಕ್ಷೆಗೆ ಒಳಗಾದ ಮತ್ತೊಬ್ಬ ರಾಜಕಾರಣಿ ಇರಲಿಕ್ಕಿಲ್ಲ. ಅವರ ಚಾರಿತ್ರ್ಯವಧೆ  ಪ್ರಯತ್ನಗಳೂ ನಡೆದವು. ಆದರೆ ಈ ದೇಶದ ಜನ ಅವರನ್ನು ಕೈಬಿಡಲಿಲ್ಲ. ಪ್ರೀತಿ ನಿಜವೇ ಆಗಿದ್ದಲ್ಲಿ ಕೈಹಿಡಿದ ಹುಡುಗಿಯ ಚಾರಿತ್ರ್ಯದ ಬಗ್ಗೆ ಕೇಳಿ ಬರುವ ಗಾಳಿ ಮಾತುಗಳನ್ನು ಅಲಕ್ಷಿಸುವ ಪ್ರಿಯಕರನಂತೆ ಈ ದೇಶದ ಜನ ಮೋದಿಬಗ್ಗೆ ನಡೆದುಕೊಂಡದ್ದು ಗಮನಾರ್ಹ.  ಇದು ಬರೀ ಅಭಿಮಾನದ ಹೊಳಪಷ್ಟೇ ಅಲ್ಲ, ಜವಾಬ್ದಾರಿಯ ಚೆಂಬೆಳಕು ಸಹ. ಈ ಸಂಗತಿ ಅಂತರ್ಗತವಾದರೆ ಮೋದಿ ಗಟ್ಟಿಯಾಗುತ್ತಾರೆ. ಇಲ್ಲ ದಿದ್ದರೆ ಈ ಅಂಶವೇ ಸುಡುವ ಬೆಂಕಿಯೂ ಆದೀತು.

ಹೀಗಿರುವಾಗ ಆತಂಕಕ್ಕೆ ಕಾರಣವಾದರೂ ಏನು?
ಇನ್ನು ಮೋದಿಯವರೇನಾದರೂ ಉತ್ತಮ ಆಡಳಿತ ನೀತಿ, ಸದ್ಯೋಭವಿಷ್ಯದಲ್ಲಿ ನಮಗೆ ಅಧಿಕಾರ ವಂಚಿತರನ್ನಾಗಿ ಮಾಡಬಹುದು ಎಂದು ಯೋಚಿಸುವವರು, ಹಾಗೆ ಯೋಚಿಸುವ ಮನಸ್ಥಿತಿಯವರಿಂದ ಲಾಭ ಮಾಡಿಕೊಳ್ಳುವವರು, ಆಶ್ರಯ ಪಡೆಯುವವರು ಆತಂಕಪಡುವುದಾದರೆ, ಆತಂಕಪಡಲಿ ಬಿಡಿ. ಅದರಿಂದ ದೇಶಕ್ಕೆ ಒಳ್ಳೆಯದೇ. ಇನ್ನಾದರೂ 'ಒಳ್ಳೆಯ ದಿನಗಳು ಬರುತ್ತವೆ' ಎಂದು ಆಶಿಸೋಣ. ಈ ಆಸೆ ಈ ದೇಶವನ್ನು ಬೆಳಗಲಿ.


- ವಿಶ್ವೇಶ್ವರ ಭಟ್‌
vbhat@me.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.