ಕೊಟ್ಟ ಮಾತೂ ನೆರವೇರಲಿ...

ಮೇಲ್ನೋಟಕ್ಕೆ ಮೋದಿ ಅವರ ವಿಜಯ, ಯುಪಿಎ ಸರ್ಕಾರದ ದುರಾಡಳಿತದ ಪ್ರತಿಫಲನವಷ್ಟೇ ಅಲ್ಲ, ಅದು ಮೋದಿ ವ್ಯಕ್ತಿತ್ವದ ಗೆಲವು. ಏಕೆಂದರೆ, 'ಶ್ರೀರಾಮ'ನ ಮೊರೆಹೋದಾಗಲೂ ಸಾಧಿಸಲಾಗದ ಯಶಸ್ಸನ್ನು ಮೋದಿ ಬಿಜೆಪಿಗೆ ತಂದುಕೊಟ್ಟಿದ್ದಾರೆ! ಆದರೆ, ಇದಕ್ಕಿಂತಲೂ ಮುಖ್ಯವಾದದ್ದು ಅವರು ಚುನಾವಣೆಗೂ ಮುನ್ನ ಕೊಟ್ಟ ಮಾತನ್ನು ಹೇಗೆ ನೆರವೇರಿಸುತ್ತಾರೆ ಎನ್ನುವುದು.
ಅದು ಅಂತಿಂಥಾ ಜಯವಲ್ಲ. ಐತಿಹಾಸಿಕ ಗೆಲವು. ಆ ಗೆಲವು ಆಕಸ್ಮಿಕವೂ ಅಲ್ಲ. ಅದೊಂದು ದೀರ್ಘಕಾಲದ ತಪಸ್ಸಿನಿಂದ, ಸತತ ಪ್ರಯತ್ನದಿಂದ ಬಂದ ವಿಜಯ.... ಕೋಟ್ಯಂತರ ಭಾರತೀಯರ ಕಣ್ಮಣಿಯಾಗಿ, ಕವಿದ ನಿರಾಸೆಯ ಕಾರ್ಮೋಡಗಳ ನಡುವೆ ಭರವಸೆಯ ಆಶಾಕಿರಣವಾಗಿ ಹೊರಹೊಮ್ಮಿರುವ ಮೋದಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹಲವು ದಶಕಗಳ ಹಿಂದೆಯೇ ಬಲಿಷ್ಠ ಭಾರತದ ಕನಸು ಕಂಡಿದ್ದ ಅವರು ಆ ನಿಟ್ಟಿನಲ್ಲಿ ಕಾಯೋನ್ಮುಖರಾಗಲಿದ್ದಾರೆ.
ಸಕಲವೂ ಮೋದಿಮಯ...
ದಿನ ಬೆಳಗಾದರೆ ಮನೆಗೆ ಬರುವ ದಿನಪತ್ರಿಕೆಗಳಲ್ಲಿ, ರಸ್ತೆ ಬದಿಯ ಪೋಸ್ಟರ್ಗಳಲ್ಲಿ, ಟಿವಿಗಳಲ್ಲಿ, ರೇಡಿಯೋಗಳಲ್ಲಿ, ಆಫೀಸುಗಳಲ್ಲಿ, ಹೋಟೆಲ್ಗಳಲ್ಲಿ, ರೆಸ್ಟೋರೆಂಟ್ಗಳಲ್ಲಿ, ಹರಟೆ 'ಅಡ್ಡಾ'ಗಳಲ್ಲಿ ಪ್ರತಿಧ್ವನಿಸಿದ್ದು ಕೇವಲ ಒಂದೇ ಒಂದು ಹೆಸರು - ಮೋದಿ. ಈ ಪರಿಯಾಗಿ ಮೋದಿ ಜನಗಳ ಜೊತೆ ಹೊಂದಿದ್ದ 'ಸಂಪರ್ಕ'ವೇ ಅವರನ್ನು ಅವರಿಗೆ ಈ ಮಟ್ಟದ ಯಶಸ್ಸನ್ನು ತಂದುಕೊಟ್ಟಿದ್ದು. ಅವರ ವರ್ಚಸ್ಸೇ ಅವರಿಗೆ ಈ ರೀತಿಯ ಸಂಪರ್ಕವನ್ನು ಸೃಷ್ಟಿಸಿದ್ದು. ಈ ಮಾತನ್ನು ನಾವೆಲ್ಲರೂ ಒಪ್ಪಿಕೊಳ್ಳಲೇಬೇಕು. ಸ್ವಲ್ಪ ನೆನಪಿಸಿಕೊಳ್ಳಿ. ಬಿಜೆಪಿಯು ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸುವ ಮೊದಲು ಯುಪಿಎ ಸರ್ಕಾರ, ತಾನು ಮೂರನೇ ಬಾರಿಗೆ ದಿಲ್ಲಿ ಗದ್ದುಗೆ ಏರುವ ಭರವಸೆ ಹೊಂದಿತ್ತು. ಆದರೆ, ನಿಧಾನವಾಗಿ ಆ ಕನಸು ಕರಗುತ್ತಾ ಹೋಯಿತು. ಮೋದಿ ಅವರನ್ನು ಬಿಟ್ಟು ಮತ್ಯಾರೇ ಪ್ರಧಾನಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರೂ, ಕೇವಲ ಸಂಘ ಪರಿವಾರದ ಹಿರಿಮೆ, ಹಿಂದಿನ ವಾಜಪೇಯಿ ಸರ್ಕಾರದ ಸಾಧನೆಗಳು, ಯುಪಿಎ ದುರಾಡಳಿತ - ಇವಿಷ್ಟನ್ನೇ ಇಟ್ಟುಕೊಂಡು ಚುನಾವಣೆಯಲ್ಲಿ 'ಲಡಾಯಿ' ಮಾಡುತ್ತಿದ್ದರು. ಮೋದಿ ಕೂಡಾ ಇದೆಲ್ಲಾ ಅಸ್ತ್ರಗಳನ್ನು ಕೈಯಲ್ಲಿಟ್ಟುಕೊಂಡೇ ರಣರಂಗಕ್ಕಿಳಿದರೂ, ಅವರಿಗೆ ಮತಗಳು ಹರಿದುಬಂದಿದ್ದು ಅವರೇ ನಿರ್ಮಿಸಿದ್ದ 'ಗುಜರಾತ್ ಮಾದರಿ ಅಭಿವೃದ್ಧಿ'ಯ ಮೂಲಮಂತ್ರದಿಂದ.
ಮೋದಿ ಮಾಯೆ...
282
ಬಿಜೆಪಿ ಈ ಬಾರಿಯ ಗಳಿಸಿದ ಒಟ್ಟು ಸ್ಥಾನಗಳ ಸಂಖ್ಯೆ. ಈ ಸಾಧನೆ ಕೇವಲ ಯುಪಿಎ ದುರಾಡಳಿತದ ವಿರುದ್ಧ ಜನರನ್ನು ಎಚ್ಚರಿಸಿದ ಮಾತ್ರಕ್ಕೇ ಬಂದಿದ್ದಲ್ಲ. ಈ ದೊಡ್ಡ ಜಯದ ಹಿಂದೆ, ಕೆಲಸ ಮಾಡಿದ್ದು ಒಂದೇ ಒಂದು - ಅದು, ಮೋದಿಯವರ ಘನತೆ. 9 ತಿಂಗಳ ಬಿಡುವಿಲ್ಲದ ಪ್ರಚಾರ, 400 ರ್ಯಾಲಿಗಳ ಒತ್ತಡ, 5,800 ಸ್ಥಳಗಳಲ್ಲಿ ಜನರೊಂದಿಗೆ ನೇರ ಸಂವಾದ, 3 ಲಕ್ಷ ಕಿ.ಮೀ.ವರೆಗೆ ವಿಶ್ರಾಂತಿಯಿಲ್ಲದ ಪಯಣ... ಇಷ್ಟೆಲ್ಲವನ್ನೂ ನಿಷ್ಠೆಯಿಂದ, ತನ್ಮಯತೆಯಿಂದ, ಅಚ್ಚುಕಟ್ಟಾಗಿ ನಿರ್ವಹಿಸಿದ ಮೋದಿ, ತಮ್ಮ ಶ್ರಮದ ದುಡಿಮೆಯಿಂದ ದೇಶದ ಉನ್ನತ ಹುದ್ದೆಯಲ್ಲಿ ಕುಳಿತಿದ್ದಾರೆ.
ಗಾಂಧಿ ಮತ್ತು ಮೋದಿ: ಒಂದು ಹೋಲಿಕೆ...
ಅಂಕಣಗಾರ್ತಿ ಮಧು ಕಿಶ್ವರ್ ಇತ್ತೀಚೆಗೆ ಒಂದು ಹೇಳಿಕೆ ನೀಡಿದ್ದರು. ಅವರ ಪ್ರಕಾರ, ಮಹಾತ್ಮ ಗಾಂಧಿ ಹಾಗೂ ನರೇಂದ್ರ ಮೋದಿಯವರಲ್ಲಿ ಸಾಮ್ಯತೆ ಇದೆಯಂತೆ. ಭಾರತವನ್ನು ಬಡತನ ಹಾಗೂ ತಿಪ್ಪೆಗಳ ರಾಶಿಯಿಂದ ಮುಕ್ತಗೊಳಿಸಬೇಕೆಂಬ ನಿಟ್ಟಿನಲ್ಲಿ ಇಬ್ಬರ ಆಲೋಚನೆಯೂ ಒಂದೇ ರೀತಿಯಿದೆ ಎನ್ನುತ್ತಾರೆ ಅವರು. ಮೋದಿಯವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ಅವರು, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಅವರು, ಮಹಾತ್ಮ ಗಾಂಧಿಯವರಿಗಿಂತ ಮೋದಿ ಅವರೇ ಹೆಚ್ಚು ಪ್ರಭಾವಿ ಎನ್ನುತ್ತಾರೆ. ಏಕೆಂದರೆ, ಗಾಂಧಿ ಜಾಗದಲ್ಲಿ ಮೋದಿ ಇದ್ದಿದ್ದರೆ, ಪಾಕಿಸ್ತಾನದ ಜನಕ ಮಹಮ್ಮದ್ ಅಲಿ ಜಿನ್ನಾ ಅವರು ತಮ್ಮನ್ನು ಶೋಷಣೆಗೊಳಿಸಪಡಿಸಲು ಅವಕಾಶವೇ ನೀಡುತ್ತಿರಲಿಲ್ಲ ಎನ್ನುತ್ತಾರೆ ಅವರು. ಮಧು ಕಿಶ್ವರ್ ಅವರ ಈ ಹೇಳಿಕೆ ಖಂಡಿತ ಅತಿಶಯೋಕ್ತಿಯಲ್ಲ. ತಮ್ಮ ಔಚಿತ್ಯದ ದುರುಪಯೋಗಪಡಿಸಿಕೊಳ್ಳಲು ಮೋದಿ ಯಾರಿಗೂ ಅವಕಾಶ ನೀಡುವುದಿಲ್ಲ.
ಕನಸು ನನಸಾಗಬೇಕು...
ಭಾರತವನ್ನು ಮುನ್ನೆಡೆಸುವಲ್ಲಿ ಅವರು ಎಂಥಾ ಕ್ರಮಗಳನ್ನು ಕೈಗೊಳ್ಳಬಹುದು ಎನ್ನುವುದರ ಬಗ್ಗೆ ಕುತೂಹಲವಿದೆ. ಜನರು ತಮ್ಮ ಮೇಲಿಟ್ಟಿರುವ ಕನಸುಗಳನ್ನು ಹೇಗೆ ನನಸು ಮಾಡುತ್ತಾರೋ ಎಂಬುದನ್ನು ಎಲ್ಲರೂ ಕಾತುರದಿಂದ ನೋಡುತ್ತಿದ್ದಾರೆ. ಹಾಗಾದರೆ, ಇಲ್ಲಿ ಯಾವ ಮ್ಯಾಜಿಕ್ ಮಾಡುತ್ತಾರೆ ? ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಅವರು, ಆವರೆಗೆ ಸಚಿವರ ಕೈಯ್ಯಲ್ಲಿದ್ದ ನಿರ್ಧಾರ ಕೈಗೊಳ್ಳುವ ತಾಕತ್ತನ್ನು ಅಧಿಕಾರಿ ವರ್ಗಕ್ಕೆ ತಂದಿತ್ತರು. ಅದು ಗುಜರಾತ್ನ ಚಿತ್ರಣವನ್ನೇ ಬದಲಿಸಿತು. ಆ ಅಧಿಕಾರಿಗಳಾದರೋ ಅಂತಿಥವರಲ್ಲ. ಮೋದಿ ಕೊಟ್ಟ ಅಧಿಕಾರವನ್ನು ಎಂದಿಗೂ ದುರುಪಯೋಗ ಮಾಡಿಕೊಳ್ಳದೇ ಅಭಿವೃದ್ಧಿಯೇ ಮೂಲಮಂತ್ರ ಎನ್ನುವ ಮೂಲಮಂತ್ರವನ್ನು ಜಪಿಸುತ್ತಾ ಮೋದಿ ಕನಸನ್ನು ನನಸು ಮಾಡಲು ಹೊರಟರು. ಅತ್ತ, ಮೋದಿ ಸಹ ಇಡೀ ಅಧಿಕಾರ ವರ್ಗ ಎಲ್ಲೂ ಹಾದಿತಪ್ಪದಂತೆ, ತಾವು ಕೈಗೊಳ್ಳುವ ನಿರ್ಧಾರಗಳ ವಿರುದ್ಧ ತನ್ನ ಪಕ್ಷದಲ್ಲೇ ಅಪಸ್ವರ ಎದ್ದೇಳದಂತೆ ಎಚ್ಚರಿಕೆ ವಹಿಸಿ, ಸಮತೋಲನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು. ಇದರಿಂದ, ಗುಜರಾತ್ ನಿಧಾನವಾಗಿ ಉದ್ಧಾರದ ಪಥದಲ್ಲಿ ಕಾಲಿಟ್ಟಿತು. ಇದೀಗ, ಕೇಂದ್ರದಲ್ಲಿ ಸರ್ಕಾರ ರಚಿಸಲಿರುವ ಮೋದಿ, ಗುಜರಾತ್ ಅಭಿವೃದ್ಧಿ ವಿಚಾರದಲ್ಲಿ ಅನುಸರಿಸಿದ ತಂತ್ರವನ್ನೇ ನಿಸ್ಸಂಶಯವಾಗಿ ಮುಂದುವರಿಸಲಿದ್ದಾರೆ.
ಮೋದಿ ಮುಂದಿನ ಸವಾಲುಗಳು...
ಕಳೆದೈದು ವರ್ಷಗಳಿಂದ ಈವರೆಗೆ, ಭಾರತದ ಆರ್ಥಿಕತೆ ಸ್ಥಿರತೆಯನ್ನು ಕಳೆದುಕೊಂಡಿದೆ. ಇದರಿಂದಾಗಿ ಮಧ್ಯಮ ವರ್ಗ ತತ್ತರಿಸಿದೆ. ಮೋದಿಯವರಾದರೂ ತಮ್ಮ ಜೀವನವನ್ನು ಹಸನುಗೊಳಿಸುತ್ತಾರೆಂಬ ನಂಬಿಕೆಯಿಂದ ಮೋದಿ ಅವರನ್ನು ಆರಿಸಿ ತಂದು ಪ್ರಧಾನಿ ಪಟ್ಟಕ್ಕೆ ಕೂರಿಸಿದ್ದಾರೆ. ಜನರ ಈ ಕನಸನ್ನು ನನಸಾಗಿಸಲು ಅವರು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತವನ್ನು ಮಜಬೂತಾದ, ಶಕ್ತಿಯಾದ ರಾಷ್ಟ್ರವನ್ನಾಗಿ ತಯಾರು ಮಾಡಬೇಕು. ಆದರೆ, ಅದು ಅಷ್ಟು ಸುಲಭದ ಮಾತಲ್ಲ. ಹಲವಾರು ಸಮಸ್ಯೆ, ಸವಾಲುಗಳನ್ನು ಎದುರಿಸಿ ಅವರು ಈ ಸಾಧನೆ ಮಾಡಬೇಕಿದೆ.
ಮೋದಿಯವರನ್ನು ಅಪಾರವಾಗಿ ಬೆಂಬಲಿಸಿರುವುದು ದೇಶದ ಮಧ್ಯಮ ವರ್ಗದ ಜನ. ಅವರ ಕನಸನ್ನು ನನಸು ಮಾಡಬೇಕಿರುವುದು ಅವರ ಮತ್ತೊಂದು ಮಹತ್ತರ ಕಾರ್ಯ.
ಆದರೆ, ಭಾರತವನ್ನು ಅಭಿವೃದ್ಧಿ ಮಾಡಿದಷ್ಟೇ ಕೆಲಸದಂತೆ ಅವರು ಅಚ್ಚುಕಟ್ಟಾಗಿ ಮಾಡಬೇಕಿರುವುದು ತಮ್ಮ ಸಾಧನೆಯನ್ನು ಸದಾ ಜನರ ಗಮನಕ್ಕೆ ತರುವುದು. ಅಂದರೆ, ತಾವು ಮಾಡಿದ ಅಭಿವೃದ್ಧಿಯನ್ನು ಪ್ರಚಾರ ಮಾಡುವುದಷ್ಟೇ ಅಲ್ಲ, ಅದು ಜನರ ಮನಸ್ಸಿನಲ್ಲಿ ಕೂಡುವಂತೆ ಮಾಡಬೇಕಿದೆ.
ಆರ್ಥಿಕ ತಜ್ಞ ಟಾಮ್ ಈಲಿಯಟ್ ಪ್ರಕಾರ, ಮೋದಿ ಅವರಿಗೆ ಭಾರತದ ಹಣಕಾಸು ವ್ಯವಸ್ಥೆಯನ್ನು ಸುಧಾರಿಸಲು ಸಾಕಷ್ಟು ಪ್ರಯಾಸಪಡಬೇಕಿದೆ. ಭಾರತದ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ನಿರೀಕ್ಷಿತ ಮಟ್ಟದಲ್ಲಿಲ್ಲ. ಉತ್ಪಾದನಾ ಕ್ಷೇತ್ರದಲ್ಲಿ ಕಳೆದ ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಇಳಿಕೆಯಾಗಿದೆ. ಇಂಥ ಕ್ಲಿಷ್ಟಕರ ಸಂದರ್ಭದಲ್ಲಿ, ಕುಸಿದಿರುವ ಭಾರತದ ಆರ್ಥಿಕತೆಯನ್ನು ಮೇಲೆತ್ತುವುದು, ಹೂಡಿಕೆದಾರರ ವಿಶ್ವಾಸವನ್ನು ಗಳಿಸುವುದು ಅಷ್ಟು ಸುಲಭದ ಮಾತಲ್ಲ. ಇದಕ್ಕಾಗಿ, ಹಲವಾರು ಆರ್ಥಿಕ ಸುಧಾರಣಾ ನಿರ್ಧಾರಗಳನ್ನು ಮೋದಿ ಕೈಗೊಳ್ಳಬೇಕಿದೆ. ಆದರೆ, ಇಲ್ಲಿ ಜನಹಿತಕ್ಕೆ ಕೊಂಚ ಧಕ್ಕೆಯಾಗುವ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ. ಇದೇ ಮೋದಿ ಮುಂದಿರುವ ದೊಡ್ಡ ಸವಾಲು. ಇದನ್ನು ಹೇಗೆ ನಿಭಾಯಿಸುತ್ತಾರೋ ಅವರು... ಕಾದು ನೋಡಬೇಕು.
ರಾಜ್ಯವನ್ನು ಅಭಿವೃದ್ಧಿಗೊಳಿಸಿದ ನಿಟ್ಟಿನಲ್ಲೇ ಭಾರತವನ್ನು ಅಭಿವೃದ್ಧಿ ಮಾಡುವುದು ಅಷ್ಟು ಸುಲಭವಲ್ಲ. ಇಲ್ಲಿ ನಿರೀಕ್ಷೆಗಳ ಮೂಟೆ ಬಲು ದೊಡ್ಡದು ಹಾಗೂ ಅತಿ ಭಾರವಾದದ್ದು. ಏನೇ ನಿರ್ಧಾರ ಕೈಗೊಳ್ಳಬೇಕಾದರೆ ತಮ್ಮ ಮೇಲಿನ ಈ ಮೂಟೆಗಳ ಭಾರವನ್ನು ಒಮ್ಮೆ ಗಮನಿಸಿಯೇ ತೆಗೆದುಕೊಳ್ಳಬೇಕಿದೆ ಎನ್ನುತ್ತಾರೆ ಈಲಿಯಟ್.
ಎಚ್ಚರಿಕೆಯ ಹೆಜ್ಜೆ ಬೇಕು...
ಸದ್ಯದ ಪರಿಸ್ಥಿತಿಯಲ್ಲಿ ಮೋದಿ ಅವರನ್ನು ಬಿಟ್ಟರೆ, ಪ್ರಧಾನಿ ಹುದ್ದೆಗೆ ಮತ್ಯಾರೂ ಅರ್ಹರಲ್ಲ ಎಂಬ ಮನೋಸ್ಥಿತಿಯಲ್ಲೇ ಮತದಾರ ಮೋದಿ ಅವರಿಗೆ ದೇಶದ ಚುಕ್ಕಾಣಿ ನೀಡಿದ್ದಾನೆ. ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಬೇಕಾದರೆ, ಹಣಕಾಸು ಕ್ಷೇತ್ರದಲ್ಲಿ ಹಲವಾರು ಕ್ರಮಗಳನ್ನು ನಿಭಾಯಿಸಬೇಕಿದೆ. ಸೇಂಟ್ ಆ್ಯಂಡ್ರೂಸ್ ವಿಶ್ವವಿದ್ಯಾಲಯದಲ್ಲಿ ಏಷ್ಯಾದ ಸುರಕ್ಷೆ ವಿಷಯದ ಪ್ರಾಧ್ಯಾಪಕರಾಗಿ, ಸಂಶೋಧಕರಾಗಿ ಸೇವೆ ಸಲ್ಲಿಸುತ್ತಿರುವ ಕ್ರಿಸ್ ಓಗ್ಡನ್ ಅವರ ಪ್ರಕಾರ, ಚಿಲ್ಲರೆ ಮಾರುಕಟ್ಟೆಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಹೆಚ್ಚು ಅವಕಾಶ ಮಾಡಿಕೊಡಬೇಕಿದೆ. ದೇಶದಲ್ಲಿ ಉದ್ಯೋಗವಾಕಾಶಗಳನ್ನು ಹೆಚ್ಚಿಸಬೇಕಿದೆ. ಆಡಳಿತದಲ್ಲಿ ಬಿಗಿಯನ್ನು ಕಾಪಾಡಿಕೊಳ್ಳುತ್ತಾ, ಎನ್ಡಿಎ ಅಂಗಪಕ್ಷಗಳೊಂದಿಗೂ ಸಮನ್ವಯತೆ ಸಾಧಿಸುತ್ತಾ ಮುನ್ನಡೆಯಬೇಕಿದೆ. ಗುಜರಾತ್ನಲ್ಲಿ ಆಡಳಿತಕ್ಕೆ ಅಡ್ಡಿ ಬರುವ ಶಕ್ತಿಗಳನ್ನು ಜಾಣತನದಿಂದ ದೂರ ಇಟ್ಟಿದ್ದರು ಮೋದಿ.
ಮೋದಿ ಹೆಜ್ಜೆ ಗುರುತು
1971 ವಾದ್ನಾನಗರ ಮೂಲದ 21ರ ಪ್ರಾಯದ ನರೇಂದ್ರ ಮೋದಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದಲ್ಲಿ ಪ್ರಚಾರಕರಾಗಿ ಸೇರ್ಪಡೆ
1975-77 ಇಂದಿರಾ ಗಾಂಧಿ ಸರ್ಕಾರ ಹೇರಿದ್ದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ ಪ್ರಮುಖ ರಾಜಕೀಯ ನೇತಾರರಲ್ಲಿ ಒಬ್ಬರಾಗಿದ್ದ ಜಾರ್ಜ್ ಫರ್ನಾಂಡಿಸ್ ಅವರೊಂದಿಗೆ ಸಂಪರ್ಕ.
1986 ಅಹ್ಮದಾಬಾದ್ನ ನಗರಸಭೆ ಚುನಾವಣೆಗಳಲ್ಲಿ ಬಿಜೆಪಿ ಜಯ ಗಳಿಸುವಲ್ಲಿ ಯಶಸ್ವಿ.
1987 ಬಿಜೆಪಿಗೆ ಸೇರ್ಪಡೆಯಾಗುವ ಮೂಲಕ ಅಧಿಕೃತವಾಗಿ ರಾಜಕೀಯಕ್ಕೆ ಪ್ರವೇಶ.
1988 ಗುಜರಾತ್ ಬಿಜೆಪಿ ಘಟಕದ ಮಹಾ ಕಾರ್ಯದರ್ಶಿಯಾಗಿ ನೇಮಕ.
1990 ಆಡ್ವಾಣಿಯವರ ರಥಯಾತ್ರೆಗೆ ಗುಜರಾತ್ನ ಬಿಜೆಪಿಯನ್ನು ಅಣಿಗೊಳಿಸಿದ್ದು.
1991-92 ಮುರಳಿ ಮನೋಹರ್ ಜೋಷಿಯವರ ಏಕ್ತಾ ಯಾತ್ರೆಗೆ ಬಿಜೆಪಿಯನ್ನು ಸಜ್ಜುಗೊಳಿಸಿದ್ದು.
1995 ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಕ, ಐದು ರಾಜ್ಯಗಳಲ್ಲಿ ಬಿಜೆಪಿ ಚುನಾವಣಾ ಉಸ್ತುವಾರಿ.
1998 ಬಿಜೆಪಿಯ ಮಹಾ ಕಾರ್ಯದರ್ಶಿಯಾಗಿ ಬಡ್ತಿ.
2001 ಗುಜರಾತ್ ಸಿಎಂ ಆಗಿ ಅಧಿಕಾರ ಸ್ವೀಕಾರ
2002 1. ರಾಜ್ಕೋಟ್ನಲ್ಲಿ ಮೊದಲ ಬಾರಿಗೆ ಚುನಾವಣೆ ಗೆದ್ದರೂ, ಮತೀಯ ಗಲಭೆಗೆ ಪರೋಕ್ಷ ಬೆಂಬಲ ನೀಡಿದ ಆರೋಪ, ಗೋದ್ರೋತ್ತರ ಹಿಂಸೆ ಬಗ್ಗೆ ಆರೋಪ
2. ಅವಧಿಗೂ ಮುನ್ನವೇ ಚುನಾವಣೆಗೆ ಹೋಗಲು ಗುಜರಾತ್ ಸರ್ಕಾರ ನಿರ್ಧರಿಸಿದ್ದರಿಂದ ವಿಧಾನಸಭೆ ವಿಸರ್ಜನೆ. ವಿಧಾನಸಭೆ ಚುನಾವಣೆಯಲ್ಲಿ 182 ಕ್ಷೇತ್ರಗಳಲ್ಲಿ ಬಿಜೆಪಿ 127ರಲ್ಲಿ ವಿಜಯಿ. ಮಣಿನಗರದಿಂದ ಮೋದಿ ಆಯ್ಕೆ.
2005 ಗೋದ್ರಾ ಗಲಭೆ ಹಿನ್ನೆಲೆಯಲ್ಲಿ, ಅಮೆರಿಕದಿಂದ ಮೋದಿ ವೀಸಾ ನಿರಾಕರಣೆ
2007 ವಿಧಾನಸಭೆ ಚುನಾವಣೆ: 117 ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಮತ್ತೆ ಅಧಿಕಾರಕ್ಕೆ
2012 1. ಗುಜರಾತ್ಗೆ ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆ.
2. ಸುಪ್ರೀಂ ಕೋರ್ಟ್ನಿಂದ ನೇಮಿಸಲ್ಪಟ್ಟಿದ್ದ ವಿಶೇಷ ತನಿಖಾ ತಂಡದಿಂದ ಗೋದ್ರಾ ಗಲಭೆ ವಿಚಾರದಲ್ಲಿ ಮೋದಿಗೆ ಕ್ಲೀನ್ಚಿಟ್.
2013 ಬಿಜೆಪಿ ಲೋಕಸಭಾ ಚುನಾವಣಾ ಸಮಿತಿಗೆ ಅಧ್ಯಕ್ಷರಾಗಿ ಆಯ್ಕೆ. ಮೂರು ತಿಂಗಳ ನಂತರ, ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆ.
2014 1. ಲೋಕಸಭಾ ಚುನಾವಣೆಯಲ್ಲಿ, ವಾರಣಾಸಿ ಹಾಗೂ ವಡೋದರಾಗಳಿಂದ ಮೋದಿ ಸ್ಪರ್ಧೆ.
2. ಲೋಕಸಭೆ ಚುನಾವಣೆಯಲ್ಲಿ, ಬಿಜೆಪಿ ಸ್ಪಷ್ಟ ಬಹುಮತ ಸಾಧಿಸುವಂತೆ ಮಾಡುವಲ್ಲಿ ಸಫಲ. ಪ್ರಧಾನಿಯಾಗಿ ಆಯ್ಕೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


