ಎಲ್ಲ ಸರ್ಕಾರಿ ಕಚೇರಿ ಇನ್ನು ತಂಬಾಕು ಮುಕ್ತ

-ವಿಶ್ವ ತಂಬಾಕುರಹಿತ ದಿನದ ಅಂಗವಾಗಿ ಇಂದು ಆದೇಶ
-ನಾಳೆಯಿಂದ ರಾಜ್ಯಾದ್ಯಂತ ಜಾರಿ: ಸಚಿವ ಖಾದರ್
ಕ.ಪ್ರ. ವಾರ್ತೆ ಬೆಂಗಳೂರು ಮೇ 30
ರಾಜ್ಯ ಸರ್ಕಾರ ಮತ್ತೊಮ್ಮೆ ವಿಶ್ವ ತಂಬಾಕುರಹಿತ ದಿನಕ್ಕೆ ಎಚ್ಚೆತ್ತುಕೊಂಡಿದೆ. ಕಳೆದ ಬಾರಿ ತಂಬಾಕು ಉತ್ಪನ್ನ ನಿಷೇಧಿಸಿ ಆದೇಶ ಹೊರಡಿಸಿದ್ದ ಸರ್ಕಾರ, ಈ ಬಾರಿ ಎಲ್ಲ ಸರ್ಕಾರಿ ಕಚೇರಿಗಳನ್ನು ತಂಬಾಕು ಮುಕ್ತಗೊಳಿಸಲು ಆದೇಶಿಸಲಿದೆ.
ವಿಧಾನಸೌಧ, ವಿಕಾಸಸೌಧ, ಇತರ ಕಚೇರಿಗಳು ಸೇರಿದಂತೆ ಎಲ್ಲ ಸರ್ಕಾರಿ ಕಚೇರಿಗಳು ಹಾಗೂ ಅವುಗಳ ಆವರಣದಲ್ಲಿ ಧೂಮಪಾನ ಮಾಡುವಂತಿಲ್ಲ. ಅಷ್ಟೇ ಅಲ್ಲ, ತಂಬಾಕು ಉತ್ಪನ್ನಗಳನ್ನೂ ಸೇವಿಸುವಂತಿಲ್ಲ. ಇಂತಹ ಚಟುವಟಿಕೆ ಮಾಡಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ. ಈ ಸಂಬಂಧ ಮೇ 31ರಂದು ವಿಶ್ವ ತಂಬಾಕುರಹಿತ ದಿನದ ಅಂಗವಾಗಿ ಸರ್ಕಾರಿ ಆದೇಶ ಹೊರಡಿಸಲು ನಿರ್ಧರಿಸಲಾಗಿದೆ. ಕಳೆದ ಬಾರಿ ಇದೇ ದಿನದ ಅಂಗವಾಗಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, ಅದು ಪರಿಣಾಮಕಾರಿಯಾಗಿ ಅನುಷ್ಠಾನವೇ ಆಗಿಲ್ಲ. ಒಂದು ವರ್ಷದ ನಂತರ ಎಚ್ಚೆತ್ತುಕೊಂಡಿರುವ ಸರ್ಕಾರ ಮತ್ತೊಂದು ಆದೇಶದ ಮೂಲಕ ಸರ್ಕಾರಿ ಕಚೇರಿಗಳನ್ನಾದರೂ ಧೂಮಪಾನ, ತಂಬಾಕು ಮುಕ್ತ ಮಾಡುವ ಹೊಸ ಪ್ರಯತ್ನಕ್ಕೆ ಮುಂದಾಗಿದೆ.
ರಾಜ್ಯದಲ್ಲಿ ತಂಬಾಕು ಸೇವನೆ ನಿಯಂತ್ರಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಬಾರದು ಎಂದು ಕಾನೂನು ಇದ್ದರೂ ಅದರ ಅನುಷ್ಠಾನ ಸೂಕ್ತವಾಗಿ ಆಗಿಲ್ಲ. ಕಳೆದ ವರ್ಷ ಗುಟ್ಕಾ ಮಾರಾಟವನ್ನೇ ನಿಷೇಧಿಸಿ ಆದೇಶ ಹೊರಡಿಸಲಾಗಿತ್ತು. ಆದರೆ ಅದು ಬೇರೆ ರೂಪದಲ್ಲಿ ಮಾರಾಟವಾಗುತ್ತಿದೆ. ಹೀಗಾಗಿ, ಸರ್ಕಾರಿ ಕಚೇರಿಗಳ ಆವರಣವನ್ನು ಮೊದಲು ಧೂಮಪಾನ ಹಾಗೂ ತಂಬಾಕು ಉತ್ಪನ್ನಗಳಿಂದ ಮುಕ್ತ ಮಾಡಲು ಆದೇಶ ಹೊರಡಿಸಲಾಗುತ್ತಿದೆ. ವಿಶ್ವ ತಂಬಾಕುರಹಿತ ದಿನಾಚರಣೆಯಂದು ಸರ್ಕಾರಿ ಆದೇಶವಾಗಲಿದೆ. ಜೂನ್ 1ರಿಂದ ರಾಜ್ಯಾದ್ಯಂತ ಜಾರಿಯಾಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಯು.ಟಿ. ಖಾದರ್ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.
ತಂಬಾಕು ನಿಯಂತ್ರಣ ಘಟಕ
ಬೆಂಗಳೂರು ಹಾಗೂ ಗುಲ್ಬರ್ಗದಲ್ಲಿ ತಂಬಾಕು ನಿಯಂತ್ರಣ ಘಟಕ ಸ್ಥಾಪಿಸಲಾಗಿದೆ. ರಾಜ್ಯದ ಎಲ್ಲ ಮಹಾನಗರಪಾಲಿಕೆಗಳಲ್ಲೂ ಈ ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದೆ. ಕೆಂಪೇಗೌಡ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಈಗಾಗಲೇ ತಂಬಾಕು ಮುಕ್ತಗೊಳಿಸಲಾಗಿದೆ ಎಂದರು.
ತಂಬಾಕು ಬೆಳೆಗಾರರಿಗೆ ಪರ್ಯಾಯ ವ್ಯವಸ್ಥೆ
ತಮಿಳುನಾಡು, ಕೇರಳ, ಆಂಧ್ರಪ್ರದೇಶಕ್ಕೆ ಹೋಲಿಸಿದರೆ ರಾಜ್ಯದಲ್ಲಿ ತಂಬಾಕು ಉತ್ಪನ್ನಗಳ ಬಳಕೆ ಹೆಚ್ಚಾಗುತ್ತಿದೆ. ದೇಶದಲ್ಲಿ ಪ್ರತಿ ವರ್ಷ 10 ಲಕ್ಷ ಮಂದಿ ತಂಬಾಕು ಬಳಕೆಯಿಂದ ಉಂಟಾಗುವ ಕ್ಯಾನ್ಸರ್ನಿಂದ ಮರಣಹೊಂದುತ್ತಿದ್ದಾರೆ. ಕೇಂದ್ರ ಸರ್ಕಾರ 33 ಸಾವಿರ ಕೋಟಿಯನ್ನು ತಂಬಾಕು ರೋಗಿಗಳ ಚಿಕಿತ್ಸೆ ಹಾಗೂ ಸೇವನೆ ನಿಯಂತ್ರಣಕ್ಕಾಗಿ ವೆಚ್ಚ ಮಾಡುತ್ತಿದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ತಂಬಾಕು ಬೆಳೆಯುವ ಪ್ರದೇಶವೂ ಹೆಚ್ಚಿದೆ. ಶೇ.25ರಷ್ಟು ತಂಬಾಕು ಬೆಳೆಯುವ ಪ್ರದೇಶ ನಮ್ಮಲ್ಲಿದೆ. ಪ್ರತಿ ವರ್ಷ ಶೇ.5ರಿಂದ 10ರಷ್ಟು ಪ್ರದೇಶವನ್ನು ಕಡಿಮೆ ಮಾಡಲು ತೋಟಗಾರಿಕೆ ಹಾಗೂ ಕೃಷಿ ಇಲಾಖೆಗೆ ಸೂಚನೆ ನೀಡಲಾಗಿದೆ. ತಂಬಾಕು ಬೆಳೆಗಾರರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಹೇಳಿದರು.
ಮೂರು ತಿಂಗಳಲ್ಲಿ 21 ಲಕ್ಷ ದಂಡ ವಸೂಲಿ
ಭಾರತೀಯ ವೈದ್ಯ ಪರಿಷತ್ನ ವರದಿ ಪ್ರಕಾರ ದೇಶದಲ್ಲಿ ತಂಬಾಕು ಸೇವನೆ ಹಾಗೂ ಅದರ ಅಡ್ಡ ಪರಿಣಾಮಗಳಿಂದ ಶೇ.90ರಷ್ಟು ಮಂದಿ ಸಾಯುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದವರ ವಿರುದ್ಧ ಪೊಲೀಸ್ ಇಲಾಖೆ ಸಹಯೋಗದೊಂದಿಗೆ 49,164 ಪ್ರಕರಣಗಳನ್ನು ಕಳೆದ ವರ್ಷ ದಾಖಲಿಸಿ, 63 ಲಕ್ಷ ದಂಡ ಸಂಗ್ರಹಿಸಲಾಗಿದೆ. ಈ ವರ್ಷದ ಮೊದಲ ಮೂರು ತಿಂಗಳಲ್ಲಿ 21 ಲಕ್ಷ ದಂಡ ವಸೂಲಿಯಾಗಿದೆ ಎಂದು ಸಚಿವರು ಅಂಕಿಅಂಶ ನೀಡಿದರು. ಶಾಲಾ-ಕಾಲೇಜುಗಳಿಂದ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನ ಮಾರಾಟ ನಿಷೇಧವಿದೆ. ಆದರೂ ಮಾರಾಟ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೆ, ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಹೆಚ್ಚಿಸುವ ಬಗ್ಗೆಯೂ ಆಲೋಚಿಸಲಾಗುತ್ತಿದೆ ಎಂದರು. ಅಲೋಪತಿ ಹಾಗೂ ಯುನಾನಿ ವೈದ್ಯರು ತಮ್ಮ ಪ್ರಮಾಣಪತ್ರ ಪ್ರದರ್ಶಿಸುವುದು ಕಡ್ಡಾಯವಾಗಿದ್ದು, ಪ್ರತಿಯೊಂದು ಪದ್ಧತಿಯ ವೈದ್ಯರಿಗೆ ಒಂದೊಂದು ಬಣ್ಣವನ್ನು ಸೂಚಿಸಲು ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಶೀಘ್ರವೇ ಆದೇಶ ಹೊರಡಿಸಲಾಗುತ್ತದೆ ಎಂದು ಸಚಿವ ಯು.ಟಿ. ಖಾದರ್ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


