

ನವದೆಹಲಿ: ಜವಾಬ್ದಾರಿಯಿಂದ ನುಣುಚಿಕೊಂಡು ಕೇಜ್ರಿವಾಲ್‌ರಂತೆ ನನಗೂ ಓಡಿ ಹೋಗಬಹುದಿತ್ತು. ಆದರೆ ನಾನು ಹಾಗೆ ಮಾಡಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ಹಿಂದೂಸ್ತಾನ್ ಟೈಮ್ಸ್ ಲೀಡರ್‌ಶಿಪ್ ಸಮ್ಮೇಳನವನ್ನುದ್ದೇಶಿಸಿ ಫಡ್ನವಿಸ್ ಈ ಮಾತುಗಳನ್ನಾಡಿದ್ದಾರೆ.
ಅರವಿಂದ್ ಕೇಜ್ರಿವಾಲ್ ದೆಹಲಿಯಲ್ಲಿ ಕಾಂಗ್ರೆಸ್ ಸಹಾಯದಿಂದ ಸರ್ಕಾರ ರಚಿಸಿದಂತೆ ನೀವು ಮಹಾರಾಷ್ಟ್ರದಲ್ಲಿ ಎನ್‌ಸಿಪಿಯ ಸಹಾಯ ಪಡೆದುಕೊಂಡಿದ್ದೀರಲ್ಲವೇ? ಎಂದು ಎನ್‌ಡಿಟಿವಿ ಗ್ರೂಪ್ ಎಡಿಟರ್ ಬರ್ಖಾ ದತ್ ಕೇಳಿದ ಪ್ರಶ್ನೆಗೆ ಫಡ್ನವಿಸ್ ಈ ರೀತಿ ಉತ್ತರಿಸಿದ್ದಾರೆ.
ಎನ್‌ಸಿಪಿ ಸ್ವತಃ ಬಂದು ನಮಗೆ ಬೆಂಬಲ ನೀಡಿತ್ತು, ನಾವದನ್ನು ನಿರಾಕರಿಸಲೂ ಇಲ್ಲ. ಶಿವಸೇನೆಯೊಂದಿಗೆ ಮಾತುಕತೆ ನಡೆದಿದ್ದರೂ ಮೈತ್ರಿ ಸರಿಹೋಗಿಲ್ಲ.
ಆದರೆ ನಾನು ಆಪ್ ನಾಯಕ ಕೇಜ್ರಿವಾಲ್‌ನಂತೆ ಓಡಿಹೋಗಲಿಲ್ಲ, ಇದರ ಬದಲು ನಾನು ಸಾಧಿಸಿ ತೋರಿಸ್ತೀನಿ, ಮಾತಿಗಿಂತ ಕ್ರಿಯೆಯೇ ಮೇಲು ಎಂದು ನಾನು ಅಧಿಕಾರದ ಜವಾಬ್ದಾರಿಯನ್ನು ತೆಗೆದುಕೊಂಡಿದ್ದೇನೆ.
ಆದಾಗ್ಯೂ, ಶಿವಸೇನೆಯೊಂದಿಗೆ ನಮಗೆ ಒಳ್ಳೆಯ ಸಂಬಂಧ ಯಾವತ್ತೂ ಇದ್ದೇ ಇರುತ್ತದೆ. ಶೀಘ್ರದಲ್ಲೇ ನಮ್ಮ ಮಾತುಕತೆಗಳು ಉತ್ತಮ ಫಲ ನೀಡಲಿವೆ ಎಂದು ಫಡ್ನವಿಸ್ ಹೇಳಿದ್ದಾರೆ.
ಭಾರತದ ಅಭಿವೃದ್ಧಿಯಲ್ಲಿ ನಮ್ಮ ರಾಜ್ಯ ಮಹತ್ತರವಾದ ಪಾತ್ರವನ್ನು ವಹಿಸಿದೆ ಎಂದು ಹೇಳಿದ ಅವರು, ಮೇಕ್ ಇನ್ ಇಂಡಿಯಾ ಕನಸು ನನಸಾದರೆ ಮಹಾರಾಷ್ಟ್ರವೇ ಈ ಪದ್ಧತಿಗೆ ಹೆಚ್ಚಿನ ಕೊಡುಗೆ ನೀಡಿರುತ್ತದೆ.
ಭಾರತದ ಅಭಿವೃದ್ಧಿಗೆ ಹೆಚ್ಚಿನ ಸಹಾಯ ಮಾಡಿದ ರಾಜ್ಯವನ್ನು ನಾನು ಪ್ರತಿನಿಧೀಕರಿಸುತ್ತಿದ್ದೇನೆ. ನಮ್ಮ ದೇಶಕ್ಕೆ ಹೆಚ್ಚಿನ ಜಿಡಿಪಿ ಮತ್ತು ಕೈಗಾರಿಕೆಯಲ್ಲಿ ಹೆಚ್ಚಿನ ಲಾಭ ತಂದುಕೊಟ್ಟಿದ್ದು ನಮ್ಮ ರಾಜ್ಯವೇ ಎಂದು ಫಡ್ನವಿಸ್ ಹೇಳಿದ್ದಾರೆ.