

ಉಡುಪಿ: ಯುವತಿಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕ ಕಳ್ಳನಿಗೆ ಅಲ್ಲಿನ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆಯೊಂದು ಉಡುಪಿಯ ಕಾರ್ಕಳ ತಾಲೂಕಿನ ಗ್ರಾಮವೊಂದರಲ್ಲಿ ಮಂಗಳವಾರ ನಡೆದಿದೆ.
ಸತೀಶ್ (19) ಎಂಬಾತನೇ ಆರೋಪಿಯಾಗಿದ್ದು, ಈತ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಫೋಟೋ ತೆಗೆಸಿಕೊಳ್ಳಲೆಂದು ಇಂದು ಬೆಳಿಗ್ಗೆ ಸ್ಟುಡಿಯೋಗೆ ಹೋದ ಸತೀಶ್ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿದ್ದ ಯುವತಿಯ ಕುತ್ತಿಗೆಗೆ ಕೈ ಹಾಕಿದ್ದಾನೆ. ಈ ವೇಳೆ ಯುವತಿ ಕೂಗಿಕೊಳ್ಳಲು ಯತ್ನಿಸಿದಾಗ ಸತೀಶ್ ಯುವತಿಯನ್ನು ಮಾನಭಂಗ ಮಾಡಲು ಯತ್ನಿಸಿದ್ದಾನೆ. ನಂತರ ಯುವತಿಯ ಕೂಗು ಕೇಳಿಸಿಕೊಂಡ ಸ್ಥಳೀಯರು ಸ್ಟುಡಿಯೋ ಒಳನುಗ್ಗಿ, ಕಾಮುಕ ಹಾಗೂ ಕಳ್ಳತನಕ್ಕೆ ಯತ್ನಿಸಿದ ಸತೀಶ್ ನನ್ನು ಎಳೆದು ಹೊರತಂದು, ಕಂಬವೊಂದಕ್ಕೆ ಕಟ್ಟಿಹಾಕಿ ಧಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಗ್ರಾಮಸ್ಥರೆಲ್ಲರೂ ಥಳಿಸಿದ ಬಳಿಕ ಆರೋಪಿ ಸತೀಶ್ ನನ್ನು ಕಾರ್ಕಳ ಗ್ರಾಮೀಣ ಠಾಣೆಗೆ ಕರೆ ತಂದ ಸ್ಥಳೀಯರು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಕಾರ್ಕಳ ಪೊಲೀಸರು ಸತೀಶ್ ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.